ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರಾವಿಯಲ್ಲಿ ಕುಗ್ಗುತ್ತಿದೆ ಕೊರೊನಾ ಬಲ

ಮುಂದಿನ ಎರಡು ವಾರ ನಿರ್ಣಾಯಕ
Last Updated 9 ಜೂನ್ 2020, 5:55 IST
ಅಕ್ಷರ ಗಾತ್ರ

ಮುಂಬೈ: ದೇಶದ ಪ್ರಮುಖ ಕೊರೊನಾ ಹಾಟ್‌ಸ್ಪಾಟ್‌ ಮುಂಬೈನಿಂದ ಜನರಿಗೆ ತುಸು ನೆಮ್ಮದಿ ತರುವ ಸುದ್ದಿಯೊಂದು ಬಂದಿದೆ. ಮುಂಬೈ ಮಹಾನಗರದ ಕೊರೊನಾ ಕೇಂದ್ರಗಳಾದ ಧಾರಾವಿ ಮತ್ತು ವರ್ಲಿ ಪ್ರದೇಶಗಳಲ್ಲಿ ಹೊಸ ಕೋವಿಡ್‌–19 ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ.

ಮೇ ತಿಂಗಳಲ್ಲಿ ಸರಾಸರಿ ಶೇ 60ರಷ್ಟಿದ್ದ ಕೋವಿಡ್‌–19 ಸೋಂಕಿನ ಪ್ರಕರಣ, ಜೂನ್‌ ಮೊದಲ ವಾರದಲ್ಲಿ ಶೇ 35–40ಕ್ಕೆ ಕುಸಿದಿದೆ.ಪ್ರತಿ ದಿನ ವರದಿಯಾಗುತ್ತಿರುವ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಆಡಳಿತದ ಆತಂಕವನ್ನು ಕಡಿಮೆ ಮಾಡಿದೆ.

ಏಷ್ಯಾದ ದೊಡ್ಡ ಕೊಳೆಚೆ ಪ್ರದೇಶವಾದ ಧಾರಾವಿಯಲ್ಲಿ ಕಳೆದ ತಿಂಗಳಿಗೆ ಹೋಲಿಸಿದರೆ ಜೂನ್‌ನಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಶೇ 47ರಿಂದ ಶೇ 27ಕ್ಕೆ ಇಳಿದಿದೆ.ಕಳೆದ ತಿಂಗಳು ಸರಾಸರಿ ಶೇ 60ರಷ್ಟು ಪ್ರಕರಣ ದಾಖಲಾಗಿದ್ದ ರ್ವಲಿಯಲ್ಲಿ ಈಗ ಶೇ 35–40 ಪ್ರಕರಣ ವರದಿಯಾಗಿವೆ.

ವರ್ಲಿ ಮತ್ತು ಧಾರಾವಿಯಲ್ಲಿ ಕೋವಿಡ್‌–19 ಪ್ರಕರಣಗಳ ಏರುಗತಿ ವೇಗ ಕ್ರಮವಾಗಿ ಶೇ 1.9 ಮತ್ತು ಶೇ 1.7ಕ್ಕೆ ಇಳಿದಿದೆ. ಮುಂಬೈ ಇತರ ಪ್ರದೇಶಗಳಿಗಿಂತಲೂ ಇದು ಕಡಿಮೆ.

ಅದೇ ರೀತಿ ಈ ಎರಡು ಪ್ರದೇಶಗಳಲ್ಲಿ ಪ್ರಕರಣ ದ್ವಿಗುಣ ಪ್ರಮಾಣ ಕ್ರಮವಾಗಿ 44 ಮತ್ತು 38 ದಿನಗಳಿಗೆ ಹೆಚ್ಚಿದೆ. ಸೋಂಕಿನಿಂದ ಗುಣಮುಖರಾಗುವ ಪ್ರಮಾಣ ಕೂಡ ಶೇ 50ರಷ್ಟು ಹೆಚ್ಚಿರುವುದು ನೆಮ್ಮದಿ ತಂದಿದೆ.

ಧಾರಾವಿ, ವರ್ಲಿಯಲ್ಲಿ ನಿಯಂತ್ರಣ ಹೇಗೆ?

ಮಹಾರಾಷ್ಟ್ರದ ಪ್ರಮುಖ ಹಾಟ್‌ಸ್ಪಾಟ್‌ಗಳಾಗಿದ್ದ ಧಾರಾವಿ ಮತ್ತು ವರ್ಲಿಯಲ್ಲಿ ನಿಧಾನವಾಗಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ. ಇದಕ್ಕೆ ಏನು ಕಾರಣ ಎಂದು ಹುಡುಕಲು ಹೊರಟರೆ ಹಲವಾರು ಅಂಶಗಳು ಗೋಚರಿಸುತ್ತವೆ.

ಸರ್ಕಾರ ಈ ಎರಡು ಪ್ರದೇಶಗಳಲ್ಲಿಸಾಕಷ್ಟು ಫೀವರ್‌ ಕ್ಲಿನಿಕ್‌ ತೆರೆದಿದೆ. ಪ್ರತಿದಿನ ಹೆಚ್ಚು, ಹೆಚ್ಚು ಕೋವಿಡ್‌–19 ತಪಾಸಣೆ ನಡೆಸಲಾಗುತ್ತಿದೆ. ಸಾರ್ವಜನಿಕ ಶೌಚಾಲಯ ಬಳಕೆಗೆ ಕಡಿವಾಣ ಹಾಕಲಾಗಿದೆ.

ಶಂಕಿತರನ್ನು ಸಾಂಸ್ಥಿಕ ಕ್ವಾರಂಟೈನ್‌ ಮಾಡಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಹತ್ವ ನೀಡಲಾಗಿದೆ. ಸ್ಯಾನಿಟೈಸರ್‌, ಮಾಸ್ಕ್‌ ಬಳಕೆ ಹೆಚ್ಚಾಗಿದೆ. ಜನರಲ್ಲಿಯೂ ಜಾಗೃತಿ ಮೂಡಿಸಲಾಗಿದೆ ಎನ್ನುತ್ತಾರೆ ಬೃಹತ್‌ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು.

ಮುಂಬೈನಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿದ್ದ ಧಾರಾವಿ,ಜೀಜಾಮಾತಾ ನಗರ ಮತ್ತು ವರ್ಲಿ–ಕೋಳಿವಾಡಾ ಪ್ರದೇಶಗಳಲ್ಲಿ ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆ ಸಾಕಷ್ಟು ಕಡಿಮೆಯಾಗಿದೆ.ಸೋಂಕು ನಿಯಂತ್ರಣಕ್ಕೆ ಬಂದಿದ್ದು ಕೆಲವೇ ದಿನಗಳಲ್ಲಿ ಈ ಪ್ರದೇಶಗಳು ಕೋವಿಡ್‌–19 ಸೋಂಕಿನಿಂದ ಮುಕ್ತಿ ಪಡೆಯಲಿವೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ವರ್ಲಿವೊಂದರಲ್ಲಿಯೇ 87 ಸಾವಿರ ಜನರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, 4,500 ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ ಮಾಡಲಾಗಿದೆ. ಮುಂದಿನ ಎರಡು–ಮೂರು ವಾರ ಅತಿ ಮಹತ್ವದ್ದಾಗಿವೆ. ಕಳೆದ ಎಂಟು ವಾರಗಳಿಂದ ಜನರು ನೀಡಿದ ಸಹಕಾರವನ್ನು ಮುಂದುವರಿಸಿದರೆ ಕೊರೊನಾ ವಿರುದ್ಧದ ಹೋರಾಟವನ್ನು ಗೆಲ್ಲಬಹುದು ಎನ್ನುತ್ತಾರೆ ಪಾಲಿಕೆ ವೈದ್ಯಾಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT