ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಖಂಡಿತವಾಗಿ ತನ್ನ ಬೆಳವಣಿಗೆಯನ್ನು ಮರಳಿ ಪಡೆಯಲಿದೆ: ಪ್ರಧಾನಿ ನರೇಂದ್ರ ಮೋದಿ

Last Updated 2 ಜೂನ್ 2020, 7:58 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ಸ್ವಾವಲಂಬನೆಯು ಭಾರತದ ಆದ್ಯತೆಯಾಗಿರುತ್ತದೆ ಮತ್ತು ದೇಶದ ಆರ್ಥಿಕ ಬೆಳವಣಿಗೆಯನ್ನು ಸ್ಥಿರಗೊಳಿಸುವ ಉದ್ದೇಶದಿಂದ ಭಾರತವು ಇದೀಗ ಕೊರೊನಾ ವೈರಸ್ ಲಾಕ್‌ಡೌನ್ ಅನ್ನು ಹಿಂದಿಕ್ಕಿ 'ಹಂತ 1 ಅನ್‌ಲಾಕ್‌'ಗೆ ಪ್ರವೇಶಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.

ಭಾರತೀಯ ಕೈಗಾರಿಕಾ ಒಕ್ಕೂಟದ 125ನೇ ವಾರ್ಷಿಕ ಅಧಿವೇಶನವನ್ನು (ಸಿಐಐ) ಉದ್ದೇಶಿಸಿ ಮಾತನಾಡಿದ ಅವರು, ಖಂಡಿತವಾಗಿಯೂ ಭಾರತ ತನ್ನ ಬೆಳವಣಿಗೆಯನ್ನು ಮರಳಿ ಪಡೆಯಲಿದೆ. ಭಾರತದ ಸಾಮರ್ಥ್ಯ ಮತ್ತು ಬಿಕ್ಕಟ್ಟು ನಿರ್ವಹಣೆ ಕುರಿತು ನನಗೆ ನಂಬಿಕೆಯಿದೆ. ಅಲ್ಲದೆ ಭಾರತದ ಪ್ರತಿಭೆ, ತಂತ್ರಜ್ಞಾನ, ನಾವೀನ್ಯತೆ ಮತ್ತು ಬುದ್ಧಿಶಕ್ತಿಯನ್ನು ನಾನು ನಂಬುತ್ತೇನೆ. ರೈತರು, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು, ಉದ್ಯಮಿಗಳು ಮತ್ತು ಉದ್ಯಮದ ನಾಯಕರ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ. ಅದಕ್ಕಾಗಿಯೇ ನಾನು ಹೇಳುತ್ತಿದ್ದೇನೆ, ನಮ್ಮ ಬೆಳವಣಿಗೆಯನ್ನು ನಾವು ಮರಳಿ ಪಡೆಯುತ್ತೇವೆ ಎಂದರು.

ವಿಡಿಯೊ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊರೊನಾ ವೈರಸ್ ಸಮಯದಲ್ಲಿ ಆನ್‌ಲೈನ್ ಹೊಸ ಕಾರ್ಯಕ್ರಮಗಳು ಸಾಮಾನ್ಯವಾಗುತ್ತಿವೆ. ಕಠಿಣ ಪರಿಸ್ಥಿತಿಯಿಂದ ಹೊರಬರಲು ಹೊಸ ಮಾರ್ಗವನ್ನು ಕಂಡುಕೊಳ್ಳುವ ಮನುಷ್ಯನ ಅತಿದೊಡ್ಡ ಶಕ್ತಿಯಿದು. ಒಂದು ಕಡೆ ನಾವು ಕೊರೊನಾ ವೈರಸ್ ಅನ್ನು ಎದುರಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಮತ್ತೊಂದೆಡೆ ಆರ್ಥಿಕತೆ ಬಗ್ಗೆಯೂ ನಾವು ಗಮನ ಹರಿಸಬೇಕಾಗಿದೆ. ನಾವು ನಾಗರಿಕರ ಪ್ರಾಣವನ್ನು ಉಳಿಸುವುದರ ಜೊತೆಗೆ ಆರ್ಥಿಕತೆಯನ್ನು ಸ್ಥಿರ ಮತ್ತು ವೇಗಗೊಳಿಸುವುದನ್ನು ಕೂಡ ಮಾಡಬೇಕಾಗಿದೆ ಎಂದು ಹೇಳಿದರು.

ನಾವು ದೇಶದ ಹಾದಿಯನ್ನು ಬದಲಿಸುವ ರಚನಾತ್ಮಕ ಸುಧಾರಣೆಗಳನ್ನು ತೆಗೆದುಕೊಳ್ಳುತ್ತೇವೆ. ಒಟ್ಟಾಗಿ ನಾವು ಸ್ವಾವಲಂಬಿ ಭಾರತವನ್ನು ನಿರ್ಮಿಸುತ್ತೇವೆ. ಭಾರತವನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಐದು ನಾನು ಅವಶ್ಯಕ: ಉದ್ದೇಶ, ಸೇರ್ಪಡೆ, ಹೂಡಿಕೆ, ಮೂಲಸೌಕರ್ಯ ಮತ್ತು ನಾವೀನ್ಯತೆ ಎಂದು ಪ್ರಧಾನಿ ಹೇಳಿದ್ದಾರೆ.

ಜಗತ್ತು ವಿಶ್ವಾಸಾರ್ಹತೆಯನ್ನು, ವಿಶ್ವಾಸಾರ್ಹ ಪಾಲುದಾರನನ್ನು ಹುಡುಕುತ್ತಿದೆ. ಭಾರತಕ್ಕೆ ಆ ಸಾಮರ್ಥ್ಯ ಮತ್ತು ಶಕ್ತಿಯಿದೆ. ಹೀಗಾಗಿ ಭಾರತೀಯ ಕೈಗಾರಿಕೆಗಳು ಈ ಭಾವನೆ ಮತ್ತು ವಿಶ್ವಾಸದ ಲಾಭವನ್ನು ಪಡೆದುಕೊಳ್ಳಬೇಕು. "ಗುಣಮಟ್ಟ ಮತ್ತು ಸ್ಪರ್ಧಾತ್ಮಕತೆ 'ಮೇಕ್ ಇನ್ ಇಂಡಿಯಾ'ದ ಒಂದು ಭಾಗವಾಗಿರಬೇಕು. ನೀವು ತೆಗೆದುಕೊಳ್ಳುವ ಪ್ರತಿಯೊಂದು ಹೆಜ್ಜೆಯ ಜೊತೆಗೂ ಸರ್ಕಾರ ನಾಲ್ಕು ಹೆಜ್ಜೆಯನ್ನಿಡುತ್ತದೆ. ಭಾರತದ ಕೈಗಾರಿಕೆಗಳು ಸ್ವಾವಲಂಬಿ ಭಾರತದ ಸ್ಪಷ್ಟ ಉದ್ದೇಶವನ್ನು ಹೊಂದಿವೆ. ನಾವು ಹೆಚ್ಚು ಬಲಿಷ್ಠವಾಗುತ್ತೇವೆ ಮತ್ತು ಜಗತನ್ನು ಸೆಳೆಯುತ್ತೇವೆ. ಸ್ವಾವಲಂಭಿ ಭಾರತವು ವಿಶ್ವದ ಆರ್ಥಿಕತೆಯನ್ನು ಸಂಯೋಜಿಸುತ್ತದೆ ಮತ್ತು ಬೆಂಬಲಿಸುತ್ತದೆ ಎಂದು ಹೇಳಿದರು.

ಸ್ವಾವಲಂಬಿ ಭಾರತವೆಂದರೆ ದೇಶವು ಹೊರಗಿನ ಕಾರ್ಯತಂತ್ರದ ಕ್ಷೇತ್ರಗಳಲ್ಲಿ ಅವಲಂಬಿತವಾಗಿದೆ ಎಂದರ್ಥವಲ್ಲ. ಬದಲಿಗೆ ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಆಹಾರ ಸಂಸ್ಕರಣೆ, ಪಾದರಕ್ಷೆಗಳು ಅಥವಾ ಔಷಧ ಮುಂತಾದ ಕ್ಷೇತ್ರಗಳೂ ಆಗಿವೆ. ಭಾರತದ ಬೆಳವಣಿಗೆಯ ಪ್ರಗತಿಯಲ್ಲಿ ಖಾಸಗಿ ವಲಯವನ್ನು ಸರ್ಕಾರವು ಪಾಲುದಾರರನ್ನಾಗಿ ಮಾಡಬೇಕು ಎಂದೂ ಅವರು ಹೇಳಿದರು.
ದೇಶದಾದ್ಯಂತ ಹೇರಲಾಗಿದ್ದ ಲಾಕ್‌ಡೌನ್ ತೆರವು ನಂತರ ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಆರ್ಥಿಕತೆ ಕುರಿತು ಮಾತನಾಡುತ್ತಿರುವ ಮೊದಲ ಭಾಷಣ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT