ಶುಕ್ರವಾರ, ಜೂಲೈ 3, 2020
22 °C

ಲಾಕ್‌ಡೌನ್‌ ಕ್ರಮ ಯೋಜನಾರಹಿತ, ಆತುರದ ನಿರ್ಧಾರ: ಓವೈಸಿ

ಪಿಟಿಐ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ಕೇಂದ್ರ ಸರ್ಕಾರದ ಲಾಕ್‌ಡೌನ್‌ ಹೇರಿದ ಕ್ರಮವನ್ನು ಟೀಕಿಸಿರುವ ಎಐಎಂಐಎಂ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ, ‘ಇದೊಂದು ಯೋಜನಾರಹಿತ ಮತ್ತು ಆತುರದ ನಿರ್ಧಾರ’ ಎಂದು ಕರೆದಿದ್ದಾರೆ.

‘ಲಾಕ್‌ಡೌನ್‌ನನ್ನು ಮುಂದುವರೆಸಬೇಕೇ ಬೇಡವೇ ಎಂಬುದನ್ನು ಆಯಾ ರಾಜ್ಯ ಸರ್ಕಾರಗಳು ನಿರ್ಧರಿಸಬೇಕೆ ವಿನಾ ಕೇಂದ್ರ ಸರ್ಕಾರವಲ್ಲ’ ಎಂದು ಮಂಗಳವಾರ ಅವರು ಅಭಿಪ್ರಾಯಪಟ್ಟಿದ್ದಾರೆ. ‘ದೇಶದಲ್ಲಿ ವಲಸೆ ಕಾರ್ಮಿಕರು ಅನುಭವಿಸುತ್ತಿರುವ ಕಷ್ಟಗಳಿಗೆ ಕೇಂದ್ರ ಸರ್ಕಾರವೇ ನೇರ ಹೊಣೆ. ಕೊರೊನಾ ಸೋಂಕಿನ ಪ್ರಕರಣ ಕಡಿಮೆ ಇದ್ದ ಮಾರ್ಚ್‌ ಅಂತ್ಯಕ್ಕೆ ಕಾರ್ಮಿಕರನ್ನು ಅವರವರ ಮನೆಗಳಿಗೆ ಕಳುಹಿಸುವ ಜವಾಬ್ದಾರಿಯನ್ನು ಕೇಂದ್ರ ತೆಗೆದುಕೊಳ್ಳಬೇಕಿತ್ತು’ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

‘ನಾನು ಮೊದಲಿಂದನೂ ಲಾಕ್‌ಡೌನ್‌ ಕ್ರಮವನ್ನು ವಿಮರ್ಶಿಸುತ್ತಿದ್ದೇನೆ. ಲಾಕ್‌ಡೌನ್‌ ಹೇರಿಕೆಯು ಅಸಂವಿಧಾನಿಕವಾದುದು. ಸಂವಿಧಾನವು ರಾಜ್ಯ ‍ಪಟ್ಟಿಯಲ್ಲಿ, ರಾಜ್ಯಗಳ ಕಾನೂನು ಸುವ್ಯವಸ್ಥೆಯು ಆಯಾ ರಾಜ್ಯಗಳ ಹೊಣೆ ಎಂದು ಸ್ಪಷ್ಟವಾಗಿ ಹೇಳಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾಯ್ದೆಯ ಹೆಸರಿನಲ್ಲಿ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವುದು ಸರಿಯಲ್ಲ. ಈ ಮೂಲಕ ಸಂವಿಧಾನದ ಏಳನೇ ಷೆಡ್ಯೂಲ್‌ ಅನ್ನು ಮೋದಿ ಸರ್ಕಾರ ಉಲ್ಲಂಘಿಸಿದೆ. ಮೋದಿ ಸರ್ಕಾರದ ಈ ಕ್ರಮವನ್ನು ಎಲ್ಲ ಮುಖ್ಯಮಂತ್ರಿಗಳು ಒಪ್ಪಿರುವುದು ದುರದೃಷ್ಟಕರ’ ಎಂದು ಅವರು ಹೇಳಿದ್ದಾರೆ.

‘ದೆಹಲಿಯಲ್ಲಿ ಕುಳಿತ ಅಧಿಕಾರಿಗಳಿಗೆ ಎಲ್ಲ ರಾಜ್ಯಗಳ ಒಳ್ಳೆಯದು ಮತ್ತು ಕೆಟ್ಟದ್ದು ತಿಳಿಯುವುದಿಲ್ಲ. ದೆಹಲಿಯ ದಕ್ಷಿಣ ಅಥವಾ ಉತ್ತರ ಬ್ಲಾಕ್‌ನಲ್ಲಿ ಕೂತ ಅಧಿಕಾರಿಗೆ ಹೈದರಾಬಾದ್‌ನಲ್ಲಿ ಏನಾಗುತ್ತಿದೆ ಎಂದು ಹೇಗೆ ತಿಳಿಯುತ್ತದೆ. ಯಾವಾಗ ಲಾಕ್‌ಡೌನ್‌ ಹೇರಬೇಕು ಮತ್ತು ಯಾವಾಗ ಅದನ್ನು ತೆಗೆಯಬೇಕು. ಲಾಕ್‌ಡೌನ್‌ನಲ್ಲಿ ಯಾವ ಸೇವೆಗಳು ಇರುವುದಿಲ್ಲ, ಯಾವುದು ಇರುತ್ತದೆ ಎಂಬುದನ್ನೆಲ್ಲಾ ಆಯಾ ರಾಜ್ಯಗಳು ನಿರ್ಧಾರ ಮಾಡಬೇಕು’ ಎಂದರು.

‘ಮೋದಿ ಸರ್ಕಾರದ ಇಂಥ ಯೋಜನೆ ರಹಿತ ನಿರ್ಧಾರದಿಂದ ದೇಶದ ಆರ್ಥಿಕತೆ ಇಂದು ಮಂದಗತಿಯಲ್ಲಿದೆ’ ಎಂದರು.

‘ಲಡಾಖ್‌ನಲ್ಲಿ ಚೀನಾ ಸೈನಿಕರು ಪ್ರತಿರೋಧ ಒಡ್ಡುತ್ತಿದ್ದಾರೆ. ಇದರ ಕುರಿತು ಕೇಂದ್ರ ಸರ್ಕಾರ ‘ಮೌನ’ವಾಗಿದೆ’ ಎಂದು ಅವರು ಟೀಕಿಸಿದರು. ‘ರಕ್ಷಣಾ ಸಚಿವಾಲಯವು ಚೀನಾದೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ಹೇಳಿಕೆ ನೀಡಿತ್ತು. ಎರಡೂ ದೇಶಗಳು ಯಾವುದರ ಕುರಿತು ಮಾತುಕತೆ ನಡೆಸುತ್ತಿವೆ ಎಂಬುದನ್ನು ನಾವು ಕೇಳಬಯಸುತ್ತೇವೆ. ಈ ಕುರಿತು ಕೇಂದ್ರ ಸರ್ಕಾರ ದೇಶದ ಜನರಿಗೆ ಮಾಹಿತಿ ನೀಡಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು