ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವು ಅಂಗಡಿ ಬಾಗಿಲು ಹಾಕಬೇಕೇ?: ಚಿದಂಬರಂಗೆ ದೆಹಲಿ ಕಾಂಗ್ರೆಸ್ ಪ್ರಶ್ನೆ

ದೆಹಲಿ ಚುನಾವಣೆ 2020 | 63 ಕಡೆ ಠೇವಣಿ ನಷ್ಟವಾದ್ರೂ ಕೇಜ್ರಿವಾಲ್ ಗೆಲುವಿಗೆ ಸಂಭ್ರಮಿಸಿದ ಕಾಂಗ್ರೆಸ್ ಮುಖಂಡರು
Last Updated 13 ಫೆಬ್ರುವರಿ 2020, 6:04 IST
ಅಕ್ಷರ ಗಾತ್ರ

ನವದೆಹಲಿ: 2020 ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಮರಳಿ ಅಧಿಕಾರಕ್ಕೇರಿರುವುದು ಸತತ ಎರಡನೇ ಬಾರಿ ಶೂನ್ಯ ಸಂಪಾದನೆ ಮಾಡಿರುವ ಕಾಂಗ್ರೆಸ್ ಪಕ್ಷದೊಳಗೆ ಅಸಮಾಧಾನ ಕುದಿಯುವಂತೆ ಮಾಡಿದೆ. ತಮಗೆ ಸೋಲಾಗಿದ್ದಷ್ಟೇ ಅಲ್ಲದೆ, ಮತ ಹಂಚಿಕೆಯ ಪ್ರಮಾಣ ರಸಾತಳಕ್ಕಿಳಿದಿದ್ದರೂ ಆಪ್ ಗೆಲುವನ್ನು ಸಂಭ್ರಮಿಸುವ ಕಾಂಗ್ರೆಸಿಗರ ಬಗ್ಗೆ ಪಕ್ಷದೊಳಗೆ ಅಸಮಾಧಾನ ಭುಗಿಲೆದ್ದಿದೆ.

ಒಂದು ಕಾಲದಲ್ಲಿ ಅತ್ಯಂತ ದೊಡ್ಡ ಭ್ರಷ್ಟ ಎಂದು ಆಮ್ ಆದ್ಮಿ ಪಾರ್ಟಿ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಂದ ಕರೆಸಿಕೊಂಡಿದ್ದ ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಅವರು, ಕೇಜ್ರಿವಾಲ್ ಗೆಲ್ಲಿಸಿದ ದೆಹಲಿಯ ಜನತೆಯನ್ನು ಅಭಿನಂದಿಸಿ ಮಾಡಿದ ಟ್ವೀಟ್‌ಗೆ ಪಕ್ಷದ ರಾಷ್ಟ್ರೀಯ ವಕ್ತಾರೆ ಶರ್ಮಿಷ್ಠಾ ಮುಖರ್ಜಿ ತೀವ್ರವಾಗಿ ಆಕ್ಷೇಪಿಸಿದ್ದಾರೆ.

70 ಸ್ಥಾನಗಳ ದೆಹಲಿ ವಿಧಾನಸಭೆಯಲ್ಲಿ ಆಪ್ 62 ಸ್ಥಾನ ಗೆದ್ದುಕೊಂಡಿದ್ದರೆ, ಬಿಜೆಪಿ 8 ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು. 2013ರವರೆಗೂ ದೆಹಲಿಯನ್ನು 15 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದ ಕಾಂಗ್ರೆಸ್, ಸತತ ಎರಡನೇ ಬಾರಿಗೆ ಯಾವುದೇ ಸ್ಥಾನ ಗೆಲ್ಲದೆ ನಿರಾಶೆ ಅನುಭವಿಸಿತ್ತು. ಚುನಾವಣಾ ಪ್ರಚಾರದ ಅಂತಿಮ ಸುತ್ತಿನಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರ ಪ್ರಚಾರ ನಡೆಸಿದ ಕ್ಷೇತ್ರಗಳೂ ಸೇರಿದಂತೆ ಒಟ್ಟು 63 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು.

"ಆಪ್ ಗೆದ್ದಿದೆ. ಆದರೆ ಸುಳ್ಳು ಭರವಸೆಗಳು, ಕೂಗಾಟಕ್ಕೆ ಸೋಲಾಗಿದೆ. ದೇಶದ ವಿವಿಧೆಡೆಯಿಂದ ಬಂದಿರುವ ದೆಹಲಿಯ ಜನರು ಬಿಜೆಪಿಯ ಧ್ರುವೀಕರಿಸುವ, ವಿಭಜನಾತ್ಮಕ ಮತ್ತು ಅಪಾಯಕಾರಿ ಅಜೆಂಡಾವನ್ನು ಸೋಲಿಸಿದ್ದಾರೆ. 2021 ಹಾಗೂ 2022ರಲ್ಲಿ ಚುನಾವಣೆ ನಡೆಯಲಿರುವ ಬೇರೆ ರಾಜ್ಯಗಳಿಗೆ ಮಾದರಿ ಮಾರ್ಗ ಹಾಕಿಕೊಟ್ಟ ದೆಹಲಿ ಜನತೆಗೆ ಅಭಿನಂದನೆಗಳು" ಎಂದು ಪಿ.ಚಿದಂಬರಂ ಟ್ವೀಟ್ ಮಾಡಿದ್ದರು.

ಚಿದಂಬರಂ ಟ್ವೀಟ್‌ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಶರ್ಮಿಷ್ಠಾ, "ಬಿಜೆಪಿ ಸೋಲಿಸುವ ಕೆಲಸವನ್ನು ಕಾಂಗ್ರೆಸ್ ಬೇರೆ ರಾಜ್ಯಗಳ ಪಕ್ಷಗಳಿಗೆ ಹೊರಗುತ್ತಿಗೆ ನೀಡಿದೆಯೇ ಎಂದು ನಾನು ಗೌರವಯುತವಾಗಿ ಕೇಳಲಿಚ್ಛಿಸುತ್ತೇನೆ ಸರ್, ಇಲ್ಲ ಎಂದಾದರೆ, ನಮ್ಮದೇ ಪಕ್ಷದ ಹೀನಾಯ ಸೋಲಿಗೆ ಮರುಗುವುದರ ಬದಲು ಆಪ್ ವಿಜಯದ ಬಗ್ಗೆ ಸಂಭ್ರಮಿಸುತ್ತಿರುವುದೇಕೆ? ಹೌದು ಎಂದಾದರೆ, ನಾವು ಕೂಡ (ರಾಜ್ಯ ಕಾಂಗ್ರೆಸ್ ಘಟಕಗಳು) ಅಂಗಡಿ ಮುಚ್ಚಬೇಕಾದೀತು" ಎಂದು ಟ್ವೀಟ್ ಮಾಡಿದ್ದಾರೆ.

ದೆಹಲಿ ಮಹಿಳಾ ಕಾಂಗ್ರೆಸ್ ಘಟಕದ ಮುಖ್ಯಸ್ಥೆಯೂ ಆಗಿರುವ ಶರ್ಮಿಷ್ಠಾ ಅಷ್ಟಕ್ಕೇ ನಿಲ್ಲಿಸಿಲ್ಲ. ಪಕ್ಷದ ನಾಯಕತ್ವದ ವರ್ತನೆಯನ್ನು ಅವರು ಸರಣಿ ಟ್ವೀಟ್‌ಗಳಲ್ಲಿ ಕಟುವಾಗಿ ಟೀಕಿಸಿದ್ದಾರೆ.

"ನಾವು ದೆಹಲಿಯಲ್ಲಿ ಮತ್ತೊಮ್ಮೆ ಹೀನಾಯ ಸೋಲನುಭವಿಸಿದ್ದೇವೆ. ಆತ್ಮಾವಲೋಕನ ಸಾಕು, ಈಗೇನಿದ್ದರೂ ಕೆಲಸ ಆಗಬೇಕಿದೆ. ಉನ್ನತ ಮಟ್ಟದಲ್ಲಿ ನಿರ್ಣಯ ಕೈಗೊಳ್ಳುವುದರ ಬಗ್ಗೆ ವಿಳಂಬ, ಕಾರ್ಯತಂತ್ರದ ಕೊರತೆ, ರಾಜ್ಯ ಮಟ್ಟದಲ್ಲಿನ ಏಕತೆಯ ಕೊರತೆಯು ಕಾರ್ಯಕರ್ತರ ಉತ್ಸಾಹಕ್ಕೆ ಭಂಗ ತಂದಿದ್ದು, ತಳಮಟ್ಟದ ಸಂಪರ್ಕವೂ ಸಾಧ್ಯವಾಗಲಿಲ್ಲ. ಈ ಎಲ್ಲ ಕಾರಣಗಳು ಸೋಲಿಗೆ ಪ್ರಮುಖ ಕಾರಣಗಳು. ಈ ವ್ಯವಸ್ಥೆಯ ಭಾಗವಾಗಿರುವ ನಾನು ಕೂಡ ಇದರ ಹೊಣೆಗಾರಿಕೆಯನ್ನು ಹೊರುತ್ತೇನೆ." ಎಂದು ಮುಖರ್ಜಿ ಟ್ವೀಟ್ ಮಾಡಿದ್ದಾರೆ.

"ಬಿಜೆಪಿ ವಿಭಜನಾತ್ಮಕ ರಾಜಕೀಯ ಮಾಡುತ್ತಿದೆ, ಕೇಜ್ರಿವಾಲ್ ಸ್ಮಾರ್ಟ್ ರಾಜಕೀಯ ಮಾಡುತ್ತಿದ್ದಾರೆ. ಹಾಗಿದ್ದರೆ ನಾವು ಮಾಡುತ್ತಿರುವುದಾದರೂ ಏನು? ನಮ್ಮ ಮನೆಯನ್ನು ಸರಿಯಾಗಿರಿಸುವಲ್ಲಿ ಎಲ್ಲ ಪ್ರಯತ್ನಗಳನ್ನು ಮಾಡಿದ್ದೇವೆ ಅಂತ ನಾವು ಪ್ರಾಮಾಣಿಕವಾಗಿ ಹೇಳಬಲ್ಲೆವೇ?" ಎಂದವರು ಪ್ರಶ್ನಿಸಿದ್ದಾರೆ.

ಶರ್ಮಿಷ್ಠಾ ಮಾತ್ರವೇ ಅಲ್ಲ, ಇತರ ಕಾಂಗ್ರೆಸ್ ಮುಖಂಡರಾದ ಖುಷ್ಬೂ ಸುಂದರ್, ಸಂಜಯ್ ಝಾ ಕೂಡ ಆತ್ಮಾವಲೋಕನದ ಬದಲು ಮುಂದೆ ಮಾಡಬೇಕಾದ ಕಾರ್ಯದ ಬಗ್ಗೆ ಸಲಹೆ ನೀಡಿದ್ದಾರೆ.

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುತ್ರಿಯಾಗಿರುವ ಶರ್ಮಿಷ್ಠಾ ಹಿಂದಿನ ಕಾಂಗ್ರೆಸ್ ಸರ್ಕಾರಗಳಲ್ಲಿ ಚಿದಂಬರಂ ಅವರ ಸಹೋದ್ಯೋಗಿಯಾಗಿಯೂ ಕೆಲಸ ಮಾಡಿದ್ದರು.

ಈ ಬಾರಿಯ ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮತಹಂಚಿಕೆ ಪ್ರಮಾಣವು 4.26% ಗೆ ಕುಸಿತ ಕಂಡಿತ್ತು. ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ದೆಹಲಿಯಲ್ಲಿ ಕಾಂಗ್ರೆಸ್ ಮತ ಗಳಿಕೆ ಶೇ.22.5ರಷ್ಟಿತ್ತು. 2013ರಲ್ಲಿ 8 ಸ್ಥಾನ ಗೆದ್ದಿದ್ದ ಕಾಂಗ್ರೆಸ್, 2015 ಹಾಗೂ 2020ರಲ್ಲಿ ಯಾವುದೇ ಕ್ಷೇತ್ರ ಗೆಲ್ಲಲು ವಿಫಲವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT