ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ: ಸಂಪೂರ್ಣ ವಿವರ

Last Updated 24 ಅಕ್ಟೋಬರ್ 2019, 14:28 IST
ಅಕ್ಷರ ಗಾತ್ರ

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಮತ ಎಣಿಕೆ ಕಾರ್ಯ ಭರದಿಂದ ಸಾಗಿದೆ. ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಕೂಟ ಈಗಾಗಲೇ ಸರ್ಕಾರ ರಚನೆಗೆ ಬೇಕಾದಷ್ಟು ಸಂಖ್ಯೆಯ ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್‌ ಮತ್ತು ಎನ್‌ಸಿಪಿ ಮೈತ್ರಿ ಕೂಟ ಹಿನ್ನಡೆ ಅನುಭವಿಸುತ್ತಿದೆ. ಚುನಾವಣೆ ಫಲಿತಾಂಶದ ಈ ವರೆಗಿನ ಸಂಪೂರ್ಣ ಮಾಹಿತಿ,ಪ್ರಮುಖಾಂಶಗಳನ್ನು ಇಲ್ಲಿ ಕಟ್ಟಿಕೊಡಲಾಗಿದೆ. ತಾಜಾ ಅಪ್ಡೇಟ್‌ಗಾಗಿ ಪುಟವನ್ನು ರಿಫ್ರೆಶ್‌ ಮಾಡುತ್ತಿರಿ

ನಾನು ಬದಲಾಗಿಲ್ಲ, ಈ ಹಿಂದಿನಂತೆಯೇ ನಡೆಸಿಕೊಳ್ಳಿ: ಆದಿತ್ಯ ಠಾಕ್ರೆ

‘ಕಳೆದ ಒಂಬತ್ತು ವರ್ಷಗಳಿಂದ ನನ್ನನ್ನು ಹೇಗೆ ನೋಡುತ್ತಿದ್ದಿರೊ ಈಗಲೂ ಹಾಗೆಯೇ ನಡೆಸಿಕೊಳ್ಳಿ. ನನ್ನಲ್ಲಿ ಏನೂ ಬದಲಾಗಿಲ್ಲ’ ಎಂದುಮಾಧ್ಯಮಗಳಿಗೆ ಮನವಿ ಮಾಡಿದ ಠಾಕ್ರೆ ಕುಟುಂಬದಲ್ಲಿ ಮೊದಲ ಚುನಾವಣೆ ಎದುರಿಸಿದ ಕುಡಿ ಆದಿತ್ಯ ಠಾಕ್ರೆ.. ಇನ್ನಷ್ಟು ಓದು

ಲಾತೂರ್‌ ಕ್ಷೇತ್ರದ ಜನರಿಗೆ ಧನ್ಯವಾದ ಸಲ್ಲಿಸಿದ ರಿತೇಶ್‌ ದೇಶ್‌ಮುಖ್‌

ಮಾಜಿ ಮುಖ್ಯಮಂತ್ರಿ ವಿಲಾಸ್‌ರಾವ್‌ ದೇಶ್‌ಮುಖ್‌ ಅವರ ಪುತ್ರಅಮಿತ್‌ ದೇಶ್‌ಮುಖ್‌ಲಾತೂರ್‌ ನಗರ ಕ್ಷೇತ್ರದಲ್ಲಿ ಭಾರಿ ಗೆಲುವು ಸಾಧಿಸಿದ್ದು, ರಿತೇಶ್‌ ದೇಶಮುಖ್‌ ಅವರು ಕ್ಷೇತ್ರದ ಜನರಿಗೆ ಧನ್ಯವಾದ ಸಲ್ಲಿಸಿದರು.

ಮಹಾರಾಷ್ಟ್ರದ ಅಭಿವೃದ್ಧಿ ಕೆಲಸಗಳು ಮುಂದುವರಿಯಲಿವೆ: ಪ್ರಧಾನಿ

ಬಹಳ ಪ್ರೀತಿಯಿಂದ ಮಹಾರಾಷ್ಟ್ರದ ಜನರು ಎನ್‌ಡಿಎಗೆ ಆಶಿರ್ವಾದ ಮಾಡಿದ್ದಾರೆ. ಮತ್ತೊಮ್ಮೆ ಜನರ ಬೆಂಬಲ ನಮಗೆ ಸಿಕ್ಕಿರುವುದಕ್ಕೆ ನಾವು ಚಿರಋಣಿ. ಮಹಾರಾಷ್ಟ್ರ ಅಭಿವೃದ್ಧಿಯತ್ತ ನಮ್ಮ ಕೆಲಸಗಳು ಮುಂದುವರಿಯುತ್ತವೆ. ಬಿಜೆಪಿ ಹಾಗೂ ಶಿವಸೇನಾದ ಎಲ್ಲಾ ಕಾರ್ಯಕರ್ತರಿಗೂ ಧನ್ಯವಾದಗಳು – ಪ್ರಧಾನಿ ನರೇಂದ್ರ ಮೋದಿ

ಸ‌ದ್ಯದ ಮಹಾರಾಷ್ಟ್ರ ಚುನಾವಣಾ ಫಲಿತಾಂಶ

ಗೆಲ್ಲಿಸಿದ ಜನರಿಗೆ ಧನ್ಯವಾದಗಳು: ನಿತಿನ್‌ ಗಡ್ಕರಿ

ಮಹಾರಾಷ್ಟ್ರದಲ್ಲಿ ಮತ್ತೆ ಬಿಜೆಪಿಗೆ ಅಧಿಕಾರ ನೀಡಿದ್ದಕ್ಕಾಗಿ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅಲ್ಲಿನ ಜನರಿಗೆ ಧನ್ಯವಾದಗಳನ್ನು ಸಲ್ಲಿಸಿದರು. ‘ಚುನಾವಣೆಯ ಈ ಗೆಲುವಿಗಾಗಿ ದೇವೇಂದ್ರ ಫಡಣವೀಸ್‌, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನ ಅಭಿನಂದನೆಗಳು’ ಎಂದು ಹೇಳಿದರು.

ಇತಿಹಾಸ ಸೃಷ್ಟಿಸಿದ ಮುಖ್ಯಮಂತ್ರಿ ನಾನು

‘ಗೆಲುವು ನೀಡಿದ, ಮಹಾರಾಷ್ಟ್ರದ ಜನರಿಗೆ ಧನ್ಯವಾದಗಳು. ಬಿಜೆಪಿ–ಸೇನಾ ಮೈತ್ರಿ ಸರ್ಕಾರಕ್ಕೆ ಸಂಪೂರ್ಣ ಜನಾದೇಶ ದೊರೆತಿದೆ. ಮೈತ್ರಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ತಿಳಿಸಿದರು. ಸುದ್ದಿಯ ಸಂಪೂರ್ಣ ಓದಿಗೆ

ಶಿವಸೇನೆಯ ‘ರೈಸಿಂಗ್‌ ಸ್ಟಾರ್’ ಆದಿತ್ಯ ಠಾಕ್ರೆಗೆ ಗೆಲುವು

ವರ್ಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಶಿವಸೇನಾಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರ ಪುತ್ರಆದಿತ್ಯ ಠಾಕ್ರೆ ತಮ್ಮ ಮೊದಲ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಗೆಲುವಿನ ಪ್ರಮಾಣಪತ್ರವನ್ನು ಪಡೆದುಕೊಂಡರು.

‘ಜನ ನನ್ನ ಮೇಲೆ ವಿಶ್ವಾಸವಿಟ್ಟು, ಭಾರಿ ಅಂತರದಲ್ಲಿ ಗೆಲಿಸಿದ್ದಾರೆ. ಬಹಳ ಸಂತೋಷವಾಗುತ್ತಿದೆ’ ಎಂದು ಗೆಲುವಿನ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

ಸಚಿವರನ್ನು ಮಣಿಸಿದ ಧನಂಜಯ್‌ ಮುಂಡೆ

ಎನ್‌ಸಿಪಿಯ ಧನಂಜಯ್‌ ಮುಂಡೆ ಹಾಲಿ ಸಚಿವರಾಗಿದ್ದ ಪಂಕಜಾ ಮುಂಡೆಯವರನ್ನು ಸೋಲಿಸಿ ಪರ್ಲಿ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದ್ದಾರೆ

ಏಳು ಸಚಿವರಿಗೆ ಸೋಲು

ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನಾ ಮೈತ್ರಿ ಗೆಲುವಿತ್ತಾ ಮುನ್ನುಗ್ಗುತ್ತಿದ್ದರು,ಏಳು ಹಾಲಿ ಸಚಿವರು ಸೋಲು ಸರ್ಕಾರ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಪಂಕಜ್‌ ಮುಂಡೆ, ರಾಮ್‌ ಶಿಂಧೆ, ಮದನ್‌ ಯೆರವಾರ್. ಅರ್ಜುನ್‌ ಖೋಟ್ಕರ್‌, ವಿಜಯ್‌ ಶಿವತಾರೆ, ಬಾಲಾ ಭೀಗ್ಡೆ ಮತ್ತು ಅನಿಲ್‌ ಬೊಂದೆ ಸೋತಿದ್ದಾರೆ.

ಬಿಜೆಪಿ–ಸೇನಾ ಮೈತ್ರಿಗೆ ಜನಬೆಂಬಲ: ಉದ್ದವ್‌ ಠಾಕ್ರೆ

‘ಮಹಾರಾಷ್ಟ್ರದಲ್ಲಿ ಶಿವಸೇನಾ ಮತ್ತು ಬಿಜೆಪಿ ಮೈತ್ರಿಸರ್ಕಾರ ರಚಿಸಲು ಸಾಧ್ಯವಾಗಲಿದೆ. ಪ್ರಜಾಪ್ರಭುತ್ವ ಇನ್ನೂ ಜೀವಂತವಾಗಿದೆ ಎನ್ನುವುದನ್ನು ಈ ಚುನಾವಣೆ ನಿರೂಪಿಸಿದೆ. ಈಗಿನ ಟ್ರೆಂಡ್‌ ಗಮನಿಸಿದರೆ ಬಿಜೆಪಿ–ಸೇನಾ ಮೈತ್ರಿ 288 ಸ್ಥಾನಗಳಲ್ಲಿ 166 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ’ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಹೇಳಿದರು.

ದೇವೇಂದ್ರ ಫಡಣವೀಸ್‌–ಠಾಕ್ರೆ ಪತ್ರಿಕಾಗೋಷ್ಠಿ

ಬಿಜೆಪಿ–ಸೇನಾ ಮೈತ್ರಿಗೆ ಗೆಲುವು ಖಚಿತವಾಗುತ್ತಿದ್ದಂತೆ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಮತ್ತು ಶಿವಸೇನೆಯ ಉದ್ದವ್‌ ಠಾಕ್ರೆ ಪ್ರತ್ಯೇಕವಾಗಿ ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದಾರೆ.

ಶಿವಸೇನೆ ಜೊತೆ ಮೈತ್ರಿಯ ಪ್ರಶ್ನೆಯೇ ಇಲ್ಲ: ಶರದ್‌ ಪವಾರ್‌

ಮಹಾರಾಷ್ಟ್ರದಲ್ಲಿ 55 ಸ್ಥಾನಗಳನ್ನು ಪಡೆದಿರುವ ಎನ್‌ಸಿಪಿ ಪಕ್ಷ ಇತರರು ಹಾಗೂ ಶಿವಸೇನೆ ನೆರವಿನಿಂದ ಸರ್ಕಾರ ರಚಿಸುವ ವದಂತಿಗಳನ್ನು ತಳ್ಳಿ ಹಾಕಿರುವ ಶರದ್‌ ಪವಾರ್‌ ಶಿವಸೇನೆ ಜೊತೆ ಮೈತ್ರಿಯ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಸರ್ಕಾರ ರಚನೆಯ ಮೂರು ಸಾಧ್ಯತೆಗಳು

ಮಹಾರಾಷ್ಟ್ರದ ಫಲಿತಾಂಶದ ಟ್ರೆಂಡ್‌ ಗಮನಿಸಿದರೆ, ಯಾವುದೇ ಪಕ್ಷಕ್ಕೂ ಸಂಪೂರ್ಣ ಬಹುಮತ ದೊರೆಯುವಂತೆ ಕಾಣುತ್ತಿಲ್ಲ. ಪಕ್ಷಗಳ ಗೆಲುವು ಹಾಗೂ ಮುನ್ನಡೆ ಗಮನಿಸಿದಾಗ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಮೂರು ಸಾಧ್ಯತೆಗಳನ್ನು ಊಹಿಸಬಹುದು. ಮೊದಲ ಸಾಧ್ಯತೆ ಎಂದರೆ ಚುನಾವಣಾ ಪೂರ್ಣ ಮೈತ್ರಿಯಂತೆಯೇ ಶಿವಸೇನಾ ಹಾಗೂ ಬಿಜೆಪಿ ಸರ್ಕಾರ ರಚಿಸಬಹುದು. ಇಲ್ಲವೇ ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆಗೆ ಮುಂದಾಗಬಹುದು. ಕೊನೆಯ ಹಾಗೂ ಅಚ್ಚರಿಯ ಸಾಧ್ಯತೆ ಎಂದರೆ, ಎನ್‌ಸಿಪಿ ಮತ್ತು ಬಿಜೆಪಿ ಮೈತ್ರಿಗೊಂಡು ಸರ್ಕಾರ ರಚಿಸುವ ಸಂದರ್ಭವೂ ಬರಬಹುದು. ಪೂರ್ತಿ ಓದಲು ಇಲ್ಲಿ ಕ್ಲಿಕ್ಕಿಸಿ

ಬದಲಾವಣೆ ಬಯಸಿರುವುದು ಜನಾದೇಶದಿಂದ ತಿಳಿಯುತ್ತಿದೆ: ಸುಪ್ರೀಯಾ ಸುಲೆ

ದೇಶದ ಆರ್ಥಿಕ ಪರಿಸ್ಥಿತಿ, ನಿರುದ್ಯೋಗ, ಹಣದುಬ್ಬರ, ರೈತರ ಆತ್ಮಹತ್ಯೆಯಂತಹಸಮಸ್ಯೆಗಳೇ ದೊಡ್ಡ ಸವಾಲಾಗಿ ಕಾಡುತ್ತಿವೆ. ಇಂತಹ ಪ್ರಮುಖ ವಿಷಯಗಳು ಈಗನಿರ್ಲಕ್ಷ್ಯಕ್ಕೆ ಒಳಗಾಗಿದೆ. ಮತದಾರ ನೀಡಿರುವ ಈ ಆದೇಶವೇ ಜನ ಬದಲಾವಣೆ ಬಯಸುತ್ತಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಎಂದು ಎನ್‌ಸಿಪಿಯ ಸುಪ್ರೀಯಾ ಸುಲೆ ತಿಳಿಸಿದರು.

‘ನಮ್ಮ ಮೇಲೆ ಮಹಾರಾಷ್ಟ್ರದ ಜನ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ’ ಎಂದರು.

ಚುನಾವಣಾ ಆಯೋಗ ಪ್ರಕಟಿಸಿದ ಇತ್ತೀಚಿನ ಫಲಿತಾಂಶ

91 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಬಿಜೆಪಿ 10 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇನ್ನು ಶಿವಸೇನಾ 8 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದ್ದು, 50 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್‌ 3 ಅಭ್ಯರ್ಥಿಗಳು ಗೆದ್ದಿದ್ದು, 41 ಕಡೆಗಳಲ್ಲಿ ಮುನ್ನಡೆ ಹೊಂದಿದೆ. ಎನ್‌ಸಿಪಿ ನಾಲ್ಕು ಕ್ಷೇತ್ರಗಳಲ್ಲಿ ಜಯಗಳಿಸಿದ್ದು, 52ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಮಾತೋಶ್ರೀ ಇರುವಲ್ಲಿಯೇ ಶಿವಸೇನೆಗೆ ಸೋಲು

ಠಾಕ್ರೆ ಕುಟುಂಬದ ಬಂಗಲೆ ಇರುವ ಬಾಂದ್ರ ಪೂರ್ವ ವಿಧಾನಸಭೆ ಕ್ಷೇತ್ರದಲ್ಲೇಶಿವಸೇನೆಯ ಅಭ್ಯರ್ಥಿ ಸೋಲುಂಡಿದ್ದಾರೆ. ಅಲ್ಲಿ ಕಾಂಗ್ರೆಸ್‌ ಗೆದ್ದಿದೆ.

ಶಿವ ಸೇನೆಯಿಂದ ಮುಂಬೈನ ಮೇಯರ್‌ ಪ್ರೊ. ವಿಶ್ವನಾಥ್‌ ಮಹದೇಶ್ವರ್‌ ಅವರು ಬಾಂದ್ರಾ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಆದರೆ, ಅವರು ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ವಿಶ್ವನಾಥ್‌ ವಿರುದ್ಧ ಜೀಷನ್‌ ಸಿದ್ಧಿಖಿ ಗೆಲುವು ಸಾಧಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ಜೀಷನ್‌ ಸಿದ್ದಿಖಿ, ಶಿವ ಸೇನೆಯ ಬಂಡಾಯ ಅಭ್ಯರ್ಥಿ, ಹಾಲಿ ಶಾಸಕರಾಗಿದ್ದ ತೃಪ್ತಿ ಸಾವಂತ್‌ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

220 ಸೀಟು ಗೆಲ್ಲುವ ಬಿಜೆಪಿ–ಸೇನಾ ಆಸೆಯನ್ನು ಜನ ಈಡೇರಿಸಿಲ್ಲ

ಈ ಚುನಾವಣೆಯಲ್ಲಿ 220 ಕ್ಷೇತ್ರಗಳಲ್ಲಿ ಗೆಲ್ಲುವುದಾಗಿ ಬಿಜೆಪಿ ಮೈತ್ರಿ ಕೂಟ ಹೇಳಿತ್ತು. ಆದರೆ, ಜನ ಅದಕ್ಕೆ ಮನ್ನಣೆ ನೀಡಿಲ್ಲ. ಪಕ್ಷ ಬಿಟ್ಟು ಅಧಿಕಾರದ ಹಿಂದೆ ಹೋದವರನ್ನು ಜನ ಗೆಲ್ಲಿಸಿಲ್ಲ. ಜನ ಎನ್‌ಡಿಎಗೆಅಧಿಕಾರ ನೀಡಿರಬಹುದು. ಆದರೆ, ಅವರಕಾಲುಗಳು ನೆಲದ ಮೇಲೆ ಇರಬೇಕೆಂಬುದು ನೆನಪಿನಲ್ಲಿರಲಿ ಎಂದು ಶರದ್‌ ಪವಾರ್‌ ಹೇಳಿದ್ದಾರೆ. ಅಲ್ಲದೇ, ಎನ್‌ಸಿಪಿಯನ್ನು ರಾಜ್ಯಾದ್ಯಂತ ಸಂಘಟಿಸಲು ಶ್ರಮಿಸುವುದಾಗಿಯೂ ಅವರು ಹೇಳಿದರು.

ಜನ ನಮ್ಮನ್ನು ವಿರೋಧ ಪಕ್ಷದಲ್ಲಿರಲು ತಿಳಿಸಿದ್ದಾರೆ. ನಾವು ವಿರೋಧ ಪಕ್ಷದಲ್ಲಿದ್ದೇ ಕೆಲಸ ಮಾಡುತ್ತೇವೆ ಎಂದಿರುವ ಅವರು ಸದ್ಯ ತಾವು ಕಾಂಗ್ರೆಸ್‌ ಜತೆಯಲ್ಲೇ ಇರುವುದಾಗಿಯೂ ತಿಳಿಸಿದ್ದಾರೆ.

ಅಲ್ಲದೆ, ಶಿವ ಸೇನೆಯೊಂದಿಗೆ ಹೋಗುವುದು ನಮ್ಮ ಸಿದ್ಧಾಂತವಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಸೋಲು ನಿರೀಕ್ಷಿಸಿರಲಿಲ್ಲ: ಪಂಕಜಾ ಮುಂಡೆ

ನಾನು ಹೆಚ್ಚು ಶ್ರಮವಹಿಸಿ ಕೆಲಸ ಮಾಡಿದೆ. ಈ ರೀತಿಯ ಫಲಿತಾಂಶವನ್ನು ನಾನು ನಿರೀಕ್ಷಿಸಿರಲಿಲ್ಲ.

ದೇಶ್‌ಮುಖ್‌ ಪುತ್ರನಿಗೆ ಜಯ

ಮಾಜಿ ಮುಖ್ಯಮಂತ್ರಿ, ದಿವಂಗತ ವಿಲಾಸ್‌ ರಾವ್ ದೇಶ್‌ಮುಖ್‌ ಪುತ್ರ ದೀರಜ್‌ ದೇಶ್‌ಮುಖ್‌ ಅವರು ಲಾಥುರ್‌ ವಿಧಾನಸಭೆ ಕ್ಷೇತ್ರದಿಂದ ಜಯ ಸಾಧಿಸಿದ್ದಾರೆ.

ಮುಖ್ಯಮಂತ್ರಿ ಸ್ಥಾನದ ಮೇಲೆ ಶಿವಸೇನೆ ಕಣ್ಣು: ಅಧಿಕಾರದ ಸಮಾನ ಹಂಚಿಕೆಗೂ ಪಟ್ಟು

ಶಿವಸೇನೆ ಕಾರ್ಯಕರ್ತರ ಸಂಭ್ರಮಾಚರಣೆ

ಮತ ಎಣಿಕೆ ಕೇಂದ್ರದ ಹೊರಗೆ ಶಿವಸೇನೆಯ ಮಹಿಳಾ ಕಾರ್ಯಕರ್ತರ ಸಂಭ್ರಮಾಚರಣೆ
ಮತ ಎಣಿಕೆ ಕೇಂದ್ರದ ಹೊರಗೆ ಶಿವಸೇನೆಯ ಮಹಿಳಾ ಕಾರ್ಯಕರ್ತರ ಸಂಭ್ರಮಾಚರಣೆ

ಪ್ರಣೀತಿ ಶಿಂಧೆಗೆ ಮುನ್ನಡೆ

ಸೋಲಾಪುರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಕೇಂದ್ರದ ಮಾಜಿ ಸಚಿವ ಸುಶೀಲ್‌ ಕುಮಾರ್‌ ಶಿಂಧೆ ಅವರ ಪುತ್ರಿ ಪ್ರಣೀತಿ ಶಿಂಧೆ ಈಗ ಮುನ್ನಡೆ ಸಾಧಿಸಿದ್ದಾರೆ.

ಶಿರಡಿಯಲ್ಲಿ ಬಿಜೆಪಿ

ಶಿರಡಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಯ ರಾಧಾಕೃಷ್ಣ ವಿಖೆ ಅವರು ಗೆಲುವುಸಾಧಿಸಿದ್ದಾರೆ. 2014ರಲ್ಲಿ ಕಾಂಗ್ರೆಸ್‌ ಶಾಸಕರಾಗಿ ಆಯ್ಕೆಯಾಗಿದ್ದ ಅವರುವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರೂ ಆಗಿದ್ದರು.

ಪಶ್ಚಿಮ ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಪಾರಮ್ಯ

ಪಶ್ಚಿಮ ಮಹಾರಾಷ್ಟ್ರ ಮತ್ತು ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆಗಳು ಹೆಚ್ಚಿರುವ ಪ್ರದೇಶಗಳಲ್ಲಿ ಎನ್‌ಸಿಪಿ ಮತ್ತು ಕಾಂಗ್ರೆಸ್‌ ಮೈತ್ರಿ ಕೂಟ ಹೆಚ್ಚಿನ ಸ್ಥಾನಗಳನ್ನು ಗಳಿಸಿವೆ. ಈ ಭಾಗದಲ್ಲಿ ಎನ್‌ಸಿಪಿ 24 ಕ್ಷೇತ್ರಗಳಲ್ಲಿ ಗೆದ್ದಿದ್ದರೆ, ಕಾಂಗ್ರೆಸ್‌ 9 ಸ್ಥಾನಗಳಲ್ಲಿ ಜಯಸಿದೆ. ಬಿಜೆಪಿ 13 ಮತ್ತು ಶಿವಸೇನೆ 8 ಕ್ಷೇತ್ರಗಳನ್ನು ಗೆದ್ದಿದೆ. ಇನ್ನುಳಿದಂತೆ ಮಿಕ್ಕೆಲ್ಲ ಪ್ರಾಂತ್ಯಗಳಲ್ಲೂ ಬಿಜೆಪಿ ಶಿವಸೇನೆ ಪಾರಮ್ಯ ಮರೆದಿವೆ.

ಸೋದರ ಸಂಬಂಧಿ ವಿರುದ್ಧ ಪಂಕಜಾ ಮುಂಡೆಗೆ ಸೋಲು

ಪರ್ಲಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಸಚಿವೆ ಪಂಕಜಾ ಮುಂಡೆ ಅವರು ತಮ್ಮ ಸೋದರ ಸಂಬಂಧಿ ಎನ್‌ಸಿಪಿಯ ಧನಂಜಯ ಮುಂಡೆ ಅವರು ಗೆದ್ದಿದ್ದಾರೆ.

ಬಿಜೆಪಿ–ಶಿವಸೇನೆ ಮುಂದೆ ಮಂಕಾದ ಪ್ರಕಾಶ್‌ ಅಂಬೇಡ್ಕರ್‌, ರಾಜ್‌ ಠಾಕ್ರೆ

ನಮಗೇ ಮುಖ್ಯಮಂತ್ರಿ ಹುದ್ದೆ, ಮೈತ್ರಿ ಮುಂದುವರಿಕೆ ಖಚಿತವೆಂದ ಶಿವಸೇನೆ

ಚುನಾವಣೆಗೆ ಮೊದಲು ಮಾಡಿಕೊಂಡಿದ್ದ ಒಪ್ಪಂದದಂತೆಯೇ ಬಿಜೆಪಿಯೊಂದಿಗೆ ಮೈತ್ರಿ ಮುಂದುವರಿಯುತ್ತದೆ. ಅದರಲ್ಲಿ ಯಾವುದೇ ಅನುಮಾನ ಬೇಡ ಎಂದು ಶಿವಸೇನೆ ನಾಯಕ ಸಂಜಯ್‌ ರಾವತ್ ಹೇಳಿದ್ದಾರೆ.

ಚುನಾವಣೆಗೂ ಮೊದಲೇ ನಾವು ಸರ್ಕಾರದಲ್ಲಿ ಸಮಪಾಲು ಕೋರಿದ್ದೆವು. 50:50 ಸೂತ್ರದಂತೆ ಸರ್ಕಾರ ರಚನೆ ಆಗುತ್ತದೆ. ಉದ್ಧವ್ ಠಾಕ್ರೆ ಅವರನ್ನು ಬೇಟಿಯಾಗಿ ಚರ್ಚಿಸುತ್ತೇನೆ. ನಮ್ಮ ಪಕ್ಷದ ಸಾಧನೆಯು ತೆಗೆದುಹಾಕುವಂಥದ್ದಲ್ಲ ಎಂದು ಅವರು ಹೇಳಿದರು. ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಹುದ್ದೆಗೆ ಶಿವಸೇನೆಗೆ ಸಿಗಲಿದೆ ಎಂದು ಲೋಕಸಭೆಯ ಮಾಜಿ ಸ್ಪೀಕರ್ ಡಾ.ಮನೋಹರ್ ಜೋಶಿ ಘೋಷಿಸಿದ್ದಾರೆ.

ಮುಖ್ಯಮಂತ್ರಿ ಸ್ಥಾನ ಮತ್ತು50:50 ಅಧಿಕಾರ ಹಂಚಿಕೆ: ಇದು ಶಿವಸೇನೆ ಬೇಡಿಕೆ

ಕಳೆದ ಬಾರಿ ಬಿಜೆಪಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದ್ದ ಶಿವಸೇನೆ ಈ ಬಾರಿ ಆ ಸ್ಥಾನದ ಮೇಲೆ ಕಣ್ಣಿಟ್ಟಿದೆ. ಅಷ್ಟೇ ಅಲ್ಲ,50:50 ಅಧಿಕಾರ ಹಂಚಿಕೆಯಾಗಬೇಕು ಎಂದು ಒತ್ತಾಯಿಸಿದೆ.

ಜಗತ್ತಿನ ದೊಡ್ಡ ಕೊಳೆಗೆರಿ ಧಾರವಿಯಲ್ಲಿ ಯಾರಿಗೆ ಮುನ್ನಡೆ

ಧಾರಾವಿ ವಿಧಾನಸಭೆ ಕ್ಷೇತ್ರದ ಮತ ಎಣಿಕೆ ಕಾರ್ಯಯ ಮೂರು ಸುತ್ತುಗಳು ಮುಕ್ತಾಯಗೊಂಡಿದ್ದು, ಸದ್ಯ ಕಾಂಗ್ರೆಸ್‌ನ ವರ್ಷ ಗಾಯ್ಕ್‌ವಾಡ್‌ ಅವರು ಮುನ್ನಡೆ ಕಾಯ್ದುಕೊಂಡಿದ್ದಾರೆ. ಸದ್ಯ ಅವರು3,140 ಮತಗಳ ಅಂತರದ ಅಲ್ಪ ಮುನ್ನಡೆ ಸಾಧಿಸಿದ್ದಾರೆ.

ವರ್ಷ ಗಾಯ್ಕ್‌ವಾಡ್‌ (ಕಾಂಗ್ರೆಸ್‌):11,121

ಆಶಿಶ್‌ ಮೋರ್‌ (ಶಿವಸೇನೆ):7,981

ಮನೋಜ್‌ ಸನ್ಸಾರೆ(ಎಂಐಎಂ):2,266

179 ಕ್ಷೇತ್ರಗಳಲ್ಲಿ ಬಿಜೆಪಿ ಮೈತ್ರಿ ಮುನ್ನಡೆ

ಮಹಾರಾಷ್ಟ್ರದಲ್ಲಿ ಬಿಜೆಪಿ–ಶಿವಸೇನೆ ಮೈತ್ರಿಕೋಟ ನಿಚ್ಚಳ ಮುನ್ನಡೆ ಸಾಧಿಸಿದೆ. ಬಿಜೆಪಿ ಅಭ್ಯರ್ಥಿಗಳು 106 ಕ್ಷೇತ್ರಗಳಲ್ಲಿ, ಶಿವಸೇನೆ ಅಭ್ಯರ್ಥಿಗಳು 73 ಕ್ಷೇತ್ರಗಳಲ್ಲಿ ಮುನ್ನಡೆ ದಾಖಲಿಸಿದ್ದಾರೆ. ಫಡಣವೀಸ್‌ ಮುಖ್ಯಮಂತ್ರಿ ಗಾದಿಯಲ್ಲಿ ಮುಂದುವರಿಯುವುದು ನಿಚ್ಚಳವಾಗಿದೆ. ಆದರೆ ಶಿವಸೇನೆಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಬಿಜೆಪಿ ಭರವಸೆ ನೀಡಿದೆ. ಇದೀಗ ಮುಂಬೈನ ವರ್ಲಿ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿರುವ ಶಿವಸೇನೆಯ ಆದಿತ್ಯ ಠಾಕ್ರೆ ಈ ಸ್ಥಾನಕ್ಕೆ ಬರಬಹುದು ಎಂಬ ಮಾತುಗಳಿವೆ. 2014ರಲ್ಲಿ ಬಿಜೆಪಿ 122 ಮತ್ತು ಶಿವಸೇನೆ 63 ಕ್ಷೇತ್ರಗಳಲ್ಲಿ ಜಯಗಳಿಸಿತ್ತು.

ಸಚಿವೆ ಪಂಕಜಾ ಮುಂಡೆಗೆ ಹಿನ್ನಡೆ

ಮಹಾರಾಷ್ಟ್ರ ಗ್ರಾಮೀಣಾಭಿವೃದ್ಧಿ ಸಚಿವೆ ಬಿಜೆಪಿಯ ಪಂಕಜಾ ಮುಂಡೆ ಅವರು ಪರ್ಲಿ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಪಂಕಜಾ, ಬಿಜೆಪಿಯ ಪ್ರಭಾವಿ ನಾಯಕರಾಗಿದ್ದ ದಿವಂಗತ ಗೋಪಿನಾಥ್‌ ಮುಂಡೆ ಅವರ ಪುತ್ರಿ.

ಮಹಾರಾಷ್ಟ್ರ ನವನಿರ್ಮಾಣ ಸೇನೆಗೆ ಭಾರಿ ಮುಖಭಂಗ

ರಾಜ್‌ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಯಾವೊಬ್ಬ ಅಭ್ಯರ್ಥಿಗಳೂ ಚುನಾವಣೆಯಲ್ಲಿ ಮುನ್ನಡೆ ಸಾಧಿಸಿಲ್ಲ. ಕಳೆದ ಬಾರಿ ಒಂದು ಸ್ಥಾನದಲ್ಲಿ ಗೆದ್ದಿದ್ದ ಎಂಎನ್‌ಎಸ್‌ ಈ ಬಾರಿ ಒಂದೇ ಒಂದು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಲೂ ತಿಣುಕಾಟ ನಡೆಸುತ್ತಿದೆ. ಇದರೊಂದಿಗೆ, ಶಿವಸೇನೆಗೆ ಸವಾಲೊಡ್ಡಲೆತ್ನಿಸಿದ ಪಕ್ಷಕ್ಕೆ ಭಾರಿ ಮುಖಭಂಗ ಎದುರಾಗಿದೆ. ಈ ಚುನಾವಣೆಯಲ್ಲಿ ಎಂಎನ್‌ಎಸ್‌ 101 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿತ್ತು.

ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್‌ ನಾಯಕ ಸುಶೀಲ್‌ ಕುಮಾರ್ ಶಿಂಧೆ ಪುತ್ರಿ ಪ್ರಣೀತಿ ಶಿಂಧೆಗೆ ಹಿನ್ನಡೆ

ಸೋಲಾಪುರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಕೇಂದ್ರದ ಮಾಜಿ ಸಚಿವ ಸುಶೀಲ್‌ ಕುಮಾರ್‌ ಶಿಂಧೆ ಅವರ ಪುತ್ರಿ ಪ್ರಣೀತಿ ಶಿಂಧೆ ಹಿನ್ನಡೆ ಅನುಭವಿಸಿದ್ದಾರೆ.

ಎನ್‌ಡಿಎ ಮೈತ್ರಿಕೂಟದ ಮುನ್ನಡೆ

288 ಸದಸ್ಯ ಬಲದ ಮಹಾರಾಷ್ಟ್ರದಲ್ಲಿ ವಿಧಾನಸಭೆಯಲ್ಲಿಬಿಜೆಪಿ–ಶಿವಸೇನ ಮೈತ್ರಿ ಕೂಟ ಸ್ಪಷ್ಟ ಮುನ್ನಡೆ ಸಾಧಿಸಿಕೊಂಡಿದೆ. ಆರಂಭಿಕ ಟ್ರೆಂಡ್‌ ಪ್ರಕಾರ ಬೆಳಗ್ಗೆ ಹತ್ತುಗಂಟೆ ಹೊತ್ತಿಗೆ ಬಿಜೆಪಿ 104 ಮತ್ತು ಶಿವಸೇನೆ 64 ಸ್ಥಾನಗಳಲ್ಲಿ ಮುಂದಿತ್ತು.

ಕಾಂಗ್ರೆಸ್‌–ಎನ್‌ಸಿಪಿ ಮೈತ್ರಿಕೂಟಕ್ಕೆ ಹಿನ್ನಡೆ

ಕಾಂಗ್ರೆಸ್‌ ಮತ್ತು ಶರದ್‌ ಪವಾರ್‌ ಅವರ ನೇತೃತ್ವದಎನ್‌ಸಿಪಿ ಹಿನ್ನಡೆ ಅನುಭವಿಸಿವೆ. ಕಾಂಗ್ರೆಸ್‌ 38ರಲ್ಲಿ ಎನ್‌ಸಿಪಿ 44ರಲ್ಲಿ ಮುನ್ನಡೆ ಹೊಂದಿವೆ.

ದೇವೇಂದ್ರ ಫಡಣವೀಸ್‌–ಆದಿತ್ಯ ಠಾಕ್ರೆ ಮುನ್ನಡೆ

ಹಾಲಿ ಮುಖ್ಯಮಂತ್ರಿ ಬಿಜೆಪಿಯ ದೇವೇಂದ್ರ ಫಡಣವೀಸ್‌ ನಾಗಪುರ ನೈರುತ್ಯ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಆದಿತ್ಯ ಠಾಕ್ರೆ ಅವರು ವರ್ಲಿ ಮುನ್ನಡೆ ಹೊಂದಿದ್ದಾರೆ.

ಮಹಾರಾಷ್ಟ್ರ ಚುನಾವಣೆ ಬಗ್ಗೆ ನೀವು ತಿಳಿಯಬೇಕಾದ 5 ಸಂಗತಿಗಳು

1. ಮಹಾರಾಷ್ಟ್ರದಲ್ಲಿಒಟ್ಟು 288 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ 29 ಕ್ಷೇತ್ರಗಳು ಪರಿಶಿಷ್ಟ ಜಾತಿಗೆ ಮತ್ತು 25 ಕ್ಷೇತ್ರಗಳು ಪರಿಶಿಷ್ಟ ಪಂಗಡಕ್ಕೆ ಮೀಸಲು.

2. ಮಹಾರಾಷ್ಟ್ರದಲ್ಲಿ ಈ ಬಾರಿ ಒಟ್ಟು 96,661 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. 235 ಮಹಿಳೆಯರೂ ಸೇರಿದಂತೆ ಒಟ್ಟು 3,237 ಉಮೇದುವಾರರು ಕಣದಲ್ಲಿದ್ದರು.

3. ಮಹಾರಾಷ್ಟ್ರದ ಒಟ್ಟು ಮತದಾರರ ಸಂಖ್ಯೆ 8.9 ಕೋಟಿ. ಈ ಪೈಕಿ ಪುರುಷರು 4.69 ಕೋಟಿ, ಮಹಿಳೆಯರು 4.28 ಕೋಟಿ. 2,634 ಮಂದಿ ತೃತೀಯ ಲಿಂಗಿಗಳು.

4. ಮಹಾರಾಷ್ಟ್ರದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ), ಶಿವಸೇನೆ, ಕಾಂಗ್ರೆಸ್‌ ಮತ್ತು ನ್ಯಾಷಲಿಸ್ಟ್‌ ಕಾಂಗ್ರೆಸ್‌ ಪಾರ್ಟಿ (ಎನ್‌ಸಿಪಿ) ಕಣದಲ್ಲಿದ್ದ ಪ್ರಮುಖ ಪಕ್ಷಗಳು.

5. ಬಿಜೆಪಿ ಮತ್ತು ಶಿವಸೇನೆ ಮೈತ್ರಿಕೂಟವು ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಬಿಜೆಪಿ 164 ಮತ್ತು ಶಿವಸೇನೆ 126 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಕಾಂಗ್ರೆಸ್‌ 147, ಎನ್‌ಸಿಪಿ 121 ಮತ್ತು ಪ್ರಕಾಶ್ ಅಂಬೇಡ್ಕರ್‌ ನೇತೃತ್ವದ ವಂಚಿತ್ ಬಹುಜನ್ ಅಘಾದಿ ಪಕ್ಷವು 235 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು.

2014ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ (ಒಟ್ಟು ಕ್ಷೇತ್ರಗಳು 288)

-ಬಿಜೆಪಿ– 122
-ಶಿವಸೇನೆ– 63
-ಕಾಂಗ್ರೆಸ್‌– 42
-ಎನ್‌ಸಿಪಿ– 41
-ಬಹುಜನ ವಿಕಾಸ ಅಗಾಡಿ– 3
-ಕೃಷಿಕ–ಶ್ರಮಿಕರ ಪಕ್ಷ – 3
-ಎಐಎಂಐಎಂ–2
-ಭಾರಿಪ ಬಹುಜನ ಮಹಾಸಂಘ– 1
-ಸಿಪಿಐಎಂ– 1
-ಎಂಎನ್‌ಎಸ್‌–1
-ರಾಷ್ಟ್ರೀಯ ಸಮಾಜ ಪಕ್ಷ– 1
-ಎಸ್‌ಪಿ– 1
-ಪಕ್ಷೇತರರು– 7

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT