ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಎನ್‌ಯುಗೆ ದೀಪಿಕಾ ಪಡುಕೋಣೆ ಭೇಟಿ, ದಾಳಿಗೊಳಗಾಗಿದ್ದ ವಿದ್ಯಾರ್ಥಿಗಳಿಗೆ ಬೆಂಬಲ

Last Updated 10 ಜನವರಿ 2020, 13:33 IST
ಅಕ್ಷರ ಗಾತ್ರ

ನವದೆಹಲಿ: ಮುಸುಕುಧಾರಿಗಳು ಜೆಎನ್‌ಯು ಮೇಲೆ ದಾಳಿ ನಡೆಸಿದ ಎರಡು ದಿನಗಳ ಬಳಿಕ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯಕ್ಕೆ ಮಂಗಳವಾರ ಸಂಜೆ ಭೇಟಿ ನೀಡಿ, ದಾಳಿಗೊಳಗಾದ ವಿದ್ಯಾರ್ಥಿಗಳಿಗೆ ಸಾಂತ್ವನ ಹೇಳಿದರು.

ವಿಶ್ವವಿದ್ಯಾಲಯದ ಬಳಿ ಏನನ್ನೂಮಾತನಾಡದ ದೀಪಿಕಾ, ದಾಳಿಗೊಳಗಾಗಿದ್ದ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಆಯಿಷಿ ಘೋಷ್ ಅವರಿದ್ದ ವಿದ್ಯಾರ್ಥಿಗಳ ಗುಂಪಿನ ಬಳಿ ನಿಂತಿದ್ದು ಕಂಡುಬಂತು. ಈ ವೇಳೆ ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್‌ ಕೂಡ ಅಲ್ಲಿದ್ದರು. ಈ ಬೆಳವಣಿಗೆಯು ವಿವಾದ ಸೃಷ್ಟಿಸಿದೆ.

ದೀಪಿಕಾರ ಆಪ್ತ ಮೂಲಗಳ ಪ್ರಕಾರ ವಿದ್ಯಾರ್ಥಿಗಳೊಂದಿಗೆ ಒಗ್ಗಟ್ಟನ್ನು ಪ್ರದರ್ಶಿಸಲು ಅಲ್ಲಿಗೆ ಭೇಟಿ ನೀಡಿದ್ದರು ಎಂದು ಹೇಳಲಾಗಿದೆ.

ದಕ್ಷಿಣ ದೆಹಲಿಯ ಜೆಎನ್‌ಯು ಕ್ಯಾಂಪಸ್‌ಗೆ ರಾತ್ರಿ 7.30ರ ಸುಮಾರಿಗೆ ಭೇಟಿ ನೀಡಿದ ದೀಪಿಕಾ,ಸುಮಾರು 15 ನಿಮಿಷ ವಿದ್ಯಾರ್ಥಿ ಸಂಘಟನೆಯ ಕೆಲವು ವಿದ್ಯಾರ್ಥಿಗಳೊಂದಿಗೆಮಾತನಾಡಿ ಅಲ್ಲಿಂದ ತೆರಳಿದರು.

ದೀಪಿಕಾ ಪಡುಕೋಣೆ ವಿದ್ಯಾರ್ಥಿಗಳನ್ನು ಭೇಟಿ ಮಾಡುತ್ತಿದ್ದಂತೆಯೇ ಸಿಟ್ಟಿಗೆದ್ದಿರುವ ಬಿಜೆಪಿಯು ನಟಿಯ ಚಿತ್ರಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿದೆ. ತುಕ್ಡೆ ತುಕ್ಡೆ ಗ್ಯಾಂಗ್‌ ಹಾಗೂ ಅಫ್ಜಲ್‌ ಗ್ಯಾಂಗ್‌‌ಗೆ ಬೆಂಬಲ ಸೂಚಿಸಿರುವ ಈ ನಟಿಯ ಸಿನಿಮಾಗಳನ್ನು ಬಹಿಷ್ಕರಿಸಿ ಎಂದು ಬಿಜೆಪಿ ದೆಹಲಿ ಘಟಕದ ವಕ್ತಾರ ಜಿತೇಂದ್ರಪಾಲ್‌ ಸಿಂಗ್‌ ಬಗ್ಗ ಅವರು ಟ್ವೀಟ್‌ ಮೂಲಕ ಕರೆ ನೀಡಿದ್ದಾರೆ.

ದೀಪಿಕಾರ ಈ ನಡೆಯನ್ನು ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಬೆಂಬಲಿಸಿದ್ದು, ಉತ್ತಮ ಕೆಲಸ ಮಾಡಿದ್ದೀರಿ ಎಂದು ಟ್ವೀಟ್ ಮಾಡಿದ್ದಾರೆ.

ಪ್ರತಿಭಟನೆ ಕುರಿತು ನೆನ್ನೆಯಷ್ಟೇ ಎನ್‌ಡಿಟಿವಿಯೊಂದಿಗೆ ಮಾತನಾಡಿದ್ದ ಪಡುಕೋಣೆ, ನಮಗೆ ಭಯವಿಲ್ಲ ಎಂಬುದು ಹೆಮ್ಮೆಯಾಗುತ್ತದೆ. ಜನರು ನಿರ್ಭೀತಿಯಿಂದ ಪ್ರತಿಭಟನೆ ನಡೆಸುತ್ತಿರುವುದು ಹೆಮ್ಮೆಯ ವಿಚಾರ. ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಸಾಧ್ಯವಾಗಿದೆ ಎಂದು ಭಾವಿಸುತ್ತೇನೆ. ಇಂದಿನ ಬಗ್ಗೆ ಮತ್ತು ದೇಶದ ನಾಳಿನ ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದೇವೆ ಎನಿಸುತ್ತಿದೆ. ಜನರು ಹೊರಬಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವುದನ್ನು ನೋಡಲು ಸಂತೋಷವಾಗುತ್ತದೆ. ಯಾಕೆಂದರೆ ನಮಗೆ ಬದಲಾವಣೆಯನ್ನು ನೋಡಬೇಕು, ಇದು ಅತ್ಯಂತ ಮುಖ್ಯ ಎಂದು ಹೇಳಿದ್ದರು.

ರ್‍ಯಾಲಿಯನ್ನು ಉದ್ದೇಶಿಸಿ ಕನ್ಹಯ್ಯ ಕುಮಾರ್ ಅತ್ತ ಭಾಷಣ ಮಾಡುತ್ತಿದ್ದರೆ, ಇತ್ತ ಆಯಿಷಿ ಘೋಷ್ ಅವರ ಬಳಿಯಲ್ಲಿದೀಪಿಕಾ ನಿಂತಿದ್ದರು. ದೀಪಿಕಾ ತೆರಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕನ್ಹಯ್ಯ, ದೀಪಿಕಾ ಇಲ್ಲಿಗೆ ಬಂದಿದ್ದರಾ? ನಾನು ಅವರನ್ನು ನೋಡಲಿಲ್ಲ. ಆಕೆಯನ್ನು ಭೇಟಿಯಾಗಲಿಲ್ಲ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT