ಮಂಗಳವಾರ, ಸೆಪ್ಟೆಂಬರ್ 28, 2021
24 °C

ವಿಡಿಯೊ ಸ್ಟೋರಿ: ಅಪ್ಪ ಕಮಲ್ ಮುಖ್ಯಮಂತ್ರಿ, ಮಗ ನಕುಲ್‌ಗಿದು ಮೊದಲ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಟುಂಬ ರಾಜಕಾರಣವಾಗಲಿ, ಅಪ್ಪನ ಭದ್ರಕೋಟೆಯಿಂದ ಮಕ್ಕಳು ಕಣಕ್ಕಿಳಿಯುವ ವಿದ್ಯಮಾನವಾಗಲಿ ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಇದು ದೇಶವ್ಯಾಪಿ ಕಂಡು ಬರುತ್ತಿರುವ ಈ ಬೆಳವಣಿಗೆ. ಈ ಬಾರಿಯ ಲೋಕಸಭೆ ಚುನಾವಣೆಗೆ ವಿವಿಧ ರಾಜ್ಯಗಳಿಂದ ಕಣಕ್ಕಿಳಿದಿರುವ, ರಾಜಕೀಯವನ್ನೇ ಉಸಿರಾಡುತ್ತಿರುವ ಕುಟುಂಬದ ಕುಡಿಗಳನ್ನು ಪರಿಚಯಿಸುವ ವಿಡಿಯೊ ಸರಣಿ ಇಂದಿನಿಂದ 'ಪ್ರಜಾವಾಣಿ' ಜಾಲತಾಣದಲ್ಲಿ ಆರಂಭ.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಗೆಲುವಿನ ದಡ ಸೇರಿಸಿದ ಖುಷಿಯಲ್ಲಿ ಮುಖ್ಯಮಂತ್ರಿ ಗಾದಿ ಏರಿದವರು ಕಮಲ್‌ ನಾಥ್. ಈ ಬಾರಿ ಕಾಂಗ್ರೆಸ್‌ನ ಭದ್ರಕೋಟೆ ಚಿಂದ್ವಾರದಲ್ಲಿ ಸ್ಪರ್ಧಿಸುವ ಮೂಲಕ ಕಮಲ್‌ ನಾಥ್‌ ಅವರ ಮಗ ನಕುಲ್‌ ನಾಥ್‌ ರಾಜಕೀಯ ಪ್ರವೇಶ ಮಾಡುತ್ತಿದ್ದಾರೆ.

ನಕುಲ್ ಅವರ ಮಾತನಾಡುವ ಶೈಲಿ ಮತ್ತು ಹಾವಭಾವಗಳು ತಂದೆಯ ಪ್ರತಿರೂಪದಂತೆಯೇ ಇದೆ. ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡರಂತೂ ಇಬ್ಬರ ನಡುವಣ ಭಿನ್ನತೆಯನ್ನು ಸೂಚಿಸಲು ಸಣ್ಣದೊಂದು ಸುಳಿವೂ ಸಿಗುವುದಿಲ್ಲ. ಹಾವಭಾವದಿಂದ ಭಾಷಣದ ಶೈಲಿಯವರೆಗೆ ‘ಇಬ್ಬರೂ ಥೇಟ್‌ ಒಂದೇ’ ಎನ್ನುವಷ್ಟರ ಮಟ್ಟಿಗಿನ ಹೋಲಿಕೆ. ಆದರೆ, ‘ಮಗನಿಗಿಂತ ಹೆಚ್ಚು ಪ್ರಭಾವಶಾಲಿಯಾಗಿ ಅಪ್ಪ ಮಾತನಾಡಬಲ್ಲರು’ ಎಂಬುದೊಂದು ಅನುಭವಿ ಕಮಲ್‌ ಹೆಗ್ಗಳಿಕೆ.

ಇದನ್ನೂ ಓದಿ: ಅಪ್ಪಂದಿರ ಅಖಾಡದಲ್ಲಿ ಮಕ್ಕಳ ತಾಲೀಮು

2018 ಏಪ್ರಿಲ್‌ನಲ್ಲಿ ಮಧ್ಯಪ್ರದೇಶ ರಾಜ್ಯ ಕಾಂಗ್ರೆಸ್‌ ಘಟಕದ ಮುಖ್ಯಸ್ಥರಾಗಿ ನೇಮಕವಾಗಿದ್ದ ಕಮಲ್‌, ಅದೇ ವರ್ಷ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಮುನ್ನಡೆಸಿದ್ದರು. ಪಕ್ಷ ಬಹುಮತ ಸಾಧಿಸುತ್ತಿದ್ದಂತೆ ರಾಷ್ಟ್ರ ರಾಜಕಾರಣದಿಂದ ಸೀದಾ ರಾಜ್ಯಕ್ಕೆ ಧುಮುಕಿ ಅವರು ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿ ಸ್ಥಾನವನ್ನೂ ಗಿಟ್ಟಿಸಿಕೊಂಡರು. ಹೀಗಾಗಿ ತಾವು ಒಂಬತ್ತು ಬಾರಿ ಗೆಲುವು ಸಾಧಿಸಿದ್ದ ಚಿಂದ್ವಾರ ಲೋಕಸಭೆ ಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಟ್ಟಿದ್ದಾರೆ.

ಲೋಕಸಭೆ ಚುನಾವಣಾ ಕಣದಿಂದಲೇ ಸಕ್ರಿಯ ರಾಜಕಾರಣ ಪ್ರವೇಶಿಸುತ್ತಿರುವ ನಕುಲ್‌ ಅವರ ವಯಸ್ಸು ಈಗ 44. ಈವರೆಗೆ ಕುಟುಂಬದ ವ್ಯಾಪಾರ–ವ್ಯವಹಾರಗಳನ್ನು ನಿರ್ವಹಿಸುತ್ತಿದ್ದ ನಕುಲ್‌ ಕಳೆದ ಆರು ವರ್ಷಗಳಿಂದ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ‘ಈ ಕ್ಷೇತ್ರದೊಂದಿಗೆ ನನ್ನ ಒಡನಾಟ 40 ವರ್ಷಗಳ ಹಿಂದೆ ಅಂದರೆ ನಾನು ನಾಲ್ಕು ವರ್ಷದ ಮಗುವಿದ್ದಾಗಿನಿಂದಲೇ ಆರಂಭವಾಗಿದೆ. ಆಗಿನಿಂದಲೂ ನನ್ನ ತಂದೆಯೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದೇನೆ’ ಎಂದು ಹೇಳಿಕೊಳ್ಳುವ ನಕುಲ್‌, ನಿಜವಾಗಿಯೂ ಕ್ಷೇತ್ರದಲ್ಲಿ ರಾಜಕೀಯದ ನಂಟು ಆರಂಭಿಸಿದ್ದು 1996ರಲ್ಲಿ.

1996ರಲ್ಲಿ ನಕುಲ್‌ ತಾಯಿ ಅಲ್ಕಾ ನಾಥ್‌ ಅವರು ಇಲ್ಲಿಂದಲೇ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆ ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ನಕುಲ್‌, 2012ರಲ್ಲಿ ಹನುಮಂತ ದೇವಾಲಯ ನಿರ್ಮಿಸಲು ನೆರವು ನೀಡಿದ್ದರು. ಅದು ಅವರ ಹೆಸರನ್ನು ಕ್ಷೇತ್ರದಲ್ಲಿ ಮನೆಮಾತಾಗುವಂತೆ ಮಾಡಿತು. 2013ರ ವಿಧಾನಸಭೆ ಚುನಾವಣೆಗೆ ಈ ಸಂಸತ್ ಕ್ಷೇತ್ರ ವ್ಯಾಪ್ತಿಯಲ್ಲಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಯುವ ಅಭ್ಯರ್ಥಿಗಳನ್ನು ಕಣಕ್ಕಿಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದಾದ ನಂತರ ಇಲ್ಲಿಯವರೆಗೆ ಕ್ಷೇತ್ರದೊಂದಿಗಿನ ಸಂಪರ್ಕ ಸಡಿಲಗೊಳ್ಳದಂತೆ ನೋಡಿಕೊಂಡಿದ್ದಾರೆ.

ತಂದೆಯಂತೆಯೇ ನಕುಲ್‌ ಕೂಡ ಮೃದು ಮಾತುಗಳ ಮೂಲಕ ಪ್ರಭಾವಿಸಬಲ್ಲರು. ಎಂತಹ ಸಮಸ್ಯೆಯನ್ನೂ ತಣ್ಣಗೆ ಇತ್ಯರ್ಥಪಡಿಸಬಲ್ಲರು. ಕಾರ್ಯಕರ್ತರ ಕೈಗೆ ಸುಲಭವಾಗಿ ಸಿಗಬಲ್ಲದು, ಆಸಕ್ತಿಯಿಂದ ಅವರ ಅಹವಾಲು ಆಲಿಸುವುದರ ಜೊತೆಗೆ ಕೆಲಸವನ್ನೂ ಮಾಡಿಕೊಡುತ್ತಾರೆ ಎಂಬುದು ಅವರ ಶ್ರೇಯ.

ಈ ಬಾರಿ ಚಿಂದ್ವಾರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಕಮಲ್‌ ಕೂಡ ಕಣಕ್ಕಿಳಿದಿದ್ದಾರೆ. ಸಂಸದರಾಗಿದ್ದ ಕಮಲ್‌ ಇದೀಗ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವುದರಿಂದ 6 ತಿಂಗಳೊಳಗೆ ಶಾಸಕರಾಗಿ ಆಯ್ಕೆಯಾಗಬೇಕಿದೆ. ಇದಕ್ಕಾಗಿ ಅವರು ಚಿಂದ್ವಾರ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಅಪ್ಪ–ಮಗ ಒಟ್ಟಿಗೆ ಚುನಾವಣೆ ಎದುರಿಸುತ್ತಿರುವ ಅಪರೂಪದ ಸನ್ನಿವೇಶಕ್ಕೂ ಚಿಂದ್ವಾರ ಈ ಬಾರಿ ಸಾಕ್ಷಿಯಾಗುತ್ತಿದೆ.

‘ನಕುಲ್‌ ನಾಥ್‌ ಕ್ಷೇತ್ರದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಬಿಜೆಪಿಯಿಂದ ಕಣಕ್ಕಿಳಿದಿರುವ ನಥನ್‌ ಶಾ ಕವ್ರೇತಿ ಅವರಂತಹ ಅಷ್ಟೇನು ಪ್ರಬಲರಲ್ಲದ ಅಭ‌್ಯರ್ಥಿ ಎದುರು ಅವರು ಸೋಲುವುದು ಸಾಧ್ಯವೇ ಇಲ್ಲ’ ಎನ್ನುವ ಸ್ಥಳೀಯ ಪತ್ರಕರ್ತ ಜಾಹಿದ್‌ ಖಾನ್‌ ಅವರ ಮಾತನ್ನು ‘ದಿ ವೀಕ್’ ನಿಯತಕಾಲಿಕೆ ವರದಿ ಮಾಡಿದೆ. 2018ರ ವಿಧಾನಸಭೆ ಚುನಾವಣೆ ವೇಳೆ ಚಿಂದ್ವಾರ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರುವ ಜುನ್ನಾರ್‌ದೇವ್‌ ಕ್ಷೇತ್ರದಿಂದ ಕಣಕ್ಕಿಳಿದಿದ್ದ ನಥನ್ ಶಾ ಸೋಲನುಭವಿಸಿದ್ದರು. ಜಾಹೀದ್‌ ಅವರು ‘ನಥನ್‌ ದುರ್ಬಲ ಅಭ್ಯರ್ಥಿ’ ಎನ್ನಲು ಇದು ಹಿನ್ನೆಲೆ.

‘ನನಗೆ ನಿಮ್ಮ ಆಶೀರ್ವಾದ ಬೇಕು. 1980ರಲ್ಲಿ ಇಲ್ಲಿಂದ ಗೆದ್ದಿದ್ದ ಕಮಲ್ ನಾಥ್ ಅಭಿವೃದ್ಧಿಯ ಮೆರವಣಿಗೆ ಆರಂಭಿಸಿದ್ದರು. ಇದೀಗ ನಾವೆಲ್ಲರೂ ಜೊತೆಗೂಡಿ ಚಿಂದ್ವಾರಕ್ಕಾಗಿ ಹೊಸ ಅಭಿವೃದ್ಧಿ ಯಾನ ಆರಂಭಿಸೋಣ’ ಎನ್ನುವುದು ನಾಮಪತ್ರ ಸಲ್ಲಿಕೆ ಬಳಿಕ ನಕುಲ್‌ ಜನರನ್ನು ಉದ್ದೇಶಿಸಿ ಆಡಿದ ಮಾತು. ಆದರೆ ಇದಕ್ಕಿಂತ ಗಮನ ಸೆಳೆದಿದ್ದುದು ಅಪ್ಪ ಕಮಲ್ ನಾಥ್ ಅವರ ಮಾತು. ‘ನಿಮ್ಮ ಆಕಾಂಕ್ಷೆಗಳಿಗೆ ತಕ್ಕಂತೆ ನಕುಲ್ ಕೆಲಸ ಮಾಡದಿದ್ದರೆ ಅವನ ಕೊರಳ ಪಟ್ಟಿ ಹಿಡಿದು ಕೇಳಬಹುದು’ ಎಂದಿದ್ದರು ಕಮಲ್ ನಾಥ್. 

ಜನರಿಗೆ ಮಾತಿನ ಒರಟುತನ, ಭಾಷೆ ಕೊಡುವಂಥ ಭರವಸೆ ಇಷ್ಟವಾಗಿತ್ತು. ಅದಕ್ಕೆ ಅಲ್ಲವೇ ಹೇಳುವುದು ಕಮಲ್ ಒಬ್ಬ ಪಳಗಿದ ರಾಜಕಾರಿಣಿ ಎಂದು!

(ಮಾಹಿತಿ– ಅಭಿಲಾಷ್ ಎಸ್‌.ಡಿ. ವಿಡಿಯೊ– ಅಬ್ದುಲ್ ಬಾಸಿತ್)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು