ಗುರುವಾರ , ಜುಲೈ 29, 2021
26 °C
ನವೆಂಬರ್ ವೇಳೆಗೆ ದೇಶದಲ್ಲಿ ಕೋವಿಡ್ ಗರಿಷ್ಠಮಟ್ಟಕ್ಕೆ ಎಂದಿದ್ದ ವರದಿ ತನ್ನದಲ್ಲ ಎಂದ ಕೇಂದ್ರ ಸರ್ಕಾರದ ಸಂಸ್ಥೆ

ತನ್ನದೇ ವರದಿ ನಿರಾಕರಿಸಿದ ಐಸಿಎಂಆರ್

ಜಯಸಿಂಹ ಆರ್. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭಾರತದಲ್ಲಿ ಪ್ರತಿದಿನ ಪತ್ತೆಯಾಗುವ ಹೊಸ ಕೋವಿಡ್–19 ಪ್ರಕರಣಗಳ ಸಂಖ್ಯೆ ನವೆಂಬರ್‌ ಮಧ್ಯದ ವೇಳೆಗೆ ಗರಿಷ್ಠಮಟ್ಟ ಮುಟ್ಟಲಿದೆ ಎಂದು ಹೇಳಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ಸ್ಪಷ್ಟನೆ ನೀಡಿದೆ.

‘ಪ್ರತಿದಿನ ಪತ್ತೆಯಾಗುವ ಕೋವಿಡ್ ಪ್ರಕರಣಗಳ ಸಂಖ್ಯೆ ಜುಲೈ ಮಧ್ಯದ ವೇಳೆಗೆ ಗರಿಷ್ಠಮಟ್ಟ ಮುಟ್ಟಬೇಕಿತ್ತು. ಲಾಕ್‌ಡೌನ್ ಕಾರಣ ಈ ಅವಧಿ ನವೆಂಬರ್ ಮಧ್ಯದವರೆಗೂ ವಿಸ್ತರಣೆಯಾಗಿದೆ. ಆದರೆ, ಆ ವೇಳೆಗೆ ಐಸೊಲೇಷನ್ ಹಾಸಿಗೆಗಳು ಮತ್ತು ವೆಂಟಿಲೇಟರ್‌ಗಳ ಕೊರತೆ ಉಂಟಾಗಲಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಐಸಿಎಂಆರ್ ರಚಿಸಿರುವ ‘ಆಪರೇಷನ್ಸ್ ರಿಸರ್ಚ್ ಗ್ರೂಪ್‌’ ನಡೆಸಿದ ಅಧ್ಯಯನದ ವರದಿಯಲ್ಲಿ ಈ ಮಾಹಿತಿ ಇದೆ’ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿತ್ತು. ಈ ವರದಿಯನ್ನು ಆಧರಿಸಿ ದೇಶದ ಬಹುತೇಕ ಎಲ್ಲಾ ಮಾಧ್ಯಮಗಳು ಸುದ್ದಿಯನ್ನು ಪ್ರಕಟಿಸಿದ್ದವು.

ಆದರೆ, ತನಗೂ ಈ ಅಧ್ಯಯನಕ್ಕೂ ಸಂಬಂಧವೇ ಇಲ್ಲ ಎಂದು ಐಸಿಎಂಆರ್ ಸೋಮವಾರ ಬೆಳಿಗ್ಗೆ ಹೇಳಿದೆ. ‘ಈ ಅಧ್ಯಯನ ಐಸಿಎಂಆರ್‌ಗೆ ಸಂಬಂಧಿಸಿದ್ದು ಎಂಬ ಸುದ್ದಿ ದಾರಿತಪ್ಪಿಸುವಂತಿದೆ. ಐಸಿಎಂಆರ್ ನಡೆಸದೇ ಇರುವ ಮತ್ತು ತಜ್ಞರು ಪರಿಶೀಲನೆ ನಡೆಸದ ವರದಿಯನ್ನು ಈ ಸುದ್ದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಐಸಿಎಂಆರ್‌ನ ಅಧಿಕೃತ ನಿಲುವನ್ನು ಇದು ಪ್ರತಿಬಿಂಬಿಸುವುದಿಲ್ಲ’ ಎಂದು ಐಸಿಎಂಆರ್ ಟ್ವೀಟ್ ಮಾಡಿದೆ.

ಐಸಿಎಂಆರ್‌ ರಚಿಸಿರುವ ‘ಆಪರೇಷನ್ಸ್ ರಿಸರ್ಚ್ ಗ್ರೂಪ್‌’ ಈ ಅಧ್ಯಯನವನ್ನು ನಡೆಸಿದೆ ಎಂದು ಪಿಟಿಐ ಹೇಳಿತ್ತು. ಈ ತಂಡವನ್ನು ಏಪ್ರಿಲ್ 7ರಂದು ಐಸಿಎಂಆರ್ ರಚಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಏಪ್ರಿಲ್ 7ರಂದು ಪಿಟಿಐ ಸುದ್ದಿ ನೀಡಿತ್ತು. ಆ ಸುದ್ದಿ ಹಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಐಸಿಎಂಆರ್‌ನ ಬುಲೆಟಿನ್‌ನಲ್ಲಿಯೂ ಈ ಮಾಹಿತಿ ಪ್ರಕಟವಾಗಿತ್ತು. ಆದರೆ, ಈಗ ಐಸಿಎಂಆರ್ ಜಾಲತಾಣದಿಂದ ಈ ಸುದ್ದಿ ಬುಲೆಟಿನ್ ಅನ್ನು ತೆಗೆದುಹಾಕಲಾಗಿದೆ.

‘ಆಪರೇಷನ್ಸ್ ರಿಸರ್ಚ್ ಗ್ರೂಪ್’, ಐಸಿಎಂಆರ್‌ನ ‘ರಾಷ್ಟ್ರೀಯ ಕೋವಿಡ್–19 ಕಾರ್ಯಪಡೆ’ಯ ಅಧೀನ ತಂಡವಾಗಿದೆ. ಈ ತಂಡವು, ‘ಮಾಡೆಲ್ ಬೇಸಿಸ್ ಅನಾಲಿಸಿಸ್ ಫಾರ್ ಕೋವಿಡ್–19 ಪ್ಯಾಂಡೆಮಿಕ್ ಇನ್ ಇಂಡಿಯಾ’ ಹೆಸರಿನಲ್ಲಿ ಅಧ್ಯಯನ ನಡೆಸಿತ್ತು. ಈ ಅಧ್ಯಯನದ ಸಂಪೂರ್ಣ ಖರ್ಚುವೆಚ್ಚವನ್ನು ಐಸಿಎಂಆರ್ ಭರಿಸಿದೆ. ಈ ಅಧ್ಯಯನದ ವರದಿ ‘ಮೆಡ್‌ ಆರ್‌ಎಕ್ಸಿವ್’ ನಿಯತಕಾಲಿಕದಲ್ಲಿ ಜೂನ್ 11ರಂದು ಪ್ರಕಟವಾಗಿದೆ. ಐಸಿಎಂಆರ್ ಅನುದಾನ ನೀಡಿರುವ ಮತ್ತು ಐಸಿಎಂಆರ್ ರಚಿಸಿರುವ ತಂಡವೇ ಈ ಅಧ್ಯಯನವನ್ನು ನಡೆಸಿದೆ. ಈ ವರದಿಯನ್ನು ಉನ್ನತ ತಜ್ಞರು ಪರಿಶೀಲನೆ ನಡೆಸಬೇಕೂ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

‘ಈ ಅಧ್ಯಯನವನ್ನು ಐಸಿಎಂಆರ್ ನಡೆಸಿಲ್ಲ’ ಎಂದು ಐಸಿಎಂಆರ್ ಟ್ವೀಟ್ ಮಾಡಿದೆ. ಆದರೆ, ಐಸಿಎಂಆರ್ ನಿಯೋಜನೆ ಮಾಡಿದ ಅಧಿಕಾರಿಗಳೇ ಈ ಅಧ್ಯಯನ ನಡೆಸಿದ್ದಾರೆ. ಭಾರತದ ಸಾಮಾಜಿಕ ಆರೋಗ್ಯ ತಜ್ಞ ಡಾ.ನರೇಂದ್ರ ಕುಮಾರ್ ಅರೋರಾ ಅವರನ್ನು ‘ಆಪರೇಷನ್ಸ್ ರಿಸರ್ಚ್ ಗ್ರೂಪ್‌’ನ ಮುಖ್ಯಸ್ಥರಾಗಿ ಐಸಿಎಂಆರ್ ನಿಯೋಜನೆ ಮಾಡಿತ್ತು. ಇವರ ಅಧೀನದಲ್ಲಿ ಹಲವು ವೈದ್ಯಕೀಯ ಅಧಿಕಾರಿಗಳನ್ನು ನಿಯೋಜನೆ ಮಾಡಿತ್ತು. ಐಸಿಎಂಆರ್ ನಿಯೋಜನೆ ಮಾಡಿದ ಅರೋರಾ ಮತ್ತು ಇತರ ಅಧಿಕಾರಿಗಳೇ ಈ ಆಧ್ಯಯನ ವರದಿಯ ಪ್ರಧಾನ ಲೇಖಕರಾಗಿದ್ದಾರೆ.

ಐಸಿಎಂಆರ್‌ನ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ಷೇಪ ವ್ಯಕ್ತವಾಗಿದೆ. ಐಸಿಎಂಆರ್‌ನ ನಡೆಯನ್ನು ಟೀಕಿಸಿ 1,700ಕ್ಕೂ ಹೆಚ್ಚು ಜನರು ಟ್ವೀಟ್ ಮಾಡಿದ್ದಾರೆ. ಐಸಿಎಂಆರ್ ಅನ್ನು ಬೆಂಬಲಿಸಿ ಮೂವರು ಟ್ವೀಟ್ ಮಾಡಿದ್ದಾರೆ. ‘ತಜ್ಞರು ಪರಿಶೀಲನೆ ನಡೆಸದ ಲಾಕ್‌ಡೌನ್ ಯಶಸ್ಸಿನ ವರದಿಯನ್ನು ಮೇ 16ರಂದು ಐಸಿಎಂಆರ್ ಪ್ರಕಟಿಸಿತ್ತು. ಈಗ ಈ ವರದಿಯನ್ನು ನಿರಾಕರಿಸುತ್ತಿರುವುದು ಏಕೆ’ ಎಂದು ವಿದ್ಯಾ ಎಂಬುವವರು ಪ್ರಶ್ನಿಸಿದ್ದಾರೆ.

ಐಸಿಎಂಆರ್‌ ಟ್ವೀಟ್‌ಗೆ ಬಂದಿರುವ ಕೆಲವು ಪ್ರತಿಕ್ರಿಯೆಗಳು 

ಐಸಿಎಂಆರ್, ಮೊದಲು ನೀವು ಈ ವಿಚಾರಗಳನ್ನು ಸ್ಪಷ್ಟಪಡಿಸಬೇಕಿದೆ

1. ಆಪರೇಷನ್ಸ್ ರಿಸರ್ಚ್ ಗ್ರೂಪ್‌ ಅನ್ನು ಐಸಿಎಂಆರ್ ರಚಿಸಿಲ್ಲವೇ?

2. ಇಂತಹ ಅಧ್ಯಯನ ನಡೆಸಲು ಆಪರೇಷನ್ಸ್ ರಿಸರ್ಚ್ ಗ್ರೂಪ್‌ಗೆ ಅನುಮತಿ ಇರಲಿಲ್ಲವೇ?

3. ಮೇಲಿನ ಎರಡೂ ಸಂದೇಹಗಳನ್ನು ಪರಿಹರಿಸದೆ, ಸುದ್ದಿ ಹಾದಿತಪ್ಪಿಸುತ್ತಿದೆ ಎಂದು ಹೇಗೆ ಹೇಳುತ್ತೀರಿ?

4. ಹಾಗಿದ್ದಲ್ಲಿ, ಅಧಿಕೃತ ವರದಿ ಎಲ್ಲಿದೆ?

–@gururaj_agni

 

ತಜ್ಞರು ಪರಿಶೀಲನೆ ನಡೆಸಿಲ್ಲವೇ? ‘ಆಪರೇಷನ್ಸ್ ರಿಸರ್ಚ್ ಗ್ರೂಪ್‌’ನಲ್ಲಿ ತಜ್ಞರು ಇಲ್ಲವೇ? ನೀವೇ ರಚಿಸಿದ ತಂಡದ ವರದಿಯು ನಿಮ್ಮದೇ ಮುಖವಾಣಿ ಏಕಾಗುವುದಿಲ್ಲ –@dinshatweets

ನಿಮ್ಮ ಅಧಿಕೃತ ನಿಲುವು ಯಾವಾಗ ಪ್ರತಿಬಿಂಬಿತವಾಗುತ್ತದೆ? ಗೊತ್ತಿಲ್ಲದಂತೆಯೇ ಲಕ್ಷಾಂತರ ಜನರು ಸತ್ತಮೇಲೆ ಪ್ರತಿಬಿಂಬಿತವಾಗುತ್ತದೆಯೇ? ಅಥವಾ ತಕ್ಷಣದ ವೈಜ್ಞಾನಿಕ ಅಗತ್ಯಗಳನ್ನು ಚುನಾವಣಾ ಉದ್ದೇಶದ ಕಾರ್ಯಸೂಚಿಗಳು ಹತ್ತಿಕ್ಕಿದ ನಂತರ ಪ್ರತಿಬಿಂಬಿತವಾಗುತ್ತದೆಯೇ? – @Binn_nit_rr

 

ಮೇ 16ರಂದು ಕೊರೊನಾ ಹಾವಳಿ ಮುಗಿಯುತ್ತದೆ ಎಂಬುದು ನಮಗೆಲ್ಲರಿಗೂ ಗೊತ್ತಿದೆ. ಆದರೆ ಯಾವ ವರ್ಷದ ಮೇ 16 ಎಂಬುದನ್ನು ದಯವಿಟ್ಟು ಹೇಳುವಿರಾ –@madtrijay

 

ನಿಮ್ಮ ಒಪ್ಪಿಗೆ ಇಲ್ಲದೆ ಇದನ್ನು ಪ್ರಕಟಿಸಲಾಗಿದೆಯೇ? ಹಾಗಿದ್ದಲ್ಲಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಿ. ಜನರಲ್ಲಿ ಗಾಬರಿ ಮತ್ತು ಭಯ ಹುಟ್ಟಿಸುತ್ತಿದ್ದಾರೆ ಎಂದು ಸುದ್ದಿ ಪ್ರಕಟಿಸಿದವರ ವಿರುದ್ಧ ಎಫ್‌ಐಆರ್ ದಾಖಲಿಸಿ. ಮೊದಲು ಆ ಕೆಲಸ ಮಾಡಿ –@gbansal10

 

5.2 ಕೋಟಿ ಜನರಿಗೆ ಕೋವಿಡ್

ಈಗ ಸೋಂಕು ಹರಡುತ್ತಿರುವ ವೇಗವನ್ನು ಪರಿಶೀಲನೆ ನಡೆಸಿದರೆ ನವೆಂಬರ್ ಮಧ್ಯದ ವೇಳೆಗೆ ದೇಶದಲ್ಲಿ 5.2 ಕೋಟಿ ಜನರಿಗೆ ಸೋಂಕು ತಗುಲಲಿದೆ ಎಂದು ಅಧ್ಯಯನ ವರದಿಯಲ್ಲಿ ಅಂದಾಜಿಸಲಾಗಿದೆ.

ಲಾಕ್‌ಡೌನ್ ಜಾರಿಗೆ ತರದೇ ಇದ್ದಿದ್ದರೆ ಮತ್ತು ಯಾವುದೇ ವೈದ್ಯಕೀಯ ಕ್ರಮ ತೆಗೆದುಕೊಳ್ಳದೇ ಇದ್ದಿದ್ದರೆ ಜುಲೈ ಅಂತ್ಯದವೇಳೆಗೆ ದೇಶದಲ್ಲಿ 17 ಕೋಟಿಗೂ ಹೆಚ್ಚು ಜನರಿಗೆ ಸೋಂಕು ತಗಲುತ್ತಿತ್ತು. ಕೇಂದ್ರ ಸರ್ಕಾರ ವಿಧಿಸಿದ ಲಾಕ್‌ಡೌನ್ ಶೇ 60ರಷ್ಟು ಪರಿಣಾಮಕಾರಿಯಾಗಿದೆ. ಹೀಗಾಗಿ ಸೋಂಕಿಗೆ ತುತ್ತಾಗುವವರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಅಲ್ಲದೆ, ಸೋಂಕಿತರ ಸಂಖ್ಯೆ ಗರಿಷ್ಠಮಟ್ಟ ಮುಟ್ಟುವ ಅವಧಿ ಮುಂದಕ್ಕೆ ಹೋಗಿದೆ ಎಂದು ಅಧ್ಯಯನ ವರದಿಯಲ್ಲಿ ವಿವರಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು