ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

35 ಶವಗಳ ಸಾಗಣೆ: ಭಾರತದ ದಾಳಿಗೆ ಬಲಿಯಾದವರ ಬಗ್ಗೆ ಪತ್ಯಕ್ಷದರ್ಶಿಗಳಿಂದ ಮಾಹಿತಿ

Last Updated 2 ಮಾರ್ಚ್ 2019, 18:59 IST
ಅಕ್ಷರ ಗಾತ್ರ

ರೋಮ್: ‘ಬಾಲಾಕೋಟ್‌ನ ಜಾಬಾ ಟಾಪ್‌ನಲ್ಲಿ ಜೈಷ್‌ ಎ ಮೊಹಮ್ಮದ್ ಶಿಬಿರದಿಂದ 35 ಶವಗಳನ್ನು ಸಾಗಿಸಿದ್ದನ್ನು ನೋಡಿದ್ದೇವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ’ ಎಂದು ದಿ ಫರ್ಸ್ಟ್‌‍ಪೋಸ್ಟ್ ವರದಿ ಮಾಡಿದೆ.

‘ಭಾರತದ ಯುದ್ಧವಿಮಾನಗಳು ದಾಳಿ ನಡೆಸಿದ ನಂತರದ ಕೆಲವೇ ಗಂಟೆಗಳಲ್ಲಿ ಹಲವು ಆಂಬುಲೆನ್ಸ್‌ಗಳು ಜಾಬಾ ಟಾಪ್‌ಗೆ ಬಂದಿದ್ದವು. ಜೆಇಎಂ ಶಿಬಿರದಿಂದ ಶವಗಳನ್ನು ಆಂಬುಲೆನ್ಸ್‌ಗಳಲ್ಲಿ ಸಾಗಿಸಲಾಯಿತು’ ಎಂದು ಇಲ್ಲಿನ ಸ್ಥಳೀಯ ಸಂಸ್ಥೆಯ ನೌಕರರೊಬ್ಬರು ಮಾಹಿತಿ ನೀಡಿದ್ದಾರೆ. ಆದರೆ ಅವರು ತಮ್ಮ ಗುರುತು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.

‘ದಾಳಿಯ ನಂತರ ಸೇನೆಯೇ ಆ ಸ್ಥಳವನ್ನು ತನ್ನ ವಶಕ್ಕೆ ಪಡೆಯಿತು. ಅತ್ತ ಹೋಗದಂತೆ ಸ್ಥಳೀಯರನ್ನು ನಿರ್ಬಂಧಿಸಲಾಯಿತು. ಪೊಲೀಸರ ಪ್ರವೇಶವನ್ನೂ ನಿಷೇಧಿಸಲಾಗಿತ್ತು. ಆಂಬುಲೆನ್ಸ್ ಚಾಲಕರು ಮತ್ತು ಸಿಬ್ಬಂದಿಯ ಮೊಬೈಲ್‌ಗಳನ್ನು ಸೇನೆಯವರು ವಶಕ್ಕೆ ಪಡೆದಿದ್ದರು’ ಎಂದು ಅವರು ತಿಳಿಸಿದ್ದಾರೆ.

‘ಭಾರತದ ದಾಳಿಯಲ್ಲಿ ಉಗ್ರರು, ಉಗ್ರರಿಗೆ ತರಬೇತಿ ನೀಡುತ್ತಿದ್ದ ಪಾಕಿಸ್ತಾನ ಸೇನೆಯ ನಿವೃತ್ತ ಸೈನಿಕರು ಮತ್ತು ಐಎಸ್‌ಐನ ನಿವೃತ್ತ ಅಧಿಕಾರಿಯೂ ಸೇರಿದ್ದಾರೆ. ಐಎಸ್‌ಐ ಅಧಿಕಾರಿ ಕರ್ನಲ್ ಸಲೀಂ, ಜೆಇಎಂ ತರಬೇತುದಾರ ಮುಫ್ತಿ ಮೊಯೀನ್, ನಾಡಬಾಂಬ್ ಪರಿಣಿತ ಉಸ್ಮಾನ್ ಘನಿ ಈ ದಾಳಿಯಲ್ಲಿ ಮೃತಪಟ್ಟಿದ್ದಾರೆ’ ಎಂದು ಆ ಅಧಿಕಾರಿ ಮಾಹಿತಿ ನೀಡಿದ್ದಾರೆ.

‘ಶಿಬಿರದ ಬಳಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಬಿಡಾರದ ಮೇಲೆ ದಾಳಿ ನಡೆದಿದೆ. ಅದರಲ್ಲಿದ್ದ ಎಲ್ಲಾ ಉಗ್ರರೂ ಮೃತಪಟ್ಟಿದ್ದಾರೆ. ಆ ಬಿಡಾರದಲ್ಲೇ ಇದ್ದ ಎಲ್ಲಾ ತರಬೇತುದಾರರೂ ಮೃತಪಟ್ಟಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಗೂಢಲಿಪಿಯ ಮೂಲಕ ಈ ಮಾಹಿತಿಗಳನ್ನು ಪಡೆಯಲಾಗಿದೆ ಎಂದು ಫರ್ಸ್ಟ್‌ಪೋಸ್ಟ್‌ ವರದಿ ಮಾಡಿದೆ.

ಜಾಬಾ ಟಾಪ್‌ನಲ್ಲಿನ ಈ ಸ್ಥಳದಲ್ಲಿ ಮದರಸಾ ಇದೆ ಎಂದು ಪಾಕಿಸ್ತಾನ ಹೇಳಿದೆ. ಆದರೆ ಈ ಸ್ಥಳದತ್ತ ಹೋಗದಂತೆ ಪತ್ರಕರ್ತರನ್ನೂ ತಡೆಯಲಾಗುತ್ತಿದೆ.

ಕರಾರುವಕ್ಕಾಗಿ ದಾಳಿ, ರೇಡಾರ್ ಚಿತ್ರಗಳಿಂದ ಸಾಬೀತು

ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಉಗ್ರರ ನೆಲೆ ಮೇಲೆ ನಡೆಸಿದ ದಾಳಿ ಕರಾರುವಕ್ಕಾಗಿ ಇತ್ತು. ಉಗ್ರರು ನೆಲೆಸಿದ್ದ ಕಟ್ಟಡಗಳು ದಾಳಿಯಲ್ಲಿ ಧ್ವಂಸವಾಗಿವೆ ಎಂದು ಸೇನಾ ಮೂಲಗಳು ತಿಳಿಸಿವೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

‘ಜಾಬಾ ಟಾಪ್‌ನಲ್ಲಿ ಇದ್ದ ಉಗ್ರರ ಶಿಬಿರದ ನಾಲ್ಕು ಕಟ್ಟಡಗಳ ಮೇಲೆ ದಾಳಿ ನಡೆಸಲಾಗಿತ್ತು. ನಾಲ್ಕೂ ಕಟ್ಟಡಗಳು ಧ್ವಂಸವಾಗಿರುವುದನ್ನು ಸಿಂಥೆಟಿಕ್ ಅಪಾರ್ಚರ್ ರೇಡಾರ್ ಚಿತ್ರಗಳ ಮೂಲಕ ಪತ್ತೆ ಮಾಡಲಾಗಿದೆ. ಅಲ್ಲಿದ್ದ ಒಂದು ಅತಿಥಿ ಗೃಹ (ಮಸೂದ್ ಅಜರ್‌ನ ಸೋದರ ಇದರಲ್ಲಿದ್ದ ಎನ್ನಲಾಗಿದೆ), ತರಬೇತುದಾರರು ಇದ್ದ ‘ಎಲ್‌’ ಆಕಾರದ ಮತ್ತೊಂದು ಕಟ್ಟಡ ಮತ್ತು ತರಬೇತಿ ಪಡೆಯುತ್ತಿದ್ದ ಉಗ್ರರು ತಂಗಿದ್ದ ಎರಡು ಅಂತಸ್ತಿನ ಕಟ್ಟಡ ಹಾಗೂ ಪ್ರಾರ್ಥನಾ ಮಂದಿರವನ್ನು ಧ್ವಂಸ ಮಾಡಲಾಗಿದೆ’ ಎಂದು ಸೇನಾ ಮೂಲಗಳು ಹೇಳಿವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

‘ಮಿರಾಜ್–2000 ಯುದ್ಧವಿಮಾನಗಳ ಮೂಲಕ ಎಸ್‌–2000 ಪಿಜಿಎಂ ಬಾಂಬ್‌ಗಳನ್ನು ಹಾಕಿ ಈ ದಾಳಿ ನಡೆಸಲಾಗಿತ್ತು. ಈ ಬಾಂಬ್‌ಗಳು ಲೇಸರ್ ನಿರ್ದೇಶಿತವಾಗಿವೆ. ದಟ್ಟ ಮೋಡ ಕವಿದಿದ್ದರೂ, ಇವು ಕರಾರುವಕ್ಕಾಗಿ ಗುರಿಯ ಮೇಲೆಯೇ ಬೀಳಲಿವೆ. ಹೀಗಾಗಿ ಈ ದಾಳಿ ಸಫಲವಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ’ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಪಾಕ್‌ ಪೈಲಟ್‌ನನ್ನು ಕೊಂದ ಪಿಒಕೆ ಜನ

ಭಾರತದ ಮೇಲಿನ ದಾಳಿ ವೇಳೆ ಪತನವಾದ ಪಾಕಿಸ್ತಾನದ ಎಫ್‌–16 ಯುದ್ಧವಿಮಾನದ ಪೈಲಟ್‌ ಅನ್ನು ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಜನರೇ ಹೊಡೆದು ಕೊಂದಿದ್ದಾರೆ ಎಂದು ಫರ್ಸ್ಟ್‌ಪೋಸ್ಟ್ ವರದಿ ಮಾಡಿದೆ.

ಪಾಕ್‌ ಆಕ್ರಮಿತ ಕಾಶ್ಮೀರದ ನವಶೇರಾ ವಲಯದಲ್ಲಿ ಭಾರತದ ಮಿಗ್–21 ಮತ್ತು ಪಾಕಿಸ್ತಾನದ ಎಫ್‌–16 ಮುಖಾಮುಖಿಯಾಗಿದ್ದವು. ದಾಳಿ–ಪ್ರತಿದಾಳಿಯಲ್ಲಿ ಎರಡು ವಿಮಾನಗಳೂ ಪತನವಾದವು ಎಂದು ವರದಿಯಲ್ಲಿ ವಿವರಿಸಲಾಗಿದೆ.

ಇಬ್ಬರು ಪೈಲಟ್‌ಗಳೂ ‍ಪ್ಯಾರಾಚೂಟ್ ಮೂಲಕ ಸುರಕ್ಷಿತವಾಗಿ ನೆಲಕ್ಕೆ ಇಳಿದರು. ಸೇನೆಯ ವಶಕ್ಕೆ ಸಿಕ್ಕ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಬದುಕಿ ಉಳಿದರು. ಆದರೆ ಪಿಒಕೆ ಜನರ ಕೈಗೆ ಸಿಲುಕಿಕೊಂಡ ಪಾಕ್ ಪೈಲಟ್ ಶಹಾಜ್ ಉದ್ ದಿನ್ ಮೃತಪಟ್ಟರು ಎಂದು ವರದಿಯಲ್ಲಿ ವಿವರಿಸಲಾಗಿದೆ.

ಶಹಾಜ್ ಅವರನ್ನು ಭಾರತದ ಪೈಲಟ್ ಎಂದು ತಪ್ಪಾಗಿ ಗ್ರಹಿಸಿಕೊಂಡು ಅಲ್ಲಿನ ಜನರು ದಾಳಿ ನಡೆಸಿದ್ದಾರೆ. ಸೇನಾ ಸಿಬ್ಬಂದಿ ಆ ಸ್ಥಳಕ್ಕೆ ತಲುಪುವ ವೇಳೆಗೆ ಜನರು ಶಹಾಜ್ ಅವರನ್ನು ಚೆನ್ನಾಗಿ ಥಳಿಸಿದ್ದರು. ಪೂರ್ಣ ನಿತ್ರಾಣವಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ ಎಂದು ಫಸ್ಟ್‌ಪೋಸ್ಟ್‌ ವರದಿ ಮಾಡಿದೆ.

ಶಹಾಜ್ ಅವರ ತಂದೆ ವಸೀಂ ಉದ್ ದಿನ್ ಅವರೂ ಪಾಕಿಸ್ತಾನ ಸೇನೆಯಲ್ಲಿ ಏರ್‌ ಮಾರ್ಷಲ್ ಆಗಿ ಸೇವೆ ಸಲ್ಲಿಸಿದ್ದರು.

ಮುಖ್ಯಾಂಶಗಳು
* 12 ದಾಳಿಯಲ್ಲಿ ಮೃತಪಟ್ಟ ಉಗ್ರರು
* 1 ಮೃತಪಟ್ಟ ಐಎಸ್‌ಐ ಅಧಿಕಾರಿ
* 2 ಬಾಂಬ್‌ ತಯಾರಿ ಪರಿಣಿತರು ಬಲಿ
* 20 ಸಾಮಾನ್ಯ ತರಬೇತುದಾರರಾಗಿದ್ದ ಪಾಕ್‌ ಸೇನೆಯ ನಿವೃತ್ತ ಸೈನಿಕರು ಬಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT