ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರೂಪದ ಪ್ರಕರಣದಲ್ಲಷ್ಟೇ ಮರಣದಂಡನೆ

Last Updated 8 ಜನವರಿ 2020, 2:25 IST
ಅಕ್ಷರ ಗಾತ್ರ

ಭಾರತದಲ್ಲಿ ಬ್ರಿಟಿಷ್ ಆಳ್ವಿಕೆ ಇದ್ದ ದಿನಗಳಿಂದಲೂ ಮರಣದಂಡನೆ ಜಾರಿಯಲ್ಲಿದೆ. ಆ ದಿನಗಳಲ್ಲಿ ಸರ್ಕಾರ ಅಥವಾ ಪ್ರಭುತ್ವದ ವಿರುದ್ಧ ದಂಗೆ ಏಳುವವರನ್ನು ಮರಣದಂಡನೆಗೆ ಗುರಿ ಮಾಡಲಾಗುತ್ತಿತ್ತು. ಗಲ್ಲು ಶಿಕ್ಷೆಗೆ ಅವಕಾಶ ಮಾಡಿಕೊಡುವ ದಂಡಸಂಹಿತೆಯ ಸೆಕ್ಷನ್‌ ಅನ್ನು, 1947ರಲ್ಲಿ ಭಾರತವು ಸ್ವತಂತ್ರವಾದ ನಂತರವೂ ಉಳಿಸಿಕೊಳ್ಳಲಾಗಿದೆ. ಕೊಲೆ, ಅತ್ಯಾಚಾರ, ಭಯೋತ್ಪಾದನೆ ಸೇರಿ ಕೆಲವೇ ಪ್ರಕರಣಗಳಲ್ಲಿ ಮಾತ್ರ ಗಲ್ಲು ಶಿಕ್ಷೆ ವಿಧಿಸಲು ಅವಕಾಶವಿದೆ.

ಸ್ವತಂತ್ರ ಭಾರತದ ಮೊದಲ ಮೂರು ದಶಕಗಳಲ್ಲಿ ಎಷ್ಟು ಜನರನ್ನು ಮರಣದಂಡನೆಗೆ ಗುರಿ ಮಾಡಲಾಗಿದೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಿಲ್ಲ. ಈ ಅವಧಿಯಲ್ಲಿ ಸಾಮಾನ್ಯ ಪ್ರಕರಣಗಳಲ್ಲೂ ಮರಣದಂಡನೆ ಘೋಷಿಸಲಾಗಿದೆ.‘ಅಪರೂಪದ ಪ್ರಕರಣಗಳಲ್ಲಿ ಮಾತ್ರ ಗಲ್ಲು ಶಿಕ್ಷೆ ವಿಧಿಸಬೇಕು’ ಎಂದು ಸುಪ್ರೀಂ ಕೋರ್ಟ್‌ 1980ರಲ್ಲಿ ಹೇಳಿದೆ. ಸುಪ್ರೀಂ ಕೋರ್ಟ್‌ನ ಆದೇಶದ ನಂತರವಷ್ಟೇ ಮರಣದಂಡನೆ ಘೋಷಿಸುವ ಪ್ರಮಾಣ ಇಳಿಕೆಯಾಗಿದೆ ಎಂದು ತಜ್ಞರು ಹೇಳುತ್ತಾರೆ.

ಆದರೆ,ಈಗಲೂ ದೇಶದಲ್ಲಿ ಘೋಷಿಸಲಾಗುವ ಗಲ್ಲು ಶಿಕ್ಷೆಗಳಿಗೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ ಒಂದೆಡೆ ಲಭ್ಯವಿಲ್ಲ. ಎಲ್ಲಾ ಮಾಹಿತಿಯನ್ನು ಒಂದೆಡೆ ಕಲೆಹಾಕುವ ವ್ಯವಸ್ಥೆ ಇಲ್ಲ. ಪ್ರತಿ ರಾಜ್ಯಗಳಲ್ಲಿ ಘೋಷಿಸಲಾಗುವ ಗಲ್ಲು ಶಿಕ್ಷೆಗಳ ಮಾಹಿತಿಯನ್ನು, ‘ಮಾಹಿತಿ ಹಕ್ಕು ಕಾಯ್ದೆ’ ಅಡಿ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬೇಕಿದೆ.

ಜಾರಿ ವಿಧಾನ

ಭಾರತದಲ್ಲಿ ಎರಡು ಸ್ವರೂಪದಲ್ಲಿ ಮರಣದಂಡನೆ ಜಾರಿಗೆ ತರಲು ಅವಕಾಶವಿದೆ. ಒಂದು ಗಲ್ಲು, ಎರಡನೆಯದ್ದು ಗುಂಡು ಹೊಡೆಯುವ ಮೂಲಕ ಕೊಲ್ಲುವುದು. ಬಹುತೇಕ ಪ್ರಕರಣಗಳಲ್ಲಿ ಗಲ್ಲು ಶಿಕ್ಷೆಯನ್ನೇ ಘೋಷಿಸಲಾಗುತ್ತದೆ.ಅಪರಾಧಿಗಳಗೆ ಗುಂಡು ಹೊಡೆದು ಕೊಲ್ಲುವ ಅವಕಾಶವನ್ನು ‘1950 ಭಾರತೀಯ ಸೇನಾ ಕಾಯ್ದೆ’ ಕೊಟ್ಟಿದೆ. ಸೇನೆಗೆ ಸಂಬಂಧಿಸಿದ ಅಪರಾಧ ಪ್ರಕರಣಗಳಲ್ಲಿ ಮಾತ್ರ ಈ ಸ್ವರೂಪದ ಶಿಕ್ಷೆಗೆ ಅವಕಾಶವಿದೆ. ಈ ಸ್ವರೂಪದಲ್ಲಿ ಶಿಕ್ಷೆ ಜಾರಿಗೊಳಿಸಿದ್ದರ ಬಗ್ಗೆ ಮಾಹಿತಿ ಲಭ್ಯವಿಲ್ಲ.

ವಿನಾಯಿತಿ

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪರಾಧಿಗಳಿಗೆ, ಗರ್ಭಿಣಿಯರಿಗೆ ಮತ್ತು ಮಾನಸಿಕ ಅಸ್ವಸ್ಥ ಅಪರಾಧಿಗಳಿಗೆ ಮರಣದಂಡನೆಯಿಂದ ವಿನಾಯಿತಿ ನೀಡಬಹುದಾಗಿದೆ.

–––––––––

ಯಾವ ಪ್ರಕರಣಗಳಲ್ಲಿ ಮರಣದಂಡನೆ

* ಕೊಲೆ (ಭಾರತೀಯ ದಂಡ ಸಂಹಿತೆ–ಐಪಿಸಿ ಸೆಕ್ಷನ್ 302)

* ಡಕಾಯಿತಿ ವೇಳೆ ಕೊಲೆ

* ಭಯೋತ್ಪಾದನಾ ಕೃತ್ಯ(ಭಯೋತ್ಪಾದನೆ ತಡೆ ಕಾಯ್ದೆ)

* ಅತ್ಯಾಚಾರ, ಸಾಮೂಹಿಕ ಅತ್ಯಾಚಾರ(ನಿರ್ಭಯಾ ಕಾಯ್ದೆ)

* 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಅತ್ಯಾಚಾರ(2018ರ ಅಪರಾಧ ಕಾನೂನು ತಿದ್ದುಪಡಿ ಕಾಯ್ದೆ)

* ಅಪಹರಣ ಮತ್ತು ಕೊಲೆ (ಐಪಿಸಿ ಸೆಕ್ಷನ್ 364ಎ)

* ಸರ್ಕಾರದ ವಿರುದ್ಧ ದಂಗೆ (1950ರ ಸೇನಾ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 124ಎ)

* ಮಾದಕ ವಸ್ತು ಕಳ್ಳಸಾಗಣೆ

* ಭಾರತೀಯ ಸೇನೆಯ ಮೂರು ಪಡೆಗಳ ಸಿಬ್ಬಂದಿ ಸೇನೆಯ ವಿರುದ್ಧ ಎಸಗಿದ ಅಪರಾಧಗಳು(1950ರ ಸೇನಾ ಕಾಯ್ದೆ)

* ಸುಳ್ಳು ಸಾಕ್ಷ್ಯ ಹೇಳಿ ನಿರಪರಾಧಿಯು ಮರಣದಂಡನೆಗೆ ಬಲಿಯಾದರೆ, ಸಾಕ್ಷ್ಯ ಹೇಳಿದವರಿಗೆ ಮರಣದಂಡನೆ

ಮರಣದಂಡನೆ, ದಯಾ ಅರ್ಜಿ ಮತ್ತು ಜಾರಿ

* ಸೆಷನ್ಸ್‌ ನ್ಯಾಯಾಲಯಗಳಲ್ಲಿ ಮರಣದಂಡನೆ ಘೋಷಿಸಲಾಗುತ್ತದೆ. ಸೆಷನ್ಸ್ ನ್ಯಾಯಾಲಯಗಳು ಘೋಷಿಸಿದ ಮರಣದಂಡನೆಯನ್ನು ಹೈಕೋರ್ಟ್‌ ದೃಢಪಡಿಸಲೇಬೇಕು

* ಶಿಕ್ಷೆಯನ್ನು ಎತ್ತಿಹಿಡಿಯುವ, ಕಡಿಮೆ ಮಾಡುವ, ಅಪರಾಧಿಯನ್ನು ಖುಲಾಸೆ ಮಾಡುವ ಮತ್ತು ಪ್ರಕರಣದ ಮರುವಿಚಾರಣೆಗೆ ಆದೇಶಿಸುವ ಅವಕಾಶ ಹೈಕೋರ್ಟ್‌ಗೆ ಇದೆ. ಮರು ವಿಚಾರಣೆಗೆ ಆದೇಶ ಹೊರತುಪಡಿಸಿ ಉಳಿದ ಎಲ್ಲಾ ಸಂದರ್ಭಗಳಲ್ಲೂ, ಹೈಕೋರ್ಟ್‌ನ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ನ ಮೊರೆ ಹೋಗಲು ಅವಕಾಶವಿದೆ. ಮೇಲ್ಮನವಿಯ ಅವಕಾಶ ಅಪರಾಧಿ ಮತ್ತು ಸರ್ಕಾರ ಇಬ್ಬರಿಗೂ ಇದೆ

* ಶಿಕ್ಷೆಯನ್ನು ಎತ್ತಿಹಿಡಿಯುವ, ಕಡಿಮೆ ಮಾಡುವ, ಅಪರಾಧಿಯನ್ನು ಖುಲಾಸೆ ಮಾಡುವ ಮತ್ತು ಪ್ರಕರಣದ ಮರುವಿಚಾರಣೆಗೆ ಆದೇಶಿಸುವ ಅಧಿಕಾರ ಸುಪ್ರೀಂ ಕೋರ್ಟ್‌ಗೆ ಇದೆ.

* ಸುಪ್ರೀಂ ಕೋರ್ಟ್‌ ಶಿಕ್ಷೆ ಘೋಷಿಸಿದ 30 ದಿನಗಳ ಒಳಗೆ, ಆ ಆದೇಶದ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸಲು ಅವಕಾಶವಿದೆ

* ಮರುಪರಿಶೀಲನಾ ಅರ್ಜಿ ತಿರಸ್ಕೃತವಾದರೆ, ಅದರ ವಿರುದ್ಧ ಪರಿಹಾರಾತ್ಮಕ ಅರ್ಜಿ (ಕ್ಯುರೇಟಿವ್ ಅರ್ಜಿ) ಸಲ್ಲಿಸಲು ಅವಕಾಶವಿದೆ

* ಪರಿಹಾರಾತ್ಮಕ ಅರ್ಜಿಯೂ ತಿರಸ್ಕೃತವಾದರೆ, ಅಪರಾಧಿಯು ರಾಷ್ಟ್ರಪತಿಗೆ ದಯಾ ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಪುರಸ್ಕರಿಸುವ ಮತ್ತು ತಿರಸ್ಕರಿಸುವ ಅಧಿಕಾರ ರಾಷ್ಟ್ರಪತಿಗೆ ಇದೆ

* ದಯಾ ಅರ್ಜಿ ತಿರಸ್ಕೃತವಾದರೆ, ಅಪರಾಧಿಯನ್ನು ಮರಣದಂಡನೆಗೆ ಗುರಿ ಮಾಡಲಾಗುತ್ತದೆ

ಗಲ್ಲು: ಬೇಕೇ.. ಬೇಡವೇ..

‘21ನೇ ಶತಮಾನದಲ್ಲಿ ಮರಣದಂಡನೆಗೆ ಅವಕಾಶವಿಲ್ಲ...’

ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಅವರು ಗಲ್ಲು ಶಿಕ್ಷೆ ನಿಲ್ಲಬೇಕು ಎಂಬ ಒತ್ತಾಸೆಯಿಂದ ಮಾತನಾಡಿದ್ದರೂ ಜಗತ್ತಿನ 50ಕ್ಕೂ ಹೆಚ್ಚು ದೇಶಗಳಲ್ಲಿ ಮರಣದಂಡನೆ ಜಾರಿಯಲ್ಲಿದೆ. ನಿರ್ಭಯಾ ರೀತಿಯ ಸಾಮೂಹಿಕ ಅತ್ಯಾಚಾರ ಹಾಗೂ ಬರ್ಬರ ಹತ್ಯೆ ಪ್ರಕರಣಗಳಲ್ಲಿ ಗರಿಷ್ಠ ಶಿಕ್ಷೆ ನೀಡುವ ಪರಿಪಾಟ ಇದೆ.

ಭಾರತ, ಅಫ್ಗಾನಿಸ್ತಾನ, ಪಾಕಿಸ್ತಾನ, ನೈಜೀರಿಯಾ, ಅಮೆರಿಕ, ಇರಾನ್, ಜಪಾನ್, ಕುವೈತ್, ಬಾಂಗ್ಲಾದೇಶ, ಇರಾಕ್, ಯುಎಇ, ಇಂಡೊನೇಷ್ಯಾ ಮೊದಲಾದ ದೇಶಗಳಲ್ಲಿ ಅಪರಾಧಿಗಳು ನೇಣುಗಂಬಕ್ಕೇರುತ್ತಿದ್ದಾರೆ.

ಕ್ರೂರತ್ವದ ಕೊನೆಯ ಘಟ್ಟ: ಅಮ್ನೆಸ್ಟಿ

ನಿರ್ಭಯಾ ಪ್ರಕರಣ, ಉನ್ನಾವ್‌ನಲ್ಲಿ ಸಂತ್ರಸ್ತೆಗೆ ಬೆಂಕಿ ಹಚ್ಚಿದ ಘಟನೆ, ಹೈದರಾಬಾದ್‌ನಲ್ಲಿ ಪಶುವೈದ್ಯೆ ಮೇಲಿನ ಅತ್ಯಾಚಾರ ಪ್ರಕರಣಗಳ ಬಳಿಕ ಅಪರಾಧಿಗಳಿಗೆ ಗಲ್ಲು ಶಿಕ್ಷೆಯೇ ಆಗಬೇಕೆಂಬ ಒತ್ತಡ ದೇಶದೆಲ್ಲೆಡೆ ಕೇಳಿಬರುತ್ತಿದೆ. ಆದರೆ ಯಾರಿಗೂ ಗಲ್ಲು ಶಿಕ್ಷೆಯನ್ನು ನೀಡಬಾರದು ಎಂಬುದು ‘ಅಮ್ನೆಸ್ಟಿ ಇಂಟರ್‌ನ್ಯಾಷನಲ್’ ಎನ್‌ಜಿಒ ಒತ್ತಾಯ. ‘ಇದು ಕ್ರೌರ್ಯದ ಕೊನೆಯ ಘಟ್ಟ, ಅಮಾನವೀಯತೆಯಿಂದ ಕೂಡಿದೆ ಹಾಗೂ ಅವಮಾನಕರ ಶಿಕ್ಷೆ’ ಎಂಬುದು ಅಮ್ನೆಸ್ಟಿ ವಾದ.

‘ಎಲ್ಲ ಪ್ರಕರಣಗಳಲ್ಲೂ, ಅಪರಾಧದ ಸ್ವರೂಪ ಯಾವುದೇ ಆಗಿದ್ದರೂ, ಅಪರಾಧಿ ಯಾರೇ ಆಗಿದ್ದರೂ ಗಲ್ಲು ಬೇಡ’ ಎನ್ನುತ್ತದೆ ಈ ಸಂಸ್ಥೆ.

ಚೀನಾದಲ್ಲಿ ಹೆಚ್ಚು

*ಅಮ್ನೆಸ್ಟಿ ಪ್ರಕಾರ, ಚೀನಾದಲ್ಲಿ ಅತಿಹೆಚ್ಚು ಮರಣದಂಡನೆ ಜಾರಿ ಮಾಡಲಾಗುತ್ತದೆ. ಈ ವಿಚಾರದಲ್ಲಿ ಸರ್ಕಾರ ಗೋಪ್ಯತೆ ಕಾಪಾಡುವುದರಿಂದ, ನಿಖರ ಅಂಕಿಅಂಶಗಳು ದೊರೆಯುತ್ತಿಲ್ಲ.

*2018ರಲ್ಲಿ ಜಗತ್ತಿನಲ್ಲಿ 690 ಗಲ್ಲು ಶಿಕ್ಷೆಗಳು ಜಾರಿಯಾಗಿವೆ. ಆದರೆ ಚೀನಾದಲ್ಲಿ ಜಾರಿಗೊಂಡಿರಬಹುದಾದ ಸಾವಿರಾರು ಗಲ್ಲು ಶಿಕ್ಷೆಗಳ ದತ್ತಾಂಶ ಇದರಲ್ಲಿ ಸೇರಿಲ್ಲ.

*ಅತಿಹೆಚ್ಚು ಗಲ್ಲು ಶಿಕ್ಷೆ ಜಾರಿಯಾಗುವ ಚೀನಾ ಬಿಟ್ಟರೆ, ನಂತರದ ಸ್ಥಾನಗಳಲ್ಲಿ ಇರಾನ್, ಸೌದಿ ಅರೇಬಿಯಾ, ವಿಯೆಟ್ನಾಂ ಹಾಗೂ ಇರಾಕ್ ದೇಶಗಳು ಇವೆ.

ಗಲ್ಲು ಶಿಕ್ಷೆ ನಿಷೇಧಿಸಿದ ದೇಶಗಳು

2018: ಬುರ್ಕಿನ ಫಾಸೊ

2017: ಗಿನಿ

2016: ಬೆನಿನ್

2015: ಮಡಗಾಸ್ಕರ್

ಮುನಿರಕಾ ಬಸ್‌ ನಿಲ್ದಾಣ ಮಹಿಳೆಯರಿಗಿಲ್ಲ ಸುರಕ್ಷತೆ

ಅತ್ಯಾಚಾರಕ್ಕೆ ಒಳಗಾಗುವ ಮುನ್ನ ‘ನಿರ್ಭಯಾ’ ಬಸ್‌ಗಾಗಿ ಕಾಯುತ್ತಿದ್ದ ಆ ನಿಲ್ದಾಣ, ಈಗಲೂ ‘ಕತ್ತಲಿನಲ್ಲಿಯೇ’ ಇದೆ. ಘಟನೆಯ ಬಳಿಕವೂ ಮಹಿಳೆಯರಿಗೆ ಇಲ್ಲಿ ಸುರಕ್ಷತೆ ಮರೀಚಿಕೆಯಾಗಿದೆ.

2012ರ ಡಿಸೆಂಬರ್ 16ರ ಸಂಜೆ ನಿರ್ಭಯಾ ತನ್ನ ಗೆಳೆಯನ ಜತೆ ದೆಹಲಿಯ ಮುನಿರಕಾ ಬಸ್‌ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದರು. ಬಸ್‌ನಲ್ಲಿ ಹತ್ತಿ ಕುಳಿತ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯಿತು. ಆರು ಮಂದಿ ಅತ್ಯಾಚಾರಿಗಳು ಆಕೆಯ ಮೇಲೆ ಬರ್ಬರವಾಗಿ ಹಲ್ಲೆ ಮಾಡಿ, ಬಸ್‌ನಿಂದ ಎಸೆದಿದ್ದರು. ಈ ಘಟನೆ ದೇಶದಾದ್ಯಂತ ಭಾರಿ ಸಂಚಲನ ಸೃಷ್ಟಿಸಿತ್ತು. ಆದರೆ, ಅದೇ ಬಸ್‌ ನಿಲ್ದಾಣದಲ್ಲಿ ಮಹಿಳೆಯರು ಈಗಲೂ ಭಯದಿಂದ ಓಡಾಡುವಪರಿಸ್ಥಿತಿ ಇದೆ.

ನಿತ್ಯವೂ ಈ ಬಸ್‌ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುವವರ ಪೈಕಿ ಮಹಿಳೆಯರು ಹೆಚ್ಚಾಗಿದ್ದಾರೆ. ರಾತ್ರಿ 9 ಗಂಟೆ ಬಳಿಕ ಈ ನಿಲ್ದಾಣ ಅನಧಿಕೃತ ಪಾರ್ಕಿಂಗ್ ಅಡ್ಡೆಯಾಗಿ ಪರಿವರ್ತನೆಯಾಗುತ್ತದೆ. ಈ ಹೊತ್ತಿನಲ್ಲಿ ಜಮಾಯಿಸುವ ಸಮಾಜಘಾತುಕರ ಗುಂಪು ಅನುಚಿತವಾಗಿ ವರ್ತಿಸುತ್ತದೆ ಎಂಬುದು ಮಹಿಳೆಯರ ಆರೋಪ.

ನಿರ್ಭಯಾ ಘಟನೆ ಬಳಿಕ, ಬಸ್‌ ನಿಲ್ದಾಣಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ, ಬಸ್‌ಗಳಲ್ಲಿ ಜಿಪಿಎಸ್ ಅಳವಡಿಕೆ ಮಾತುಗಳಷ್ಟೇ ಕೇಳಿಬರುತ್ತಿವೆ. ಈ ಬಸ್‌ ನಿಲ್ದಾಣ ಈಗಲೂ ಶಾಪಗ್ರಸ್ತವಾಗಿದೆ ಎನ್ನುತ್ತಾರೆ ದೆಹಲಿಯ 24 ವರ್ಷದ ಮಹಿಳೆ.

‘ಕೆಲಸ ಮುಗಿಸಿಕೊಂಡು ನಾನು ಮುನಿರಕಾ ಬಸ್ ನಿಲ್ದಾಣಕ್ಕೆ ಬಂದಿಳಿಯುವಾಗ, ಆಟೊ ರಿಕ್ಷಾ ಚಾಲಕರು ದುರುಗುಟ್ಟಿ ನೋಡುತ್ತಿರುತ್ತಾರೆ. ಸ್ಥಳೀಯ ಯುವಕರೂ ಇದೇ ರೀತಿ ಮಾಡುತ್ತಾರೆ. ಇಂತಹ ಸವಾಲುಗಳನ್ನು ಮಹಿಳೆಯರು ನಿತ್ಯವೂ ಎದುರಿಸುತ್ತಿದ್ದಾರೆ’ ಎನ್ನುವುದು ಮತ್ತೊಬ್ಬ ಮಹಿಳೆಯ ಮಾತು.

‘ಬಸ್ ಇಳಿದ ಮೇಲೆ ಮನೆಗೆ ಹೋಗಲು ಆಟೊ ಹಿಡಿಯಬೇಕು. ಆದರೆ ಆಟೊದವರು ಬರಲು ನಿರಾಕರಿಸುತ್ತಾರೆ. ‘ಕೆಲಸ ಮುಗಿಯಿತು, ಇಂಧನ ಇಲ್ಲ’ ಎಂಬ ಸಬೂಬು ಹೇಳುತ್ತಾರೆ. ಅನಿವಾರ್ಯವಾಗಿ ನಡೆದುಕೊಂಡು ಹೋಗಲು ಮುಂದಾದರೆ ಅವರು ಹಿಂಬಾಲಿಸುತ್ತಾರೆ’ ಎನ್ನುವುದು ಮೀನಾ ಅವರ ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT