ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ರಸ್ತೆ ಕೆಲಸ ನಿಲ್ಲದು: ಚೀನಾಕ್ಕೆ ಭಾರತ ಸ್ಪಷ್ಟ ಸಂದೇಶ

ಪೂರ್ವ ಲಡಾಖ್‌ ಗಡಿಯಲ್ಲಿ ಪ್ರಕ್ಷುಬ್ಧ ಸ್ಥಿತಿ
Last Updated 2 ಜೂನ್ 2020, 1:55 IST
ಅಕ್ಷರ ಗಾತ್ರ

ನವದೆಹಲಿ: ಚೀನಾದ ಜತೆಗಿನ ಗಡಿಯ ಉದ್ದಕ್ಕೂ ಕೈಗೆತ್ತಿಕೊಂಡಿರುವ ರಸ್ತೆ ಮತ್ತು ಇತರ ಮೂಲಸೌಕರ್ಯ ನಿರ್ಮಾಣ ಯೋಜನೆಗಳಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂಬುದನ್ನು ಭಾರತ ದೃಢಪಡಿಸಿದೆ.ಗಡಿಯಲ್ಲಿ ಉಂಟಾಗಿರುವ ಸಮಸ್ಯೆಗೆ ರಾಜತಾಂತ್ರಿಕ ಪರಿಹಾರ ಕಂಡುಕೊಳ್ಳುವ ಪ‍್ರಯತ್ನ ಮುಂದುವರಿದಿದ್ದರೂ ಭಾರತದ ನಿಲುವಿನಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ವಾಸ್ತವ ನಿಯಂತ್ರಣ ರೇಖೆಯೇ (ಎಲ್‌ಎಸಿ) ಈಗ ಎರಡೂ ದೇಶಗಳ ನಡುವಣ ಗಡಿ. ಗಡಿಯ ಈಚೆಗಿನ ಭಾಗ ದಲ್ಲಿ ಮೂಲಸೌಕರ್ಯ ನಿರ್ಮಾಣಕ್ಕೆ ತಡೆ ಒಡ್ಡುವಂತಹ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕುವುದು ಸಾಧ್ಯವಿಲ್ಲ ಎಂಬುದನ್ನೂ ಚೀನಾಕ್ಕೆ ಸ್ಪಷ್ಟಪಡಿ
ಸಲಾಗಿದೆ.

ಎಲ್‌ಎಸಿಯ ಉದ್ದಕ್ಕೂ ಮೂಲ ಸೌಕರ್ಯ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಗೆ ವೇಗ ತುಂಬಲು ಭಾರತ ನಿರ್ಧರಿಸಿದೆ. ಅದಕ್ಕಾಗಿ, ವಿಶೇಷ ರೈಲುಗಳ ಮೂಲಕ 12 ಸಾವಿರ ಕಾರ್ಮಿಕರನ್ನು ಜಾರ್ಖಂಡ್‌ನಿಂದ ಗಡಿಗೆ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ.

ರಕ್ಷಣಾ ಸಚಿವಾಲಯ, ಗೃಹ ಸಚಿವಾಲಯ ಮತ್ತು ರೈಲ್ವೆ ಇಲಾಖೆಯ ಸಮನ್ವಯದಲ್ಲಿ ಈ ಕೆಲಸ ನಡೆಯುತ್ತಿದೆ. ಕಾರ್ಮಿಕರನ್ನು ಮೊದಲಿಗೆ ಜಾರ್ಖಂಡ್‌ ನಿಂದ ಚಂಡೀಗಡ ಮತ್ತು ಜಮ್ಮುವಿಗೆ ಕಳುಹಿಸಲಾಗುವುದು. ಅಲ್ಲಿಂದ ಅವರನ್ನು ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಕಾಶ್ಮೀರದ ಗಡಿ ಪ್ರದೇಶಗಳಿಗೆ ಕಳುಹಿಸಲಾಗುವುದು ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.‌

ಲಾಕ್‌ಡೌನ್‌ನಿಂದ ಗಡಿಯಲ್ಲಿ ಕಾಮ ಗಾರಿ ನಿಧಾನಗೊಂಡಿತ್ತು. ಈಗ ಅದಕ್ಕೆ ವೇಗ ತುಂಬುವ ಮೂಲಕ ಚೀನಾಕ್ಕೆ ಸ್ಪಷ್ಟ ಸಂದೇಶ ರವಾನಿಸುವುದು ಭಾರತದ ಉದ್ದೇಶ ಎನ್ನಲಾಗಿದೆ.

ಪ್ಯಾಂಗಾಂಗ್‌ ಸರೋವರದ ಉತ್ತರ ದಡದಲ್ಲಿ ಮೇ 5ರಂದು ಭಾರತ ಮತ್ತು ಚೀನಾ ಸೈನಿಕರ ನಡುವೆ ಮುಖಾಮುಖಿ ಉಂಟಾಗಿತ್ತು. ಎಲ್‌ಎಸಿಯ ಈಚೆ ಭಾಗದಲ್ಲಿಯೇ ಇದ್ದ ಭಾರತದ ಸೈನಿಕರ ಮೇಲೆ ದೊಣ್ಣೆ ಮತ್ತು ಕಲ್ಲುಗಳಿಂದ ಚೀನಾ ಸೈನಿಕರು ಹಲ್ಲೆ ನಡೆಸಿದ್ದರು. ಅದಲ್ಲದೆ, ಭಾರತದ ಸೈನಿಕರು ನಿರ್ಮಿಸಿದ್ದ ತಾತ್ಕಾಲಿಕ ಶಿಬಿರಗಳನ್ನೂ ಚೀನಾ ಸೈನಿಕರು ಮರುದಿನ ಧ್ವಂಸ ಮಾಡಿದ್ದರು. ಗಾಲ್ವನ್‌ ಕಣಿವೆಯಲ್ಲಿ ಚೀನಾದ ಸುಮಾರು 5 ಸಾವಿರ ಸೈನಿಕರು ಠಿಕಾಣಿ ಹೂಡಿದ್ದಾರೆ.ಗಡಿ ಪ್ರದೇಶದಲ್ಲಿ ಭಾರತದ ಯೋಧರು ಕೂಡ ಜಮಾಯಿಸಿದ್ದಾರೆ. ಹಾಗಾಗಿ, ಈ ಪ್ರದೇಶದಲ್ಲಿ ಪರಿಸ್ಥಿತಿ ಪ್ರಕ್ಷುಬ್ಧವಾಗಿದೆ.

ರಸ್ತೆಯೇ ಬಿಕ್ಕಟ್ಟಿಗೆ ಕಾರಣ
ಭಾರತ ಮತ್ತು ಚೀನಾ ನಡುವೆ ಪೂರ್ವ ಲಡಾಖ್‌ನಲ್ಲಿ ಪ್ರಕ್ಷುಬ್ಧ ಸ್ಥಿತಿ ಉಂಟಾಗಲು ಭಾರತದ ರಸ್ತೆ ಕಾಮಗಾರಿಯೇ ಕಾರಣ. ಗಡಿ ಪ‍್ರದೇಶದಲ್ಲಿ ಭಾರತವು ರಸ್ತೆ ನಿರ್ಮಿಸುತ್ತಿರುವುದಕ್ಕೆ ಚೀನಾದ ಆಕ್ಷೇಪ ಇದೆ. ವಿವಾದಿತ ಅಕ್ಷಾಯ್‌ ಚಿನ್‌ ಪ್ರದೇಶಕ್ಕೆ ವೇಗವಾಗಿ ಸೇನೆಯನ್ನು ರವಾನಿಸಲು ಸಾಧ್ಯವಾಗಬೇಕು ಎಂಬುದಕ್ಕಾಗಿ ಇಲ್ಲಿ ರಸ್ತೆ ನಿರ್ಮಿಸಲಾಗುತ್ತಿದೆ ಎಂಬುದು ಚೀನಾದ ಆರೋಪ.

ಅಕ್ಷಾಯ್‌ ಚಿನ್‌ ಪ್ರದೇಶವನ್ನು ಚೀನಾವು ಅಕ್ರಮವಾಗಿ ವಶದಲ್ಲಿ ಇರಿಸಿಕೊಂಡಿದೆ. ಭಾರತ–ಚೀನಾ ಗಡಿಯಲ್ಲಿ ಈಗ 61 ರಸ್ತೆಗಳ ಕಾಮಗಾರಿ ನಡೆಯುತ್ತಿದೆ. ಶೇ 25ರಷ್ಟು ಕಾಮಗಾರಿ ಮಾತ್ರ ಬಾಕಿ ಇದೆ. ಇದನ್ನು ತ್ವರಿತವಾಗಿ ಪೂರ್ಣಗೊಳಿಸಲು ಭಾರತ ಸರ್ಕಾರ ಬಯಸಿದೆ. ನಾಲ್ಕು ರಸ್ತೆಗಳ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT