ಬುಧವಾರ, ಆಗಸ್ಟ್ 21, 2019
22 °C

‘ದೊಡ್ಡ ತೀರ್ಮಾನ’ದ ಹಿಂದಿನ ಆರು ಮಂದಿ

Published:
Updated:

ನವದೆಹಲಿ: ಸಂವಿಧಾನದ 370ನೇ ವಿಧಿಯನ್ನು ಅಸಿಂಧುಗೊಳಿಸುವ ಮತ್ತು ಜಮ್ಮು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ‘ದೊಡ್ಡ ತೀರ್ಮಾನ’ದ ಹಿಂದೆ ಕೇಂದ್ರದ ಪ್ರಮುಖ ಹುದ್ದೆಗಳನ್ನು ನಿರ್ವಹಿಸುತ್ತಿರುವ ಆರು ಮಂದಿಯ ಚಿಂತನೆ ಹಾಗೂ ಶ್ರಮ ಇದೆ.

ಪ್ರಧಾನಿ ಮೋದಿ: ಈ ನಿರ್ಣಯಕ್ಕೆ ಬಹುದೊಡ್ಡ ‘ರಾಜಕೀಯ ಬಲ’ ಸಿಕ್ಕಿರುವುದು ಪ್ರಧಾನಿ ಮೋದಿ ಅವರಿಂದ. ಈಚೆಗೆ ನಡೆದ ಲೊಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 303 ಸ್ಥಾನ ಹಾಗೂ ಎನ್‌ಡಿಎಗೆ 353 ಸ್ಥಾನಗಳನ್ನು ತಂದುಕೊಡುವಲ್ಲಿ ಮೋದಿ ಪ್ರಮುಖ ಪಾತ್ರ ವಹಿಸಿದ್ದರು.

ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ ಈ ದೊಡ್ಡ ತೀರ್ಮಾನ ಕೈಗೊಳ್ಳುವ ಮೂಲಕ ಬಿಜೆಪಿಯ ಎರಡನೇ ‘ಅವತಾರ’ವು ಸಂಘದ ಚಿಂತನೆಗಳನ್ನು ಜಾರಿಗೊಳಿಸುವಲ್ಲಿ ಇನ್ನಷ್ಟು ದಿಟ್ಟ ತೀರ್ಮಾನಗಳನ್ನು ಕೈಗೊಳ್ಳಲಿದೆ ಎಂಬ ಸೂಚನೆಯನ್ನು ಸರ್ಕಾರ ನೀಡಿದೆ.

ಅಮಿತ್‌ ಶಾ: 370ನೇ ವಿಧಿಯನ್ನು ಅಸಿಂಧುಗೊಳಿಸುವ ಮತ್ತು ರಾಜ್ಯ ವಿಭಜನೆಯ ಚಿಂತನೆಯನ್ನು ಸಂಸತ್ತಿನಲ್ಲಿ ಮಂಡಿಸುವ ಜವಾಬ್ದಾರಿಯನ್ನು ಮೋದಿ ಅವರು ಅಮಿತ್‌ ಶಾ ಅವರಿಗೆ ವಹಿಸಿದರು. ಸಂಸತ್ತಿನಲ್ಲಿ ಗೆಲ್ಲುವ ಜವಾಬ್ದಾರಿ ಶಾ ಅವರದ್ದಾಯಿತು. ಸಾಕಷ್ಟು ಪೂರ್ವಸಿದ್ಧತೆ ಮಾಡಿದ ಶಾ, ಹಳೆಯ ಅನೇಕ ದಾಖಲೆಗಳನ್ನು ತಿರುವಿಹಾಕಿದ್ದಾರೆ. ಸ್ವಾತಂತ್ರ್ಯಾನಂತರ ಕಾಶ್ಮೀರದಲ್ಲಿ ನಿರ್ಮಾಣವಾಗಿದ್ದ ಪ್ರಕ್ಷುಬ್ಧ ಪರಿಸ್ಥಿತಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಎರಡು ಪ್ರಮುಖ ಮಸೂದೆಗಳಿಗೆ ರಾಜ್ಯಸಭೆಯ ಅಂಗೀಕಾರ ಪಡೆಯುವಲ್ಲಿ ಸಿಕ್ಕಿರುವ ಯಶಸ್ಸು ಅವರಲ್ಲಿ ಇನ್ನಷ್ಟು ಧೈರ್ಯವನ್ನು ತುಂಬಿತ್ತು.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌: ಈ ತೀರ್ಮಾನದ ಸಾಧ್ಯಾಸಾಧ್ಯತೆಗಳೇನು, ಪರಿಣಾಮಗಳೇನು, ಇದು ಜಾರಿ ಮಾಡಬಹುದಾದ ತೀರ್ಮಾನವೇ... ಮುಂತಾದ ವಿಚಾರಗಳ ಬಗ್ಗೆ ಅತಿ ವಿಸ್ತಾರವಾಗಿ ಅಧ್ಯಯನ ನಡೆಸಿ ಸರ್ಕಾರಕ್ಕೆ ಸಲಹೆಗಳನ್ನು ನೀಡಿದ್ದು ಡೊಭಾಲ್‌.

ಸೇನೆ, ಪೊಲೀಸ್‌ ಹಾಗೂ ಗುಪ್ತಚರ ಇಲಾಖೆಗಳ ಮೂಲಕ ಮಾಹಿತಿ ಕಲೆಹಾಕಿ, ಯೋಜನೆಯ ಒಂದಿಷ್ಟು ಸುಳಿವೂ ಬಹಿರಂಗವಾಗದಂತೆ ಅವರು ಕಾರ್ಯನಿರ್ವಹಿಸಿದ್ದಾರೆ. ಪಾಕಿಸ್ತಾನದಲ್ಲಿ ಏನೇನಾಗುತ್ತಿದೆ ಎಂಬುದರ ಮೇಲೂ ಅವರು ಗಮನ ಇಡಬೇಕಾಗಿದೆ.

ಬಿಜೆಪಿಯ ಕಾಶ್ಮೀರ ಉಸ್ತುವಾರಿ ರಾಮ್‌ಮಾಧವ್‌: ಇವರು ಜಮ್ಮು ಕಾಶ್ಮೀರದ ಜನರು ಹಾಗೂ ರಾಜಕೀಯ ಪಕ್ಷಗಳ ಜೊತೆ ಹಲವು ವರ್ಷಗಳಿಂದ ನಿಕಟ ಸಂಪರ್ಕ ಇಟ್ಟುಕೊಂಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ–ಪಿಡಿಪಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಮತ್ತು ಆ ನಂತರವೂ ಇವರು ಅಲ್ಲಿನ ಜನರ ನಾಡಿಮಿಡಿತವನ್ನು ಅರಿಯುವ ಕೆಲಸದಲ್ಲಿ ನಿರತರಾಗಿದ್ದರು.

ರಾಜ್ಯಪಾಲ ಸತ್ಯಪಾಲ್‌ ಮಲಿಕ್‌: ಸುಮಾರು ಒಂದು ವರ್ಷಕ್ಕೆ ಹಿಂದೆ ಸತ್ಯಪಾಲ್‌ ಮಲಿಕ್‌ ಅವರನ್ನು ರಾಜ್ಯಪಾಲರಾಗಿ ಜಮ್ಮು ಕಾಶ್ಮೀರಕ್ಕೆ ಕಳುಹಿಸುವ ಮೂಲಕ, ‘ಕಾಶ್ಮಿರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಾವು ಮುಂದಾಗಲಿದ್ದೇವೆ’ ಎಂಬ ಸ್ಪಷ್ಟ ಸೂಚನೆಯನ್ನು ಬಿಜೆಪಿ ರವಾನಿಸಿತ್ತು.

ಮಲಿಕ್‌ ಅವರು, ರಾಜಕಾರಣಿಗಳೂ ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳ ಜನರೊಂದಿಗೆ ಸಂವಾದ ನಡೆಸಿದ್ದಾರೆ. ಅವರು ಸರ್ಕಾರಕ್ಕೆ ನೀಡಿದ್ದ ಮಾಹಿತಿ ಅತ್ಯಂತ ಸೂಕ್ಷ್ಮವಾದದ್ದಾಗಿತ್ತು.

ಮಧ್ಯಸ್ಥಿಕೆದಾರ ದಿನೇಶ್ವರ್‌ ಶರ್ಮಾ : ಸರ್ಕಾರಕ್ಕೆ ಅಗತ್ಯವಾಗಿದ್ದ ತಳಮಟ್ಟದ ಮಾಹಿತಿಯನ್ನು ಒದಗಿಸಿದ್ದು ಗುಪ್ತಚರ ಇಲಾಖೆಯ ಮಾಜಿ ನಿರ್ದೇಶಕ ದಿನೇಶ್ವರ್‌ ಶರ್ಮಾ. ಸರ್ಕಾರವು ಎರಡು ವರ್ಷಗಳ ಹಿಂದೆ ಇವರನ್ನು ಮಧ್ಯಸ್ತಿಕೆದಾರರನ್ನಾಗಿ ನೇಮಕ ಮಾಡಿತ್ತು. ಶರ್ಮಾ ಅವರು ಸರ್ಕಾರಕ್ಕೆ ತಮ್ಮ ವರದಿ ಸಲ್ಲಿಸುವುದಕ್ಕೂ ಮುನ್ನ ರಾಜ್ಯದ ವಿವಿಧ ಭಾಗಗಳ ಯುವ ಜನರು, ವ್ಯಾಪಾರಿಗಳು, ಪ್ರವಾಸಿಗರು, ವಾಹನ ಚಾಲಕರು ಹೀಗೆ ವಿವಿಧ ಸ್ತರದ ಜನರನ್ನು ಭೇಟಿ ಮಾಡಿ ಅವರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದರು.

Post Comments (+)