ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರವ್‌, ಮಲ್ಯಗೆ ಒಂದೇ ಬ್ಯಾರಕ್‌

ಮುಂಬೈನ ಆರ್ಥರ್‌ ರೋಡ್‌ ಕಾರಾಗೃಹದಲ್ಲಿ ಸಿದ್ಧತೆ
Last Updated 11 ಜೂನ್ 2019, 20:14 IST
ಅಕ್ಷರ ಗಾತ್ರ

ಮುಂಬೈ: ವಜ್ರದ ಉದ್ಯಮಿ ನೀರವ್‌ ಮೋದಿಯನ್ನು ಭಾರತಕ್ಕೆ ಕರೆತಂದರೆ ಇಲ್ಲಿನ ಆರ್ಥರ್‌ ರೋಡ್‌ ಕಾರಾಗೃಹದಲ್ಲಿರಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾದ ಆರೋಪವನ್ನು ನೀರವ್‌ ಮೋದಿ ಎದುರಿಸುತ್ತಿದ್ದಾರೆ. ಬ್ರಿಟನ್‌ನಿಂದ ನೀರವ್‌ ಮೋದಿಯನ್ನು ಭಾರತಕ್ಕೆ ಕರೆತಂದರೆ ಆರ್ಥರ್‌ ರೋಡ್‌ ಕಾರಾಗೃಹದ 12ನೇ ಬ್ಯಾರಕ್‌ನಲ್ಲಿ ಸ್ಥಳ ಮೀಸಲಿರಿಸಲಾಗಿದೆ.

ಇದೇ ಬ್ಯಾರಕ್‌ನಲ್ಲಿ ಉದ್ಯಮಿ ವಿಜಯ್‌ ಮಲ್ಯ ಅವರನ್ನು ಸಹ ಇರಿಸಲು ಉದ್ದೇಶಿಸಲಾಗಿದೆ. ಹೀಗಾಗಿ, ಇದನ್ನು ‘ಕೋಟ್ಯಾಧೀಶರರ ಬ್ಯಾರಕ್‌’ ಎಂದು ಕರೆಯಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ.

ಈ ಬ್ಯಾರಕ್‌ನಲ್ಲಿರುವ ಎರಡು ಕೊಠಡಿಗಳಲ್ಲಿ ಒಂದು ಕೊಠಡಿ ಖಾಲಿ ಉಳಿದಿದ್ದು, ಇನ್ನೊಂದರಲ್ಲಿ ಮೂವರು ಕೈದಿಗಳಿದ್ದಾರೆ. ಮಲ್ಯ ಮತ್ತು ಮೋದಿಯನ್ನು ಭಾರತಕ್ಕೆ ಕರೆ ತಂದರೆ ಖಾಲಿ ಉಳಿದಿರುವ ಒಂದೇ ಕೊಠಡಿಯಲ್ಲಿರಿಸಲಾಗುವುದು. ಈ ಕೊಠಡಿಯಲ್ಲಿ ಮೂರು ಫ್ಯಾನ್‌ಗಳಿದ್ದು, ಆರು ಟ್ಯೂಬ್‌ಲೈಟ್‌ಗಳು ಮತ್ತು ಎರಡು ಕಿಟಕಿಗಳಿವೆ ಎಂದು ತಿಳಿಸಿದ್ದಾರೆ.

‘ಬ್ಯಾರಕ್‌ನಲ್ಲಿ ಮೋದಿಗೆ ಯುರೋಪಿಯನ್‌ ನಿಯಮಾವಳಿಗಳ ಪ್ರಕಾರ ಮೂರು ಚದರ ಮೀಟರ್‌ ಜಾಗ ದೊರೆಯುತ್ತದೆ. ಜತೆಗೆ ತಲೆದಿಂಬು, ಕಾಟನ್‌ ಮ್ಯಾಟ್‌, ಬೆಡ್‌ಶೀಟ್‌ ಮತ್ತು ಹೊದಿಕೆ ನೀಡಲಾಗುವುದು. ಈ ಬ್ಯಾರಕ್‌ ಸುರಕ್ಷಿತವಾಗಿದ್ದು, ಅತ್ಯುತ್ತಮ ತರಬೇತಿ ಹೊಂದಿದ ಪೊಲೀಸರನ್ನು ನಿಯೋಜಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಕಾರಾಗೃಹ ಇಲಾಖೆ ಕಳೆದ ವಾರ ಗೃಹ ಇಲಾಖೆಗೆ ಆರ್ಥರ್‌ ರೋಡ್‌ ಕಾರಾಗೃಹದ ಸ್ಥಿತಿ ಗತಿ ಮತ್ತು ಸೌಲಭ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದೆ. ಕೇಂದ್ರ ಸರ್ಕಾರವು ಸಹ ಈ ಕಾರಾಗೃಹದ ಬಗ್ಗೆ ಮಾಹಿತಿ ಕೇಳಿತ್ತು.

ಮಾರ್ಚ್‌ 19ರಂದು ಲಂಡನ್‌ನಲ್ಲಿ ನೀರವ್‌ ಮೋದಿಯನ್ನು ಸ್ಕಾಟ್‌ಲ್ಯಾಂಡ್ ಯಾರ್ಡ್ ಪೊಲೀಸರು ಬಂಧಿಸಿದ್ದರು. ಲಂಡನ್‌ನ ವೆಸ್ಟ್‌ಮಿನ್‌ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮೋದಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕಳೆದ ತಿಂಗಳು ತಿರಸ್ಕರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT