ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ: 1992ರ ಕಹಿ ಮರುಕಳಿಸುವ ಆತಂಕ 

Last Updated 24 ನವೆಂಬರ್ 2018, 19:45 IST
ಅಕ್ಷರ ಗಾತ್ರ

ಅಯೋಧ್ಯೆ:ಭಾನುವಾರ ಇಲ್ಲಿ ನಡೆಯಲಿರುವ ಧರ್ಮ ಸಭೆಯಲ್ಲಿ ಭಾಗವಹಿಸಲು ಲಕ್ಷಾಂತರ ಮಂದಿ ಅಯೋಧ್ಯೆಗೆ ಬಂದಿಳಿದಿದ್ದಾರೆ.

1992ರಲ್ಲಿ ಇದೇ ರೀತಿ ಇಲ್ಲಿ ಸೇರಿದ್ದ ಕರ ಸೇವಕರು ಮತ್ತು ರಾಮಭಕ್ತರ ಗುಂಪು ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿತ್ತು. ಆನಂತರ ಅಯೋಧ್ಯೆಯಲ್ಲಿ ಭಾರಿ ಹಿಂಸಾಚಾರ ನಡೆದಿತ್ತು. ಹೀಗಾಗಿ ಈಗಲೂ ಅಯೋಧ್ಯೆಯಲ್ಲಿನ ಶಾಂತಿ ಕದಡಬಹುದು ಎಂದು ಸ್ಥಳೀಯ ಮುಸ್ಲಿಮರು ಆತಂಕ ವ್ಯಕ್ತಪಡಿಸಿದ್ದಾರೆ.

‘ಧರ್ಮಸಭೆ ಶಾಂತಿಯುತವಾಗಿ ನಡೆಯುವಂತೆ ನೋಡಿಕೊಳ್ಳಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ಅಯೋಧ್ಯೆಯಲ್ಲಿ ಶಾಂತಿ ಹಾಳು ಮಾಡಲು ಯಾರಿಗೂ ಅವಕಾಶ ನೀಡುವುದಿಲ್ಲ’ ಎಂದು ಜಿಲ್ಲಾಡಳಿತ ಹೇಳಿದೆ.

ಆದರೂ ಮುಸ್ಲಿಮರು ಮಾತ್ರವಲ್ಲ, ಸ್ಥಳೀಯ ಹಿಂದೂಗಳಲ್ಲೂ ಆತಂಕ ದೂರವಾಗಿಲ್ಲ. ಮತ್ತೆ ಹಿಂಸಾಚಾರ ನಡೆಯಬಹುದು ಎಂಬ ಆತಂಕದಲ್ಲಿ ಸ್ಥಳೀಯರು ದಿನಬಳಕೆ ವಸ್ತುಗಳು, ತರಕಾರಿಯನ್ನು ತಮ್ಮ ಮನೆಗಳಲ್ಲಿ ದಾಸ್ತಾನು ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಅಯೋಧ್ಯೆಯಲ್ಲಿ ತರಕಾರಿಯ ಅಭಾವ ಉಂಟಾಗಿದ್ದು, ಬೆಲೆಗಳು ದಿಢೀರ್ ಎಂದು ಏರಿಕೆಯಾಗಿವೆ.

ರಾಮ ಮಂದಿರಕ್ಕಿಂತ ಸಾಮರಸ್ಯ, ಭವಿಷ್ಯ ಮುಖ್ಯ

ಅಯೋಧ್ಯೆ: ರಾಮ ಮಂದಿರ ನಿರ್ಮಾಣಕ್ಕೆ ವಿಶ್ವ ಹಿಂದೂ ಪರಿಷತ್ ಮತ್ತು ಶಿವಸೇನಾಗಳು ಇನ್ನಿಲ್ಲದಂತೆ ಒತ್ತಾಯಿಸುತ್ತಿರುವ ಸಂದರ್ಭದಲ್ಲೇ, ಅಯೋಧ್ಯೆ ವಾಸಿಗಳು ತಮ್ಮ ಭವಿಷ್ಯ ಮತ್ತು ಸಾಮರಸ್ಯ ಮಾತ್ರ ಮುಖ್ಯ ಎನ್ನುತ್ತಿದ್ದಾರೆ.

‘ಅಯೋಧ್ಯೆ ರಾಮನ ನೆಲ. ನಾನು ಇಲ್ಲೇ ಹುಟ್ಟಿದವನು. ನಮ್ಮ ಕುಟುಂಬದವರು ಮೂರು ತಲೆಮಾರಿನಿಂದ ಇಲ್ಲೇ ಬದುಕುತ್ತಿದ್ದೇವೆ. ನಾವೆಲ್ಲರೂ ರಾಮನ ಭಕ್ತರು. ರಾಮ ಲಲ್ಲಾನ (ಬಾಲರಾಮ) ವಿಗ್ರಹ ಟೆಂಟ್‌ನಲ್ಲಿ ಇರುವುದನ್ನು ನೋಡಿದರೆ ನನಗೆ ಸಂಕಟವಾಗುತ್ತದೆ. ರಾಮನಿಗಾಗಿ ಮಂದಿರ ನಿರ್ಮಾಣವಾದರೆ ನನಗೆ ಖಂಡಿತಾ ಖುಷಿಯಾಗುತ್ತದೆ. ಆದರೆ ಮಂದಿರ ನಿರ್ಮಾಣದ ನೆಪದಲ್ಲಿ ಹಿಂಸಾಚಾರ ನಡೆಯಬಾರದು’ ಎಂಬುದು ಅಯೋಧ್ಯೆಯಲ್ಲಿ ಶಿಲಾಪ್ರತಿಮೆಗಳ ಅಂಗಡಿ ಇಟ್ಟುಕೊಂಡಿರುವ ಅಮನ್ ಕುಮಾರ್ ಅವರ ಅಭಿಪ್ರಾಯ.

‘ಅಯೋಧ್ಯೆಯಲ್ಲಿ ಹಿಂದೂ –ಮುಸ್ಲಿಮರು ಅನ್ಯೋನ್ಯವಾಗೇ ಇದ್ದಾರೆ. ನಾವು ಯಾವಾಗಲೂ ಶಾಂತಿಯಿಂದಲೇ ಇದ್ದೇವೆ. ನಮಗೆ ಗಲಾಟೆ ಬೇಕಿಲ್ಲ. ಏಕೆಂದರೆ 1992ರಲ್ಲೇ ನಾವು ಎಲ್ಲವನ್ನೂ ಅನುಭವಿಸಿದ್ದೇವೆ.ಆದರೆ ಹೊರಗಿನಿಂದ ಬರುವ ಸಂಘಟನೆಗಳು, ರಾಜಕೀಯ ಪಕ್ಷಗಳೇ ಇಲ್ಲಿನ ವಾತಾವರಣವನ್ನು ಹಾಳುಮಾಡುವುದು’ ಎಂದು ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನನ್ನ ಗೆಳೆಯರ ಗುಂಪಿನಲ್ಲಿ ಎಲ್ಲ ಧರ್ಮದವರೂ ಇದ್ದಾರೆ. ನಾವು ಹೋಳಿ ಮತ್ತು ಈದ್‌ ಅನ್ನು ಒಟ್ಟಾಗೆ ಆಚರಿಸುತ್ತೇವೆ. ಕೆಲವು ರಾಜಕಾರಣಿಗಳು ಮತ್ತು ಸಂಘಟನೆಗಳು ರಾಮ ಮಂದಿರದ ವಿಚಾರದಲ್ಲಿ ಜನರ ಭಾವನೆ ಕೆರಳಿಸುತ್ತಿವೆ. ಆದರೆ ನಾವು ಓದಿನ ಕಡೆ ಗಮನ ಇರಿಸಿದ್ದೇವೆ. ಮಂದಿರದ ವಿಚಾರವನ್ನು ಸುಪ್ರೀಂ ಕೋರ್ಟ್ ನಿರ್ಧರಿಸುತ್ತದೆ. ನಾವು ಅದನ್ನು ಒಪ್ಪಿಕೊಳ್ಳಬೇಕಷ್ಟೆ’ ಎನ್ನುತ್ತಾರೆ ವಿದ್ಯಾರ್ಥಿ ಅನಿಲ್ ಯಾದವ್.

‘ನಾನು ನನ್ನ ಮತ್ತು ನನ್ನ ಕುಟುಂಬದ ಭವಿಷ್ಯದ ಬಗ್ಗೆ ಮಾತ್ರ ತಲೆಕೆಡಿಸಿಕೊಳ್ಳುತ್ತೇನೆ. ಏಕೆಂದರೆ ರಾಮ ಮಂದಿರದ ಭವಿಷ್ಯವು ನಮ್ಮ ಭವಿಷ್ಯವನ್ನು ನಿರ್ಧರಿಸುವುದಿಲ್ಲ ಎಂಬುದು ನಮಗೆ ಗೊತ್ತಿದೆ’ ಎನ್ನುತ್ತಾರೆ ಮತ್ತೊಬ್ಬ ವಿದ್ಯಾರ್ಥಿ ವಿಕಾಸ್ ದ್ವಿವೇದಿ.

ವಿವಾದಿತ ಸ್ಥಳದಲ್ಲಿ ಅಜೀಂ–ರೋಹಿತ್ ಮೋಡಿ

‘ಇಲ್ಲಿ ಹಿಂದೂ–ಮುಸ್ಲಿಮರು ಚೆನ್ನಾಗೇ ಇದ್ದೇವೆ’ ಎನ್ನುತ್ತದೆ ಅಜೀಂ–ರೋಹಿತ್ ಜೋಡಿ.

ಅಯೋಧ್ಯೆಯ ವಿವಾದಿತ ಸ್ಥಳದ ಸುತ್ತಮುತ್ತಲಿನ ದೇವಾಲಯಗಳ ಪ್ರವಾಸಿ ಮಾರ್ಗದರ್ಶಿಯ ಕೆಲಸ ರೋಹಿತ್ ಪಾಂಡೆಯದ್ದು (18). ಅಯೋಧ್ಯೆಯ ಬಸ್‌ ನಿಲ್ದಾಣದಿಂದ ಪ್ರವಾಸಿಗರನ್ನು ದೇವಾಲಯಗಳಿಗೆ ಆಟೊದಲ್ಲಿ ಕರೆದುಕೊಂಡು ಬರುವ ಕೆಲಸ ಮೊಹಮ್ಮದ್ ಅಜೀಂ (46) ಅವರದ್ದು.

‘ನಾವು ಅಜೀಂ ಅವರನ್ನು ಪ್ರೀತಿಯಿಂದ ‘ಮಾಮು’ ಎಂದು ಕರೆಯುತ್ತೇವೆ. ಅವರು ಆಟೊದಲ್ಲಿ ಪ್ರವಾಸಿಗರನ್ನು ಕರೆದುಕೊಂಡು ಬರುತ್ತಾರೆ. ನಾವು ಸ್ಥಳಗಳನ್ನು ತೋರಿಸುತ್ತೇವೆ. ನಮ್ಮ ಮಧ್ಯೆ ಯಾವುದೇ ಸಮಸ್ಯೆ ಇಲ್ಲ. ಇಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು. ಆದರೆ ಅದಕ್ಕೆ ಇಲ್ಲಿನ ಶಾಂತಿ–ಸಹಬಾಳ್ವೆ ಬಲಿಯಾಗಬಾರದು’ ಎನ್ನುತ್ತಾರೆ ರೋಹಿತ್.

‘ನನ್ನ ಮಗನಿಗೂ ರೋಹಿತ್‌ನಷ್ಟೇ ವಯಸ್ಸು. ಈ ಹುಡುಗರಿಗೆ ಗಲಾಟೆ ಬೇಡ. ಇವರೆಲ್ಲಾ ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಲು ದುಡಿಯುತ್ತಿದ್ದಾರೆ. ಈ ಗಲಾಟೆ, ಸಂಘರ್ಷಗಳಿಗೆ ರಾಜಕಾರಣಿಗಳೇ ಕಾರಣ’ ಎಂದು ಅಜೀಂ ಬೇಸರ ವ್ಯಕ್ತಪಡಿಸುತ್ತಾರೆ.

ಬಿಜೆಪಿಗೆ ಠಾಕ್ರೆ ಸವಾಲು

‘ರಾಮಮಂದಿರವನ್ನು ಯಾವಾಗ ನಿರ್ಮಿಸುತ್ತೀರಿ ಎಂಬ ದಿನಾಂಕವನ್ನು ಘೋಷಿಸಿ’ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಬಿಜೆಪಿಗೆ ಸವಾಲು ಎಸೆದಿದ್ದಾರೆ.

ಶನಿವಾರ ಅಯೋಧ್ಯೆಗೆ ಬಂದಿಳಿದಿರುವ ಅವರು 10,000ಕ್ಕೂ ಹೆಚ್ಚು ಶಿವ ಸೈನಿಕರ ಜತೆ ಸರಯೂ ನದಿಯಲ್ಲಿ ಆರತಿ ಬೆಳಗಿದರು. ರಾಮಜನ್ಮಭೂಮಿ ನ್ಯಾಸ ಮುಖ್ಯಸ್ಥ ಮಹಾಂತ ನೃತ್ಯ ಗೋಪಾಲ್ ದಾಸ್ ಅವರಿಗೆ ಬೆಳ್ಳಿಯ ಇಟ್ಟಿಗೆಯನ್ನು ಹಸ್ತಾಂತರಿಸಿದರು.

‘ವಾಜಪೇಯಿ ಅವರ ಸರ್ಕಾರಕ್ಕೆ ಬಹುಮತವಿರಲಿಲ್ಲ. ಆದರೆ ನಿಮಗೆ ಬಹುಮತವಿದೆ. ಮಂದಿರ ನಿರ್ಮಾಣವಾಗಬೇಕು ಅಷ್ಟೆ. ಅದಕ್ಕಾಗಿ ಸುಗ್ರೀವಾಜ್ಞೆ ತರಬೇಕು ಅಂದರೆ ತನ್ನಿ, ಕಾನೂನು ರಚಿಸಬೇಕು ಅಂದರೆ ರಚಿಸಿ. ಆದರೆ ಮಂದಿರ ಯಾವಾಗ ನಿರ್ಮಿಸುತ್ತೀರಿ ಎಂಬ ದಿನಾಂಕವನ್ನು ಇವತ್ತೇ ಘೋಷಿಸಿ’ ಎಂದು ಅವರು ಆಗ್ರಹಿಸಿದರು.

ಆತಂಕದಲ್ಲಿ ಮುಸ್ಲಿಂ ಸಮುದಾಯ

ಅಯೋಧ್ಯೆಯಲ್ಲಿ ಭಾನುವಾರ ನಡೆಯುತ್ತಿರುವ ಧರ್ಮಸಭೆಯು ಉತ್ತರ ಪ್ರದೇಶದ ಮುಸ್ಲಿಮರಲ್ಲಿ ಆತಂಕ ಮೂಡಿಸಿದೆ.

‘ಧರ್ಮಸಭೆಯ ದಿನದಂದು ಲಕ್ಷಾಂತರ ಹಿಂದೂ ಕಾರ್ಯಕರ್ತರು ಸೇರಲಿದ್ದು ಮುಸ್ಲಿಮರ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ. ಮುಸ್ಲಿಮರು ಭಯದಲ್ಲಿ ಬದುಕುತ್ತಿದ್ದಾರೆ. ಅವರಿಗೆ ಅಭದ್ರತೆಯ ಭಾವ ಕಾಡುತ್ತಿದೆ’ ಎಂದು ರಾಮ ಜನ್ಮಭೂಮಿ–ಬಾಬರಿ ಮಸೀದಿ ಜಾಗ ವಿವಾದ ಪ್ರಕರಣದ ಫಿರ್ಯಾದುದಾರ ಹಾಜಿ ಮೆಹಬೂಬ್‌ ಆತಂಕ ವ್ಯಕ್ತಪಡಿಸಿದ್ದಾರೆ.

‘ಅಯೋಧ್ಯೆ ನಮ್ಮ ಜನ್ಮಭೂಮಿ. ನಾವು ಅನೇಕ ತಲೆಮಾರುಗಳಿಂದ ಇಲ್ಲಿಯೇ ನೆಲೆಸಿದ್ದೇವೆ. ಬಾಬರಿ ಮಸೀದಿ ಧ್ವಂಸದ ನಂತರ ವಿಎಚ್‌ಪಿ ಹಾಗೂ ಶಿವಸೇನಾ ಕಾರ್ಯಕರ್ತರು ನಡೆಸಿದ ದಾಳಿ ಇನ್ನೂ ನಮಗೆ ನೆನಪಿದೆ’ ಎಂದು ಮತ್ತೊಬ್ಬ ಫಿರ್ಯಾದುದಾರ ಮೊಹಮ್ಮದ್‌ ಉಮರ್‌ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಕ್ಕೆ ಅಲಿಘಡ ಮುಸ್ಲಿಂ ವಿದ್ಯಾರ್ಥಿಗಳ ಸಂಘ ಒತ್ತಾಯಿಸಿದೆ.

ಅಯೋಧ್ಯೆ ವಿವಾದ ನ್ಯಾಯಾಲಯದಲ್ಲಿದೆ. ಹಾಗಾಗಿ ಮಂದಿರ ನಿರ್ಮಾಣಕ್ಕೆ ಒತ್ತಾಯಸಿ ನಡೆಯುತ್ತಿರುವ ಧರ್ಮಸಭೆ ನ್ಯಾಯಾಲಯ ನಿಂದನೆಯಾಗುತ್ತದೆ ಎಂದು ಆರೋಪಿಸಿದೆ.

ಭಯ ಇಲ್ಲ:‘ಮುಸ್ಲಿಮರಿಗೆ ಯಾವುದೇ ಭಯ ಇಲ್ಲ. ಆತಂಕದ ವಾತಾವಾರಣವೂ ಇಲ್ಲ. ಕೆಲವರು ವದಂತಿ ಹರಡಿಸುತ್ತಿದ್ದಾರೆ. ಅಯೋಧ್ಯೆಯಲ್ಲಿ ಶಾಂತ ವಾತಾವರಣವಿದೆ. ಸಾಮರಸ್ಯದಿಂದ ಜನರು ಜೀವಿಸುತ್ತಿದ್ದಾರೆ’ ಎನ್ನುವುದು ಅಯೋಧ್ಯೆ ಮಹಾನಗರ ಪಾಲಿಕೆ ಮೇಯರ್‌ ರಿಷಿಕೇಶ್‌ ಉಪಾಧ್ಯಾಯ ಅವರ ವಾದ.

‘ಶಿವಸೇನಾ ನಾಯಕರಿಗೆ ರ‍್ಯಾಲಿ ನಡೆಸಲು ಅನಮತಿ ನೀಡಿಲ್ಲ. ಅವರಿಗೆ ಆರತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಮತ್ತು ಸಾಧು, ಸಂತರನ್ನು ಭೇಟಿಯಾಗಲು ಮಾತ್ರ ಅನುಮತಿ ನೀಡಲಾಗಿದೆ’ ಎಂದು ಅವರು ತಿಳಿಸಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂಗ ಸಂಸ್ಥೆ ಮುಸ್ಲಿಂ ರಾಷ್ಟ್ರೀಯ ಮಂಚ್‌ ಸಹ ಸಂಚಾಲಕ ಮೊರಾರಿ ದಾಸ್‌ ಅವರು, ‘ಮುಸ್ಲಿಂರಲ್ಲಿ ಭಯ ಹುಟ್ಟಿದೆ ಎಂಬುವುದು ಸುಳ್ಳು. ಮಂದಿರ ನಿರ್ಮಾಣವಾಗಬೇಕು ಎನ್ನುವುದು ಹೆಚ್ಚಿನ ಮುಸ್ಲಿಮರ ಬಯಕೆಯಾಗಿದೆ’ಎಂದರು.

ಖಾಕಿ ಕಾವಲು

ಸಂಘರ್ಷ ಮತ್ತು ಹಿಂಸಾಚಾರದ ಸಾಧ್ಯತೆ ಇರುವುದರಿಂದ ಉತ್ತರ ಪ್ರದೇಶ ಸರ್ಕಾರ ಅಯೋಧ್ಯೆಯಲ್ಲಿ ಭದ್ರತೆಯನ್ನು ಬಿಗಿಗೊಳಿಸಿದೆ. ಹಿರಿಯ ಅಧಿಕಾರಿಗಳು, ಅರೆಸೇನಾ ಪಡೆಯ ತುಕಡಿಗಳನ್ನು ನಿಯೋಜಿಸಲಾಗಿದೆ

ಒಬ್ಬರು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು,ಒಬ್ಬರುಡಿಐಜಿ, ಮೂವರುಹಿರಿಯ ಪೊಲೀಸ್ ವರಿಷ್ಠಾಧಿಕಾರಿಗಳು. ಹತ್ತು ಮಂದಿಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು,21 ಮಂದಿ ಉಪಪೊಲೀಸ್ ವರಿಷ್ಠಾಧಿಕಾರಿಗಳು,160 ಮಂದಿಇನ್‌ಸ್ಪೆಕ್ಟರ್‌ಗಳು,700ಮಂದಿ ಕಾನ್‌ಸ್ಟೆಬಲ್‌ಗಳು,42ಪ್ರಾದೇಶಿಕ ಶಸ್ತ್ರ ಪಡೆಯ ತುಕಡಿಗಳು,5 ಕ್ಷಿಪ್ರ ಕಾರ್ಯಪಡೆಯ ತುಕಡಿಗಳು,5 ಭಯೋತ್ಪಾದನೆ ನಿಗ್ರಹ ಪಡೆಯ ತುಕಡಿಗಳು ಆಯೋಜನೆ ಮಾಡಲಾಗಿದೆ.

ಧರ್ಮಸಭೆಯ ಕಣ್ಗಾವಲಿಗೆ ಡ್ರೋನ್ ಕ್ಯಾಮೆರಾ ಬಳಕೆ

ನಿಷೇಧಾಜ್ಞೆ ಜಾರಿಯಲ್ಲಿದೆ

ಅಯೋಧ್ಯೆಯಲ್ಲಿನ ವಿವಾದಿತ ಸ್ಥಳದಲ್ಲಿ ನವೆಂಬರ್ 21ರಿಂದಲೇ ನಿಷೇಧಾಜ್ಞೆ ಜಾರಿಯಲ್ಲಿದೆ. ವಿವಾದಿತ ಸ್ಥಳದಲ್ಲಿರುವ ರಾಮನ ತಾತ್ಕಾಲಿಕ ಮಂದಿರಕ್ಕೆ ಈ ಕೆಳಗಿನ ವಸ್ತುಗಳನ್ನು ತೆಗೆದುಕೊಂಡು ಹೋಗುವುದನ್ನು ಜಿಲ್ಲಾಡಳಿತ ನಿಷೇಧಿಸಿದೆ

ಕ್ಯಾಮೆರಾ,ದೊಣ್ಣೆ ಸೇರಿಯಾವುದೇ ರೀತಿಯ ಅಸ್ತ್ರಗಳು ಹಾಗೂದೊಡ್ಡ ಗುಂಪುಗಳು ದೇವಾಲಯ ಪ್ರವೇಶಿಸುವುದಕ್ಕೆ ನಿಷೇಧವಿದೆ.4–5 ಜನರ ಗುಂಪುಗಳನ್ನಾಗಿ ಮಾಡಿ ದೇವಾಲಯಕ್ಕೆ ಬಿಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT