ಶುಕ್ರವಾರ, ಜೂನ್ 5, 2020
27 °C

ಕೋವಿಡ್ ಲಾಕ್‌ಡೌನ್‌ನಿಂದಾಗಿ ದೇಶದಲ್ಲಿ ದಶಲಕ್ಷ ಜನರಿಗೆ ನಷ್ಟವಾಗಲಿದೆ ಉದ್ಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

employment

ಬೆಂಗಳೂರು: ಕೊರೊನ ವೈರಸ್ ವ್ಯಾಪಕವಾಗಿ ಹರಡದಂತೆ ದೇಶವ್ಯಾಪಿ ಲಾಕ್‌ಡೌನ್ ಮಾಡಲಾಗಿದೆ. ಆದರೆ ಈ ಲಾಕ್‍ಡೌನ್‌ನಿಂದಾಗಿ ಮುಂಬರುವ ದಿನಗಳಲ್ಲಿ ಅಧಿಕ ಜನರು ಕೆಲಸ ಕಳೆದುಕೊಳ್ಳುತ್ತಾರೆ, ಸಂಬಳಕ್ಕೆ ಕತ್ತರಿ ಮತ್ತು ಹೊಸ ಕೆಲಸ ಸಿಗುವುದು ಕಷ್ಟವಾಗಲಿದೆ.

ಲೆಕ್ಕಾಚಾರ ಪ್ರಕಾರ ಪ್ರಯಾಣ, ಪ್ರವಾಸೋದ್ಯಮ ಮತ್ತು ಆತಿಥ್ಯ ವಲಯದಲ್ಲಿ ಸರಿಸುಮಾರು 10-12 ದಶಲಕ್ಷ ಉದ್ಯೋಗಗಳಿಗೆ ಕತ್ತರಿ ಬೀಳಲಿದೆ.ಸರ್ಕಾರ ಯಾವಾಗ ಲಾಕ್‌ಡೌನ್ ಅವಧಿ ಮುಗಿಸಲಿದೆಯೋ ಎಂದು ನಿರ್ಮಾಣ ಉದ್ಯಮ ಕಾಯುತ್ತಿದ್ದು, ಲಾಕ್‍ಡೌನ್ ಮುಗಿಯುತ್ತಿದ್ದಂತೆ ಜನರು ತಮ್ಮ ಕಾರ್ಯಗಳಲ್ಲಿ ತೊಡಗಲಿದ್ದಾರೆ.

ಲಾಕ್‍ಡೌನ್‌ನಿಂದಾಗಿ ಅತೀ ಹೆಚ್ಚು ಸಂಕಷ್ಟಕ್ಕೊಳಗಾದ ಉದ್ಯಮ ಎಂದರೆ ಆಟೊಮೊಬೈಲ್ ಮತ್ತು ಆಟೊ ಬಿಡಿಭಾಗ, ಅತಿ ಸಣ್ಣ, ಕಿರು ಮತ್ತು ಮಧ್ಯಮ ಕೈಗಾರಿಕೆ (ಎಂಎಸ್ಎಂಇ), ಗ್ರಾಹಕರು ಬಳಸುವ  ಉತ್ಪನ್ನಗಳು ಮತ್ತು  ಬಂಡವಾಳ ಸರಕುಗಳ ಉದ್ದಿಮೆಗಳು. ಈ ಉದ್ಯಮಗಳು ಹೆಚ್ಚಿನ ಆರ್ಥಿಕ ಸಂಕಷ್ಟಕ್ಕೊಳಗಾಗಲಿವೆ. ಭಾರತದ ಆರ್ಥಿಕತೆಯು ಈಗಿರುವ ಶೇ.5ರಿಂದ ಶೇ.2ಕ್ಕೆ ಕುಸಿಯಲಿದ್ದು, ಜಗತ್ತಿನ ಕೆಲವು ಆರ್ಥಿಕತೆಗಳು ನೆಗೆಟಿವ್ ವಲಯಕ್ಕೆ ಕುಸಿಯಲಿವೆ.

ಭವಿಷ್ಯದಲ್ಲಿ ವಿವಿಧ ವಲಯದಲ್ಲಿನ ವ್ಯವಹಾರದ ಬಗ್ಗೆ ಭಯ, ಅನಿಶ್ಚಿತತೆ ಮತ್ತು ಸಂದೇಹಗಳು ಜಾಸ್ತಿಯಾಗುತ್ತಿವೆ. ಅತೀ ದೊಡ್ಡ ಹೊಡೆತ ಅನುಭವಿಸಿರುವ ಆತಿಥ್ಯ ವಲಯವು ಈಗಾಗಲೇ ಗುತ್ತಿಗೆ ನೌಕರರನ್ನು ಸೇವೆಯಿಂದ ಕೈಬಿಟ್ಟಿದೆ. ಪ್ರವಾಸೋದ್ಯಮ, ಪ್ರಯಾಣ ಮತ್ತು ಆತಿಥ್ಯ ವಲಯದಲ್ಲಿ ಅಂದಾಜು 20 ದಶಲಕ್ಷ ನೌಕರರು ಇದ್ದು ಆ ಪೈಕಿ ಶೇ.50 ನೌಕರರ ಕೆಲಸಕ್ಕೆ ಕುತ್ತು ಬರಲಿದೆ ಎಂದು ಪ್ರಜಾವಾಣಿ ಜತೆ ಮಾತನಾಡಿದ ಜಾಸನ್ಸ್ ಟೆಕ್ನಾಲಜೀಸ್ ಪ್ರೈ. ಲಿಮಿಟೆಡ್‌ನ  ಅಧ್ಯಕ್ಷ, ಬಿಸಿಐಸಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ದೇವೇಶ್ ಅಗರವಾಲ್ ಹೇಳಿದ್ದಾರೆ. ಮುಂದಿನ ವರ್ಷದಲ್ಲಿ ಪ್ರವಾಸ, ಪ್ರಯಾಣ ಮತ್ತು ಆತಿಥ್ಯ ವಲಯದ ಆದಾಯಲ್ಲಿನ ನಷ್ಟ 21 ಶತಕೋಟಿ ಡಾಲರ್‌ನಷ್ಟು ಎಂದು ಅಂದಾಜಿಸಲಾಗಿದೆ ಎಂದು ಅಂತಾರೆ ಅಗರವಾಲ್.   

ದೇಶದಲ್ಲಿರುವ ದುಡಿಯುವ ಜನತೆ 490 ಶತಕೋಟಿ ಎಂದು ಅಂದಾಜಿಸಲಾಗಿದೆ.

ಗ್ರಾಹಕರ ಬಳಕೆಯ ಉತ್ಪನ್ನಗಳು, ವಾಹನ ಉತ್ಪನ್ನಗಳು, ವಾಹನದ ಬಿಡಿಭಾಗ , ರೆಫ್ರಿಜರೇಟರ್, ಹವಾನಿಯಂತ್ರಕ ಮೊದಲಾದ ವೈಟ್ ಗೂಡ್ಸ್‌ಗಳು, ಬಂಡವಾಳ ಸರಕುಗಳು, ಐಟಿ,ಸ್ಟಾರ್ಟಪ್‌ಗಳು ಎಂಎಸ್ಎಂಇ ಮೊದಲಾದವು ಹೆಚ್ಚಿನ ನಷ್ಟ ಅನುಭವಿಸಲಿವೆ. ಐಟಿ ವಲಯದಲ್ಲಿ ಸುಮಾರು 4 ದಶಲಕ್ಷದಷ್ಟು ಎಂಜಿನಿಯರ್‌ಗಳಿದ್ದು ಶೇ. 5 ರಷ್ಟು ಉದ್ಯೋಗ ನಷ್ಟವಾಗುವ ಸಾಧ್ಯತೆ ಇದೆ ಎಂದು ಉದ್ಯಮಿ ಟಿ.ವಿ ಮೋಹನದಾಸ್ ಪೈ ಹೇಳಿದ್ದಾರೆ.

ಗೋವಾ, ಉತ್ತರಾಖಂಡ, ಒಡಿಶಾ,ತಮಿಳುನಾಡು ಮೊದಲಾದ ರಾಜ್ಯಗಳಲ್ಲಿ ಈಗಾಗಲೇ ನಿರುದ್ಯೋಗ ದರ ಸ್ಪಷ್ಟವಾಗಿ ಕಾಣುತ್ತಿದ್ದು ಮುಂದಿನ  ಕೆಲವೇ ತಿಂಗಳಲ್ಲಿ ಇದರ ನಾಲ್ಕು ಪಟ್ಟು ಏರಿಳಿತ ಕಾಣಿಸಲಿದೆ.

ಹೋಟೆಲ್, ಪ್ರವಾಸೋದ್ಯಮ, ವಿಮಾನಯಾನ, ವಿಮಾನ ನಿಲ್ದಾಣದಲ್ಲಿರುವ ಕೆಲಸಗಳು ಕ್ರಮೇಣ ಮಾಯವಾಗಲಿವೆ. ಅದೇ ರೀತಿ ವಾಹನ, ವಾಹನ ಉತ್ಪನ್ನಗಳ ಕೆಲಸಗಳೂ ಮಾಯವಾಗಲಿವೆ ಎಂದ ಹೆಡ್ ಹಂಟರ್ಸ್ ಸಿಇಒ ಕ್ರಿಸ್ ಲಕ್ಷ್ಮೀಕಾಂತ್ ಹೇಳಿದ್ದಾರೆ. 

ಲಾಕ್‌ಡೌನ್ ನಂತರ ಪ್ರಗತಿಯ ಹಂತದಲ್ಲಿರುವ ಸ್ಟಾರ್ಟ್‌ಅಪ್ ಮೇಲಕ್ಕೇರುವುದು ಕಷ್ಟವಾಗುತ್ತವೆ. ಇದರಿಂದಾಗಿ ಉದ್ಯೋಗಕ್ಕೆ ದೊಡ್ಡ ಮಟ್ಟದ ಕತ್ತರಿ ಬೀಳಲಿದೆ.

ಅಮೆರಿಕದ ಹಲವಾರು ಸಂಸ್ಥೆಗಳು ಎಚ್-1ಬಿ ವೀಸಾದ ರದ್ದು ಮಾಡಲು ಚಿಂತಿಸಿದ್ದು, ಇದರಿಂದಾಗಿ ಹಲವಾರು ಉದ್ಯೋಗ ನಷ್ಟವಾಗಲಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಹಲವಾರು ಸಂಸ್ಥೆಗಳು ಉದ್ಯೋಗಿಗಳನ್ನು ವಜಾಗೊಳಿಸುವುದಿಲ್ಲ ಎಂದು ವಾಗ್ದಾನ ನೀಡಿದ್ದರೂ ಇದು ದೀರ್ಘಾವಧಿಯಲ್ಲಿ ಅವುಗಳ ವೆಚ್ಚದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಅವಸರ್ ಎಚ್‌ಆರ್ ಸರ್ವೀಸ್ ಸಂಸ್ಥಾಪಕ ಮತ್ತು ಸಿಇಒ ನವ್‌ನೀತ್ ಸಿಂಗ್ ಹೇಳಿದ್ದಾರೆ.  ಸ್ಟಾರ್ಟ್‌ಅಪ್‌ಗಳು ಈಗಾಗಲೇ ಉದ್ಯೋಗಿಗಳನ್ನು ಕೈಬಿಡುವ ಮತ್ತ ಸಂಬಳಕ್ಕೆ ಕತ್ತರಿ ಹಾಕುವು ಕೆಲಸ ಮಾಡುತ್ತಿವೆ ಎಂದಿದ್ದಾರೆ ನವನೀತ್.

ಕನಿಷ್ಠ ಆರರಿಂದ ಒಂಬತ್ತು ತಿಂಗಳುಗಳವರೆಗೆ, ಯಾವುದೇ ಅನಿವಾರ್ಯವಲ್ಲದ ನೇಮಕಾತಿ ನಿಧಾನವಾಗುವುದರಿಂದ ಕಂಪನಿಗಳು ಕಟ್ಟುನಿಟ್ಟಿನ ವಿಧಾನವನ್ನು ತೆಗೆದುಕೊಳ್ಳುತ್ತವೆ ಎಂದು ಟ್ಯಾಲೆಂಟ್ 500 ಬೈ ಎಎನ್‌ಎಸ್‌ಆರ್ ಸಹ ಸಂಸ್ಥಾಪಕ ವಿಕ್ರಂ ಅಹುಜಾ ಹೇಳಿದ್ದಾರೆ.

ಆದಾಗ್ಯೂ, ಲಾಕ್‌ಡೌನ್‌ನಿಂದಾಗಿ ಆರ್ಥಿಕ ವಲಯ ಅಷ್ಟೊಂದು ಹೊಡೆತಕ್ಕೊಳಗಾಗದೇ ಇದ್ದರೂ ಮ್ಯೂಚುವಲ್ ಫಂಡ್ ಉದ್ಯಮದಲ್ಲಿನ ಸಂಭಾವನೆ ಮೇಲೆ ದೊಡ್ಡ ಹೊಡೆತ ಬೀಳಲಿದೆ. ಷೇರು ಮಾರುಕಟ್ಟೆಗಳಲ್ಲಿ ತೀವ್ರ ಕುಸಿತದಿಂದಾಗಿ ಮ್ಯೂಚುವಲ್ ಫಂಡ್ ಯೋಜನೆಗಳ ಆದಾಯವು ಈಗಾಗಲೇ ಕುಸಿದಿದೆ.

ಇದೀಗ ಪರಿಸ್ಥಿತಿ ಬದಲಾಗುತ್ತಲೇ ಇದ್ದು ದಿನಗೂಲಿಯವರು ಮತ್ತು ಗುತ್ತಿಗೆ ಕೆಲಸಗಾರರಿಗೆ ಈಗಾಗಲೇ ಹೊಡೆತ ಬಿದ್ದಿದ್ದರೂ, ಸಂಘಟಿತ ವಲಯದಲ್ಲಿನ ಪರಿಸ್ಥಿತಿ ಇದೀಗ ಹೆಚ್ಚು ಸ್ಥಿರವಾಗಿದೆ ಎಂದು ಕ್ವೆಸ್ ಕಾರ್ಪ್‌ನ ವರ್ಕಿಂಗ್‌ಫೋರ್ಸ್ ಮ್ಯಾನೇಜ್‌ಮೆಂಟ್  ಅಧ್ಯಕ್ಷ ಲೋಹಿತ್ ಭಾಟಿಯಾ ಹೇಳಿದ್ದಾರೆ.

ಈ ಹಂತದಲ್ಲಿ ಎಷ್ಟು ಉದ್ಯೋಗಗಳು ನಷ್ಟವಾಗುತ್ತವೆ ಎಂಬ ಬಗ್ಗೆ ಅಂದಾಜು ಮಾಡುವುದು ತುಂಬಾ ಕಷ್ಟ. ಭವಿಷ್ಯವು ಅನಿಶ್ಚಿತವಾಗಿದೆ ಮತ್ತು ಪರಿಸ್ಥಿತಿ ಬಹಳ ವೇಗವಾಗಿ ಬದಲಾಗುತ್ತಿದೆ. ಕೇವಲ ಒಂದು ತಿಂಗಳ ಹಿಂದೆ, ಹೆಚ್ಚಿನ ಸಂಖ್ಯೆಯ ಕಂಪನಿಗಳು ಆರ್ಥಿಕ ವರ್ಷ 2021ಗಾಗಿ ತಮ್ಮ ನೇಮಕಾತಿ ಯೋಜನೆಗಳನ್ನು ಅಂತಿಮಗೊಳಿಸಿದ್ದವು. ಕೋವಿಡ್ -19 ರ ಕಾರಣದಿಂದಾಗಿ ಲಾಕ್‌ಡೌನ್ ಆದಾಗಿನಿಂದ ಆ ಎಲ್ಲಾ ಸಂಸ್ಥೆಗಳು ಮುಂದಿನ ಎರಡು ತಿಂಗಳುಗಳವರೆಗೆ ತಮ್ಮ ನೇಮಕಾತಿಗಳನ್ನು ಸ್ಥಗಿತಗೊಳಿಸಿವೆ ಎಂದು ಟೀಮ್‌ಲೀಸ್ ಸರ್ವೀಸಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ರಿತುಪರ್ಣ ಚಕ್ರಬೊರ್ತಿ ಹೇಳಿದ್ದಾರೆ.

ದೀರ್ಘಕಾಲದ ಲಾಕ್‌ಡೌನ್ ಅಲ್ಪಾವಧಿಯಲ್ಲಿ ಐಟಿ ಸಂಸ್ಥೆಗಳಲ್ಲಿ ನೇಮಕಾತಿ ಮತ್ತು ನೇಮಕಾತಿಯನ್ನು ಸ್ಥಗಿತಗೊಳಿಸುತ್ತದೆ. ಇದು ಮುಂದುವರಿದರೆ, ನಾವು ಒಂದು ವರ್ಷ ಕಾಲ ಬಡ್ತಿ, ವೇತನ ಹೆಚ್ಚಳ ಮೊದಲಾದವುಗಳನ್ನು ಸ್ಥಗಿತಗೊಳಿಸುತ್ತೇವೆ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ಮತ್ತು ಆಕ್ಸಿಲರ್ ವೆಂಚರ್ಸ್‌ನ ಮುಖಸ್ಥ  ಕ್ರಿಸ್ ಗೋಪಾಲಕೃಷ್ಣನ್ ಹೇಳಿದ್ದಾರೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು