ಶನಿವಾರ, ಫೆಬ್ರವರಿ 22, 2020
19 °C

ಜೈಲಿನಲ್ಲೇ ಸಾಯಬಹುದು ಜೂಲಿಯನ್‌ ಅಸಾಂಜ್‌: 60 ವೈದ್ಯರಿಂದ ಬಹಿರಂಗ ಪತ್ರ

ಪಿಟಿಐ Updated:

ಅಕ್ಷರ ಗಾತ್ರ : | |

ಲಂಡನ್‌: ಜಗತ್ತಿನಾದ್ಯಂತ ಹಲವು ಸರ್ಕಾರಗಳ ಸ್ಫೋಟಕ ಮಾಹಿತಿಗಳನ್ನು ಬಹಿರಂಗ ಪಡಿಸಿದ್ದ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್‌ ಅಸಾಂಜ್ ಅವರ ಅರೋಗ್ಯ ಪರಿಸ್ಥಿತಿ ಹದಗೆಡುತ್ತಿದ್ದು, ಬಹುಶಃ ಅವರು ಜೈಲಿನಲ್ಲೇ ಸಾಯಲಿದ್ದಾರೆ ಎಂದು 60 ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಏಳು ವರ್ಷಗಳ ಬಳಿಕ ’ವಿಕಿಲೀಕ್ಸ್‌’ ಸಂಸ್ಥಾಪಕ ಜೂಲಿಯನ್‌ ಅಸಾಂಜ್ ಬಂಧನ

ಜೂಲಿಯನ್‌ ಅಸಾಂಜ್‌ ಅವರು ಸದ್ಯ ಲಂಡನ್‌ನ ಭಿಗಿ ಭದ್ರತೆಯುಳ್ಳ ಸೆರೆಮನೆಯಲ್ಲಿದ್ದಾರೆ. ಅವರ ಆರೋಗ್ಯ ಪರಿಸ್ಥಿತಿಯನ್ನು ಗಮನಿಸಿ 60 ವೈದ್ಯರು ಬ್ರಿಟನ್‌ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್‌ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ವೈದ್ಯರ ಪತ್ರ ಸೋಮವಾರ ಬಹಿರಂಗಗೊಂಡಿದೆ.

‘ದಕ್ಷಿಣ ಲಂಡನ್‌ನ ಬೆಲ್‌ಮಾರ್ಶ್‌ ಜೈಲಿನಲ್ಲಿರುವ ಅವರನ್ನು ಕೂಡಲೇ ‘ಯೂನಿವರ್ಸಿಟಿ ಟೀಚಿಂಗ್‌ ಹಾಸ್ಪಿಟಲ್‌’ಗೆ ವರ್ಗಾಯಿಸುವುದು ಒಳಿತು,’ ಎಂದೂ ವೈದ್ಯರು ತಮ್ಮ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಅಕ್ಟೋಬರ್‌ 21ರಂದು ಅಸಾಂಜ್‌ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗಿನ ಪರಿಸ್ಥಿತಿ ಮತ್ತು ಅಸಾಂಜ್‌ ಅನುಭವಿಸುತ್ತಿರುವ ಹಿಂಸೆಯ ಕುರಿತ ವಿಶ್ವಸಂಸ್ಥೆಯ ವರದಿಗಾರ ನೀಲ್ಸ್‌ ಮೆಲ್ಸರ್‌ ಅವರ ವರದಿಯ ಆಧಾರದಲ್ಲಿ ವೈದ್ಯರು ತಮ್ಮ ಆತಂಕ ಹೊರ ಹಾಕಿದ್ದಾರೆ.

‘ಅಸಾಂಜ್‌ ಎದುರಿಸುತ್ತಿರುವ ನಿರಂತರ ಚಿತ್ರಹಿಂಸೆಯು ಅವರನ್ನು ಸಾವಿಗೆ ದೂಡಬಹುದು,’ ಎಂದು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಹೋರಾಟಗಾರರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

‘ವೈದ್ಯರಾಗಿ ನಾವು ಅಸಾಂಜ್‌ ಅವರ ಪರಿಸ್ಥಿತಿಯ ಕುರಿತು ನಾವು ಬಹಿರಂಗ ಪತ್ರ ಬರೆದಿದ್ದೇವೆ. ಅಸಾಂಜ್‌ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ನಮ್ಮ ಆತಂಕವನ್ನು ವಿವರಿಸಿದ್ದೇವೆ,’ ಎಂದು ವೈದ್ಯರು 16 ಪುಟಗಳ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅಫ್ಗಾನಿಸ್ತಾನ ಮತ್ತು ಇರಾಕ್‌ ಮೇಲೆ ಅಮೆರಿಕ 2010ರಲ್ಲಿ ನಡೆಸಿದ ಬಾಂಬ್‌ ದಾಳಿಗೆ ಸಂಬಂಧಿಸಿದಂತೆ ಮಿಲಿಟರಿಯ ಕೆಲ ರಹಸ್ಯ ಮಾಹಿತಿಗಳನ್ನು ಅಸಾಂಜ್‌ ಅವರು ವಿಕಿಲೀಕ್ಸ್‌ ಮೂಲಕ ಬಹಿರಂಗಪಡಿಸಿದ್ದರು. ಇದೇ ಹಿನ್ನೆಲೆಯಲ್ಲಿ ಅಸಾಂಜ್‌ ಅವರನ್ನು ತಮ್ಮ ದೇಶಕ್ಕೆ ಗಡಿಪಾರು ಮಾಡುವಂತೆ ಅಮೆರಿಕ ಮನವಿ ಮಾಡುತ್ತಾ ಬಂದಿದೆ. ಅಸಾಂಜ್‌ ಅವರ ವಿರುದ್ಧ ಅಮೆರಿಕ ಬೇಹುಕಾರಿಕಾ ನಿಷೇಧ ಕಾಯಿದೆ ಪ್ರಯೋಗಿಸಿದೆ. ಈ ಕಾಯಿದೆ ಪ್ರಕಾರ ಅಸಾಂಜ್‌ಗೆ 175 ವರ್ಷಗಳ ಜೈಲು ಶಿಕ್ಷೆ ವಿಧಿಸಬೇಕಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು