ಶುಕ್ರವಾರ, ಜೂಲೈ 10, 2020
24 °C
ಆಸ್ಪತ್ರೆಯ ವಿರುದ್ಧ ನಿರ್ಲಕ್ಷ್ಯದ ಆರೋಪ ಮಾಡಿದ್ದ ಹೈದರಾಬಾದ್ ವ್ಯಕ್ತಿ

ಆಮ್ಲಜನಕ ಕೊಟ್ಟಿಲ್ಲ ಎನ್ನುತ್ತಲೇ ಪ್ರಾಣ ಬಿಟ್ಟ ಯುವಕ: ಸಾವಿನ ಬಳಿಕ ಕೋವಿಡ್ ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ಇಲ್ಲಿನ ಎದೆರೋಗಗಳ ಆಸ್ಪತ್ರೆಯಲ್ಲಿ ದಾಖಲಾಗಿದ್ದ 34 ವರ್ಷದ ವ್ಯಕ್ತಿಯು ಆಸ್ಪತ್ರೆಯ ಹಾಸಿಗೆಯಿಂದ ಕಳುಹಿಸಿದ್ದ ಕೊನೆಯ ವಿಡಿಯೊ ಆರೋಗ್ಯ ವ್ಯವಸ್ಥೆ ಬಗ್ಗೆ ಭಾರಿ ಚರ್ಚೆಗೆ ಕಾರಣವಾಗಿದೆ. ತೀವ್ರ ಉಸಿರಾಟದ ತೊಂದರೆ ಇದ್ದರೂ ಆಸ್ಪತ್ರೆಯಲ್ಲಿ ತಮಗೆ ಆಮ್ಲಜನಕ ನೀಡುತ್ತಿಲ್ಲ ಎಂದು ವಿಡಿಯೊ ಸಂದೇಶದಲ್ಲಿ ಅವರು ಹೇಳಿಕೊಂಡಿದ್ದರು. ವ್ಯಕ್ತಿಗೆ ಕೋವಿಡ್‌ ಇತ್ತು ಎಂಬುದು ಸಾವಿನ ಬಳಿಕ ದೃಢಪಟ್ಟಿದೆ.

ಅವರು ಸಾಯುವ ಕೆಲ ನಿಮಿಷಗಳ ಮೊದಲು, ಕುಟುಂಬ ಸದಸ್ಯರಿಗಾಗಿ ವಿಡಿಯೊ ಮಾಡಿದ್ದರು. ತಮಗೆ ಜೀವರಕ್ಷಕ ಸಾಧನ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾನುವಾರ ಹರಿದಾಡಿ ಸಂಚಲನ ಸೃಷ್ಟಿಸಿತ್ತು.

‘ನನಗೆ ಉಸಿರಾಡಲು ಆಗುತ್ತಿಲ್ಲ ಎಂಬ ಮನವಿಯನ್ನು ಅವರು ನಿರ್ಲಕ್ಷಿಸಿದರು. ಜೀವರಕ್ಷಕ ವ್ಯವಸ್ಥೆ ಸ್ಥಗಿತಗೊಳಿಸಿದರು. ಅವರನ್ನು ಕೇಳಿಕೊಳ್ಳುವುದರಲ್ಲೇ ನಾನು ನಿತ್ರಾಣಗೊಂಡೆ. ಈ ಹೋರಾಟ ಮೂರು ಗಂಟೆ ನಡೆಯಿತು. ನಾನು ಉಸಿರಾಡಲಾರೆ. ನನ್ನ ಹೃದಯವು ಬಡಿತ ನಿಲ್ಲಿಸುತ್ತಿದೆ ಎಂದು ನನಗೆ ಭಾಸವಾಗುತ್ತಿದೆ. ಅಪ್ಪ ಹಾಗೂ ಎಲ್ಲರಿಗೂ ನಮಸ್ಕಾರ’ ಎಂದು ಆ ಯುವಕ ಭಾವುಕರಾಗಿ ಮಾತನಾಡಿದ್ದಾರೆ. ಆಸ್ಪತ್ರೆಯ ಹಾಸಿಗೆ ಮೇಲೆ ವಿಡಿಯೊ ಚಿತ್ರೀಕರಿಸಿದ ಕೆಲ ಸಮಯದಲ್ಲೇ ಅವರು ಮೃತಪಟ್ಟಿದ್ದಾರೆ. 

ವಿಡಿಯೊದಲ್ಲಿ ಕಾಣಿಸುತ್ತಿರುವ ಪ್ರಕಾರ, ವ್ಯಕ್ತಿಯ ಮೂಗಿನಲ್ಲಿ ಒಂದು ನಳಿಕೆ ಇದೆ. ಅವರು ಉಸಿರಾಡಲು ತುಂಬಾ ಕಷ್ಟಪಡುತ್ತಿದ್ದು, ಹೆಚ್ಚಿನ ನೆರವು ಅಗತ್ಯವಿದೆ ಎಂಬಂತೆ ಕಂಡುಬರುತ್ತಿದೆ. 

ಶುಕ್ರವಾರ ಮೃತಪಟ್ಟ ಯುವಕನ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ವಹಿಸಿಲ್ಲ ಎಂದು ತೆಲಂಗಾಣ ಸರ್ಕಾರ ಸೋಮವಾರ ಸ್ಪಷ್ಟಪಡಿಸಿದೆ. ಸಾವಿಗೆ ಕಾರಣ ಹೃದಯಾಘಾತ ಎಂದು ವೈದ್ಯರು ಸ್ಪಷ್ಟನೆ ನೀಡಿದ್ದಾರೆ. 

‘ಯುವಕನಿಗೆ ಆಮ್ಲಜನಕ ಪೂರೈಸಲಾಗುತ್ತಿತ್ತು. ಆತ ಮೃತಪಟ್ಟಿದ್ದು ಮಯೋಕಾರ್ಡಿಟಿಸ್ ಎಂಬ ಹೃದಯ ಸಂಬಂಧಿ ಕಾಯಿಲೆಯಿಂದ’ ಎಂದು ಎದೆರೋಗಗಳ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ಮೆಹಬೂಬ್ ಖಾನ್ ತಿಳಿಸಿದ್ದಾರೆ. 

‘ಕೋವಿಡ್ 19 ಕಾರಣ, ಆತನ ಹೃದಯವೂ ಶ್ವಾಸಕೋಶದ ರೀತಿ ತೊಂದರೆಗೆ ಒಳಗಾದಂತೆ ತೋರುತ್ತದೆ. ಇಂತಹ ಪ್ರಕರಣಗಳಲ್ಲಿ ಆಮ್ಲಜನಕದ ಪೂರೈಕೆ ಇದ್ದರೂ, ರೋಗಿಯು ಬಾಯಿ ತೆರೆದು ಜೋರಾಗಿ ಉಸಿರೆಳೆದುಕೊಳ್ಳುವ (ಗ್ಯಾಸ್ಪಿಂಗ್) ಪ್ರಕ್ರಿಯೆ ಮುಂದುವರಿದಿರುತ್ತದೆ. ನಮ್ಮ ಆಸ್ಪತ್ರೆಯಲ್ಲಿ ಆಮ್ಲಜನಕ ಅಥವಾ ಜೀವರಕ್ಷಕ ಸಾಧನ (ವೆಂಟಿಲೇಟರ್) ಕೊರತೆ ಇಲ್ಲ. ಯಾರಿಗಾದರೂ ವೆಂಟಿಲೇಟರ್ ಅಳವಡಿಸಿದರೆ, ಅದಕ್ಕೊಂದು ನಿಯಮ ಇರುತ್ತದೆ. ಜೂನ್ 24ರಂದು ಅವರು ಆಸ್ಪತ್ರೆಗೆ ದಾಖಲಾದಾಗಲೇ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು’ ಎಂದು ಖಾನ್ ಸ್ಪಷ್ಟನೆ ನೀಡಿದ್ದಾರೆ. 

ಕಳೆದ 10–15 ದಿನಗಳಿಂದ 35–45 ವರ್ಷ ವಯೋಮಾನದ ವ್ಯಕ್ತಿಗಳು ಕೋವಿಡ್‌ ಕಾರಣದಿಂದ ಹೃದಯ ಹಾಗೂ ಅದಕ್ಕೆ ಸಂಬಂಧಿಸಿದ ಸಮಸ್ಯೆ ಹೊತ್ತು ಆಸ್ಪತ್ರೆಗೆ ಬರುತ್ತಿದ್ದಾರೆ ಎಂದಿದ್ದಾರೆ. 

ಇದೇ ಆಸ್ಪತ್ರೆಯಲ್ಲಿ ಮುಖ್ಯ ನರ್ಸ್ ಆಗಿದ್ದವರು ಕೆಲ ದಿನಗಳ ಹಿಂದೆ ಕೋವಿಡ್‌ನಿಂದ ಮೃತಪಟ್ಟಿದ್ದರು. ಆರೋಗ್ಯ ಇಲಾಖೆಯ 258 ಸಿಬ್ಬಂದಿ ಕೋವಿಡ್‌ ಸೋಂಕಿಗೆ ಒಳಗಾಗಿದ್ದಾರೆ.

ನಿರ್ಲಕ್ಷ್ಯ ನಿರಾಕರಿಸಿದ ಸರ್ಕಾರ

ಆರೋಗ್ಯ ಸಚಿವ ರಾಜೇಂದ್ರ ಅವರು ಆಸ್ಪತ್ರೆಯ ಸಿಬ್ಬಂದಿಯನ್ನು ಸಮರ್ಥಿಸಿಕೊಂಡಿದ್ದಾರೆ. 

‘ನಮ್ಮ ಆರೋಗ್ಯ ವ್ಯವಸ್ಥೆಯು ಕೋವಿಡ್ ವಿರುದ್ಧದ ಹೋರಾಟದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು, ಸಾವಿರಾರು ಜನರಿಗೆ ಚಿಕಿತ್ಸೆ ನೀಡಿ, ಗುಣಮುಖರಾದ ಬಳಿಕ ಅವರನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಿದೆ. ಇಂತಹ ಒಂದೆರಡು ಪ್ರಕರಣಗಳನ್ನು ಎತ್ತಿ ತೋರಿಸುವುದು ಸರಿಯಲ್ಲ. ಇದು ವೈದ್ಯರು, ನರ್ಸ್ ಹಾಗೂ ಆರೋಗ್ಯ ಸಿಬ್ಬಂದಿಯ ಸ್ಥೈರ್ಯವನ್ನು ಉಡುಗಿಸುತ್ತದೆ’ ಎಂದು ರಾಜೇಂದ್ರ ಹೇಳಿದ್ದಾರೆ. 

ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿರುವ ಅಭಿಯಾನದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ರೋಗಿಗಳು ತಮ್ಮ ಕುಟುಂಬ ಸದಸ್ಯರ ಜೊತೆ ಸಂಪರ್ಕದಿಂದ ಇರಲು ಮಾತ್ರ ಮೊಬೈಲ್‌ಗಳಿಗೆ ಅನುಮತಿ ನೀಡಲಾಗಿದೆ. ಆದರೆ ಸರ್ಕಾರದ ಸೌಲಭ್ಯಗಳ ಬಗ್ಗೆ ತಿಳಿಸಲು ಅದನ್ನು ಬಳಸಬಾರದು’ ಎಂದು ಹೇಳಿದ್ದಾರೆ.  

**
ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಿರಾಕರಿಸಿದ ಬಳಿಕ ರೋಗಿಯು ಮಧ್ಯರಾತ್ರಿ ಹೊತ್ತಿಗೆ ಎದೆರೋಗಗಳ ಆಸ್ಪತ್ರೆಗೆ ಬಂದಿದ್ದಾರೆ. ಅವರಿಗೆ 24 ಗಂಟೆ ಆಮ್ಲಜನಕ ಪೂರೈಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.
-ರಾಜೇಂದ್ರ, ಆರೋಗ್ಯ ಸಚಿವ

**
ಶೇ 90ರಿಂದ 95ರಷ್ಟು ಪ್ರಕರಣಗಳಲ್ಲಿ ಶ್ವಾಸಕೋಶಗಳಿಗೆ ಕೋವಿಡ್ ತೊಂದರೆ ಕೊಡುತ್ತದೆ. ದುರದೃಷ್ಟವಶಾತ್ ಅದು ಹೃದಯದ ಸ್ನಾಯುವಿನ ಮೇಲೆ ಪ್ರಭಾವ ಬೀರುತ್ತಿದೆ.
-ಡಾ. ಮೆಹಬೂಬ್ ಖಾನ್, ಆಸ್ಪತ್ರೆಯ ಸೂಪರಿಂಟೆಂಡೆಂಟ್ 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು