ಸೋಮವಾರ, ಮಾರ್ಚ್ 1, 2021
31 °C
ಮುಂಬೈ ಮಳೆ: ಸಂಕಷ್ಟದಲ್ಲಿರುವವರ ನೆರವಿಗೆ ಸಿದ್ಧ; ಸಾಮಾಜಿಕ ಜಾಲತಾಣಗಳ ಮೂಲಕ ಸಂದೇಶ

ಮಹಾನಗರದ ಜಗ್ಗದ ಜೀವನೋತ್ಸಾಹ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಧಾರಾಕಾರ ಮಳೆಗೆ ಮುಂಬೈಯ ಜನಜೀವನ ಅಸ್ತವ್ಯಸ್ತಗೊಂಡಿದ್ದರೂ ಆ ಮಹಾನಗರದ ಜನರ ಜೀವನೋತ್ಸಾಹ ಕುಂದಿಲ್ಲ. ಇಂಥ ಸಂಕಷ್ಟದ ಸ್ಥಿತಿಯಲ್ಲೂ ಜನರು, ‘ಪರವಾಗಿಲ್ಲ, ಈ ಸ್ಥಿತಿಯಿಂದ ಮೇಲೆದ್ದು ಬರುತ್ತೇವೆ’ ಎನ್ನುತ್ತಿದ್ದಾರೆ.

ಸಂಕಷ್ಟಕ್ಕೆ ಒಳಗಾದ ಜನರಿಗೆ ನೆರವಿನ ಕೈಚಾಚಲು ಸಾವಿರಾರು ಮಂದಿ ಸಾಮಾಜಿಕ ಮಾಧ್ಯಮಗಳ ಮೊರೆ ಹೋಗಿದ್ದಾರೆ. ಆಗಾಗ ಸಂದೇಶಗಳನ್ನು ರವಾನಿಸುತ್ತಾ ಸಾಧ್ಯವಾದ ಮಟ್ಟಿಗೆ ನೆರವಾಗುತ್ತಿದ್ದಾರೆ. ವಾಹನದಲ್ಲಿ ಹೋಗುತ್ತಿರುವವರು, ಅಪರಿಚಿತರೇ ಆಗಿದ್ದರೂ ಸಂಕಷ್ಟಕ್ಕೆ ಒಳಗಾದವರನ್ನು ಜತೆಗೆ ಕರೆದೊಯ್ಡು ಸುರಕ್ಷಿತ ತಾಣದಲ್ಲಿ ಬಿಡುತ್ತಿದ್ದಾರೆ.

‘ವೀರ ದೇಸಾಯಿ ರಸ್ತೆ ಅಥವಾ ಅಂಬೋಲಿ ಪ್ರದೇಶದಲ್ಲಿ (ಅಂಧೇರಿ ಪೂರ್ವ) ಯಾರಾದರೂ ಸಿಲುಕಿಕೊಂಡಿದ್ದರೆ ದಯವಿಟ್ಟು ನನ್ನನ್ನು ಸಂಪರ್ಕಿಸಲು ಸಂಕೋಚಪಡಬೇಡಿ. ಮಳೆಯ ಅಬ್ಬರ ಕಡಿಮೆಯಾಗುವವರೆಗೆ ನನ್ನ ಮನೆಯಲ್ಲಿ ಉಳಿದುಕೊಳ್ಳಬಹುದು’ ಎಂದು ಬಿಭಾಷ್‌ ಚಟರ್ಜಿ ಎಂಬುವರು ಟ್ವಿಟರ್‌ ಮೂಲಕ ಸಂದೇಶ ರವಾನಿಸಿದ್ದಾರೆ.

ಕ್ರೀಡಾ ಬರಹಗಾರ ಬಿಹಾನ್‌ ಸೆನ್‌ಗುಪ್ತಾ ಎಂಬುವರು, ‘ಮೀರಾ ರೋಡ್‌, ವರ್ಲಿ ಮುಂತಾದ ಪ್ರದೇಶಗಳಲ್ಲಿ ಸಿಲುಕಿಕೊಂಡಿರುವವರು ಸಂಕೋಚವಿಲ್ಲದೆ ನನ್ನ ಮನೆಗೆ ಬನ್ನಿ. ಚಹಾ–ಕಾಫಿ ಹಾಗೂ ತಿಂಡಿಯ ವ್ಯವಸ್ಥೆ ಮಾಡಬಲ್ಲೆ. ಇದಕ್ಕಿಂತ ಹೆಚ್ಚಿನ ಸಹಾಯ ಮಾಡಲಾಗದು. ಯಾಕೆಂದರೆ ನಮ್ಮ ಮನೆಕೆಲಸದಾಕೆ ಕೆಟ್ಟದಾಗಿ ಅಡುಗೆ ಮಾಡುತ್ತಾಳೆ’ ಎಂದು ಹಾಸ್ಯಮಿಶ್ರಿತ ಸಂದೇಶವನ್ನು ಪೋಸ್ಟ್‌ ಮಾಡಿದ್ದಾರೆ.

ಅನೇಕರು ತಾವು ಮಳೆಯಲ್ಲಿ ಸಿಲುಕಿಕೊಂಡಿದ್ದವರಿಗೆ ಹೇಗೆ ನೆರವಾದೆವು ಎಂಬುದನ್ನು ಟ್ವಿಟರ್‌, ಫೇಸ್‌ಬುಕ್‌ ಮುಂತಾದ ಸಾಮಾಜಿಕ ಮಾಧ್ಯಮಗಳ ಮೂಲಕ ಹೇಳಿಕೊಂಡಿದ್ದಾರೆ.

ಸರ್ಕಾರಿ ವ್ಯವಸ್ಥೆಯೂ ಜನರಿಗೆ ಸಾಧ್ಯವಾದಷ್ಟು ಅನುಕೂಲಗಳನ್ನು ಕಲ್ಪಿಸುತ್ತಿದೆ. ರೈಲ್ವೆ ರಕ್ಷಣಾ ದಳದವರು ಠಾಣೆ ನಿಲ್ದಾಣದಲ್ಲಿ ಸಿಲುಕಿರುವ ಪ್ರಯಾಣಿಕರಿಗೆ ಊಟ– ತಿಂಡಿಯ ವ್ಯವಸ್ಥೆ ಮಾಡಿದ್ದಾರೆ.

ಜನರು ಪರಸ್ಪರರಿಗೆ ನೆರವಾ ಗುವುದು ಒಂದೆಡೆಯಾದರೆ, ಮಳೆ ಯಿಂದಾಗಿ ದಿನದ ಆದಾಯಕ್ಕೆ ಕುತ್ತು ಉಂಟಾಗಿ ಸಂಕಷ್ಟಕ್ಕೆ ಸಿಲುಕಿರುವವರ ಸಂಖ್ಯೆಯೂ ದೊಡ್ಡದಿದೆ.

ಮುಖ್ಯ ರನ್‌ವೇ 2 ದಿನ ಸ್ಥಗಿತ
ಭಾರಿ ಮಳೆ ಹಾಗೂ ಮುಖ್ಯ ರನ್‌ವೇ ಲಭ್ಯವಿಲ್ಲದ ಕಾರಣ ಮುಂಬೈ ವಿಮಾನ ನಿಲ್ದಾಣದಿಂದ ತೆರಳಬೇಕಿದ್ದ 70 ವಿಮಾನಗಳ ಸಂಚಾರವನ್ನು ರದ್ದುಪಡಿಸಲಾಗಿದೆ. 70ಕ್ಕೂ ಹೆಚ್ಚು ವಿಮಾನಗಳನ್ನು ಸಮೀಪದ ನಿಲ್ದಾಣಗಳತ್ತ ತಿರುಗಿಸಲಾಗಿದೆ. ವಿಮಾನ ನಿಲ್ದಾಣ ಸಂಪೂರ್ಣವಾಗಿ ಕಾರ್ಯಾಚರಿಸಲು ಇನ್ನೆರಡು ದಿನ ಹಿಡಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಸ್ಪೈಸ್ ಜೆಟ್ ಸಂಸ್ಥೆಯ ಬೋಯಿಂಗ್ 737 ವಿಮಾನವು ಸೋಮವಾರ ರಾತ್ರಿ ಮುಖ್ಯ ರನ್‌ವೇನಲ್ಲಿ ಜಾರಿತ್ತು. ಭಾಗಶಃ ರನ್‌ವೇ ಮೇಲೆ ಸಿಲುಕಿಕೊಂಡಿರುವ ವಿಮಾನವನ್ನು ಸ್ಥಳದಿಂದ ತೆರವುಗೊಳಿಸಿ, ಸಂಚಾರ ಸುಗಮಗೊಳಿಸುವ ಕಾರ್ಯ ನಡೆಯುತ್ತಿದೆ ಎಂದು ಸಿಬ್ಬಂದಿ ಹೇಳಿದ್ದಾರೆ. 

167 ಪ್ರಯಾಣಿಕರು ಹಾಗೂ ಸಿಬ್ಬಂದಿ ತೆರಳುತ್ತಿದ್ದ ಜೈಪುರ–ಮುಂಬೈ ಮಾರ್ಗದ ವಿಮಾನ ಭಾರಿ ಮಳೆಯ ನಡುವೆಯೇ ರನ್‌ವೇನಲ್ಲಿ ಇಳಿಯಿತು. ಇಳಿಯುವ ವೇಳೆ ತಕ್ಷಣಕ್ಕೆ ಅದು ಪೈಲಟ್ ನಿಯಂತ್ರಣಕ್ಕೆ ಸಿಕ್ಕಿರಲಿಲ್ಲ.

‘ಮೊದಲ ರನ್‌ವೇನಲ್ಲಿ ವಿಮಾನ ಸಿಲುಕಿ ಹಾಕಿಕೊಂಡಿರುವ ಕಾರಣ ಎರಡನೇ ರನ್‌ವೇನಿಂದ ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ. ಮಳೆ ಬಿಡುವು ಕೊಡದಿದ್ದರೆ ವಿಮಾನವನ್ನು ರನ್‌ವೇನಿಂದ ಸ್ಥಳಾಂತರಿಸುವುದು ವಿಳಂಬವಾಗಲಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಬಿಎಂಸಿ ಕೊಠಡಿಯಲ್ಲಿ ಸಿ.ಎಂ
ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ಪರಿಸ್ಥಿತಿಯ ಅವಲೋಕನಕ್ಕಾಗಿ ಮುಂಬೈ ನಗರಪಾಲಿಕೆಯ ‘ವಿಪತ್ತು ನಿರ್ವಹಣಾ ಘಟಕಕ್ಕೆ’ ಧಾವಿಸಿದ್ದರು. ಪಾಲಿಕೆಯ ಆಯುಕ್ತ ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆ ಅವರು ಸಭೆ ನಡೆಸಿದರು. ‘ಹಿಂದೆಂದೂ ಕಂಡಿರದಂಥ ಸ್ಥಿತಿ ಎದುರಾಗಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

24 ಗಂಟೆಗಳಲ್ಲಿ 375.2 ಮಿ.ಮೀ ಮಳೆ
ಮುಂಬೈ ಮಹಾನಗರದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 375.2 ಮಿ.ಮೀ ಪ್ರಮಾಣದಷ್ಟು ಮಳೆ ಸುರಿದಿದೆ. ನಗರದ ರಸ್ತೆಗಳಲ್ಲಿ ಪ್ರವಾಹದ ಸ್ಥಿತಿಯನ್ನು ನಿರ್ಮಾಣ ಮಾಡುವ ಮೂಲಕ ನಿವಾಸಿಗಳಿಗೆ ದುಃಸ್ವಪ್ನದಂತೆ ಕಾಡಿದೆ.

ನಗರದಲ್ಲಿ ಈ ಹಿಂದೆ ಜುಲೈ 26, 2005ರಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಅಧಿಕಾರಿಗಳ ಪ್ರಕಾರ, 1974ರ ನಂತರ ನಗರದಲ್ಲಿ ಒಂದು ದಿನದ ಅವಧಿಯಲ್ಲಿ ಸುರಿದಿರುವ ಗರಿಷ್ಠ ಪ್ರಮಾಣದ ಮಳೆ ಇದಾಗಿದೆ.

ಕಳೆದ 24 ಗಂಟೆಯಲ್ಲಿ 375.2 ಮಿ.ಮೀ ಮಳೆ ಸುರಿದಿರುವುದು ಸಾಂತಾಕ್ರೂಜ್‌ನಲ್ಲಿನ ಮಳೆ ಮಾಪನ ಕೇಂದ್ರದಲ್ಲಿ ದಾಖಲಾಗಿದೆ ಎಂದು ಮುಂಬೈ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು