ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತಿನಹೊಳೆಗೆ ಎನ್‌ಜಿಟಿ ಸಮ್ಮತಿ

ಯೋಜನೆ ವಿರೋಧಿಸಿದ್ದ ಅರ್ಜಿ ವಜಾ
Last Updated 24 ಮೇ 2019, 19:58 IST
ಅಕ್ಷರ ಗಾತ್ರ

ನವದೆಹಲಿ: ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿದ್ದ ಎಲ್ಲ ಅರ್ಜಿಗಳನ್ನು ವಜಾಗೊಳಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ), ರಾಜ್ಯ ಸರ್ಕಾರ ಆರಂಭಿಸಿದ್ದ ಯೋಜನೆಯ ಕಾಮಗಾರಿಗೆ ಸಮ್ಮತಿ ಸೂಚಿಸಿದೆ.

ಇದೇ 13ರಂದು ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾದಿರಿಸಿದ್ದ ನ್ಯಾಯಮೂರ್ತಿ ಆದರ್ಶಕುಮಾರ್ ಗೋಯೆಲ್ ನೇತೃತ್ವದ ಎನ್‌ಜಿಟಿಯ ಪ್ರಧಾನ ಪೀಠ ಶುಕ್ರವಾರ ತೀರ್ಪು ಪ್ರಕಟಿಸಿದೆ.

ಇದರಿಂದಾಗಿ ಕೋಲಾರ, ಚಿಕ್ಕಬಳ್ಳಾಪುರ ಮತ್ತಿತರ ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಪೂರೈಸುವ ಈ ಮಹತ್ವದ ಯೋಜನೆಗೆ ಮತ್ತೆ ಜೀವ ಬಂದಂತಾಗಿದೆ.

ಕಾಮಗಾರಿ ಜಾರಿಯಲ್ಲಿರುವ ಪ್ರದೇಶದಲ್ಲಿ ಪರಿಸರ ಕಾಯ್ದೆಯ ನಿಯಮಗಳ ಉಲ್ಲಂಘನೆಯಂತಹ ಬೆಳವಣಿಗೆ ಕಂಡುಬಂದರೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರದ ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ಸೂಚಿಸಲಾಗಿದೆ.

‘ನಿಯಮಗಳ ಉಲ್ಲಂಘನೆಯು ಪಶ್ಚಿಮ ಘಟ್ಟ ಪರಿಸರದ ಮೇಲೆ ದುಷ್ಪರಿಣಾಮ ಉಂಟು ಮಾಡುವಂತಿದ್ದಲ್ಲಿ ಸೂಕ್ತ ಅಧ್ಯಯನ ನಡೆಸಿ, ಪರಿಸರದ ರಕ್ಷಣೆಗೆ ಕ್ರಮ ಕೈಗೊಳ್ಳಲು ಈ ಸಚಿವಾಲಯ ಸ್ವತಂತ್ರವಾಗಿದೆ’ ಎಂದು ಹಸಿರು ಪೀಠ ತಿಳಿಸಿದೆ.

ಯೋಜನೆ ವಿರೋಧಿಸಿದ್ದ ಮೂಲ ಅರ್ಜಿ ಹಾಗೂ ಮೇಲ್ಮನವಿಯಲ್ಲಿ ಯಾವುದೇ ರೀತಿಯ ಅರ್ಹತೆಗಳು ಕಂಡುಬಂದಿಲ್ಲ. ಯೋಜನೆಯಿಂದ ಪರಿಸರಕ್ಕೆ ಉಂಟಾಗಬಹುದಾದ ಹಾನಿಯು ಯಾವ ಪ್ರಮಾಣದ್ದು ಎಂಬುದನ್ನು ಸ್ಪಷ್ಟಪಡಿಸಲು ಸಲ್ಲಿಸಲಾದ ಅಧ್ಯಯನ ವರದಿಯಲ್ಲಿ ಭಿನ್ನಾಭಿಪ್ರಾಯಗಳು ದಾಖಲಾಗಿರುವ ಕಾರಣ ಅರ್ಜಿಗಳನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಮೂರ್ತಿಗಳಾದ ಎಸ್.ಪಿ. ವಾಂಗ್ಡಿ, ರಾಮಕೃಷ್ಣನ್ ಹಾಗೂ ತಜ್ಞ ಸದಸ್ಯ ನಾಗಿನ್ ನಂದಾ ಅವರಿದ್ದ ಪೀಠ ನೀಡಿರುವ ತೀರ್ಪಿನಲ್ಲಿ ತಿಳಿಸಲಾಗಿದೆ.

ಯೋಜನೆಗಾಗಿ ಪರಿಸರಕ್ಕೆ ಸಂಬಂಧಿಸಿದ ಕಾನೂನುಗಳನ್ನು ಉಲ್ಲಂಘಿಸಿ, ಪರಿಸರ ಸಂರಕ್ಷಣೆ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಲಾಗಿದೆ. ಸರ್ಕಾರ ಪಡೆದಿರುವ ಪರಿಸರ ಮತ್ತು ಅರಣ್ಯ ಅನುಮತಿಯೂ ಕಾನೂನು ಬಾಹಿರ ಎಂದು ಅರ್ಜಿದಾರರು ದೂರಿದ್ದರು.

ಕುಡಿಯುವ ನೀರು ಪೂರೈಸುವ ಸದುದ್ದೇಶದಿಂದ ನಿಯಮಾನುಸಾರವೇ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಯೋಜನೆಯನ್ನು ವಿರೋಧಿಸಿ ಸಲ್ಲಿಕೆಯಾಗಿರುವ ಅರ್ಜಿಯ ಸಿಂಧುತ್ವವೇ ಪ್ರಶ್ನಾರ್ಹ ಎಂದು ರಾಜ್ಯ ಸರ್ಕಾರ ತನ್ನ ವಾದ ಮಂಡಿಸಿತ್ತು.

ಮರು ವಿಚಾರಣೆ: ಕೆ.ಎನ್. ಸೋಮಶೇಖರ್, ಕಿಶೋರ್‌ಕುಮಾರ್‌ ಮತ್ತು ಪುರುಷೋತ್ತಮ ಚಿತ್ರಾಪುರ ಎಂಬುವವರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಡಾ.ಜವಾದ್‌ ರಹೀಂ ನೇತೃತ್ವದ ಹಸಿರು ಪೀಠವು, ಕೆಲವು ಷರತ್ತುಗಳೊಂದಿಗೆ ಯೋಜನೆಗೆ ಅನುಮತಿ ನೀಡಿ 2017ರ ಅಕ್ಟೋಬರ್‌ 6ರಂದು ತೀರ್ಪು ಪ್ರಕಟಿಸಿತ್ತು.

ಆದರೆ, ಪೀಠದಲ್ಲಿದ್ದ ತಜ್ಞ ಸದಸ್ಯ ರಂಜನ್‌ ಚಟರ್ಜಿ ಅವರು ಷರತ್ತುಗಳನ್ನು ಪ್ರಕಟಿಸುವ ಮೊದಲೇ ನಿವೃತ್ತರಾಗಿದ್ದರಿಂದ 2018ರ ಮಾರ್ಚ್‌ 20ರಂದು ಪ್ರಕರಣದ ಮರು ವಿಚಾರಣೆ ಆರಂಭವಾಗಿತ್ತು.

ಇದೀಗ ಪ್ರಧಾನ ಪೀಠವೇ ವಿಚಾರಣೆ ಪೂರ್ಣಗೊಳಿಸಿ ತೀರ್ಪು ನೀಡಿದ್ದು, ಸ್ಥಗಿತಗೊಂಡಿರುವ ಕಾಮಗಾರಿಗಳನ್ನು ಮುಂದುವರಿಸಲು ಇದ್ದ ಅಡ್ಡಿ– ಆತಂಕಗಳು ದೂರವಾದಂತಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT