ಶನಿವಾರ, ಜುಲೈ 31, 2021
28 °C
ವ್ಯರ್ಥವಾಗದಿರಲಿ ಬಲಿದಾನ | ಸರ್ಕಾರಕ್ಕೆ ಸಲಹೆ ನೀಡಿದ ಮಾಜಿ ಪ್ರಧಾನಿ

ಬಳಸುವ ಪದಗಳ ಪರಿಣಾಮಗಳ ಬಗ್ಗೆ ಪ್ರಧಾನಿ ಯೋಚಿಸಬೇಕು: ಮನ‌ಮೋಹನ್ ಸಿಂಗ್

ಪ್ರಜಾವಾಣಿ ವೆಬ್‌ಡೆಸ್ಕ್ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: 'ಪ್ರಧಾನಿ ಸ್ಥಾನದಲ್ಲಿರುವವರು ತಾವು ಬಳಸುವ ಪದಗಳ ಪರಿಣಾಮಗಳ ಬಗ್ಗೆ ಯೋಚಿಸಬೇಕು' ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೋಮವಾರ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ‌ ಸಲಹೆ ಮಾಡಿದ್ದಾರೆ.

ಲಡಾಖ್ ಬಿಕ್ಕಟ್ಟು ಕುರಿತಂತೆ ಇದೇ ಮೊದಲ ಬಾರಿಗೆ ಮೌನ ಮುರಿದಿರುವ ಮಾಜಿ ಪ್ರಧಾನಿ, 'ಕರ್ನಲ್ ಬಿ.ಸಂತೋಷ್ ಬಾಬು ಮತ್ತು ನಮ್ಮ ಯೋಧರ ಬಲಿದಾನಕ್ಕೆ ನ್ಯಾಯ ಒದಗಿಸಲು ಸರ್ಕಾರ ಶ್ರಮಿಸಬೇಕು. ನಮ್ಮ ದೇಶದ ಸಾರ್ವಭೌಮತೆ ಕಾಪಾಡಲು ನಮ್ಮ ಯೋಧರು ಮಾಡಿರುವ ಅಪ್ರತಿಮ ತ್ಯಾಗ ವ್ಯರ್ಥವಾಗಬಾರದು' ಎಂದು ಹೇಳಿದ್ದಾರೆ.

'ಈ ವಿಚಾರವನ್ನು ಸರ್ಕಾರ ಕಡೆಗಣಿಸಬಾರದು. ಹಾಗೆ ಮಾಡಿದರೆ ಜನರು ಸರ್ಕಾರದ ಮೇಲೆ ಇರಿಸಿರುವ ನಂಬಿಕೆಗೆ ಧಕ್ಕೆ ಒದಗಿದಂತೆ ಆಗುತ್ತದೆ' ಎಂದು ಸಿಂಗ್ ಕಿವಿಮಾತು ಹೇಳಿದ್ದಾರೆ.

'ಈ ಕ್ಷಣದಲ್ಲಿ ನಾವು ಐತಿಹಾಸಿಕ ಕವಲು ದಾರಿಯಲ್ಲಿ ನಿಂತಿದ್ದೇವೆ. ನಮ್ಮ ಸರ್ಕಾರ ಈಗ ತೆಗೆದುಕೊಳ್ಳುವ ನಿರ್ಧಾರಗಳನ್ನು ಮುಂದಿನ ತಲೆಮಾರು ಪರಿಶೀಲಿಸುತ್ತದೆ. ಮುಂದಿನ ತಲೆಮಾರು ನಮ್ಮನ್ನು ಹೇಗೆ ಅರ್ಥೈಸಿಕೊಳ್ಳಲಿದೆ ಎಂಬುದನ್ನು ಗಮನದಲ್ಲಿರಿಸಿಕೊಂಡು ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು. ನಮ್ಮ ಪ್ರಜಾಪ್ರಭುತ್ವವು ಈ ಜವಾಬ್ದಾರಿಯನ್ನು ಪ್ರಧಾನ ಮಂತ್ರಿ ಕಚೇರಿಗೆ ನೀಡಿದೆ. ತಾವು ಬಳಸುವ ಪದಗಳ ಪರಿಣಾಮಗಳ ಬಗ್ಗೆ ಪ್ರಧಾನಿ ಯೋಚಿಸಬೇಕು. ರಾಷ್ಟ್ರೀಯ ಭದ್ರತೆ, ಕಾರ್ಯತಂತ್ರ ಮತ್ತು ಪ್ರಾದೇಶಿಕ ಹಿತಾಸಕ್ತಿಗಳಿಗೆ ಅವರು ನೀಡುವ ಹೇಳಿಕೆಗಳಿಂದ ಧಕ್ಕೆಯಾಗಬಾರದು' ಎಂದು ಸಿಂಗ್ ಸಲಹೆ ಮಾಡಿದ್ದಾರೆ.

'ಚೀನಾ ಪ್ರಚೋದನಾಕಾರಿಯಾಗಿ ವರ್ತಿಸುತ್ತಿದೆ. ಗಲ್ವಾನ್ ಕಣಿವೆ ಮತ್ತು ಪಾಂಗಾಂಗ್ ತ್ಸೊ ಸರೋವರದ ಆಸುಪಾಸಿನಲ್ಲಿ ಭಾರತಕ್ಕೆ ಸೇರಿದ ಭೂಪ್ರದೇಶಗಳನ್ನು ಅಕ್ರಮವಾಗಿ ತನ್ನದೆಂದು ವಾದಿಸುತ್ತಿದೆ. ನಾವು ಬೆದರಿಕೆಗಳಿಗೆ ಮಣಿಯುವ ಪ್ರಶ್ನೆಯೇ ಇಲ್ಲ. ಹಲ್ಲೆಕೋರ ಮನಸ್ಥಿತಿಗೆ ಬೆದರಿ ಹಿಂಜರಿಯುವುದೂ ಸಲ್ಲದು' ಎಂದು ಎಚ್ಚರಿಸಿದ್ದಾರೆ.

'ಪ್ರಧಾನಿ ಬಳಸಿದ ಪದಗಳು ಎದುರಾಳಿಗಳಿಗೆ ಅಸ್ತ್ರದಂತೆ ಸಿಗಬಾರದು. ತಪ್ಪು ಮಾಹಿತಿ ನೀಡುವುದು ರಾಜತಾಂತ್ರಿಕ ನಡೆ ಅಥವಾ ಖಡಕ್ ನಾಯಕತ್ವಕ್ಕೆ ಪರ್ಯಾಯವಾಗಲಾರದು. ಸರ್ಕಾರದ ಎಲ್ಲ ಅಂಗಗಳು ಪರಸ್ಪರ ಸಮನ್ವಯದಿಂದ ಕೆಲಸ ಮಾಡಿ, ಉದ್ವಿಗ್ನ ಸ್ಥಿತಿ ಮತ್ತಷ್ಟು ಬಿಗಡಾಯಿಸದಂತೆ ಸರ್ಕಾರ ಎಚ್ಚರವಹಿಸಬೇಕು' ಎಂದು ಸಿಂಗ್ ಸಲಹೆ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು