ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌-19 : ಸೋನಿಯಾ ಗಾಂಧಿ, ಪ್ರಣವ್ ಮುಖರ್ಜಿ ಜತೆ ಪ್ರಧಾನಿ ಮೋದಿ ಚರ್ಚೆ

ಪ್ರತಿಪಕ್ಷಗಳ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಪ್ರಧಾನಿ ಕ್ರಮ
Last Updated 6 ಏಪ್ರಿಲ್ 2020, 6:02 IST
ಅಕ್ಷರ ಗಾತ್ರ

ನವದೆಹಲಿ: ‘ಕೋವಿಡ್‌–19’ ಪರಿಣಾಮ ದೇಶವ್ಯಾಪಿ ಆವರಿಸುತ್ತಿರುವಂತೆ ಪರಿಸ್ಥಿತಿಯನ್ನು ಕುರಿತು ಪ್ರಧಾನಿ ನರೇಂದ್ರ ಮೋದಿಕಾಂಗ್ರೆಸ್‌ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ರಾಷ್ಟ್ರಪತಿಗಳಾದ ಪ್ರಣವ್ ಮುಖರ್ಜಿ, ಪ್ರತಿಭಾ ಪಾಟೀಲ್‌ ಮತ್ತು ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್‌ ಮತ್ತು ಎಚ್‌.ಡಿ.ದೇವೇಗೌಡ ಅವರಿಗೆ ದೂರವಾಣಿ ಕರೆ ಮಾಡಿ ಮೋದಿ ಚರ್ಚಿಸಿದ್ದಾರೆ.

ಕೋವಿಡ್‌ ಸವಾಲುಗಳನ್ನು ಎದುರಿಸಲು ನೀತಿ ರೂಪಿಸುವಾಗ ಕೇಂದ್ರ ಸರ್ಕಾರ ಪ್ರತಿಪಕ್ಷಗಳ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ಟೀಕೆಗಳು ಕೇಳಿಬಂದಿದ್ದವು. ಸಮಸ್ಯೆ ಕುರಿತು ಈಚೆಗೆ ಸೋನಿಯಾ ಗಾಂಧಿ ಅವರು ಈಚೆಗೆ ಪತ್ರವನ್ನೂ ಬರೆದಿದ್ದರು.

ಮಾಜಿ ಪ್ರಧಾನಿ, ರಾಷ್ಟ್ರಪತಿಗಳಲ್ಲದೇ ವಿವಿಧ ಪಕ್ಷಗಳ ಮುಖಂಡರಾದ ಮುಲಾಯಂ ಸಿಂಗ್ ಯಾದವ್, ಅಖಿಲೇಶ್ ಯಾದವ್‌ (ಉತ್ತರ ಪ್ರದೇಶ), ಪ್ರಕಾಶ್ ಸಿಂಗ್ ಬಾದಲ್ (ಪಂಜಾಬ್), ಮುಖ್ಯಮಂತ್ರಿಗಳಾದ ಮಮತಾ ಬ್ಯಾನರ್ಜಿ (ಪಶ್ಚಿಮ ಬಂಗಾಳ), ನವೀನ್‌ ಪಟ್ನಾಯಕ್‌ (ಒಡಿಶಾ), ಕೆ. ಚಂದ್ರಶೇಖರ ರಾವ್‌ (ತೆಲಂಗಾಣ), ಡಿಎಂಕೆ ಮುಖಂಡ ಎಂ.ಕೆ.ಸ್ಟಾಲಿನ್‌ ಜೊತೆಗೂ ಮೋದಿ ಚರ್ಚೆ ನಡೆಸಿದ್ದಾರೆ.

ಸಂಸತ್ತಿನ ಉಭಯ ಸದನಗಳ ಮುಖಂಡರ ಜೊತೆಗೆ ಪ್ರಧಾನಿ ಚರ್ಚಿಸುತ್ತಾರೆಎಂದು ಸರ್ಕಾರ ಶನಿವಾರವಷ್ಟೇ ಪ್ರಕಟಿಸಿತ್ತು. ಆದರೆ, ಇದಕ್ಕೆ ತಕ್ಷಣವೇ ತಕರಾರು ತೆಗೆದಿದ್ದ ತೃಣಮೂಲ ಕಾಂಗ್ರೆಸ್‌ ಪಕ್ಷ ಸಂಸತ್ತಿನಲ್ಲಿ ಈ ವಿಷಯ ಕುರಿತು ಚರ್ಚೆಯಾಗಬೇಕು ಎಂದು ಪ್ರಸ್ತಾಪಿಸಿತ್ತು. ಇದನ್ನುಸರ್ಕಾರ ತಳ್ಳಿಹಾಕಿದ್ದರಿಂದತಾವುಚರ್ಚೆಯಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿಸಿತ್ತು.

ಪ್ರಮುಖ ವಿರೋಧಪಕ್ಷವಾದ ಕಾಂಗ್ರೆಸ್ ಪಕ್ಷ ಕೇಂದ್ರದ ವಿರುದ್ಧ ಕೋವಿಡ್‌ಗೆ ಸಂಬಂಧಿಸಿ ಆಗಾಗ್ಗೆ ಟೀಕಾಸ್ತ್ರ ಪ್ರಯೋಗಿಸುತ್ತಿದೆ. ಮಾರ್ಚ್‌ 24ರಂದು ಲಾಕ್‌ಡೌನ್‌ ಘೋಷಿಸಿದ ಬಳಿಕ ವಲಸೆ ಕಾರ್ಮಿಕರಿಗೆ ಎದುರಾದ ಸಂಕಷ್ಟ ಕುರಿತು ಪ್ರಮುಖವಾಗಿ ತರಾಟೆಗೆ ತೆಗೆದುಕೊಂಡಿತ್ತು.

ಶಾಲೆ, ಕಾಲೇಜು ಪುನರಾರಂಭ: 14ರ ಬಳಿಕ ನಿರ್ಧಾರ

‘ಶಾಲೆ, ಕಾಲೇಜು ಪುನರಾರಂಭ ಕುರಿತು ಲಾಕ್‌ಡೌನ್‌ ಅವಧಿ ಏಪ್ರಿಲ್‌ 14ರಂದು ಮುಗಿದ ಬಳಿಕ ಸಮಗ್ರ ಸ್ಥಿತಿ ಅವಲೋಕಿಸಿ ನಿರ್ಧರಿಸಲಾಗುವುದು’ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್‌ ನಿಶಾಂಕ್‌ ತಿಳಿಸಿದರು.

‘ವಿದ್ಯಾರ್ಥಿಗಳು, ಶಿಕ್ಷಕರ ಸುರಕ್ಷತೆಗೇ ಸರ್ಕಾರದ ಪ್ರಥಮ ಆದ್ಯತೆ. ಏಪ್ರಿಲ್‌ 14ರ ನಂತರವೂ ಶಾಲೆ, ಕಾಲೇಜುಗಳು ಮುಚ್ಚುವ ಸ್ಥಿತಿ ಬಂದರೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷ ನಷ್ಟವಾಗದಂತೆ ಸರ್ಕಾರ ಎಚ್ಚರವಹಿಸಲಿದೆ. ಪರಿಸ್ಥಿತಿ ಅವಲೋಕಿಸದೇ ತಕ್ಷಣಕ್ಕೆ ಈ ಕುರಿತ ತೀರ್ಮಾನ ಕಷ್ಟ. ದೇಶದಲ್ಲಿ ವಿದ್ಯಾರ್ಥಿಗಳ ಸಂಖ್ಯೆ 34 ಕೋಟಿ. ಇದು, ಅಮೆರಿಕದ ಜನಸಂಖ್ಯೆಗಿಂತಲೂ ಅಧಿಕ. ಇದು, ದೇಶದ ಆಸ್ತಿ. ವಿದ್ಯಾರ್ಥಿಗಳ ಸುರಕ್ಷತೆಗೆ ಒತ್ತು ನೀಡುವುದೇ ಸರ್ಕಾರದ ಆದ್ಯತೆ. ಲಾಕ್‌ಡೌನ್‌ ಅವಧಿಯಲ್ಲಿ ಶಾಲೆ, ಕಾಲೇಜುಗಳು ಪಾಲಿಸಬೇಕಾದ ಕ್ರಮಗಳ ಪರಿಶೀಲನೆ ನಡೆದಿದೆ. ಲಾಕ್‌ಡೌನ್‌ ತೀರ್ಮಾನ ಹಿಂತೆಗೆದುಕೊಂಡ ಬಳಿಕ, ಬಾಕಿ ಉಳಿದಿರುವ ಪರೀಕ್ಷೆ ಮತ್ತು ಮೌಲ್ಯಮಾಪನ ನಡೆಸುವ ಬಗ್ಗೆ ಯೋಜನೆ ಸಿದ್ಧವಾಗಿದೆ ಎಂದು ಸಚಿವರು ತಿಳಸಿದ್ದಾರೆ.

ಹಂತ–ಹಂತವಾಗಿ ವಿಮಾನಸಂಚಾರ ಆರಂಭ?
ಲಾಕ್‌ಡೌನ್‌ ಅವಧಿ ಮುಗಿದ ಬಳಿಕ ಹಂತ–ಹಂತವಾಗಿ ದೇಶೀಯ ಮತ್ತು ಅಂತರರಾಷ್ಟ್ರಿಯ ವಿಮಾನಯಾನ ಆರಂಭಿಸಲು ಸರ್ಕಾರ ಅನುಮತಿ ನೀಡುವ ಸಂಭವವಿದೆ.

ಕೊರೊನಾ ಸೋಂಕು ಹರಡುವುದನ್ನು ತಡೆಯಲು 21 ದಿನಗಳ ಕಾಲ ದೇಶವ್ಯಾಪಿ ಲಾಕ್‌ಡೌನ್‌ ಘೋಷಿಸಿದ್ದು, ವೈಮಾನಿಕ ವಲಯ ಇದರ ಗಂಭೀರ ಪರಿಣಾಮಕ್ಕೆ ತುತ್ತಾಗಿದೆ. ಆರ್ಥಿಕ ಪರಿಣಾಮಕ್ಕೆ ಗುರಿಯಾಗಿರುವ ಏರ್ ಡೆಕ್ಕನ್‌ ಸಂಸ್ಥೆ ಭಾನುವಾರ, ಅನಿರ್ದಿಷ್ಟಾವಧಿಗೆ ತನ್ನ ಸೇವೆಯನ್ನು ಮುಂದೂಡಿದ್ದು, ಸಿಬ್ಬಂದಿಗೆ ವೇತನರಹಿತ ರಜೆ ತೆರಳುವಂತೆ ಸೂಚಿಸಿದೆ.

15ಕ್ಕೆ ಲಾಕ್‌ಡೌನ್‌ ತೆರವು: ಆದಿತ್ಯನಾಥ್‌

ಕೊರೊನಾ ವೈರಸ್‌ ನಿಯಂತ್ರಿಸಲು ವಿಧಿಸಿರುವ ಲಾಕ್‌ಡೌನ್‌ ಅನ್ನು ಏಪ್ರಿಲ್‌ 15ರಂದು ತೆರವುಗೊಳಿಸಲಾಗುವುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

ಆದರೆ, ಜನದಟ್ಟಣೆಯಾಗದಂತೆ ನಿಯಂತ್ರಿಸಬೇಕಾದ ದೊಡ್ಡ ಸವಾಲು ಇದೆ. ಇಲ್ಲದಿದ್ದರೆ ಇದುವರೆಗೆ ಕೈಗೊಂಡ ಎಲ್ಲ ಪ್ರಯತ್ನಗಳು ವಿಫಲವಾಗುತ್ತವೆ ಎಂದು ಎಚ್ಚರಿಸಿದ್ದಾರೆ.

ಆದರೆ, ಇದು ಕೇವಲ ಉತ್ತರ ಪ್ರದೇಶಕ್ಕೆ ಸೀಮಿತವಾಗಿ ಯೋಗಿ ಆದಿತ್ಯನಾಥ್‌ ಹೇಳಿಕೆ ನೀಡಿದ್ದಾರೆಯೇ ಎನ್ನುವುದು ಸ್ಪಷ್ಟವಾಗಿಲ್ಲ.

ಉತ್ತರ ಪ್ರದೇಶದ ಸಂಸದರ ಜತೆ ವಿಡಿಯೊ ಕಾನ್ಫೆರೆನ್ಸ್‌ ಮೂಲಕ ಸಭೆ ನಡೆಸಿದ ಅವರುಜನದಟ್ಟಣೆ ನಿಯಂತ್ರಿಸಲು ಕಾರ್ಯತಂತ್ರ ರೂಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಂಸದರು ಸಲಹೆಗಳನ್ನು ನೀಡಬೇಕು ಎಂದು ಹೇಳಿದ್ದಾರೆ.

ಎರಡು ವಾರ ಇನ್ನಷ್ಟು ಕಠಿಣ: ಟ್ರಂಪ್‌

ವಾಷಿಂಗ್ಟನ್‌: ಮುಂದಿನ ಎರಡು ವಾರ ಅಮೆರಿಕಕ್ಕೆ ಅತ್ಯಂತ ಕಠಿಣವಾಗಲಿದ್ದು, ಕೋವಿಡ್‌–19 ಗೆಸಾವು–ನೋವು ಹೆಚ್ಚುವ ಸಾಧ್ಯತೆ ಇದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.

ಶ್ವೇತಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಂದಿನ ಎರಡು ವಾರ ಅತ್ಯಂತ ಮಾರಕವಾಗಲಿವೆ. ಆದರೆ, ಈ ಸಮಸ್ಯೆಯಿಂದ ಹೊರಬರುವ ವಿಶ್ವಾಸವಿದೆ’ ಎಂದು ತಿಳಿಸಿದ್ದಾರೆ.

‌‘ನಾವು ಈಗ ಭೀಕರ ಸನ್ನಿವೇಶದಲ್ಲಿದ್ದೇವೆ.‌ ದೇಶ ಹಿಂದೆಂದೂ ಈ ರೀತಿಯ ಸಂದರ್ಭವನ್ನು ಕಂಡಿರಲಿಲ್ಲ’ ಎಂದು ಟ್ರಂಪ್‌ ಹೇಳಿದ್ದಾರೆ.

ದೇಶದಲ್ಲಿ ಸೋಂಕಿತರ ಸಂಖ್ಯೆ 3 ಲಕ್ಷ ಗಡಿ ದಾಟಿದ್ದು, 8 ಸಾವಿರಕ್ಕೂ ಹೆಚ್ಚು ಮಂದಿ ಮೃತರಾಗಿದ್ದಾರೆ.

ಮುಂದಿನ ಎರಡು ತಿಂಗಳಲ್ಲಿ ಅಮೆರಿಕದಲ್ಲಿ ಒಂದು ಲಕ್ಷದಿಂದ ಎರಡು ಲಕ್ಷ ಜನರು ಸೋಂಕಿನಿಂದ ಮೃತರಾಗಬಹುದು ಎಂದು ಕೊರೊನಾ ಸೋಂಕು ತಡೆಗೆ ಸಂಬಂಧಿಸಿದ ಶ್ವೇತಭವನ ಕಾರ್ಯಪಡೆ ಎಚ್ಚರಿಸಿದೆ. ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ಈ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT