ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾನ್ಯ ಸ್ಥಿತಿಗೆ ಮರಳಿದ ದೆಹಲಿ, ಸಾರಾಯಿ ಅಂಗಡಿ ಎದುರು ನೂಕುನುಗ್ಗಲು

Last Updated 4 ಮೇ 2020, 9:12 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ತಡೆಗಾಗಿ ಘೋಷಿಸಲಾದ ಲಾಕ್‌ಡೌನ್‌ನಿಂದ ಕಳೆದ 40 ದಿನಗಳಿಂದ ಸ್ಥಗಿತಗೊಂಡಿದ್ದ‌ ದೆಹಲಿ ಸೋಮವಾರದಿಂದ ಮತ್ತೆ ಸಾಮಾನ್ಯ ಸ್ಥಿತಿಗೆ‌ ಮರಳಿದೆ.

4000ಕ್ಕೂ ಅಧಿಕ ಪಾಸಿಟಿವ್ ಪ್ರಕರಣ ಕಂಡುಬಂದಿದ್ದರಿಂದ ದೆಹಲಿಯ ಎಲ್ಲ‌ ಪ್ರದೇಶಗಳು ಕೆಂಪು ವಲಯದಲ್ಲಿದ್ದರೂ ಜನಜೀವನವನ್ನು ಸಹಜ‌ ಸ್ಥಿತಿಗೆ ತರುವ‌ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಿಯಮ ಸಡಿಲಿಸಿ ಜನರ, ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಟ್ಟಿದೆ‌.

ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಬೆಳಿಗ್ಗೆಯಿಂದಲೇ ಮನೆಯಿಂದ ಹೊರಬಂದು ಓಡಾಡುತ್ತಿದ್ದುದು ಬಹುತೇಕ ಕಡೆ ಕಂಡುಬರುತ್ತಿದೆ. ದೊಡ್ಡ ದೊಡ್ಡ ಮಾಲ್ ಹೊರತುಪಡಿಸಿ, ಸಣ್ಣಪುಟ್ಟ ಮಾರುಕಟ್ಟೆಯಲ್ಲಿ ಇರುವ ಅಂಗಡಿಗಳ ಬಾಗಿಲು ತೆರೆದಿದ್ದು, ಗ್ರಾಹಕರ ದಂಡೂ ಖರೀದಿಗಾಗಿ ಧಾವಿಸುತ್ತಿದೆ.

ದೆಹಲಿಯ ವಿವಿಧೆಡೆ ಇರುವ, ಆಯ್ದ 124 ಸಾರಾಯಿ ಅಂಗಡಿಗಳಲ್ಲಿ ವ್ಯಾಪಾರಕ್ಕೆ ಅನುವು ಮಾಡಿಕೊಡಲಾಗಿದ್ದು, ಮದ್ಯಪ್ರಿಯರು ಬೆಳಿಗ್ಗೆಯಿಂದಲೇ ಮದ್ಯ ಖರೀದಿಗಾಗಿ ಮುಗಿ ಬಿದ್ದಿದ್ದಾರೆ.

ಆದರೆ, ಪರಸ್ಪರ ಅಂತರ ಕಾಯ್ದುಕೊಳ್ಳುವಿಕೆಗೆ‌ ಬೆಲೆ ನೀಡದೆ ಒಬ್ಬರಿಗೊಬ್ಬರು ಅಂಟಿಕೊಂಡೇ ಸರದಿಯಲ್ಲಿ ನಿಂತಿರುವುದು‌ ಕಂಡುಬರುತ್ತಿದೆ. ಕೆಲವೆಡೆ ಪೊಲೀಸ್ ಸಿಬ್ಬಂದಿಯೂ ಜನರನ್ನು ಚದುರಿಸದೆ, ಅಂತರ ಕಾಯ್ದುಕೊಳ್ಳುವಂತೆ ಸೂಚಿಸದೆ ಕೈಚೆಲ್ಲಿರುವುದು‌ ಕಂಡು ಬರುತ್ತಿದೆ. ಇನ್ನು ಕೆಲವೆಡೆ ಮದ್ಯದ ಅಂಗಡಿಗಳ ಎದುರಿನ‌ ನೂಕುನುಗ್ಗಲು ನಿಯಂತ್ರಣಕ್ಕೆ ಬಾರದ್ದರಿಂದ ಮಾರಾಟ ಸ್ಥಗಿತಗೊಳಿಸಿ ಅಂಗಡಿಗಳ ಬಾಗಿಲು ಮುಚ್ಚಿಸಲಾಗುತ್ತಿದೆ.

ವಸಂತವಿಹಾರದ ಪಶ್ಚಿಮ‌ಮಾರ್ಗ ಮಾರುಕಟ್ಟೆಯಲ್ಲಿನ ಮದ್ಯದ ಅಂಗಡಿಗಳ ಎದುರು ಕಿಲೋ ಮೀಟರ್ ಗಟ್ಟಲೆ ಸರದಿ ನಿಂತು ಗದ್ದಲ ಮಾಡುತ್ತಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ‌ ನಡೆಸಿದ ಘಟನೆಯೂ ನಡೆಯಿತು.

ಲಾಕ್‌ಡೌನ್‌ನಿಂದ ಕಳೆದ 40 ದಿನ ಹರಡದೆ ನಿಯಂತ್ರಣಕ್ಕೆ ಬಂದಿದ್ದ ಕೊರೊನಾ ಸಾರಾಯಿ ಅಂಗಡಿಗಳಿಂದಾಗಿ ವ್ಯಾಪಕವಾಗಿ ಹರಡಿದರೂ ಆಶ್ಚರ್ಯ ಪಡಬೇಕಿಲ್ಲ ಎಂದು ಬೇರೆ ಬೇರೆ ಅಂಗಡಿಗಳ ಎದುರು ಅಂತರ ಕಾದುಕೊಂಡಿದ್ದ ಸಾರ್ವಜನಿಕರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT