ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮೆ ಕಂತು ಹೆಚ್ಚಳ?

Last Updated 25 ಮಾರ್ಚ್ 2020, 3:13 IST
ಅಕ್ಷರ ಗಾತ್ರ

ಆಧುನಿಕ ಸಮಾಜ ಒಡ್ಡುವ ಯಾವುದೇ ರೀತಿಯ ಅಪಾಯವನ್ನು ಎದುರಿಸುವ ಶಕ್ತಿಯನ್ನು ‘ಮರು ವಿಮೆ’ಯು ವಿಮಾ ಕಂಪನಿಗಳಿಗೆ ನೀಡುತ್ತದೆ. ಇಂತಹ ಮರು ವಿಮಾ ಕಂಪನಿಗಳು (re-insurer) ಜೀವವಿಮಾ ಕಂಪನಿಗಳಿಂದ ಸಂಗ್ರಹಿಸುವ ಕಂತಿನ ಮೊತ್ತವನ್ನು ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸುತ್ತಿವೆ. ಇದರ ಪರಿಣಾಮ ಗ್ರಾಹಕರ ಮೇಲೆ ಆಗುವುದು ಖಚಿತ.

ಭೂಕಂಪನದಂತಹ ನೈಸರ್ಗಿಕ ದುರಂತಗಳಿಂದ ಆಗುವ ನಷ್ಟ ಅಥವಾ ಭಯೋತ್ಪಾದನೆಯಂತಹ ಮಾನವ ನಿರ್ಮಿತ ದುರಂತಗಳಿಂದ ಉದ್ದಿಮೆಯನ್ನು ರಕ್ಷಿಸಿ, ಕಂಪನಿಗೆ ಆರ್ಥಿಕ ಸಹಾಯ ಒದಗಿಸಲು ಮರುವಿಮೆಯು ನೆರವಾಗುತ್ತದೆ. ಜತೆಗೆ ಇದು ಆಧುನಿಕ ಜಗತ್ತಿನ ಅಪಾಯಗಳನ್ನು ಮೆಟ್ಟಿನಿಲ್ಲುವ ದಿಸೆಯಲ್ಲಿ ಪರಿಣಾಮಕಾರಿಯಾಗಿಯೂ ಕೆಲಸ ಮಾಡುತ್ತಿದೆ.

ಮರು ವಿಮೆಯು ವಿಮಾ ಕಂಪನಿಗಳು ನೀಡುವ ಅವಧಿ ವಿಮೆಯ ಶೇ 80ರಷ್ಟು ಮೊತ್ತಕ್ಕೆ ಬೆಂಬಲವಾಗಿ ನಿಲ್ಲುವುದರಿಂದ, ವಿಮೆಯ ಮೊತ್ತವನ್ನು ನಿಗದಿಮಾಡುವ ಅಧಿಕಾರವನ್ನು ಮರುವಿಮಾ ಕಂಪನಿಗಳು ತಮ್ಮ ಬಳಿ ಇಟ್ಟುಕೊಂಡಿರುತ್ತವೆ. ಈ ಮೊತ್ತವನ್ನು ಹೆಚ್ಚಿಸುತ್ತಿದ್ದಂತೆಯೇ ವಿಮಾ ಕಂಪನಿಗಳು ಅದನ್ನು ಗ್ರಾಹಕರಿಗೆ ವರ್ಗಾಯಿಸಲಿವೆ.

ಜೀವವಿಮೆಯು ಮುಖ್ಯವಾಗಿ ಮೂರು ಪರಿಕಲ್ಪನೆಗಳನ್ನು ಅವಲಂಬಿಸಿರುತ್ತದೆ. ವಿವಿಧ ವರ್ಗದವರನ್ನು ಒಂದು ದೊಡ್ಡ ಗುಂಪಿನಡಿ ತರುವುದು, ವಿಮಾದಾರರಿಂದ ಕಂತುಗಳನ್ನು ಪಡೆಯುವುದು, ಹೀಗೆ ಸಂಗ್ರಹವಾದ ಹಣದಿಂದ ನಷ್ಟ ಅನುಭವಿಸಿದವರಿಗೆ ಅಥವಾ ಮೃತಪಟ್ಟವರ ಕುಟುಂಬದವರಿಗೆ ಪರಿಹಾರ ನೀಡುವುದು.

ವಿಮೆ ಮಾಡಿಸಿದ ಕೆಲವು ವ್ಯಕ್ತಿಗಳಿಗೆ ಆಗಿರುವ ಹಾನಿಯನ್ನು, ಆ ಗುಂಪಿನಡಿ ಬರುವ ಎಲ್ಲರೂ ಸೇರಿ ಭರಿಸುವ ಪರೋಕ್ಷ ವ್ಯವಸ್ಥೆ ಇದು. ಹೀಗೆ ವಿಮೆ ಮಾಡಿಸುವವರ ಕಂತಿನ ಮೊತ್ತವನ್ನು (ಪ್ರೀಮಿಯಂ) ನಿರ್ಧರಿಸಬೇಕಾದರೆ, ವಿವಿಧ ವಯೋಮಾನದವರ ಸಾವಿನ ಸಂಭವನೀಯತೆಯನ್ನು ತಿಳಿಯುವ ವ್ಯವಸ್ಥೆಯನ್ನು ವಿಮಾ ಸಂಸ್ಥೆ ಹೊಂದಿರುವುದು ಅಗತ್ಯ. ಆದರೆ ಭಾರತದಲ್ಲಿ ಈಗಲೂ ಸಾವಿನ ಸಂಭವನೀಯತೆಯನ್ನು ಅಂದಾಜಿನ ಮೇಲೆ ನಿರ್ಧರಿಸಲಾಗುತ್ತದೆ.

ಅವಧಿ ವಿಮಾ ಯೋಜನೆಯಡಿ ವಿಮೆ ಮಾಡಿಸಿಕೊಳ್ಳುವವರ ಸಾವಿನ ಸಂಭವನೀಯತೆಯು ಭಾರತದ ಒಟ್ಟಾರೆ ಸರಾಸರಿ ಸಾವಿನ ಸಂಭವನೀಯತೆಯ ನಾಲ್ಕನೇ ಒಂದರಷ್ಟು ಇರುತ್ತದೆ (1/4 ಅಥವಾ ಶೇ 25ರಷ್ಟು) ಎಂಬ ಧಾರಣೆಯ ಮೇಲೆ ಅವಧಿ ವಿಮೆಗಳ ಕಂತಿನ ಮೊತ್ತವನ್ನು ನಿರ್ಧರಿಸಲಾಗುತ್ತಿದೆ.

ಈ ವಿಮೆಗಳಿಗೆ ಹೋಲಿಸಿದರೆ ಆನ್‌ಲೈನ್‌ ವಿಮೆಗಳ ಕಂತಿನ ಮೊತ್ತ ಕಡಿಮೆ ಇರುತ್ತದೆ. ಯಾಕೆಂದರೆ, ಅವುಗಳು ಸಾವಿನ ಸಂಭವನೀಯತೆಯ ಸರಾಸರಿ ಪ್ರಮಾಣವನ್ನು ನಾಲ್ಕನೇ ಒಂದರ ಬದಲು, ಐದನೇ ಒಂದರ (1/5 ಅಥವಾ ಶೇ 20ರಷ್ಟು) ಆಧಾರದಲ್ಲಿ ನಿಗದಿ ಮಾಡುತ್ತವೆ. ಅದಕ್ಕೆ ಅನುಸಾರವಾಗಿ ಕಂತು ನಿಗದಿ ಮಾಡುತ್ತವೆ. ಆನ್‌ಲೈನ್‌ ವಿಮೆ ಮಾಡಿಸುವವರು ಶ್ರೀಮಂತ ವರ್ಗದವರಿರುತ್ತಾರೆ, ಅವರ ಜೀವಿತಾವಧಿಯು ಹೆಚ್ಚಾಗಿರುತ್ತದೆ ಎಂಬ ನಂಬಿಕೆಯು ಇದಕ್ಕೆ ಕಾರಣ.

ಇತ್ತೀಚಿನ ದಿನಗಳಲ್ಲಿ ಕ್ಲೇಮುಗಳ (ವಿಮೆ ಪರಿಹಾರದ ಕೋರಿಕೆ) ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ವಿಮಾ ಸಂಸ್ಥೆಗಳು ತಮ್ಮ ಧಾರಣೆಯನ್ನು ಬದಲಿಸುವುದು ಅನಿವಾರ್ಯವಾಗುತ್ತಿದೆ. ಭಾರತೀಯ ಮತ್ತು ಜಾಗತಿಕ ಮಟ್ಟದ ಮರುವಿಮಾ ಸಂಸ್ಥೆಗಳು ವಿಮಾ ಕಂತಿನ ಪ್ರಮಾಣವನ್ನು ಹೆಚ್ಚಿಸುವ ಬಗ್ಗೆ ಚಿಂತಿಸಬೇಕಾಗಿ ಬಂದಿದೆ. ವಿಮಾ ಸಂಸ್ಥೆಗಳು ಮಾಡಿರುವ ಅಂದಾಜು ಹಾಗೂ ವಾಸ್ತವದಲ್ಲಿ ಆಗುತ್ತಿರುವ ಸಾವಿನ ಸಂಖ್ಯೆಯ ನಡುವೆ ವ್ಯತ್ಯಾಸ ಹೆಚ್ಚುತ್ತಿರುವುದೇ ಮರುವಿಮಾ ಸಂಸ್ಥೆಗಳ ಎಚ್ಚರಿಕೆಯ ಹೆಜ್ಜೆಗೆ ಕಾರಣವಾಗುತ್ತಿದೆ.

ಮರು ವಿಮಾ ಸಂಸ್ಥೆಗಳು ಈಚೆಗೆ ನಡೆಸಿದ ಅಧ್ಯಯನವೊಂದರ ಪ್ರಕಾರ, ಮುಂದಿನ ಮೂರು ತಿಂಗಳೊಳಗೆ ಮರು ವಿಮಾ ಸಂಸ್ಥೆಗಳು ತಮ್ಮ ಪ್ರೀಮಿಯಂ ಮೊತ್ತವನ್ನು ಹೆಚ್ಚಿಸಬೇಕಾಗುತ್ತದೆ. ಅದರ ಪರಿಣಾಮವಾಗಿ ವಿಮಾ ಸಂಸ್ಥೆಗಳು ಗ್ರಾಹಕರಿಂದ ಸಂಗ್ರಹಿಸುವ ಕಂತಿನ ಮೊತ್ತವನ್ನೂ ಹೆಚ್ಚಿಸಬೇಕಾಗುತ್ತದೆ.

ತಮಗೆ ಲಭ್ಯವಿರುವ ಮಾಹಿತಿ ಹಾಗೂ ಅನುಭವದ ಆಧಾರದಲ್ಲಿ ವಿಮಾ ಸಂಸ್ಥೆಗಳು ಅಪಾಯ ಹಾಗೂ ಸಾವಿನ ಸಂಭವನೀಯತೆಗಳನ್ನು ನಿಗದಿ ಮಾಡುತ್ತವೆ. ಲಭ್ಯ ಮಾಹಿತಿಯು ಎಷ್ಟು ನಿಖರವಾಗಿರುತ್ತದೆಯೋ ಕಂಪನಿಗಳ ಅಪಾಯವು ಅಷ್ಟೇ ಕಡಿಮೆಯಾಗಿರುತ್ತದೆ.

ಅಮೆರಿಕ, ದುಬೈ, ಸಿಂಗಪುರ, ಮುಂತಾದ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಿಗೆ ಹೋಲಿಸಿದರೆ ಕಳೆದ ಒಂದು ದಶಕದಲ್ಲಿ ಭಾರತದಲ್ಲಿ ಅವಧಿ ವಿಮೆಗಳ ಕಂತಿನ ಪ್ರಮಾಣವು ಕಡಿಮೆಯಾಗಿದೆ. ದೇಶದ ವಿಮಾ ಕ್ಷೇತ್ರದಲ್ಲಿ ಸ್ಪರ್ಧೆ ಹೆಚ್ಚಾಗಿರುವುದು ಇದಕ್ಕೆ ಪ್ರಮುಖ ಕಾರಣ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅವಧಿ ವಿಮೆಯ ಕಂತಿನ ಪ್ರಮಾಣವು ಭಾರತಕ್ಕಿಂತ ಶೇ 30ರಷ್ಟು ಅಧಿಕವಾಗಿದೆ ಎಂಬುದು ಅಂಕಿ ಅಂಶಗಳನ್ನು ಹೋಲಿಕೆ ಮಾಡಿದರೆ ಸ್ಪಷ್ಟವಾಗುತ್ತದೆ. ಆದ್ದರಿಂದ ವಿಮೆಯನ್ನು ಖರೀದಿಸಲು ಗ್ರಾಹಕರಿಗೆ ಇದು ಸರಿಯಾದ ಸಮಯವಾಗಿದೆ.

ಒಂದು ಉದಾಹರಣೆ ಕೊಡುವುದಾದರೆ, ಮಹಾನಗರದಲ್ಲಿ ವಾಸಿಸುವ, ಧೂಮಪಾನದ ಹವ್ಯಾಸ ಇಲ್ಲದಿರುವ 30 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನಿಗೆ ಬೇರೆ ಬೇರೆ ರಾಷ್ಟ್ರಗಳ ಪ್ರಮುಖ ಕಂಪನಿಗಳು ನಿಗದಿಮಾಡುವ ಕಂತಿನ ಪ್ರಮಾಣ ಭಿನ್ನವಾಗಿರುತ್ತದೆ.

ಜೀವ ವಿಮಾ ಸಂಸ್ಥೆಗಳು ದೀರ್ಘಾವಧಿಯ ಲಾಭ ಗಳಿಕೆಗಾಗಿ ಅವಧಿ ಜೀವವಿಮೆಗಳನ್ನೇ ಅವಲಂಬಿಸಿರುವುದರಿಂದ, ಸದ್ಯದಲ್ಲೇ ಕಂತಿನ ಪ್ರಮಾಣವನ್ನು ಮರು ನಿಗದಿ ಮಾಡುವ ಸಾಧ್ಯತೆ ಇದೆ. ಮುಂದಿ 3 ರಿಂದ 12 ತಿಂಗಳೊಳಗೆ ಈ ಪ್ರಕ್ರಿಯೆ ಜಾರಿಯಾಗುವ ಸಾಧ್ಯತೆ ದಟ್ಟವಾಗಿದೆ.

(ಲೇಖಕ: 'ಪಾಲಿಸಿಬಜಾರ್‌ಡಾಟ್‌ಕಾಂ‘ನ ಜೀವವಿಮಾ ವಿಭಾಗದ ಮುಖ್ಯ ವ್ಯವಹಾರ ಅಧಿಕಾರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT