ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

44 ವರ್ಷ ಹಳೆಯ ಮಿಗ್‌ ಯುದ್ಧ ವಿಮಾನ; ಅಷ್ಟು ವರ್ಷದ ಕಾರನ್ನೂ ಯಾರೂ ಬಳಸಲ್ಲ–ಧನೋಆ

ಭಾರತೀಯ ವಾಯುಪಡೆ
Last Updated 20 ಆಗಸ್ಟ್ 2019, 14:06 IST
ಅಕ್ಷರ ಗಾತ್ರ

ನವದೆಹಲಿ: ‘ಭಾರತೀಯ ವಾಯುಪಡೆಯು 44 ವರ್ಷ ಹಳೆಯ ಮಿಗ್‌–21 ಯುದ್ಧ ವಿಮಾನಗಳನ್ನು ಇಂದಿಗೂ ಬಳಸುತ್ತಿದೆ. ಅಷ್ಟು ವರ್ಷ ಹಳೆಯ ಕಾರನ್ನೂ ಸಹ ಯಾರೊಬ್ಬರೂ ಚಲಾಯಿಸುವುದಿಲ್ಲ’ಎಂದು ವಾಯುಪಡೆ ಮುಖ್ಯಸ್ಥ ಬಿ.ಎಸ್‌.ಧನೋಆ ಹೇಳಿದ್ದಾರೆ.

ನಾಲ್ಕು ದಶಕಗಳಿಂದ ಭಾರತದ ವಾಯುಪಡೆ ರಕ್ಷಣಾ ಕಾರ್ಯಗಳ ಪ್ರಮುಖ ಭಾಗವಾಗಿರುವ ರಷ್ಯಾ ನಿರ್ಮಿತ ಮಿಗ್‌ ಯುದ್ಧ ವಿಮಾನಗಳ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ಮಂಗಳವಾರ ಉತ್ತರ ನೀಡಿದರು. ಭಾರತೀಯ ವಾಯುಪಡೆಯ ಆಧುನೀಕರಣ ಹಾಗೂ ದೇಶೀಕರಣ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಾಕಿಸ್ತಾನ ನಡೆಸಿದ ವಾಯು ದಾಳಿಗೆ ದಿಟ್ಟ ಉತ್ತರ ನೀಡಿದ ಭಾರತ ವಾಯುಪಡೆ, ಮಿಗ್‌–21 ಯುದ್ಧ ವಿಮಾನಗಳ ಮೂಲಕ ಪಾಕ್‌ ವಾಯುಪಡೆಯ ಎಫ್‌–16 ಯುದ್ಧ ವಿಮಾನಗಳನ್ನು ಹಿಮ್ಮೆಟ್ಟಿಸಿದ್ದವು. ವಿಂಗ್‌ ಕಮಾಂಡರ್‌ ಅಭಿನಂದನ್‌ ಮಿಗ್‌–21 ಬೈಸನ್‌ ಯುದ್ಧ ವಿಮಾನದ ಮೂಲಕ ನಡೆಸಿದ ದಿಟ್ಟ ಹೋರಾಟದಲ್ಲಿ ಎಫ್‌–16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದರು. ಈ ಘಟನೆಯ ಬಳಿಕ ಹಳೆಯ ಯುದ್ದ ವಿಮಾನ ಮಿಗ್‌–21 ಬಳಸಿ ಭಾರತ ತೋರಿದ ಹೋರಾಟಕ್ಕೆ ಹಲವು ರಾಷ್ಟ್ರಗಳು ಅಚ್ಚರಿ ವ್ಯಕ್ತಪಡಿಸಿದ್ದವು. ಮಿಗ್‌–21 ಬಹು ಚರ್ಚಿತ ವಿಷಯವಾಯಿತು.

44 ವರ್ಷಗಳಷ್ಟು ಹಳೆಯದಾದ ಮಿಗ್‌–21 ಯುದ್ಧ ವಿಮಾನಗಳನ್ನು ಇಂದಿಗೂ ಬಳಸುತ್ತಿರುವ ಬಗ್ಗೆ ಧನೋಆ ಮಾತನಾಡಿದ್ದಾರೆ. ಇಷ್ಟು ವರ್ಷ ಹಳೆಯದಾದ ಕಾರುಗಳನ್ನೇ ಯಾರೂ ಸಹ ಚಲಾಯಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸಹ ಭಾಗವಹಿಸಿದ್ದರು.

ವಿಂಗ್‌ ಕಮಾಂಡರ್‌ ಅಭಿನಂದನ್‌
ವಿಂಗ್‌ ಕಮಾಂಡರ್‌ ಅಭಿನಂದನ್‌

‘ಇದೇ ವರ್ಷ ರಷ್ಯಾ ನಿರ್ಮಿತ ಆರಂಭಿಕ ಶ್ರೇಣಿಯ ಯುದ್ಧ ವಿಮಾನಗಳು ಹಾರಾಟ ನಿಲ್ಲಿಸಲಿವೆ. ಸೆಪ್ಟೆಂಬರ್‌ನಲ್ಲಿ ನಾನು ಅದರ ಕೊನೆಯ ಹಾರಾಟ ನಡೆಸುವ ಸಾಧ್ಯತೆ‘ ಇರುವುದಾಗಿ ಹೇಳಿದರು.

’ಮಿಗ್‌ ನಿರ್ಮಿಸಿರುವ ರಷ್ಯಾ ಸಹ ಅದರ ಹಾರಾಟ ನಡೆಸುತ್ತಿಲ್ಲ. ಆದರೆ, ನಾವು ಅದರ ಬಳಕೆ ಮುಂದುವರಿಸಿದ್ದೇವೆ. ಏಕೆಂದರೆ, ಅದನ್ನು ಆಧುನೀಕರಿಸಬಹುದಾದ ಹಾಗೂ ದುರಸ್ಥಿ ನಡೆಸಲು ಅಗತ್ಯವಿರುವ ವ್ಯವಸ್ಥೆ ನಮ್ಮಲ್ಲಿದೆ. ಅದಕ್ಕೆ ಬಳಸುತ್ತಿರುವ ಶೇ 95ರಷ್ಟು ಬಿಡಿಭಾಗಗಳನ್ನು ಭಾರತದಲ್ಲಿಯೇ ಸಿದ್ಧಪಡಿಸಲಾಗುತ್ತಿದೆ‘ ಎಂದು ಧನೋಆ ತಿಳಿಸಿದರು.

1973–74ರಲ್ಲಿ ಭಾರತೀಯ ವಾಯುಪಡೆಗೆ ಮಿಗ್‌–21 ಯುದ್ಧ ವಿಮಾನ ಸೇರ್ಪಡೆಯಾಯಿತು.

2006ರಲ್ಲಿ ಕನಿಷ್ಠ 110 ಮಿಗ್‌–21 ಯುದ್ಧ ವಿಮಾನಗಳನ್ನು ಆಧುನೀಕರಿಸಲಾಯಿತು. ಮಿಗ್‌–21 ಬೈಸನ್‌ ಹೆಸರಿನ ಅವುಗಳು ಅಧಿಕ ಸಾಮರ್ಥ್ಯದ ರಡಾರ್‌, ಉತ್ತಮಗೊಳಿಸಿದ ಎಲೆಕ್ಟ್ರಾನಿಕ್‌ ವ್ಯವಸ್ಥೆ ಹಾಗೂ ಸಂವಹನ ವ್ಯವಸ್ಥೆಯನ್ನು ಒಳಗೊಂಡಿವೆ.

ಕಾರ್ಗಿಲ್‌ ಹೋರಾಟದಲ್ಲಿ ಹುತಾತ್ಮರಾದ ಯೋಧರ ಗೌರವಾರ್ಥ 2017ರ ಮೇನಲ್ಲಿ ಧನೋಆ ಅವರು ಮಿಗ್‌–21 ಹಾರಾಟ ನಡೆಸಿದ್ದರು. ’ಮಿಸ್ಸಿಂಗ್‌ ಮ್ಯಾನ್‌‘ ರಚನೆಯ ನೇತೃತ್ವವಹಿಸಿದ್ದರು.

ಕಳೆದ 40 ವರ್ಷಗಳಲ್ಲಿ ಮಿಗ್‌–21 ಯುದ್ಧ ವಿಮಾನಗಳು ಹಲವು ಬಾರಿ ಪತನಗೊಂಡಿವೆ. ಭಾರತ 872 ಮಿಗ್‌ ವಿಮಾನಗಳಲ್ಲಿ ಅರ್ಧದಷ್ಟು ಕಳೆದುಕೊಂಡಿದೆ ಎಂದು ಸಂಸತ್ತಿನಲ್ಲಿ ಇತ್ತೀಚೆಗೆ ಮಾಹಿತಿ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT