ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರ‍್ಯಾಲಿ ನಿರ್ವಹಣೆಗೆ ಬಂದ ಆರ್‌ಎಎಫ್‌ ಸಿಬ್ಬಂದಿಗೆ ಆಶ್ರಯ ಮನೆಯಲ್ಲಿ ವಸತಿ: ವಿವಾದ

Last Updated 9 ಡಿಸೆಂಬರ್ 2018, 9:17 IST
ಅಕ್ಷರ ಗಾತ್ರ

ನವದೆಹಲಿ: ವಿಶ್ವ ಹಿಂದೂ ಪರಿಷತ್‌(ವಿಎಚ್‌ಪಿ) ದೆಹಲಿಯಲ್ಲಿ ಭಾನುವಾರ ಆಯೋಜಿಸಿದ್ದ ರ‍್ಯಾಲಿ ವೇಳೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯಾಚರಣೆ ಪಡೆಯು(ಆರ್‌ಎಎಫ್‌), ಇಲ್ಲಿನ ಸರೈ ಕಾಲೆ ಖಾನ್‌ನಲ್ಲಿ ನಿರಾಶ್ರಿತರಿಗಾಗಿ ಇರುವ ಆಶ್ರಯ ಮನೆಯಲ್ಲಿ ಉಳಿದುಕೊಂಡಿದೆ. ಈ ಕುರಿತು ಹಿಂದೂಸ್ತಾನ್ ಟೈಮ್ಸ್‌ ವರದಿ ಮಾಡಿದೆ.

ಉತ್ತರ ಪ್ರದೇಶದ ಬುಲಂದ್‌ಶಹರ್‌ ಗಲಭೆ ನಿರ್ವಹಣೆಗೆ ನಿಯೋಜನೆಯಾಗಿದ್ದಆರ್‌ಎಎಫ್‌ ಚೆನ್ನೈನ 115 ಸಿಬ್ಬಂದಿಯಿದ್ದ ತಂಡ ಶುಕ್ರವಾರ ರಾತ್ರಿ ದೆಹಲಿಗೆ ಬಂದಿಳಿಯಿತು. ಗಲಭೆ ನಿಯಂತ್ರಣ ಹಾಗೂ ಜನಸಂದಣಿಯನ್ನು ನಿಭಾಯಿಸುವಲ್ಲಿ ಪರಿಣತಿ ಹೊಂದಿರುವಆರ್‌ಎಎಫ್‌, ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ(ಸಿಆರ್‌ಪಿಎಫ್‌) ವಿಶೇಷ ವಿಭಾಗವಾಗಿದೆ.

ಕೊನೆ ಕ್ಷಣದಲ್ಲಿಆರ್‌ಎಎಫ್‌ ಮನವಿ ಮಾಡಿದ ಕಾರಣ ಸ್ಥಳೀಯ ಪೊಲೀಸರು ಆಶ್ರಯ ಮನೆಯಲ್ಲಿ ವ್ಯವಸ್ಥೆ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಪೊಲೀಸ್‌ ಅಧಿಕಾರಿಯೊಬ್ಬರು, ‘ಸ್ಥಳೀಯ ಶಾಲೆಗಳು ಹಾಗು ಸಮುದಾಯ ಭವನಗಳಲ್ಲಿ ವ್ಯವಸ್ಥೆ ಕಲ್ಪಿಸಲು ವಿಫಲವಾದ ಕಾರಣ ತುರ್ತಾಗಿ ಆಶ್ರಯ ಮನೆಯಲ್ಲಿ ವ್ಯವಸ್ಥೆ ಮಾಡಲಾಯಿತು’ ಎಂದು ತಿಳಿಸಿದರು. ಆದರೆ ಈ ವಿಚಾರ ಇದೀಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಎರಡು ದೊಡ್ಡ ಕೋಣೆಗಳಿರುವ ಮೂರು ಆಶ್ರಯ ಮನೆಗಳನ್ನುನಿರಾಶ್ರಿತರಿಗಾಗಿ ನಿರ್ಮಿಸಲಾಗಿದೆ. ಇವು ಸಾರಾ ಕೇಲ್‌ ಖಾನ್‌ನಲ್ಲಿರುವ ಅಂತರರಾಜ್ಯ ಬಸ್‌ ನಿಲ್ದಾಣದ ಕಾಂಪೌಂಡ್‌ಗೆ ಹತ್ತಿರದಲ್ಲಿದೆ. ಇವನ್ನುದೆಹಲಿ ಪೊಲೀಸರು ಹಾಗೂ ದೆಹಲಿ ನಗರ ಆಶ್ರಯ ಸುಧಾರಣಾ ಮಂಡಳಿಯು(ಡಿಯುಎಸ್ಐಬಿ) ನಿರ್ವಹಿಸುತ್ತಿದೆ.

‘ವಿಶಾಲವಾದ ಖಾಲಿ ಜಾಗವಿದ್ದರೆ ಅಲ್ಲಿ ನಾವು ನಮ್ಮದೇ ಸ್ವಂತ ಟೆಂಟ್‌ಗಳನ್ನು ನಿರ್ಮಿಸಿಕೊಳ್ಳುತ್ತಿದ್ದೆವು. ಆದರೆ, ಚಳಿಗಾಲವಾಗಿರುವುದರಿಂದ ಪರಿಸ್ಥಿತಿಯು ಕಠಿಣವಾಗಿದೆ.ಇಲ್ಲಿ ನಮಗೆ ವಿಶಾಲವಾದ ಖಾಲಿ ಜಾಗವಾಗಲಿ, ಮೈದಾನ ಅಥವಾ ಪಾರ್ಕ್‌ ಆಗಲೀ ಸಿಗಲಿಲ್ಲ. ಹಾಗಾಗಿ ನೆರವು ನೀಡುವಂತೆ ಸ್ಥಳೀಯ ಪೊಲೀಸರನ್ನು ಮನವಿ ಮಾಡಿದೆವು’ ಎಂದುಆರ್‌ಎಎಫ್‌ ಇನ್‌ಸ್ಪೆಕ್ಟರ್‌ ವಿ.ಪಿ.ಸಿಂಗ್‌ ಹೇಳಿದರು. ರಾತ್ರಿ ಉಷ್ಣಾಂಶ 7.6 ಡಿಗ್ರಿ ಸೆಲ್ಸಿಯಸ್‌ ಆಗಿತ್ತು. ಇದು ಈ ಅವಧಿಯ ಕನಿಷ್ಠ ಉಷ್ಣಾಂಶವಾಗಿದೆ.

‘ಅಡುಗೆ ಮನೆ,ಕುಡಿಯುವ ನೀರು, ಶೌಚಾಲಯ, ವಾಹನ ನಿಲುಗಡೆಗೆ ಜಾಗ ಸೇರಿದಂತೆ ವಿಶ್ರಾಂತಿ ಪಡೆಯಲು ನಮಗೆ ಉತ್ತಮವಾದ ಸ್ಥಳಾವಕಾಶ ದೊರೆಯಿತು. ತಮ್ಮ ಸೌಲಭ್ಯಗಳನ್ನು ನಮ್ಮೊಂದಿಗೆ ಹಂಚಕೊಂಡ ಎಲ್ಲ ನಿರಾಶ್ರಿತರಿಗೂ ಧನ್ಯವಾದಗಳು’ ಎಂದು ಸಿಂಗ್‌ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವಸಿಆರ್‌ಪಿಎಫ್‌ ನಿರ್ದೇಶಕ ಆರ್‌.ಆರ್‌. ಭಟ್ನಾಗರ್‌, ‘ವ್ಯವಸ್ಥೆ ಮಾಡಲು ಸಾಧ್ಯವಿದ್ದುದ್ದರ ಬಗ್ಗೆ ಅಧಿಕಾರಿಗಳು ಗಮನ ಹರಿಸಿದ್ದಾರೆ. ಸೌಕರ್ಯ ಒದಗಿಸಬೇಕಿರುವುದು ಆಯಾ ರಾಜ್ಯದ ಅಧಿಕಾರಗಳ ಜವಾಬ್ದಾರಿ’ ಎಂದರು.

ಆರ್‌ಎಎಫ್‌ನ ಕೆಲವು ಸಿಬ್ಬಂದಿ ಶುಕ್ರವಾರ ರಾತ್ರಿಅಡುಗೆ ತಯಾರಿ ಕಾರ್ಯದಲ್ಲಿ ನಿರತರಾಗಿದ್ದರೆ, ಮತ್ತೆ ಕೆಲವರು ಟ್ರಕ್‌ಗಳ ಕಾವಲು ಕಾಯುತ್ತಿದ್ದರು. ಉಳಿದವರು ವಿಶ್ರಾಂತಿ ತೆಗೆದುಕೊಂಡರು.ಉಳಿದ ಎರಡು ಆಶ್ರಯ ಮನೆಗಳಲ್ಲಿ ಎಂದಿನಂತೆ ನಗರದ ನಿರಾಶ್ರಿತರು ಉಳಿದುಕೊಂಡಿದ್ದರು.

ಆದರೆ, ನಿರಾಶ್ರಿತರ ಆಶ್ರಯ ಮನೆಗಳ ಸಮಿತಿ ನಿರ್ವಹಣೆಗಾಗಿಸುಪ್ರೀಂಕೋರ್ಟ್‌ ನೇಮಿಸಿರುವಸಮಿತಿ ಇಂದೂ ಪ್ರಕಾಶ್‌ ಬಿಂದು ಅವರಿಗೆ ವಿಚಾರ ಮುಟ್ಟಿಸದೆ ಈ ನಿರ್ಧಾರ ಕೈಗೊಳ್ಳಲಾಗಿದೆ.

‘ವಸತಿ ಸೌಲಭ್ಯಕ್ಕೆಆರ್‌ಎಎಫ್‌ ಸಿಬ್ಬಂದಿ ಅರ್ಹರು. ಆದರೆ, ಪೊಲೀಸರು ಅಥವಾ ರಕ್ಷಣಾ ಪಡೆಯನ್ನು ನಿರಾಶ್ರಿತರ ಜೊತೆಯಲ್ಲಿ ಉಳಿಸುವುದು ಸುರಕ್ಷಿತವಲ್ಲ’ ಎಂದಿದ್ದಾರೆ. ಎನ್‌ಜಿಒವೊಂದರ ಯೋಜನಾ ಸಂಘಟನಾಧಿಕಾರಿ ನಿತೇಶ್‌ ಕುಮಾರ್‌ ಎನ್ನುವವರು, ‘ರಕ್ಷಣಾ ಸಿಬ್ಬಂದಿಗೆ ವಸತಿ ಕಲ್ಪಿಸುವ ಸಲುವಾಗಿ ನಿರಾಶ್ರಿತರನ್ನು ಹೊರಗೆ ಕಳುಹಿಸಲಾಗಿದೆ’ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಯುಎಸ್ಐಬಿ ಸದಸ್ಯ ಬಿಪಿನ್‌ ಕುಮಾರ್‌ ಸಿಂಗ್‌, ‘ಆಶ್ರಯ ಮನೆಯಲ್ಲಿ ಸ್ಥಳಾವಕಾಶವಿದ್ದ ಕಾರಣ ಆರ್‌ಎಎಫ್‌ ಸಿಬ್ಬಂದಿಗೆ ವಸತಿ ವ್ಯವಸ್ಥೆ ಮಾಡಲಾಯಿತು. ಆವರು ಕೇವಲ ಒಂದು ಅಥವ ಎರಡು ರಾತ್ರಿ ಮಾತ್ರವೇ ತಂಗಲಿರುವುದರಿಂದ ಅಲ್ಲಿ ವ್ಯವಸ್ಥೆ ಕಲ್ಪಿಸಿದೆವು’ ಎಂದಿದ್ದಾರೆ.

ರಕ್ಷಣಾ ಸಿಬ್ಬಂದಿಗೆ ವಸತಿ ಕಲ್ಪಿಸಲು ನಿರಾಶ್ರಿತರನ್ನು ಹೊರಹಾಕಲಾಗಿದೆ ಎಂಬಆರೋಪವನ್ನು ಅಲ್ಲಿಯೇ ಆಶ್ರಯ ಪಡೆದಿರುವ ನಿರಾಶ್ರಿತರು ತಳ್ಳಿಹಾಕಿದ್ದಾರೆ. ‘ನಾವು ಸಂತೋಷವಾಗಿದ್ದೇವೆ. ಯಾರೊಬ್ಬರೂ ನಮ್ಮ ಆಶ್ರಯವನ್ನು ಕಸಿದುಕೊಂಡಿಲ್ಲ’ ಎಂದು ನಿರಾಶ್ರಿತರಲ್ಲೊಬ್ಬರಾದ ದಾಲ್‌ ಚಾಂದ್‌ ಹೇಳಿಕೊಂಡಿದ್ದಾರೆ.

‘ನಾವು ಹೊಸ ಶೆಡ್‌ ಅನ್ನು ಬಳಸುತ್ತಿಲ್ಲ. ರೈಲು ಪ್ರಯಾಣಿಕರು ಕೆಲವು ಸಲ ಇಲ್ಲಿಗೆ ಬಂದು ಉಳಿದುಕೊಳ್ಳುತ್ತಾರೆ. ಇತ್ತೀಚೆಗೆ ಕೆಲವು ತರಬೇತಿ ಕಾರ್ಯಕ್ರಮಗಳ ಸಂದರ್ಭದಲ್ಲಿ ಬಳಕೆಯಾಗುತ್ತಿತ್ತು’ ಎಂದು ಮತ್ತೊಬ್ಬ ನಿರಾಶ್ರಿತ ನಿವಾಸಿ ಸೂರಜ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT