ಬುಧವಾರ, ಜೂನ್ 23, 2021
30 °C
ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸಿದ ರಾಜಕೀಯ | ಶಿವಸೇನಾ ಕೈಗೆ ಬಂದಿದ್ದು ಬಾಯಿಗಿಲ್ಲ

ಮಹಾರಾಷ್ಟ್ರ ರಾಜಕೀಯದ 'ಹಗಲು-ರಾತ್ರಿ ಪಂದ್ಯ': ಮಧ್ಯರಾತ್ರಿ ನಡೆದದ್ದು ಇಷ್ಟು...

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Devendra Fadnavis and Ajit Pawar

ರಾಜಕೀಯದಲ್ಲಿ ಯಾರೂ ವೈರಿಗಳಲ್ಲ, ಯಾರೂ ಶಾಶ್ವತ ಮಿತ್ರರೂ ಅಲ್ಲ ಎಂಬುದಕ್ಕೆ ಮಹಾರಾಷ್ಟ್ರದಲ್ಲಿ ರಾತೋರಾತ್ರಿ ನಡೆದ ರಾಜಕೀಯ ಬೆಳವಣಿಗೆಗಳೇ ಸಾಕ್ಷಿ. ಸರಿಯಾಗಿ ಒಂದು ತಿಂಗಳ ಹಿಂದೆ (ಅಕ್ಟೋಬರ್ 24) ಮಹಾರಾಷ್ಟ್ರ ವಿಧಾನಸಭೆ ಫಲಿತಾಂಶ ಘೋಷಣೆಯಾಗಿ, ಸರಕಾರ ರಚನೆಗೆ ಮತದಾರ ಯಾರಿಗೂ ಸ್ಪಷ್ಟ ಜನಾದೇಶತ ನೀಡದಿದ್ದಾಗ, ಅತಿದೊಡ್ಡ ಪಕ್ಷವಾಗಿ ಮೂಡಿಬಂದಿದ್ದ ಬಿಜೆಪಿ ಹಾಗೂ ಶಿವಸೇನಾ ಎಂದಿನಂತೆಯೇ ಮೈತ್ರಿಕೂಟದ ಸರಕಾರ ರಚಿಸಲಿದೆ ಎಂಬುದು ಬಹುತೇಕರ ಖಚಿತ ಅಭಿಪ್ರಾಯವಾಗಿತ್ತು. ಆದರೆ, ಶಿವಸೇನಾ ಮುಖ್ಯಮಂತ್ರಿ ಪಟ್ಟಕ್ಕಾಗಿ ಬೇಡಿಕೆಯಿಟ್ಟಾಗ ಈ ಎನ್‌ಡಿಎ ಮೈತ್ರಿಕೂಟದ ಪಾಲುದಾರ ಪಕ್ಷಗಳ ಮಧ್ಯೆ ಬಿರುಕು ಹುಟ್ಟಿತು, ಎರಡೂ ಪಕ್ಷಗಳ ಮುಖಂಡರ ಮಧ್ಯೆ ವಾಗ್ದಾಳಿ ನಡೆದು, ಒಡಕು ತೀವ್ರವಾಗಿ ಎನ್‌ಡಿಎ ಮೈತ್ರಿಯನ್ನೇ ಶಿವಸೇನಾ ಕಡಿದುಕೊಂಡಿತು.

ಆ ಬಳಿಕ, ಅಧಿಕಾರಕ್ಕಾಗಿ ಶಿವಸೇನಾ ಪಕ್ಷವು ನೋಡಿದ್ದು ಕಾಂಗ್ರೆಸ್ ಹಾಗೂ ಎನ್‌ಸಿಪಿ ಪಕ್ಷಗಳತ್ತ. 288 ಸದಸ್ಯ ಬಲದ ವಿಧಾನಸಭೆಯಲ್ಲಿ 105 ಸ್ಥಾನಗಳನ್ನು ಬಿಜೆಪಿ ಗೆದ್ದಿದ್ದರೆ, ಶಿವಸೇನಾ 56, ಎನ್‌ಸಿಪಿ 54, ಕಾಂಗ್ರೆಸ್ 44 ಹಾಗೂ ಇತರರು 29 ಸ್ಥಾನಗಳನ್ನು ಪಡೆದಿದ್ದರು. ಬಹುಮತಕ್ಕೆ ಬೇಕಾದ 145 ಸ್ಥಾನಗಳ ಲೆಕ್ಕಾಚಾರದೊಂದಿಗೆ ಎಲ್ಲ ರಾಜಕೀಯ ಪಕ್ಷಗಳೂ ಕನಸು ಕಾಣುತ್ತಲೇ ಇದ್ದವು. ಬಿಜೆಪಿ ಹಾಗೂ ಶಿವಸೇನಾ ಅಥವಾ ಬಿಜೆಪಿ-ಸ್ವತಂತ್ರರು ಮತ್ತು ಎನ್‌ಸಿಪಿ/ಕಾಂಗ್ರೆಸ್‌ನ ಕೆಲವು ಶಾಸಕರು ಇಲ್ಲವೇ, ಎನ್‌ಸಿಪಿ, ಶಿವಸೇನಾ ಮತ್ತು ಕಾಂಗ್ರೆಸ್ ಒಕ್ಕೂಟ - ಹೀಗೆ ಚೌಚೌ ಸರಕಾರದ ಎಲ್ಲ ಲೆಕ್ಕಾಚಾರಗಳೂ ಆಡಳಿತದ ಕಾರಿಡಾರುಗಳಲ್ಲಿ ಹೊಸ ರೂಪ ತಳೆಯುತ್ತಲೇ ಇದ್ದವು. ಶಾಸಕರು ರೆಸಾರ್ಟ್ ರಾಜಕಾರಣದಲ್ಲೂ ತೊಡಗಿದರು.

ನೋಡಿ: ದೇವೇಂದ್ರ-ಅಜಿತ್ ಜತೆಯಾಟ

ಶಿವಸೇನಾದ ಒತ್ತಡಕ್ಕೆ ಜಗ್ಗದ ಬಿಜೆಪಿ, ತಾನು ಸರಕಾರವನ್ನೇ ರಚಿಸುವುದಿಲ್ಲ ಎಂದು ಹೇಳಿದಾಗ, ಶಿವಸೇನಾಗೆ ರಾಜ್ಯಪಾಲರು ಅವಕಾಶ ನೀಡಿದರು. ನಂತರದಲ್ಲಿ ಎನ್‌ಸಿಪಿಗೂ ಅವಕಾಶ ನೀಡಲಾಯಿತು. ನಿಗದಿತ ಸಮಯದಲ್ಲಿ ಯಾರಿಗೂ ಈ ಮ್ಯಾಜಿಕ್ ಸಂಖ್ಯೆಯನ್ನು ತಲುಪಲು ಸಾಧ್ಯವಾಗಿಲ್ಲದ ಕಾರಣ, ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದರು. ರಾಷ್ಟ್ರಪತಿ ಆಳ್ವಿಕೆಯನ್ನೂ ಹೇರಲಾಯಿತು. ಬಳಿಕವೂ ಮುಖ್ಯಮಂತ್ರಿ ಪಟ್ಟ ತಮಗೇ, ಐದು ವರ್ಷ ರಾಜ್ಯವಾಳುತ್ತೇವೆ ಎಂದು ಶಿವಸೇನಾ ಘೋಷಣೆ ಮಾಡಿ, ಸರಕಾರ ರಚನೆಗೆ ಕಸರತ್ತು ನಡೆಸಲಾರಂಭಿಸಿತ್ತು. ಎನ್‌ಸಿಪಿ-ಕಾಂಗ್ರೆಸ್ ಹಾಗೂ ಶಿವಸೇನಾ ಒಟ್ಟು ಸೇರಿ ಸರಕಾರ ರಚನೆಯ ಅಂತಿಮ ಘಟ್ಟದ ಚರ್ಚೆಯೂ ಆಗುತ್ತಲೇ ಇತ್ತು. ಅಷ್ಟರಲ್ಲಿ, ಶುಕ್ರವಾರ ರಾತೋರಾತ್ರಿ ನಿಜವಾದ ರಾಜಕೀಯ ಪಟ್ಟುಗಳು ಸಿದ್ಧವಾದವು. ಇನ್ನೇನು, ಶಿವಸೇನಾ ನಾಯಕ ಉದ್ಧವ್ ಠಾಕ್ರೆಯ ಕೈಗೆ ಮುಖ್ಯಮಂತ್ರಿ ಪಟ್ಟ ಸಿಕ್ಕಿಬಿಟ್ಟಿತೆನ್ನುವಷ್ಟರಲ್ಲಿ ದೇವೇಂದ್ರ ಫಡಣವೀಸ್ ರಾಜಭವನಕ್ಕೆ ಹೋಗಿ ಮುಖ್ಯಮಂತ್ರಿ ಪಟ್ಟ ಏರಿಯೇ ಬಿಟ್ಟರು, ಎನ್‌ಸಿಪಿಯ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿಬಿಟ್ಟರು. ಈಗ ಮುಖ್ಯಮಂತ್ರಿ ಪಟ್ಟ ತಪ್ಪಿದ ಶಿವಸೇನಾ ಕೈಕೈ ಹಿಸುಕಿಕೊಳ್ಳುತ್ತಿದ್ದರೆ, ಕಾಂಗ್ರೆಸ್ ಆಘಾತಗೊಂಡಿದೆ. ಎನ್‌ಸಿಪಿ ಪಕ್ಷದಲ್ಲಿ ಒಡಕಿನ ಮಾತುಗಳು ಕೇಳಿಬರುತ್ತಿವೆ.

ಇವನ್ನೂ ಓದಿ:

ಬಿಜೆಪಿ– ಎನ್‌ಸಿಪಿ ‘ಮಹಾ‘ ಸರ್ಕಾರ: ಶಿವಸೇನಾ ಗರಂ, ಕಾಂಗ್ರೆಸ್‌ ಮೌನ (ಕ್ಷಣ ಕ್ಷಣದ ಬೆಳವಣಿಗೆ)

ಮಹಾ ಜನರ ಬೆನ್ನಿಗೆ ಚೂರಿ ಹಾಕಿದ  ಅಜಿತ್‌ ಪವಾರ್‌: ಸಂಜಯ್‌ ರಾವುತ್‌

ಈ ಕ್ಷಿಪ್ರ ರಾಜಕೀಯ ಕ್ರಾಂತಿ ವಿರುದ್ಧ ಕಾಂಗ್ರೆಸ್ ಹಾಗೂ ಎನ್‌ಸಿಪಿ ಈಗ ಸುಪ್ರೀಂ ಕೋರ್ಟ್ ಕದ ತಟ್ಟಲು ತೀರ್ಮಾನಿಸಿದೆ. ಕೋಲ್ಕತಾದಲ್ಲಿ ಮೊದಲ ಬಾರಿಗೆ ಹಗಲು-ರಾತ್ರಿ ಕ್ರಿಕೆಟ್ ಟೆಸ್ಟ್ ಪಂದ್ಯ ಹುಟ್ಟಿಸಿದ ಕುತೂಹಲವನ್ನೇ ಮಹಾರಾಷ್ಟ್ರದಲ್ಲಿ ರಾಜಕೀಯ ಬೆಳವಣಿಗೆಗಳೂ ಸೃಷ್ಟಿಸುತ್ತಿವೆ. ರಾತ್ರಿ ಬೆಳಗಾಗುವುದರೊಳಗೆ ನಡೆದ ವಿದ್ಯಮಾನಗಳೇನು? ಇಲ್ಲಿದೆ ಸ್ಪಷ್ಟ ಚಿತ್ರಣ.

ಶುಕ್ರವಾರ 22 ನವೆಂಬರ್ 2019

* ಸಂಜೆ 7 ಗಂಟೆ: ಮುಖ್ಯಮಂತ್ರಿ ಪಟ್ಟ ಉದ್ಧವ್ ಠಾಕ್ರೆಗೆ ನೀಡಲು ಕಾಂಗ್ರೆಸ್, ಎನ್‌ಸಿಪಿ ಒಪ್ಪಿಗೆ ನೀಡಿದೆ ಎಂದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್

* ರಾತ್ರಿ 7.30 ಗಂಟೆ: ಮೂರೂ ಪಕ್ಷಗಳ ಸಭೆ ಅಪೂರ್ಣ, ಮತ್ತಷ್ಟು ವಿಷಯಗಳ ಚರ್ಚೆಯಾಗಬೇಕಿದೆ ಎಂದ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿಯವರ ಸಹಾಯಕ ಅಹ್ಮದ್ ಪಟೇಲ್

* ರಾತ್ರಿ 8.45 ಗಂಟೆ: ಮುಖ್ಯಮಂತ್ರಿ ಪಟ್ಟ ಒಪ್ಪಿಕೊಳ್ಳಲು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಒಪ್ಪಿಗೆ

* ರಾತ್ರಿ 9 ಗಂಟೆ: ಅನೌಪಚಾರಿಕ ಸಭೆಯಿಂದ ಹೊರಬಂದ ಅಜಿತ್ ಪವಾರ್, ವಕೀಲರೊಂದಿಗೆ ಮಾತುಕತೆ

* ರಾತ್ರಿ 10 ಗಂಟೆ: ದೇವೇಂದ್ರ ಫಡಣವೀಸ್ ಅವರು ಸರಕಾರ ರಚನೆಗೆ ಹಕ್ಕು ಮಂಡಿಸಲು ತಯಾರಿ ನಡೆಸುತ್ತಿದ್ದಾರೆ ಎಂದು ರಾಜಭವನಕ್ಕೆ ಮಾಹಿತಿ ನೀಡಲಾಯಿತು.

* ಮಧ್ಯರಾತ್ರಿ 11.45 - ಅಜಿತ್ ಪವಾರ್ ಅವರು ದೇವೇಂದ್ರ ಫಡಣವೀಸ್ ಜತೆ ಒಪ್ಪಂದವನ್ನು ಅಂತಿಮಗೊಳಿಸಿ, ಎನ್‌ಸಿಪಿ ಶಾಸಕಾಂಗ ಪಕ್ಷದ ನಾಯಕನ ನೆಲೆಯಿಂದ ಫಡಣವೀಸ್‌ಗೆ ಬೆಂಬಲ ಪತ್ರ ಒಪ್ಪಿಸಿದರು.

ಶನಿವಾರ, 23 ನವೆಂಬರ್ 2019: 

* ಮಧ್ಯರಾತ್ರಿ 12.30: ಪ್ರಮಾಣವಚನ ಸ್ವೀಕಾರಕ್ಕೆ ರಾಜಭವನದಲ್ಲಿ ತಯಾರಿ ಆರಂಭ

* ರಾತ್ರಿ 2 ಗಂಟೆ - ರಾಷ್ಟ್ರಪತಿ ಆಳ್ವಿಕೆ ಹಿಂತೆಗೆತದ ಆದೇಶ ಹೊರಡಿಸಲು ಮತ್ತು ನಸುಕಿನ ಜಾವದಲ್ಲಿಯೇ ಪ್ರಮಾಣವಚನ ಸ್ವೀಕಾರದ ಸಿದ್ಧತೆ ನಡೆಸಲು ರಾಜ್ಯಪಾಲರ ಕಾರ್ಯದರ್ಶಿಗೆ ಸೂಚನೆ

* ರಾತ್ರಿ 2.30: ಪ್ರಮಾಣವಚನ ಸ್ವೀಕಾರಕ್ಕೆ ರಹಸ್ಯ ತಯಾರಿ

* ಮುಂಜಾನೆ 5.30: ರಾಜಭವನ ತಲುಪಿದ ಬಿಜೆಪಿಯ ದೇವೇಂದ್ರ ಫಡಣವೀಸ್ ಮತ್ತು ಎನ್‌ಸಿಪಿಯ ಅಜಿತ್ ಪವಾರ್

* ಮುಂಜಾನೆ 5.45: ರಾಷ್ಟ್ರಪತಿ ಆಳ್ವಿಕೆ ಹಿಂತೆಗೆತ

* ಬೆಳಗ್ಗೆ 7.50: ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಚಾಲನೆ

* ಬೆಳಗ್ಗೆ 8 ಗಂಟೆ: ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರಿಂದ ದೇವೇಂದ್ರ ಫಡಣವೀಸ್ ಮುಖ್ಯಮಂತ್ರಿಯಾಗಿ ಹಾಗೂ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ

* ಬೆಳಗ್ಗೆ 08.16 ಗಂಟೆ: ಫಡಣವೀಸ್, ಅಜಿತ್ ಪವಾರ್‌ಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು