ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ರಾಷ್ಟ್ರ ತೀರ್ಪು: ದೋಷಪೂರಿತ

ತನ್ನ ಪೀಠಕ್ಕೆ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸಿದ ಮೇಘಾಲಯ ಹೈಕೋರ್ಟ್‌
Last Updated 26 ಮೇ 2019, 2:09 IST
ಅಕ್ಷರ ಗಾತ್ರ

ಗುವಾಹಟಿ: ವಿಭಜನೆ ಸಂದರ್ಭದಲ್ಲಿಯೇ ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಬೇಕಾಗಿತ್ತು ಎಂದು ಮೇಘಾಲಯ ಹೈಕೋರ್ಟ್‌ ನ್ಯಾಯಮೂರ್ತಿ ನೀಡಿದ್ದ ಹೇಳಿಕೆಗೆ ವ್ಯತಿರಿಕ್ತ ಅಭಿಪ್ರಾಯವನ್ನು ಸ್ವತಃ ಮೇಘಾಲಯ ಹೈಕೋರ್ಟ್‌ ವ್ಯಕ್ತಪಡಿಸಿದ್ದು, ಈ ತೀರ್ಮಾನ ಕಾನೂನಾತ್ಮಕವಾಗಿ ದೋಷಪೂರಿತವಾದುದು ಎಂದು ಹೇಳಿದೆ.

‘ವಿಭಜನೆಗೊಂಡ ಪಾಕಿಸ್ತಾನ ತನ್ನನ್ನು ಮುಸ್ಲಿಂ ರಾಷ್ಟ್ರವಾಗಿ ಘೋಷಿಸಿಕೊಂಡಿತು. ಧರ್ಮದ ಆಧಾರದಲ್ಲಿ ವಿಭಜನೆಯಾದ ಭಾರತ ಕೂಡ ತನ್ನನ್ನು ಹಿಂದೂ ರಾಷ್ಟ್ರವಾಗಿ ಘೋಷಿಸಿಕೊಳ್ಳಬೇಕಿತ್ತು. ಆದರೆ, ಈ ದೇಶ ಜಾತ್ಯತೀತವಾಗಿ ಉಳಿಯಿತು. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಲ್ಲಿ ಹಿಂದೂ, ಸಿಖ್‌, ಜೈನ, ಬೌದ್ಧ, ಕ್ರೈಸ್ತ, ಪಾರ್ಸಿ, ಖಾಸಿ, ಜೈಂತಿಯಾ ಮತ್ತು ಗಾರೋ ಸಮುದಾಯಗಳ ಜನರು ಚಿತ್ರಹಿಂಸೆ ಅನುಭವಿಸುತ್ತಿದ್ದಾರೆ. ಇವರಿಗೆ ಹೋಗಲು ಬೇರೆ ಜಾಗವೇ ಇಲ್ಲ. ದೇಶ ವಿಭಜನೆ ಸಂದರ್ಭದಲ್ಲಿ ಭಾರತಕ್ಕೆ ಬಂದ ಹಿಂದೂಗಳನ್ನು ಈಗಲೂ ವಿದೇಶಿಯರೆಂದೇ ಪರಿಗಣಿಸಲಾಗುತ್ತಿದೆ. ಇದು ಅತಾರ್ಕಿಕ, ಕಾನೂನುಬಾಹಿರ ಮತ್ತು ಸಹಜ ನ್ಯಾಯಕ್ಕೆ ವಿರುದ್ಧ’ ಎಂದು ನ್ಯಾಯಮೂರ್ತಿಸುದೀಪ್‌ ರಂಜನ್‌ ಸೆನ್‌ ಕಳೆದ ಡಿಸೆಂಬರ್‌ 10ರಂದು ತೀರ್ಪು ನೀಡಿದ್ದರು.ಕಳೆದ ಮಾರ್ಚ್‌ನಲ್ಲಿ ಸೆನ್‌ ನಿವೃತ್ತರಾಗಿದ್ದಾರೆ.

ಮೇಘಾಲಯದಲ್ಲಿನ ವಾಸಿಸುವ ಪ್ರಮಾಣ ಪತ್ರ ನೀಡಲು ನಿರಾಕರಿಸಿರುವುದನ್ನು ಪ್ರಶ್ನಿಸಿ ಅಮೋಲ್‌ ರಾಣಾ ಎನ್ನುವವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ತೀರ್ಪು ನೀಡಿದ ವೇಳೆ ಸೆನ್‌ ಈ ರೀತಿ ಅಭಿಪ್ರಾಯಪಟ್ಟಿದ್ದರು.

ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನದಿಂದ ವಲಸೆ ಬಂದ ಮುಸ್ಲಿಮೇತರರಿಗೆ ಭಾರತ ಪೌರತ್ವ ನೀಡುವ ಉದ್ದೇಶದಿಂದ ಕೇಂದ್ರಸರ್ಕಾರ ಪೌರತ್ವ (ತಿದ್ದುಪಡಿ) ಮಸೂದೆ ರೂಪಿಸಲು ಮುಂದಾದಾಗ ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಸೆನ್‌ ಅವರು ನೀಡಿದ್ದ ಈ ತೀರ್ಪು ಚರ್ಚೆಗೆ ಕಾರಣವಾಗಿತ್ತು.

ಸೆನ್‌ ತೀರ್ಪಿನ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸಿದ ಮೇಘಾಲಯ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಮೊಹಮ್ಮದ್‌ ಯಾಕೂಬ್‌ ಮಿರ್‌ ನೇತೃತ್ವದ ಪೀಠ, ‘ಸೆನ್‌ ನೀಡಿದ್ದ ತೀರ್ಪು, ರಾಣಾ ಸಲ್ಲಿಸಿದ್ದ ಅರ್ಜಿಗೆ ಪೂರಕವಾಗಿಲ್ಲ ಮತ್ತು ಈ ಅರ್ಜಿ ಇತ್ಯರ್ಥಕ್ಕೆ ಸೆನ್‌ ಅಭಿಪ್ರಾಯ ಯಾವುದೇ ಅಡ್ಡಿಯಾಗುವುದಿಲ್ಲ’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT