ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂ ಅನಿಲ ಬಾವಿಯಲ್ಲಿ ಬೆಂಕಿ: ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಸಾವು

Last Updated 10 ಜೂನ್ 2020, 6:33 IST
ಅಕ್ಷರ ಗಾತ್ರ

ಗುವಾಹಟಿ: ನೈಸರ್ಗಿಕ ಅನಿಲ ಬಾವಿಯಲ್ಲಿ ಉಂಟಾಗಿರುವ ಭಾರಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ಆಯಿಲ್‌ ಇಂಡಿಯಾ ಲಿಮಿಟೆಡ್‌ನ (ಒಐಎಲ್‌) ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಸಾವಿಗೀಡಾಗಿದ್ದಾರೆ.

ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯ ಬಾಗ್ಜನ್‌ ತೈಲ ಕ್ಷೇತ್ರದ ಅನಿಲ ಬಾವಿಯಲ್ಲಿ 14 ದಿನಗಳಿಂದ ಅನಿಲ ಸೋರಿಕೆ ಆಗುತ್ತಿದೆ. ಅಗ್ನಿ ಶಮನ ಕಾರ್ಯದಲ್ಲಿದ್ದ ಇಬ್ಬರು ಸಿಬ್ಬಂದಿ ನಾಪತ್ತೆಯಾಗಿದ್ದರು. ಶವವಾಗಿ ಅವರು ಪತ್ತೆಯಾಗಿರುವುದಾಗಿ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ರಾಷ್ಟ್ರೀಯ ವಿಪತ್ತ ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ತಂಡಗಳು ಸ್ಥಳದಲ್ಲಿವೆ.

ರಾಜ್ಯ ಸರ್ಕಾರದ ಮನವಿ ಮೇರೆಗೆ ಬೆಂಕಿ ನಂದಿಸುವ ಕಾರ್ಯದಲ್ಲಿ ಭಾರತೀಯ ವಾಯು ಪಡೆ, ಸೇನೆ ಕೈಜೋಡಿಸಿವೆ. ಪ್ಯಾರಾಮಿಲಿಟರಿ ಪಡೆಗಳು ಪ್ರದೇಶ ಸುತ್ತವರಿದಿವೆ.

ಸೋರಿಕೆಯನ್ನು ನಿಯಂತ್ರಿಸಲು ಸಿಂಗಪುರದ ತಜ್ಞರ ಮತ್ತು ಸ್ಥಳೀಯ ಎಂಜಿನಿಯರ್‌ಗಳ ತಂಡವು ಪ್ರಯತ್ನದಲ್ಲಿ ತೊಡಗಿದ್ದಾಗಲೇ ಮಂಗಳವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯಿಂದ ಎತ್ತರದ ವರೆಗೂ ಜ್ವಾಲೆ ವ್ಯಾಪಿಸಿದ್ದು, ಸುಮಾರು 10 ಕಿ.ಮೀ. ದೂರದಿಂದಲೂ ಅದನ್ನು ಕಾಣಬಹುದಾಗಿದೆ.

ಮೂಲಗಳ ಪ್ರಕಾರ, ಪೂರ್ಣ ಸೋರಿಕೆ ನಿಯಂತ್ರಿಸಲು ಸಿಂಗಾಪುರದ ತಜ್ಞರು ನಾಲ್ಕು ವಾರಗಳು ತೆಗೆದುಕೊಳ್ಳಲಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಸರ್ವಾನಂದ ಸೋನೊವಾಲ್‌ ಅವರು ಕೇಂದ್ರದ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಅವರೊಂದಿಗೆ ಈ ಕುರಿತು ಚರ್ಚಿಸಿ, ಬೆಂಕಿ ನಿಯಂತ್ರಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಹಾಗೂ ಸ್ಥಳೀಯರ ಸುರಕ್ಷತೆಗೂ ಕ್ರಮ ತೆಗೆದುಕೊಳ್ಳಬೇಕು ಎಂದು ಕೋರಿದ್ದರು.

ತೈಲ ಬಾವಿಯ ಸಮೀಪದ ಭತ್ತದ ಗದ್ದೆಗಳು, ಕೊಳಗಳು ಕಲುಷಿತಗೊಂಡಿವೆ. ಚಹಾ ತೋಟಗಳಲ್ಲಿ ಸಹ ಅನಿಲದ ಕಣಗಳು ವ್ಯಾಪಿಸಿವೆ ಎಂದು ಬೆಳೆಗಾರರು ದೂರಿದ್ದಾರೆ. ಈ ಪ್ರದೇಶದಲ್ಲಿ ಆತಂಕ ಮನೆ ಮಾಡಿದೆ. ಮಂಗಳವಾರ ಘಟನಾ ಸ್ಥಳದ 1.5 ಕಿ.ಮೀ. ವ್ಯಾಪ್ತಿಯಲ್ಲಿ ವಾಸಿಸುವ ಕನಿಷ್ಠ 6,000 ಜನರನ್ನು ಸ್ಥಳಾಂತರಿಸಿ ಪರಿಹಾರ ಶಿಬಿರಗಳಲ್ಲಿ ಇರಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT