ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ತಪ್ಪಿಸಲು ಸಿಖ್‌ ವೇಷ,ಜೈಲಲ್ಲಿ ಭಗವದ್ಗೀತೆ; ತುರ್ತು ಪರಿಸ್ಥಿತಿಯಲ್ಲಿ ಜಾರ್ಜ್‌

Last Updated 29 ಜನವರಿ 2019, 11:07 IST
ಅಕ್ಷರ ಗಾತ್ರ

ನವದೆಹಲಿ: ತುರ್ತು ಪರಿಸ್ಥಿತಿಯ ಸಮಯದಲ್ಲಿ ಬಂಧನದಿಂದ ತಪ್ಪಿಸಿಕೊಳ್ಳಲು, ಪೊಲೀಸರಿಗೆ ಕಂಡೂ ಕಾಣದಂತೆ ಸಿಖ್‌ ವ್ಯಕ್ತಿಯಂತೆ ವೇಷ ಮರೆಸಿಕೊಂಡು ಇಂದಿರಾ ಗಾಂಧಿ ಆಡಳಿತದ ವಿರುದ್ಧ ಕಿಡಿಹೊತ್ತಿಸಿ ತಿರುಗಿದವರು ಜಾರ್ಜ್‌ ಫರ್ನಾಂಡಿಸ್‌. ತಿಹಾರ್‌ ಜೈಲಿನಲ್ಲಿ ಬಂಧನದಲ್ಲಿದ್ದಾಗ ಜತೆಗಾರರಿಗೆ ’ಗೀತ’ ವಾಚನ ನಡೆಸಿದ್ದನ್ನು ಸಮಾಜವಾದಿ ನಾಯಕನೊಂದಿಗೆ ಜೈಲಿನಲ್ಲಿದ್ದ ಸಹಚರ ವಿಜಯ್‌ ನಾರಾಯಣ್‌(76) ನೆನಪಿಸಿಕೊಂಡಿದ್ದಾರೆ.

’ಪೊಲೀಸರು ನಮಗಾಗಿ ತೀವ್ರ ಹುಡುಕಾಟ ನಡೆಸಿದ್ದರು. ಅವರಿಂದ ತಪ್ಪಿಸಿಕೊಳ್ಳುವ ಜತೆಗೆ ಕಾರ್ಯಾಚರಣೆಯನ್ನೂ ಮುಂದುವರಿಸಿದ್ದರು. ಪೊಲೀಸರ ಕಣ್ತಪ್ಪಿಸಲು ಜಾರ್ಜ್‌ ಸಿಖ್‌ ವೇಷಧಾರಿಯಾಗಿದ್ದರು. ತನ್ನನ್ನು ತಾನು ಖುಷ್ವಂತ್‌ ಸಿಂಗ್‌ ಎಂದು ಕರೆದುಕೊಂಡು ಓಡಾಡಿದ್ದರು. ಉದ್ದನೆ ಕೂದಲು, ಗಡ್ಡ ಹಾಗೂ ತಲೆಗೆ ಮುಂಡಾಸು ಕಟ್ಟಿಕೊಂಡ ಹೊಸ ಅವತಾರದಲ್ಲಿದ್ದರು’ ಎಂದು ಹಿಂದಿನ ದಿನಗಳ ಮೆಲುಕು ಹಾಕುತ್ತಾರೆ.

ಬರೋಡಾ ಡೈನಾಮೈಟ್‌ ಪ್ರಕರಣದ ಸಂಬಂಧ 1976ರ ಜೂನ್‌ 10ರಂದು ಕೋಲ್ಕತ್ತದಲ್ಲಿ ಜಾರ್ಜ್‌ ಫರ್ನಾಂಡಿಸ್‌ ಹಾಗೂ ನಾರಾಯಣ್‌ ಸೇರಿ ಹಲವರನ್ನು ಬಂಧಿಸಲಾಯಿತು. ಸರ್ಕಾರದ ವಿರುದ್ಧದ ಚಟುವಟಿಕೆಗಳ ಆರೋಪವರಿಸಲಾಯಿತು. ಕೋಲ್ಕತ್ತದ ಸೇಂಟ್‌ ಪೌಲ್‌ ಚರ್ಚ್‌ನಲ್ಲಿ ಅವರನ್ನು ಪೊಲೀಸರು ವಶಕ್ಕೆ ಪಡೆದರು.

’ಸೇಂಟ್‌ ಪೌಲ್‌ ಚರ್ಚ್‌ನಲ್ಲಿ ಜಾರ್ಜ್‌ ಒಂದು ಟೈಪ್‌ರೈಟರ್‌, ಸೈಕ್ಲೊಸ್ಟೈಟ್‌ ಮೆಷಿನ್‌(ಒಂದು ಬಗೆಯ ಮುದ್ರಣ ಯಂತ್ರ) ಹೊಂದಿದ್ದರು. ಅವುಗಳನ್ನು ಬಳಸಿ ಜಾರ್ಜ್‌ ನಿರಂತರವಾಗಿ ಪತ್ರಗಳನ್ನು ಬರೆಯುತ್ತಿದ್ದರು ಹಾಗೂ ಅವುಗಳನ್ನು ನಾನು ವಿವಿಧ ರೈಲ್ವೆ ಮೇಲ್‌ ಸರ್ವಿಸ್‌ ಕೌಂಟರ್‌ಗಳಿಗೆ ತಲುಪಿಸುತ್ತಿದೆ.ಪೊಲೀಸರ ಕಣ್ಣಿಗೆ ಬೀಳದಂತೆ ಅವಿತಿದ್ದರೂ ಕಾರ್ಯಾಚರಣೆಯನ್ನು ನಿಲ್ಲಿಸಿರಲಿಲ್ಲ. ನಾನು ಬನಾರಸಿ ಮುಸ್ಲಿಂ ನೇಯ್ಗೆಯವನ ರೀತಿ ವೇಷಧರಿಸಿದ್ದೆ.

ಜೂನ್‌ 10, ನಮ್ಮನ್ನು ವಶಕ್ಕೆ ಪಡೆದ ರಾತ್ರಿಯೇ ಜಾರ್ಜ್‌ರನ್ನು ಭಾರತೀಯ ವಾಯುಪಡೆಯ ಕಾರ್ಗೊ ವಿಮಾನದಲ್ಲಿ ದೆಹಲಿಗೆ ಕರೆದೊಯ್ಯಲಾಯಿತು. ಕೋಲ್ಕತ್ತ‍ಪೊಲೀಸ್‌ ಗುಪ್ತದಳದ ಅಧಿಕಾರಿಗಳು ತಡರಾತ್ರಿ ವರೆಗೂ ನನ್ನ ವಿಚಾರಣೆ ನಡೆಸಿದರು. ಬಳಿಕ ದೆಹಲಿಯ ತಿಹಾರ್‌ ಜೈಲಿನಲ್ಲಿ ನಮ್ಮನ್ನು ಇರಿಸಿದರು. ತೀಸ್‌ ಹಜಾರಿ ಕೋರ್ಟ್‌ನಲ್ಲಿ ವಿಚಾರಣೆ ನಡೆಯಿತು. ಜೈಲಿನಲ್ಲಿದ್ದ ಅಷ್ಟೂ ದಿನ ಜಾರ್ಜ್‌ ಸಹಚರರಿಗಾಗಿ ಬೆಳಿಗ್ಗೆ ಗೀತೆಯನ್ನು ಪಠಿಸುತ್ತಿದ್ದರು ಹಾಗೂ ತಿಹಾರ್‌ನ ಗ್ರಂಥಾಲಯದಲ್ಲಿ ಎಲ್ಲರೂ ಪುಸ್ತಕಗಳನ್ನು ಓದುತ್ತಿದ್ದೆವು’ ಎಂದು ಕಾರ್ಯಚಟುವಟಿಕೆಗಳನ್ನು ನಾರಾಯಣ್‌ ಸ್ಮರಿಸಿಕೊಂಡಿದ್ದಾರೆ.

ಜೈಲಿನಿಂದ ವ್ಯಾನ್‌ಗಳ ಮೂಲಕ ಕೋರ್ಟ್‌ಗೆ ಕರೆದೊಯ್ಯುವಾಗ ಸುಮಾರು 200 ಮಂದಿ ಪೊಲೀಸರು ಇವರನ್ನು ಸುತ್ತುವರಿಯುತ್ತಿದ್ದರು. ಕೈಕೋಳವನ್ನು ಹಾಕಿದ್ದಂತೆಯೇ ಜಾರ್ಜ್‌ ಬೆಂಬಲಿಗರತ್ತ ಕೈಯನ್ನು ಮೇಲೆತ್ತಿರುವ ಚಿತ್ರವು ಇತಿಹಾಸದ ಪುಟಗಳಲ್ಲಿ ಬಹಳಷ್ಟು ಮನ್ನಣೆ ಪಡೆದಿದೆ. 1975ರ ಜೂನ್‌ 25ರಿಂದ 1977ರ ಮಾರ್ಚ್ ವರೆಗಿನ ತುರ್ತು ಪರಿಸ್ಥಿತಿ; ಇದೇ ಅವಧಿಯಲ್ಲಿ ಬಂಧಿಸಲಾಗಿದ್ದ ಜಾರ್ಜ್‌ ಅವರನ್ನು ದೆಹಲಿ ಕೆಂಪುಕೋಟೆಯಲ್ಲಿ ವಿಚಾರಣೆ ನಡೆಸಲಾಗಿತ್ತು. ಅಲ್ಲಿ ಜಾರ್ಜ್ ಅವರಿಗೆ ತೀವ್ರ ಹಿಂಸೆ ನೀಡಿ, ನಿದ್ರಿಸಲೂ ಬಿಡದಂತೆ ಕಣ್ಣಿಗೆ ಸ್ಪಾಟ್‌ಲೈಟ್‌ನ್ನು ಬಿಟ್ಟು ಕ್ರೂರ ರೀತಿಯಲ್ಲಿ ನಡೆಸಿಕೊಳ್ಳಲಾಗಿತ್ತು ಎಂದಿದ್ದಾರೆ.

ಬಿಹಾರಿ ಧೋನಿ ಧರಿಸುತ್ತಿದ್ದ ಜಾರ್ಜ್‌ ಹೆಗಲ ಮೇಲೆ ಗಮ್ಚ(ಶಾಲಿನ ರೀತಿ ವಸ್ತ್ರ) ಹಾಕಿಕೊಂಡಿರುತ್ತಿದ್ದರು.1977ರಲ್ಲಿ ಜೈಲಿನಲ್ಲಿದ್ದಾಗಲೇ ಬಿಹಾರದ ಮುಜಾಫರ್‌ಪುರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಬರೋಡಾ ಡೈನಾಮೈಟ್‌ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಜಾರ್ಜ್ ಬೆಂಬಲಿಗರು ಅವರ ಫೋಟೋ ಹಿಡಿದು ಪ್ರಚಾರ ನಡೆಸಿದ್ದರು ಹಾಗೂ ಗೆಲುವು ಪಡೆದರು. ಜನತಾ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಪ್ರಕರಣವನ್ನು ಹಿಂಪಡೆಯಲಾಯಿತು, ಎಲ್ಲ ಆರೋಪಿಗಳನ್ನು ಬಿಡುಗಡೆ ಮಾಡಲಾಯಿತು.ತುರ್ತು ಪರಿಸ್ಥಿತಿ ಹೇರಿಕೆಯನ್ನು ವಿರೋಧಿಸಿ ನಡೆಸಿದ ಹೋರಾಟ ಹಾಗೂ 1973ರ ರೈಲ್ವೆ ಮುಷ್ಕರದಲ್ಲಿ ಮುಂದಾಳತ್ವದಿಂದ ಜಾರ್ಜ್ ಮುಂಚೂಣಿಗೆ ಬಂದರು.

ಬಿಹಾರದಿಂದ ಸಂಸತ್ತಿಗೆ ಆಯ್ಕೆಯಾಗುತ್ತಿದ್ದ ಜಾರ್ಜ್‌, ಪ್ರಧಾನಿ ವಿ.ಪಿ.ಸಿಂಗ್‌ ಅವಧಿಯಲ್ಲಿ ರೈಲ್ವೆ ಸಚಿವರಾಗಿ ಹಾಗೂ ವಾಜಪೇಯಿ ಅವರ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಕನ್ನಡ, ಮರಾಠಿ ಹಾಗೂ ಹಿಂದಿ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದರು. ಇಂಗ್ಲಿಷ್‌ ಬಂದರೂ ಸಂಸತ್‌ನಲ್ಲಿ ಯಾವತ್ತಿದೂ ಇಂಗ್ಲಿಷ್‌ನಲ್ಲಿ ಮಾತನಾಡಲಿಲ್ಲ. ಮಾನವ ಹಕ್ಕುಗಳು, ಬಡವರ ಉನ್ನತಿಗಾಗಿ, ರೈತರು ಹಾಗೂ ಕಾರ್ಮಿಕರ ಏಳ್ಗೆಗಾಗಿ ಶ್ರಮಿಸುತ್ತಿದ್ದ ಜಾರ್ಜ್ ಬಹುದೊಡ್ಡ ಮಾಸ್‌ ಲೀಡರ್‌ ಆಗಿ ಹೊರಹೊಮ್ಮಿದ್ದರು. ಅವರನ್ನು ಹಲವು ರಾಷ್ಟ್ರಗಳ ರಾಯಭಾರಿಗಳು ಭೇಟಿ ಮಾಡುತ್ತಿದುದು ಸಾಮಾನ್ಯವಾಗಿತ್ತು ಎಂದು ನಾರಾಯಣ್‌ ವಿವರಿಸಿದ್ದಾರೆ.

2010ರಿಂದ ಮರೆವಿನ ಕಾಯಿಲೆ(ಅಲ್ಝೈಮರ್) ಆವರಿಸಿಕೊಂಡ ಬಳಿಕ ದೆಹಲಿಯಲ್ಲಿ ಪತ್ನಿ ಲೈಲಾ ಕಬೀರ್‌ ಜತೆಗೆ ವಾಸಿಸುತ್ತಿದ್ದರು.

(2016ರ ಜೂನ್‌, ಪಿಟಿಐ ವರದಿ)

ಇವನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT