ಶನಿವಾರ, ಜೂಲೈ 4, 2020
28 °C

ವಾರಂಗಲ್: ಒಂದು ಕೊಲೆ ಮುಚ್ಚಿಡಲು ಒಂಬತ್ತು ಜನರ ಕೊಂದು ಬಾವಿಗೆಸೆದ ವಲಸೆ ಕಾರ್ಮಿಕ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಬಾವಿ– ಸಾಂಕೇತಿಕ ಚಿತ್ರ

ವಾರಂಗಲ್‌: ಒಂದು ಕೊಲೆಯನ್ನು ಮುಚ್ಚಿಡುವ ಯತ್ನದಲ್ಲಿ ವಲಸೆ ಕಾರ್ಮಿಕನೊಬ್ಬ ಒಂಬತ್ತು ಕೊಲೆ ಮಾಡಿರುವ ಪ್ರಕರಣವನ್ನು ತೆಲಂಗಾಣ ಪೊಲೀಸರು ಭೇದಿಸಿದ್ದಾರೆ. ವಾರಂಗಲ್‌ನ ಬಾವಿಯಲ್ಲಿ ಕಳೆದ ಶುಕ್ರವಾರ ಒಂಬತ್ತು ಮೃತ ದೇಹಗಳು ಪತ್ತೆಯಾಗಿದ್ದವು. 

ಕೋವಿಡ್‌–19 ಲಾಕ್‌ಡೌನ್‌ ಅವಧಿಯಲ್ಲಿ ವಲಸಿಗರು ಸಾವಿಗೀಡಾಗಿರುವುದು ಹಾಗೂ ದೇಶದಾದ್ಯಂತ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳಲು ಪ್ರಯತ್ನಿಸುತ್ತಿರುವ ಸಂದರ್ಭವಾದ್ದರಿಂದ ಆತ್ಮಹತ್ಯೆ ಪ್ರಕರಣವೆಂದೇ ನಂಬಲಾಗಿತ್ತು. 

ಮೊಹಮ್ಮದ್‌ ಮಕ್ಸೂದ್‌ ಎಂಬ ವ್ಯಕ್ತಿಯ ಕುಟುಂಬದ ಎಲ್ಲ ಸದಸ್ಯರು ಕೊಲೆಯಾಗಿದ್ದಾರೆ. ಪಶ್ಚಿಮ ಬಂಗಾಳದಿಂದ ವಲಸೆ ಬಂದಿದ್ದ ಅವರು 20 ವರ್ಷಗಳ ಹಿಂದೆ ತೆಲಂಗಾಣದಲ್ಲಿ ನೆಲೆಯೂರಿದ್ದರು. ಕೊಲೆ ಆರೋಪಿ ಸಂಜಯ್‌ ಕುಮಾರ್‌ ಯಾದವ್‌ (24), ಬಿಹಾರದಿಂದ ಆರು ವರ್ಷಗಳ ಹಿಂದೆ ವಾರಂಗಲ್‌ಗೆ ಬಂದು ನೆಲೆಸಿದ್ದ. ಕೊಲೆಯಾಗಿರುವ ಒಂಬತ್ತು ಜನರಲ್ಲಿ ಆರು ಮಂದಿ ಮಕ್ಸೂದ್‌ ಕುಟುಂಬದವರು. 

ಮಕ್ಸೂದ್‌ (55), ಆತನ ಪತ್ನಿ ನಿಶಾ (48), ಇಬ್ಬರು ಗಂಡು ಮಕ್ಕಳು ಶಬಾಜ್‌ (21) ಮತ್ತು ಸೊಹೈಲ್‌ (18), ಮಗಳು ಬುಶ್ರಾ (22) ಹಾಗೂ ಆಕೆಯ ಮೂರು ವರ್ಷದ ಮಗ ಎಲ್ಲರೂ ವಾರಂಗಲ್‌ ಸಮೀಪದ ಗೊರ್ರೆಕುಂಟಾ ಗ್ರಾಮದ ಗೋಣಿಚೀಲ ಘಟಕ ಪ್ರದೇಶದಲ್ಲಿ ವಾಸವಿದ್ದರು. ಇದೇ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಿಹಾರ ಮೂಲದ ಶ್ರೀರಾಮ್‌ (21) ಮತ್ತು ಶ್ಯಾಮ್‌(22), ಮಕ್ಸೂದ್‌ ಕುಟುಂದ ಸ್ನೇಹಿತನಾಗಿದ್ದ ಶಕೀಲ್‌ (30) ಕೊಲೆಯಾದವರು. 

ಸಾಮೂಹಿಕ ಸಾವಿನ ಜಾಡು ಹಿಡಿದು ತನಿಖೆ ನಡೆಸಿದ ಆರು ತಂಡ 72 ಗಂಟೆಗಳಲ್ಲಿ ಭಯಾನಕ ಕೊಲೆಯ ರಹಸ್ಯವನ್ನು ಹೊರತಂದಿತು. 

'ಆರೋಪಿ ಸಂಜಯ್,‌ ರಫೀಕಾ (36) ಜೊತೆಗೆ ಸಂಸಾರ ನಡೆಸಿದ್ದ. ಕೊಲೆಯಾಗಿರುವ ನಿಶಾಳ ಹಿರಿಯ ಅಕ್ಕನ ಮಗಳು ರಫೀಕಾ. ಸಂಜಯ್‌ ರಫೀಕಾಳನ್ನು ಮದುವೆಯಾಗುವುದಾಗಿ ಮಾತು ಕೊಟ್ಟಿದ್ದನು. ಆದರೆ, ಸಂಜಯ್‌ ರಫೀಕಾಳ ಹದಿಹರೆಯದ ವಯಸ್ಸಿನ ಮಗಳೊಂದಿಗೆ ಆಪ್ತವಾಗಿರುವುದನ್ನು ಗಮನಿಸಿ ವಿರೋಧಿಸಿರುತ್ತಾಳೆ. ರಫೀಕಾ, ಸಂಜಯ್‌ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ಎಚ್ಚರಿಕೆ ನೀಡಿರುತ್ತಾಳೆ. ಸಂಜಯ್‌ ಆಕೆಯನ್ನು ಕೊಲ್ಲಲು ನಿರ್ಧರಿಸುತ್ತಾನೆ. ಮದುವೆಗೆ ಸಂಬಂಧಿಸಿದಂತೆ ಮನೆಯಲ್ಲಿರುವ ಹಿರಿಯರೊಂದಿಗೆ ಮಾತುಕತೆ ನಡೆಸಬೇಕೆಂದು ಹೇಳಿ, ಮಾರ್ಚ್‌ 6ರಂದು ರಫೀಕಾಳನ್ನು ಸಂಜಯ್‌ ಗರೀಬ್‌ ರಥ್‌ ರೈಲಿನ ಮೂಲಕ ವೈಝಾಗ್‌ಗೆ ಕರೆದುಕೊಂಡು ಹೋಗಿರುತ್ತಾನೆ,' ಎಂದು ವಾರಂಗಲ್‌ ಪೊಲೀಸ್‌ ಕಮಿಷನರ್‌ ಡಾ.ವಿ.ರವೀಂದರ್‌ ಪ್ರಕರಣದ ಕುರಿತು ವಿವರಿಸಿದ್ದಾರೆ. 

'ನಿದ್ರೆ ಬರಿಸುವ ಮಾತ್ರೆಗಳನ್ನು ಮಜ್ಜಿಗೆಯಲ್ಲಿ ಹಾಕಿದ್ದ ಸಂಜಯ್‌, ಅದನ್ನು ರಫೀಕಾಳಿಗೆ ಕುಡಿಸಿರುತ್ತಾನೆ. ಆಕೆ ಪ್ರಜ್ಞೆ ಕಳೆದುಕೊಳ್ಳುತ್ತಿದ್ದಂತೆ ಆಂಧ್ರ ಪ್ರದೇಶದ ನಿಡದವೊಲು ಸಮೀಪ ಚಲಿಸುವ ರೈಲಿನಿಂದ ತಳ್ಳುತ್ತಾನೆ. ಆಕೆಯನ್ನು ಸಾಯಿಸಿದ ನಂತರ ಸಂಜಯ್‌ ಗೀಸುಕೊಂಡಾಗೆ ಮರಳಿರುತ್ತಾನೆ. ರೈಲ್ವೆ ಪೊಲೀಸರು ಮೃತ ಮಹಿಳೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.'

'ನಂತರದಲ್ಲಿ ನಿಶಾ ರಫೀಕಾಳ ಬಗ್ಗೆ ವಿಚಾರಿಸಿರುತ್ತಾಳೆ ಹಾಗೂ ಸಂಶಯ ವ್ಯಕ್ತವಾಗಿ ಪೊಲೀಸರಿಗೆ ದೂರು ದಾಖಲಿಸುವುದಾಗಿ ಬೆದರಿಸಿರುತ್ತಾಳೆ. ಆಗ ಸಂಜಯ್‌ ಮಕ್ಸೂದ್‌ ಕುಟುಂಬವನ್ನು ಕೊಲೆ ಮಾಡಲು ನಿರ್ಧರಿಸುತ್ತಾನೆ. ಗೋಣಿಚೀಲ ಘಟಕದಲ್ಲಿ 5 ದಿನಗಳ ವರೆಗೂ ಅವರ ಕುಟುಂಬದ ಆಗುಹೋಗುಗಳನ್ನು ಗಮನಿಸುವ ಆತ, ಮಕ್ಸೂದ್‌ ಮಗ ಶಬಾಜ್‌ನ ಹುಟ್ಟಿದ ದಿನ ಮೇ 20ರಂದು ತನ್ನ ಯೋಜನೆ ಕಾರ್ಯಗತಗೊಳಿಸಲು ನಿರ್ಧರಿಸುತ್ತಾನೆ. ಅವರ ಊಟದಲ್ಲಿ ನಿದ್ರೆ ಮಾತ್ರೆಗಳನ್ನು ಮೆರೆಸುತ್ತಾನೆ ಹಾಗೂ ಅವರೆಲ್ಲ ನಿದ್ರೆಗೆ ಜಾರುತ್ತಿದ್ದಂತೆ, ಎಲ್ಲರನ್ನೂ ಗೋಣಿ ಚೀಲದಲ್ಲಿ ತುಂಬಿ ಎಳೆದು ಬಾವಿಯೊಳಗೆ ಹಾಕುತ್ತಾನೆ. ರಾತ್ರಿ 12:30ರಿಂದ ಬೆಳಗಿನ ಜಾವ 5ರೊಳಗೆ ಈ ಕಾರ್ಯ ಪೂರ್ಣಗೊಳಿಸುತ್ತಾನೆ,' ಎಂದು ಪೊಲೀಸ್‌ ಅಧಿಕಾರಿ ಹೇಳಿದ್ದಾರೆ. 

ಬಿಹಾರದ ಇತರೆ ವಲಸೆ ಕಾರ್ಮಿಕರು, ಇವನು ನಡೆಸಿದ ಕೃತ್ಯವನ್ನು ಬಹಿರಂಗ ಪಡಿಸಬಹುದು ಎಂಬ ಭಯದಲ್ಲಿ ಇಬ್ಬರು ಯುವಕರನ್ನೂ ಕೊಲೆ ಮಾಡುತ್ತಾನೆ. ಸಿಸಿಟಿವಿ ದೃಶ್ಯಗಳಲ್ಲಿ ಸಂಜಯ್‌ನ ಚಲನವಲನಗಳು ಸೆರೆಯಾಗಿದ್ದು, ಪ್ರಕರಣದ ಪ್ರಮುಖ ಸಾಕ್ಷಿಯಾಗಿವೆ. ಪೊಲೀಸರು ಸಂಜಯ್‌ನನ್ನು ವಶಕ್ಕೆ ಪಡೆದಿದ್ದು, ಆರೋಪ ಪಟ್ಟಿ ದಾಖಲಿಸುತ್ತಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು