ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೋಂಕು ಪರೀಕ್ಷೆ: ₹4,500ರ ಮಿತಿ ತೆಗೆದುಹಾಕಿದ ಐಸಿಎಂಆರ್

ಖಾಸಗಿ ಪ್ರಯೋಗಾಲಯಗಳ ಜತೆ ಮಾತುಕತೆ ನಡೆಸಿ ದರ ನಿಗದಿಗೆ ರಾಜ್ಯ ಸರ್ಕಾರಗಳಿಗೆ ಸಲಹೆ
ಅಕ್ಷರ ಗಾತ್ರ

ನವದೆಹಲಿ: ಖಾಸಗಿ ಪ್ರಯೋಗಾಲಯಗಳಲ್ಲಿ ಕೊರೊನಾ ವೈರಸ್ ಸೋಂಕು ಪರೀಕ್ಷೆ ನಡೆಸಲು ನಿಗದಿಪಡಿಸಿದ್ದ ₹4,500ರ ಮಿತಿಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತೆಗದುಹಾಕಿದೆ.

ಆದರೆ, ಕಡಿಮೆ ದರ ನಿಗದಿಪಡಿಸುವ ಬದಲು ಆ ಕುರಿತು ಖಾಸಗಿ ಪ್ರಯೋಗಾಲಯಗಳ ಜತೆ ಮಾತುಕತೆ ನಡೆಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

‘ಪರೀಕ್ಷ ಸಾಮರ್ಥ್ಯ ಸ್ಥಿರವಾಗುತ್ತಿದೆ. ದೇಶೀಯವಾಗಿ ನಿರ್ಮಿತಗೊಂಡಿರುವುದೂ ಸೇರಿದಂತೆ ವಿವಿಧ ಪರೀಕ್ಷಾ ಸಲಕರಣೆಗಳು ಮತ್ತು ಕಿಟ್‌ಗಳ ದೊರೆಯುವಿಕೆಯಿಂದಾಗಿ ದರ ಸ್ಪರ್ಧಾತ್ಮಕ ಹಾಗೂ ಕಡಿಮೆಯಾಗುತ್ತಿದೆ. ಈ ಬೆಳವಣಿಗೆಗಳನ್ನು ಹಾಗೂ ಪರೀಕ್ಷಾ ಕಿಟ್‌ಗಳ ಬೆಲೆ ಗಮನದಲ್ಲಿಟ್ಟುಕೊಂಡು ಈ ಹಿಂದೆ ನಿಗದಿಪಡಿಸಲಾಗಿದ್ದ ಗರಿಷ್ಠ ₹4,500 ಅನ್ನು ತೆರವುಗೊಳಿಸಲಾಗಿದೆ’ ಎಂದು ಐಸಿಎಂಆರ್ ಪ್ರಧಾನ ನಿರ್ದೇಶಕ ಬಲರಾಮ ಭಾರ್ಗವ ಅವರು ರಾಜ್ಯ ಸರ್ಕಾರಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

‘ರಾಜ್ಯ ಸರ್ಕಾರಗಳ ಮೂಲಕ ಕಳುಹಿಸಲಾಗುವ ಮಾದರಿಗಳ ಮತ್ತು ವೈಯಯಕ್ತಿಕವಾಗಿ ಕಳುಹಿಸಲಾಗುವ ಮಾದರಿಗಳ ಪರೀಕ್ಷೆಗೆ ಒಮ್ಮತದ ದರ ನಿಗದಿಪಡಿಸಲು ಎಲ್ಲ ರಾಜ್ಯ ಸರ್ಕಾರಗಳು ಖಾಸಗಿ ಪ್ರಯೋಗಾಲಯಗಳ ಜತೆ ಮಾತುಕತೆ ನಡೆಸುವಂತೆ ಸಲಹೆ ನೀಡಲಾಗಿದೆ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಖಾಸಗಿ ಪ್ರಯೋಗಾಲಯಗಳಲ್ಲಿ ಕೊರೊನಾ ವೈರಸ್ ಸೋಂಕು ಪರೀಕ್ಷೆ ನಡೆಸಲು ಮಾರ್ಚ್‌ನಲ್ಲಿ ಐಸಿಎಂಆರ್ ಗರಿಷ್ಠ ₹4,500 ನಿಗದಿಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT