ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ಮತ ಹಾಕದಂತೆ ಮುಸ್ಲಿಮರಿಗೆ ಮನವಿ: ಮಾಯಾವತಿ ವಿರುದ್ಧ ಬಿಜೆಪಿ ದೂರು

Last Updated 8 ಏಪ್ರಿಲ್ 2019, 5:53 IST
ಅಕ್ಷರ ಗಾತ್ರ

ಲಖನೌ: ಸಹರಾನ್‌ಪುರದ ಡಿಯೋಬಂದ್‌ನಲ್ಲಿ ಭಾನುವಾರ ಬಿಎಸ್‌ಪಿ–ಎಸ್‌ಪಿ–ಆರ್‌ಎಲ್‌ಡಿ ಆಯೋಜಿಸಿದ್ದ ಬೃಹತ್ ರ‍್ಯಾಲಿಯಲ್ಲಿ ಮುಸ್ಲಿಮರನ್ನು ಉದ್ದೇಶಿಸಿಬಿಎಸ್‌ಪಿ ನಾಯಕಿ ಮಾಯಾವತಿ ಆಡಿದ್ದ ಮಾತು ಇದೀಗ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದೆ. ಬಿಜೆಪಿ ಈ ಕುರಿತು ಸೋಮವಾರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

‘ಕೋಮು ಭಾವನೆಗಳನ್ನು ಮುಂದಿಟ್ಟು ಒಂದು ನಿರ್ದಿಷ್ಟ ಪಕ್ಷಕ್ಕೆ ಮತ ಚಲಾಯಿಸಬೇಡಿ ಎಂದು ಮಾಯಾವತಿ ಹೇಳಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮುಂದೆಂದೂ ಇಂಥ ಹೇಳಿಕೆಗಳನ್ನು ಯಾರೂ ನೀಡಬಾರದು. ಮಾಯಾವತಿ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ ಎಂದು ಬಿಜೆಪಿ ಉತ್ತರ ಪ್ರದೇಶ ಘಟಕದ ಉಪಾಧ್ಯಕ್ಷ ಜೆಪಿಎಸ್ ರಾಥೋಡ್, ರಾಥೋಡ್ ಪ್ರತಿಕ್ರಿಯಿಸಿದ್ದಾರೆ.

‘ಬಿಜೆಪಿ ದೂರು ಮತ್ತು ರ‍್ಯಾಲಿಯ ವಿಡಿಯೊ ಚಿತ್ರೀಕರಣದ ದಾಖಲೆಗಳನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಕಳಿಸಲಾಗುವುದು. ಬಿಎಸ್‌ಪಿ ನಾಯಕಿ ಮಾಯಾವತಿ, ಎಸ್‌ಪಿ ನಾಯಕ ಅಖಿಲೇಶ್ ಯಾದವ್ ಮತ್ತು ಆರ್‌ಎಲ್‌ಡಿ ನಾಯಕ ಅಜಿತ್ ಸಿಂಗ್ ಅವರ ಭಾಷಣದ ವಿಡಿಯೊ ಕಳಿಸಿಕೊಡಲು ಕೇಳಿದ್ದೇವೆ’ ಎಂದು ಉತ್ತರ ಪ್ರದೇಶ ಚುನಾವಣಾ ಆಯೋಗದ ಕಾರ್ಯನಿರ್ವಾಹಕ ಅಧಿಕಾರಿ ಎಲ್.ವೆಂಕಟೇಶ್ವರಲು ಹೇಳಿದ್ದಾರೆ.

ಚುನಾವಣಾ ಪ್ರಚಾರ ಸಭೆಗಳ ವಿಡಿಯೊ ಚಿತ್ರೀಕರಣ ಮಾಡಿಕೊಳ್ಳುವಂತೆ ಮತ್ತು ಅದರ ಕ್ಲಿಪಿಂಗ್‌ಗಳನ್ನು ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ನಿಯಮಿತವಾಗಿ ಕಳುಹಿಸಿಕೊಡುವಂತೆ ಎಲ್ಲ 80 ಲೋಕಸಭಾ ಕ್ಷೇತ್ರಗಳ ರಿಟರ್ನಿಂಗ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ವೆಂಕಟೇಶ್ವರಲು ಮಾಹಿತಿ ನೀಡಿದ್ದಾರೆ.

ಮಾಯಾವತಿ ಹೇಳಿದ್ದೇನು?

‘ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷವು ಬಿಜೆಪಿಗೆ ಅನುಕೂಲ ಮಾಡಿಕೊಡುವಂಥ ಅಭ್ಯರ್ಥಿಗಳನ್ನೇ ನಿಲ್ಲಿಸಿದೆ. ಬಿಜೆಪಿಯನ್ನು ಎದುರಿಸುವಷ್ಟು ಶಕ್ತಿ ಕಾಂಗ್ರೆಸ್‌ಗೆ ಇಲ್ಲ. ಮಹಾಘಟಬಂಧನ್‌ಗೆ ಮಾತ್ರ ಬಿಜೆಪಿಯನ್ನು ಎದುರಿಸುವ ಶಕ್ತಿಯಿದೆ. ನಿಮ್ಮ ಮತಗಳು ಹಂಚಿಹೋಗದಂತೆ ಎಚ್ಚರವಹಿಸಿ. ನಾನು ಈ ಮಾತನ್ನು ಮುಸ್ಲಿಂ ಸಮುದಾಯವನ್ನು ಉದ್ದೇಶಿಸಿ ಹೇಳುತ್ತಿದ್ದೇನೆ’ ಎಂದು ಮಾಯಾವತಿ ಡಿಯೊಬಂದ್‌ನಲ್ಲಿ ಭಾನುವಾರ ನಡೆದ ರ‍್ಯಾಲಿಯಲ್ಲಿ ಹೇಳಿದ್ದರು.

ಲೋಕಸಭೆಗೆ ಅತಿಹೆಚ್ಚು ಸಂಖ್ಯೆಯ ಸದಸ್ಯರನ್ನು (80) ಆರಿಸಿ ಕಳಿಸುವ ಉತ್ತರ ಪ್ರದೇಶದಲ್ಲಿ ಮುಸ್ಲಿಂ ಮತದಾರರು ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ. ಇದೇ ಕಾರಣಕ್ಕೆ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಮತ್ತು ಮುಸ್ಲಿಮರ ಪ್ರಮುಖ ಧಾರ್ಮಿಕ ಶಿಕ್ಷಣ ಕೇಂದ್ರ (ದಾರುಲ್ ಉಲೇಮಾ) ಇರುವ ಡಿಯೋಬಂದ್‌ನಲ್ಲಿ ಮಹಾಘಟಬಂಧನ್ ನಾಯಕರು ಮೊದಲು ರ‍್ಯಾಲಿ ಆಯೋಜಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT