ಭಾನುವಾರ, ಅಕ್ಟೋಬರ್ 20, 2019
27 °C
ಪಾಕ್‌ ವಿರುದ್ಧ ಮತ್ತೆ ವಾಗ್ದಾಳಿ

ಸಹಕಾರಕ್ಕೆ ‘ಒಂದು ರಾಷ್ಟ್ರ’ ಮಾತ್ರ ಅಡ್ಡಿ: ಜೈಶಂಕರ್

Published:
Updated:

ನವದೆಹಲಿ: ‘ಪ್ರಾದೇಶಿಕ ಸಹಕಾರ ವಿಚಾರದಲ್ಲಿ ಒಂದನ್ನು ಬಿಟ್ಟು ಎಲ್ಲಾ ನೆರೆ ರಾಷ್ಟ್ರಗಳ ಜೊತೆ ಭಾರತ ಉತ್ತಮ ಬಾಂಧವ್ಯ ಹೊಂದಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಪಾಕಿಸ್ತಾನದ ಹೆಸರು ಉಲ್ಲೇಖಿಸದೇ ಶುಕ್ರವಾರ ಹೇಳಿದರು.

ವಿಶ್ವ ಆರ್ಥಿಕ ವೇದಿಕೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಅವರು, ‘ಪರಸ್ಪರ ವ್ಯಾಪಾರ ಸಹಕಾರದಿಂದ ಇತರ ರಾಷ್ಟ್ರಗಳು ಅಭಿವೃದ್ಧಿ ಹೊಂದುವುದನ್ನು ಕಂಡು ‘ಆ ರಾಷ್ಟ್ರವೂ’ ವ್ಯಾಪಾರ ಸಹಕಾರದಲ್ಲಿ ಕೈಜೋಡಿಸಬಹುದು ಎಂದು ಭಾವಿಸುತ್ತೇನೆ’ ಎಂದರು.

ಜಗತ್ತಿನಾದ್ಯಂತ ರಾಷ್ಟ್ರವಾದವು ಬಲಗೊಳ್ಳುತ್ತಿರುವ ಬಗ್ಗೆ ಮಾತನಾಡುತ್ತಾ, ‘ಅದರಲ್ಲಿ ಋಣಾತ್ಮಕವಾದ ಅಂಶವಿದೆ ಎಂದು ನನಗೆ ಅನಿಸುವುದಿಲ್ಲ. ರಾಷ್ಟ್ರವಾದಿಯಾಗುವುದು ಮತ್ತು ಜಗತ್ತಿನ ಇತರ ರಾಷ್ಟ್ರಗಳೊಂದಿಗೆ ಹೆಚ್ಚುಹೆಚ್ಚು ವ್ಯವಹಾರ ನಡೆಸುವುದರಲ್ಲಿ ಎಲ್ಲೂ ಸಂಘರ್ಷ ಕಾಣಿಸುತ್ತಿಲ್ಲ. ನೀವು ಮೇಲ್ಮುಖವಾಗಿ ಚಲಿಸುತ್ತಿರುವಾಗ ಜಗತ್ತಿನೊಂದಿಗೆ ಹೆಚ್ಚುಹೆಚ್ಚು ಬೆಸೆದುಕೊಂಡಿರಬೇಕು’ ಎಂದರು.

‘ಚೀನಾದ ‘ಒಂದು ವಲಯ, ಒಂದು ರಸ್ತೆ’ ಯೋಜನೆಯು ಕೆಲವು ರಾಷ್ಟ್ರಗಳನ್ನು ಸಾಲದ ಸುಳಿಯಲ್ಲಿ ಸಿಲುಕಿಸಿದೆ. ಈ ಯೋಜನೆ ದೇಶವೊಂದರ ಸಾರ್ವಭೌಮತೆಯನ್ನಾಗಲಿ, ಪರಸರವನ್ನು ಕುರಿತ ವಿಚಾರಗಳನ್ನಾಗಲಿ ಗೌರವಿಸುವುದಿಲ್ಲ. ಆದರೆ ಭಾರತವು ತನ್ನ ಮಿತ್ರರಾಷ್ಟ್ರಗಳ ಅಗತ್ಯವನ್ನು ಅರ್ಥಮಾಡಿಕೊಳ್ಳಲು ಆದ್ಯತೆ ನೀಡುತ್ತದೆಯೇ ವಿನಾ ತನ್ನ ಚಿಂತನೆಗಳನ್ನು ಅವುಗಳ ಮೇಲೆ ಹೇರಲು ಹೋಗುವುದಿಲ್ಲ’ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿದರು.

‘ಇಮ್ರಾನ್‌ಗೆ ಜ್ಞಾನದ ಕೊರತೆ’

ಭಾರತದ ವಿರುದ್ಧ ‘ಜಿಹಾದ್‌’ (ಧರ್ಮಯುದ್ಧ) ಸಾರುವಂತೆ ಕರೆಕೊಟ್ಟ ಇಮ್ರಾನ್‌ ಅವರ ಹೇಳಿಕೆಯನ್ನು ಖಂಡಿಸಿದ ಭಾರತವು ‘ಅಂತರರಾಷ್ಟ್ರೀಯ ಸಂಬಂಧಗಳನ್ನು ಹೇಗೆ ನಿರ್ವಹಿಸಬೇಕು ಎಂಬ ಜ್ಞಾನ ಅವರಲ್ಲಿ ಇಲ್ಲ’ ಎಂದಿದೆ.

ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಭಾರತದ ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್‌ ಕುಮಾರ್‌, ‘ಪಾಕಿಸ್ತಾನದಿಂದ ಇಂಥ ಹೇಳಿಕೆ ಬಂದಿರುವುದು ಇದೇ ಮೊದಲಲ್ಲ. ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲೂ ಇಮ್ರಾನ್‌ ಇಂಥ ಪ್ರಚೋದನಕಾರಿ ಮತ್ತು ಬೇಜವಾಬ್ದಾರಿಯ ಮಾತುಗಳನ್ನಾಡಿವುದನ್ನು ನೀವು ಕೇಳಿದ್ದೀರಿ. ನಾವು ಇದನ್ನು ಖಂಡಿಸುತ್ತೇವೆ’ ಎಂದರು.

ಸಂಚಲನ ಸೃಷ್ಟಿಸಿದ ವಿಡಿಯೊ

ಬಾಲಾಕೋಟ್‌ ದಾಳಿಯ ಬಗ್ಗೆ ಪ್ರಾತಿನಿಧಿಕ ವಿಡಿಯೊ ಒಂದು ಶುಕ್ರವಾರ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದೆ. ವಾಯುಪಡೆಯ ಮುಖ್ಯಸ್ಥರೇ ಬಂದು ಸ್ಪಷ್ಟನೆ ನೀಡಿದ್ದರೂ ವಿಡಿಯೊ ದೇಶದಾದ್ಯಂತ ಸಂಚಲನ ಮೂಡಿಸಿದೆ.

ವಿಡಿಯೊ ಬಗ್ಗೆ ಸ್ಪಷ್ಟನೆ ನೀಡಿದ ಏರ್‌ ಚೀಫ್‌ ಮಾರ್ಷಲ್‌ ಆರ್.ಕೆ.ಎಸ್‌. ಭದೌರಿಯಾ, ‘ಅದು ಬಾಲಾಕೋಟ್‌ ದಾಳಿಯ ವಾಸ್ತವ ವಿಡಿಯೊ ಅಲ್ಲ. ಕಳೆದ ಒಂದು ವರ್ಷದಲ್ಲಿ ವಾಯುಪಡೆಯ ಸಾಧನೆಯ ಬಗ್ಗೆ ನಿರ್ಮಾಣವಾಗಿರುವ ಸಾಕ್ಷ್ಯಚಿತ್ರದಲ್ಲಿ ಬಂದಿರುವ ಒಂದು ತುಣುಕು ಮಾತ್ರ’ ಎಂದು ತಿಳಿಸಿದರು. ಆದರೂ ಅನೇಕ ಸುದ್ದಿ ವಾಹಿನಿಗಳು ಆ ವಿಡಿಯೊ ತುಣುಕನ್ನು ಪ್ರದರ್ಶಿಸಿ, ಬಾಲಾಕೋಟ್‌ ದಾಳಿಯ ವಿಡಿಯೊ ಎಂದು ಪ್ರಸಾರ ಮಾಡಿವೆ.

Post Comments (+)