ಶನಿವಾರ, ಮಾರ್ಚ್ 6, 2021
18 °C

Covid-19 India Update: ಒಟ್ಟು ಪ್ರಕರಣ 54,000 ಸಮೀಪ; ಮಹಾರಾಷ್ಟ್ರದಲ್ಲಿ ಅಧಿಕ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ರಸ್ತೆಯ ಮೇಲೆ ಕೊರೊನಾ ವೈರಸ್‌ ಚಿತ್ರಗಳು–ಸಂಗ್ರಹ ಚಿತ್ರ

ನವದೆಹಲಿ: ದೇಶದಾದ್ಯಂತ ಗುರುವಾರ ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆ 54,000 ಸಮೀಪಿಸಿದೆ. ತಮಿಳುನಾಡು, ಉತ್ತರ ಪ್ರದೇಶ, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ ಹಾಗೂ ರಾಜಸ್ಥಾನದಲ್ಲಿ ಕೋವಿಡ್‌–19 ದೃಢಪಟ್ಟ ಹೊಸ ಪ್ರಕರಣಗಳು ದಾಖಲಾಗಿವೆ. 

ಬುಧವಾರ ಬೆಳಗ್ಗಿನಿಂದ ಗುರುವಾರ ಸಂಜೆ ವರೆಗೂ ದೇಶದಲ್ಲಿ ಕನಿಷ್ಠ 4,500 ಹೊಸ ಪ್ರಕರಣಗಳು ವರದಿಯಾಗಿವೆ. ಒಟ್ಟು ಸೋಂಕು ಪ್ರಕರಣಗಳ ಪೈಕಿ 1,783 ಮಂದಿ ಸಾವಿಗೀಡಾಗಿದ್ದಾರೆ. ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 15,000 ದಾಟಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಳಿಗ್ಗೆ 8ರ ನಂತರ ಹೊಸ ಪ್ರಕರಣಗಳ ಮಾಹಿತಿಯನ್ನು ರಾತ್ರಿ 9:54ರ ವರೆಗೂ ಅಪ್‌ಡೇಟ್‌ ಮಾಡಿಲ್ಲ. 

ಮಹಾರಾಷ್ಟ್ರದಲ್ಲಿ ಕೋವಿಡ್‌–19 ದೃಢಪಟ್ಟ 1,362 ಹೊಸ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 18,120 ತಲುಪಿದೆ. 

ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಯೋಜನೆಯಾಗಿದ್ದ 55 ವರ್ಷ ವಯಸ್ಸಿನ ಸಿಐಎಸ್‌ಎಫ್‌ ಹೆಡ್‌ ಕಾಸ್ಟೆಬಲ್‌ಗೆ ಕೊರೊನಾ ವೈರಸ್‌ ಸೋಂಕು ತಗುಲಿದೆ. ಸೋಂಕು ತಗುಲಿದ್ದ ಇಬ್ಬರು ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಸಿಬ್ಬಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಬಿಎಸ್‌ಎಫ್‌ನಲ್ಲಿ 41 ಹೊಸ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 193ಕ್ಕೆ ಏರಿಕೆಯಾಗಿದೆ. 

ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೆ ಒಳಗಾಗುತ್ತಿರುವುದು ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ಕನಿಷ್ಠ 531 ಪೊಲೀಸ್‌ ಸಿಬ್ಬಂದಿಯಲ್ಲಿ ಕೋವಿಡ್‌–19 ದೃಢಪಟ್ಟಿದೆ. ಇವರಲ್ಲಿ 51 ಅಧಿಕಾರಿಗಳು ಹಾಗೂ 480 ಕಾನ್‌ಸ್ಟೆಬಲ್‌ಗಳು. ಸದ್ಯ 39 ಮಂದಿ ಗುಣಮುಖರಾಗಿದ್ದು, ಐವರು ಪೊಲೀಸರು ಸಾವಿಗೀಡಾಗಿದ್ದಾರೆ.

ತಮಿಳುನಾಡಿನಲ್ಲಿ ಒಂದೇ ದಿನ 580 ಹೊಸ ಪ್ರಕರಣಗಳು ದಾಖಲಾಗುವ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 5,409 ಮುಟ್ಟಿದೆ. ಸೋಂಕಿನಿಂದ 37 ಮಂದಿ ಮೃತಪಟ್ಟಿದ್ದಾರೆ. ಚೆನ್ನೈನ ಕೊಯಂಬೇಡು ಮಾರುಕಟ್ಟೆ ಇದೀಗ ಕೊರೊನಾದ ಹೊಸ ಹಾಟ್‌ಸ್ಪಾಟ್‌ ಆಗಿ ಪರಿಣಮಿಸಿದ್ದು, ಪ್ರಸ್ತುತ ರಾಜ್ಯದಲ್ಲಿ 3,822 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಜಮ್ಮು ಮತ್ತು ಕಾಶ್ಮೀರದಲ್ಲಿ 18 ಹೊಸ ಪ್ರಕರಣಗಳು ವರದಿಯಾಗಿವೆ. ಈ ಕೇಂದ್ರಾಡಳಿ ಪ್ರದೇಶದಲ್ಲಿ ಒಟ್ಟು 793 ಪ್ರಕರಣಗಳು ದಾಖಲಾಗಿವೆ. ಪಶ್ಚಿಮ ಬಂಗಾಳದಲ್ಲಿ ಕೋವಿಡ್‌–19 ದೃಢಪಟ್ಟ 92 ಪ್ರಕರಣಗಳು ದಾಖಲಾಗಿದ್ದು, ಸಾವಿನ ಸಂಖ್ಯೆ 79 ತಲುಪಿದೆ. ಈವರೆಗೆ 1,548 ಪ್ರಕರಣಗಳು ವರದಿಯಾಗಿವೆ. 

ಕೇರಳದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸ ಪ್ರಕರಣ ದಾಖಲಾಗಿಲ್ಲ. ಛತ್ತೀಸ್‌ಗಢದಲ್ಲೂ ಹೊಸ ಪ್ರಕರಣಗಳು ವರದಿಯಾಗಿಲ್ಲ. 

ಆಂಧ್ರ ಪ್ರದೇಶದಲ್ಲಿ 56 ಹೊಸ ಪ್ರಕರಣಗಳೊಂದಿಗೆ ಒಟ್ಟು ಪ್ರಕರಣಗಳು 1,833; ಉತ್ತರ ಪ್ರದೇಶದಲ್ಲಿ 61 ಹೊಸ ಪ್ರಕರಣಗಳೊಂದಿಗೆ ಒಟ್ಟು 3,059 ಪ್ರಕರಣಗಳು ದಾಖಲಾಗಿವೆ. 

ಕರ್ನಾಟದಲ್ಲಿ ಒಟ್ಟು ಪ್ರಕರಣಗಳು 705ಕ್ಕೆ ಏರಿಕೆಯಾಗಿದೆ. ಪ್ರಸ್ತುತ 308 ಜನರು ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 30 ಮಂದಿ ಸಾವಿಗೀಡಾಗಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು