ಮಂಗಳವಾರ, ಏಪ್ರಿಲ್ 7, 2020
19 °C
ಹೋಶಿಯಾರ್‌ಪುರ ಚುನಾವಣಾ ಅಧಿಕಾರಿಗಳ ಎಡವಟ್ಟು

ಫ್ಲೆಕ್ಸ್‌ನಲ್ಲಿ ರಾರಾಜಿಸಿದ ನಿರ್ಭಯಾ ಪ್ರಕರಣದ ಅಪರಾಧಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಂಡಿಗಡ: ಮತದಾನ ಜಾಗೃತಿ ಕುರಿತ ಫ್ಲೆಕ್ಸ್‌ನಲ್ಲಿ ನಿರ್ಭಯಾ ಪ್ರಕರಣದ ಅಪರಾಧಿ ಮುಕೇಶ್ ಸಿಂಗ್‌ ಚಿತ್ರವನ್ನು ಮುದ್ರಿಸುವ ಮೂಲಕ ಪಂಜಾಬ್‌ನ ಚುನಾವಣಾ ಆಯೋಗ ತೀವ್ರ ಮುಜುಗರಕ್ಕೆ ಒಳಗಾಗಿದೆ.

ಹೋಶಿಯಾರ್‌ಪುರದ ಜಿಲ್ಲಾಡಳಿತ ಸಂಕೀರ್ಣದಲ್ಲಿ ಅಳವಡಿಸಿದ್ದ ಮತದಾನ ಜಾಗೃತಿ ಫ್ಲೆಕ್ಸ್‌ಗಳಲ್ಲಿ ಗಣ್ಯರ ಚಿತ್ರಗಳ ಜೊತೆ ಅಪರಾಧಿಯ ಚಿತ್ರವೂ ಮುದ್ರಣಗೊಂಡಿದೆ. 

ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದ ವ್ಯಕ್ತಿಯೊಬ್ಬರು ಚಿತ್ರದಲ್ಲಿರುವ ವ್ಯಕ್ತಿಯನ್ನು ಗುರುತಿಸಿದ ಬಳಿಕ ಆಗಿರುವ ಅಚಾತುರ್ಯವು ಬೆಳಕಿಗೆ ಬಂದಿದೆ. ಈ ಫ್ಲೆಕ್ಸ್‌ಗಳನ್ನು ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಥಳೀಯ ಚುನಾವಣಾ ಕಚೇರಿಯು ಅಳವಡಿಸಿತ್ತು. ವಿಚಿತ್ರವೆಂದರೆ, ಈವರೆಗೂ ಯಾರ ಗಮನಕ್ಕೂ ಬಂದಿರಲಿಲ್ಲ. 

‘ಮತಜಾಗೃತಿ ಅಭಿಯಾನದಲ್ಲಿ ಅಪರಾಧಿಯೊಬ್ಬನ ಚಿತ್ರ ತಿಂಗಳುಗಟ್ಟಲೆ ಪ್ರದರ್ಶನವಾಗಿದ್ದು ದುರದೃಷ್ಟಕರ. ಹೀನ ಕೃತ್ಯ ಎಸಗಿದ ಅಪರಾಧಿಯನ್ನು ಸರ್ಕಾರದ ಖರ್ಚಿನಲ್ಲಿ ಪ್ರಮುಖ ಸ್ಥಾನದಲ್ಲಿ ಚಿತ್ರಿಸಲಾಗಿದೆ. ಈ ಮೂಲಕ ಜನರಿಗೆ ನೀಡಿದ್ದ ಸಂದೇಶವೇನು? ಯಾರೂ ಇದನ್ನು ಗಮನಿಸಿಲ್ಲವೇಕೆ’ ಎಂದು ಇದನ್ನು ಮೊದಲು ಗುರುತಿಸಿದ್ದ ಸೋರವ್ ಸಿಂಗ್ ಎಂಬುವರು ಪ್ರಶ್ನಿಸಿದ್ದಾರೆ. 

ತನಿಖೆಗೆ ಆದೇಶ: ಈ ಬಗ್ಗೆ ತನಿಖೆ ನಡೆಸುವಂತೆ ಹೋಶಿಯಾರ್‌ಪುರ ಜಿಲ್ಲಾಧಿಕಾರಿ ಇಶಾ ಕಾಲಿಯಾ ಆದೇಶಿಸಿದ್ದಾರೆ. ಎಲ್ಲ ಫ್ಲೆಕ್ಸ್‌ಗಳನ್ನು ತೆರವುಗೊಳಿಸಲಾಗಿದೆ. ಅಂತರ್ಜಾಲದಿಂದ ಡೌನ್‌ಲೋಡ್‌ ಮಾಡಿ ಬಳಸಿಕೊಳ್ಳುವಾಗ ಅದನ್ನು ಗಮನಿಸದೇ, ಸಂಬಂಧಿಸಿದ ಪ್ರಾಧಿಕಾರಗಳು ವಹಿಸಿದ ನಿರ್ಲಕ್ಷ್ಯದ ಬಗ್ಗೆ ಸಾರ್ವಜನಿಕರಲ್ಲಿ ಅಚ್ಚರಿ ವ್ಯಕ್ತವಾಗಿದೆ. 

2012ರ ಡಿಸೆಂಬರ್‌ನಲ್ಲಿ ದೆಹಲಿಯಲ್ಲಿ ಚಲಿಸುವ ಬಸ್‌ನಲ್ಲಿ ಆರು ದುಷ್ಕರ್ಮಿಗಳು ನಿರ್ಭಯಾ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ತೀವ್ರ ಗಾಯಗೊಂಡಿದ್ದ ನಿರ್ಭಯಾ ಆ ಬಳಿಕ ಮೃತಪಟ್ಟಿದ್ದರು. ಈ ಘಟನೆ ದೇಶದಾದ್ಯಂತ ಭಾರಿ ಸಂಚಲನ ಸೃಷ್ಟಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು