ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಆರ್‌ಸಿ, ಸಿಎಎಗೆ ನಿತೀಶ್‌ ವಿರೋಧ

ಬಿಜೆಪಿ ಮಿತ್ರಪಕ್ಷ ಜೆಡಿಯುನಿಂದ ಕಾಯ್ದೆಗೆ ಅಪಸ್ವರ
Last Updated 13 ಜನವರಿ 2020, 20:00 IST
ಅಕ್ಷರ ಗಾತ್ರ

ಪಟ್ನಾ: ‘ಬಿಹಾರದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಜಾರಿಮಾಡುವ ಉದ್ದೇಶವಿಲ್ಲ’ ಎಂದು ಮುಖ್ಯ ಮಂತ್ರಿ ನಿತೀಶ್‌ ಕುಮಾರ್‌ ಸೋಮವಾರ ಸ್ಪಷ್ಟಪಡಿಸಿದ್ದಾರೆ.

ಎನ್‌ಡಿಎ ಮೈತ್ರಿಕೂಟದೊಳಗೆ ಇರುವ, ಜೆಡಿಯು ಅಧ್ಯಕ್ಷರಾಗಿರುವ ನಿತೀಶ್‌ ಅವರು ಎನ್‌ಆರ್‌ಸಿ ಹಾಗೂ ಸಿಎಎ ಬಗ್ಗೆ ಈವರೆಗೂ ಮೌನವಾಗಿದ್ದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿಯನ್ನು ಇನ್ನೂ 10 ವರ್ಷ ವಿಸ್ತರಿಸುವ ಕೇಂದ್ರದ ಪ್ರಸ್ತಾವಕ್ಕೆ ಅನುಮೋದನೆ ನೀಡುವ ಸಲುವಾಗಿ ಕರೆದಿದ್ದ ವಿಶೇಷ ಅಧಿವೇಶನದಲ್ಲಿ ವಿರೋಧ ಪಕ್ಷಗಳ ಒತ್ತಾಯಕ್ಕೆ ಮಣಿದು ಮಾತನಾಡಿದ ನಿತೀಶ್‌, ‘ರಾಜ್ಯದಲ್ಲಿ ಇದರ (ಎನ್‌ಆರ್‌ಸಿ) ಅಗತ್ಯವೂ ಇಲ್ಲ, ಅದಕ್ಕೆ ಯಾವ ಸಮರ್ಥನೆಯೂ ಇಲ್ಲ’ ಎಂದರು.

‘ಎನ್‌ಆರ್‌ಸಿ, ಸಿಎಎ ವಿಚಾರವಾಗಿ ದೇಶದಾದ್ಯಂತ ಗಲಭೆಗಳು ನಡೆಯುತ್ತಿದ್ದರೂ ನೀವೇಕೆ ಸುಮ್ಮನಿದ್ದೀರಿ’ ಎಂದು ಆರ್‌ಜೆಡಿ ಮುಖಂಡ, ವಿರೋಧಪಕ್ಷದ ನಾಯಕ ತೇಜಸ್ವಿ ಯಾದವ್‌ ಅವರು ನಿತೀಶ್‌ ಅವರನ್ನು ಕೆಣಕಿದರು. ಈ ಸಂದರ್ಭದಲ್ಲಿ ಮಾತನಾಡಿದ ನಿತೀಶ್‌, ‘ರಾಜೀವ್‌ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಮಾಡಿಕೊಂಡಿದ್ದ ಅಸ್ಸಾಂ ಒಪ್ಪಂದದ ಪ್ರಕಾರ, ಅಸ್ಸಾಂನಲ್ಲಿ ಎನ್‌ಆರ್‌ಸಿ ಜಾರಿ ಮಾಡಬೇಕಾಗಿದೆ. ಬೇರೆ ರಾಜ್ಯಗಳಲ್ಲಿ ಜಾರಿ ಮಾಡುವ ಅಗತ್ಯ ಕಾಣಿಸುತ್ತಿಲ್ಲ. ಪ್ರಧಾನಿಯೂಸ್ಪಷ್ಟಪಡಿಸಿದ್ದಾರೆ‌’ ಎಂದರು.

‘ವಿವಾದಾತ್ಮಕ ಕಾಯ್ದೆಯಾಗಿರುವ ಸಿಎಎ ಬಗ್ಗೆ ಆರೋಗ್ಯಪೂರ್ಣ ಚರ್ಚೆ ನಡೆಸುವ ಅಗತ್ಯವಿದೆ. ಎಲ್ಲರೂ ಒಪ್ಪುವುದಾದರೆ ಸದನದಲ್ಲಿ ಆ ಬಗ್ಗೆ ಚರ್ಚಿಸಲು ನಾವೂ ಸಿದ್ಧರಿದ್ದೇವೆ’ ಎಂದು ನಿತೀಶ್‌ ಹೇಳಿದರು. ‘ದೇಶದಲ್ಲಿ ಜಾತಿ ಆಧರಿತ ಗಣತಿ ಮಾಡಬೇಕು ಮತ್ತು ಈ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನವನ್ನು ಆಯೋಜಿಸಬೇಕು’ ಎಂದು ತೇಜಸ್ವಿ ಒತ್ತಾಯಿಸಿದರು.

ಪ್ರಧಾನಿ ಹಾಗೂ ಗೃಹಸಚಿವರು ವಾರದ ಹಿಂದಷ್ಟೇ ವಿರೋಧಾಭಾಸದ ಹೇಳಿಕೆ ನೀಡಿದ್ದಾರೆ. ಸಾರ್ವಜನಿಕವಾಗಿ ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಜನರ ಹಾದಿ ತಪ್ಪಿಸುತ್ತಿದ್ದಾರೆ
ಸೋನಿಯಾ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷೆ

*****

ಸೋನಿಯಾ ಸಭೆಗೆ ಪ್ರಮುಖ ಪಕ್ಷಗಳ ಗೈರು

ನವದೆಹಲಿ: ಸಿಎಎ ಮತ್ತು ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಹೋರಾಡಲು ವಿರೋಧಪಕ್ಷಗಳನ್ನೆಲ್ಲ ಒಟ್ಟಾಗಿಸುವ ಕಾಂಗ್ರೆಸ್‌ನ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.

ಜಂಟಿ ಹೋರಾಟದ ರೂಪುರೇಷೆ ಸಿದ್ಧಪಡಿಸುವ ಉದ್ದೇಶದಿಂದ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸೋಮವಾರ ಕರೆದಿದ್ದ ಸಭೆಗೆ ಡಿಎಂಕೆ, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್‌, ಬಿಎಸ್‌ಪಿ ಹಾಗೂ ಶಿವಸೇನಾ ಗೈರಾಗಿವೆ. ದೆಹಲಿ ವಿಧಾನಸಭೆಗೆ ಮುಂದಿನ ತಿಂಗಳಲ್ಲಿ ಚುನಾವಣೆ ನಡೆಯಲಿರುವುದರಿಂದ ಕಾಂಗ್ರೆಸ್‌ ಪಕ್ಷವು ಎಎಪಿಯನ್ನು ಸಭೆಗೆ ಆಹ್ವಾನಿಸಿರಲಿಲ್ಲ. ಇತರ ಪಕ್ಷಗಳು ಸಹ ಬೇರೆಬೇರೆ ರಾಜಕೀಯ ಸಮೀಕರಣ- ಲೆಕ್ಕಾಚಾರಗಳ ಕಾರಣಕ್ಕೆ ಸಭೆಗೆ ಗೈರಾಗಿದ್ದವು ಎನ್ನಲಾಗಿದೆ.

‘ಆದರೆ, ಕಾಂಗ್ರೆಸ್‌ ಆಹ್ವಾನಿಸಿದ್ದ ಸಭೆಗೆ 20 ಪಕ್ಷಗಳ ಪ್ರತಿನಿಧಿಗಳು ಬಂದಿದ್ದರು. ನಾವು ಒಗ್ಗಟ್ಟಾಗಿದ್ದೇವೆ’ ಎಂದು ರಾಜ್ಯಸಭೆಯಲ್ಲಿ ವಿರೋಧಪಕ್ಷಗಳ ನಾಯಕ ಗುಲಾಂ ನಬಿ ಆಜಾದ್‌ ಸಭೆಯ ನಂತರ ಹೇಳಿದ್ದಾರೆ.

‘ಧೈರ್ಯವಿದ್ದರೆ ವಿದ್ಯಾರ್ಥಿಗಳ ಜತೆ ಮಾತನಾಡಲಿ’

‘ದೇಶದ ಅರ್ಥ ವ್ಯವಸ್ಥೆ ಯಾಕೆ ಕುಸಿಯುತ್ತಿದೆ ಎಂಬುದನ್ನು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ತಿಳಿಸುವ ಕೆಲಸವನ್ನು ಪ್ರಧಾನಿ ಮಾಡಬೇಕು. ಆದರೆ, ವಿದ್ಯಾರ್ಥಿಗಳ ಜತೆ ಮಾತನಾಡುವ ಧೈರ್ಯ ನರೇಂದ್ರ ಮೋದಿ ಅವರಿಗಿಲ್ಲ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ವಿರೋಧಪಕ್ಷಗಳ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ರಾಹುಲ್‌, ‘ವಿದ್ಯಾರ್ಥಿಗಳನ್ನು ಎದುರುಗೊಳ್ಳುವ ಧೈರ್ಯವಿಲ್ಲದ ಕಾರಣಕ್ಕೆ ಮೋದಿ ಅವರು ಪೊಲೀಸ್‌ ಬಲಪ್ರಯೋಗಿಸಿ ಅವರನ್ನು ನಿಯಂತ್ರಿಸುತ್ತಿದ್ದಾರೆ. ಧೈರ್ಯವಿದ್ದರೆ ಅವರು ಪೊಲೀಸ್‌ ಬಲವಿಲ್ಲದೆ, ಯಾವುದೇ ವಿಶ್ವವಿದ್ಯಾಲಯಕ್ಕೆ ಹೋಗಿ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿಸಲಿ’ ಎಂದು ಸವಾಲು ಹಾಕಿದರು.

ವಿವಾದ ಸೃಷ್ಟಿಸಿದ ಘೋಷ್‌ ಹೇಳಿಕೆ

‘ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಸಿಎಎ ವಿರೋಧಿ ಪ್ರತಿಭಟನಕಾರರನ್ನು ನಾಯಿಗಳಂತೆ ಹೊಡೆದುರುಳಿಸಲಾಗಿದೆ’ ಎನ್ನುವ ಮೂಲಕ ಬಿಜೆಪಿಯ ಪಶ್ಚಿಮ ಬಂಗಾಳ ರಾಜ್ಯ ಘಟಕದ ಮುಖ್ಯಸ್ಥ ದಿಲೀಪ್‌ ಘೋಷ್‌ ಅವರು ಭಾರಿ ವಿವಾದ ಸೃಷ್ಟಿಸಿದ್ದಾರೆ.

ವಿರೋಧ ಪಕ್ಷಗಳು ಮಾತ್ರವಲ್ಲ, ಬಿಜೆಪಿಯ ನಾಯಕರು ಸಹ ಘೋಷ್‌ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ನಾದಿಯಾ ಜಿಲ್ಲೆಯಲ್ಲಿ ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡಿದ ಘೋಷ್‌, ‘ಸಿಎಎ ವಿರುದ್ಧ ಹೋರಾಟ ಮಾಡಿ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟುಮಾಡಿದವರ ವಿರುದ್ಧ ದೀದಿಯ (ಮಮತಾ ಬ್ಯಾನರ್ಜಿ) ಪೊಲೀಸರು ಗುಂಡು ಹಾರಿಸಲಿಲ್ಲ. ಅವರೆಲ್ಲರೂ ಟಿಎಂಸಿಯ ಮತದಾರರು ಎಂಬುದೇ ಅದಕ್ಕೆ ಕಾರಣ. ನಮ್ಮ ಸರ್ಕಾರವಿರುವ ಉತ್ತರಪ್ರದೇಶ, ಕರ್ನಾಟಕ ಹಾಗೂ ಅಸ್ಸಾಂನಲ್ಲಿ ಪ್ರತಿಭಟನಕಾರರನ್ನು ನಾಯಿಗಳಂತೆ ಹೊಡೆದುರುಳಿಸಲಾಗಿದೆ’ ಎಂದರು.

‘ದೇಶದೊಳಗೆ ಎರಡು ಕೋಟಿ ಮುಸ್ಲಿಂ ನುಸುಳುಕೋರರಿದ್ದಾರೆ. ಅವರಲ್ಲಿ ಸುಮಾರು ಒಂದು ಕೋಟಿಗೂ ಹೆಚ್ಚು ಮಂದಿ ಪಶ್ಚಿಮ ಬಂಗಾಳದಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ. ಇಂಥವರಿಗೆ ರಕ್ಷಣೆ ನೀಡಲು ಮಮತಾ ಬ್ಯಾನರ್ಜಿ ಶ್ರಮಿಸುತ್ತಿದ್ದಾರೆ’ ಎಂದು ಘೋಷ್‌ ಆರೋಪಿಸಿದರು.

ಘೋಷ್‌ ಅವರ ಹೇಳಿಕೆಯನ್ನು ಖಂಡಿಸಿದ ಕೇಂದ್ರದ ಸಚಿವ, ಬಿಜೆಪಿ ನಾಯಕ ಬಾಬುಲ್‌ ಸುಪ್ರಿಯೊ, ‘ಇದೊಂದು ಬೇಜವಾಬ್ದಾರಿಯ ಹೇಳಿಕೆ. ಈ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಅಸ್ಸಾಂ ಮತ್ತು ಉತ್ತರಪ್ರದೇಶ ಸರ್ಕಾರ ಜನರ ಮೇಲೆ ಗುಂಡುಹಾರಿಸಲು ಯಾವತ್ತೂ ಇಚ್ಛಿಸುವುದಿಲ್ಲ’ ಎಂದು ಟ್ವೀಟ್‌ ಮಾಡಿದ್ದಾರೆ.

ಟಿಎಂಸಿ ನಾಯಕರು ಘೋಷ್‌ ವಿರುದ್ಧ ಟೀಕಾಪ್ರಹಾರವನ್ನೇ ಆರಂಭಿಸಿದ್ದಾರೆ. ‘ಘೋಷ್‌ ಅವರ ಹೇಳಿಕೆ ಬಿಜೆಪಿಯ ಮನಸ್ಥಿತಿಗೆ ಹಿಡಿದ ಕನ್ನಡಿ. ಆ ಪಕ್ಷವು ಭಿನ್ನಾಭಿಪ್ರಾಯವನ್ನು ಸಹಿಸುವುದಿಲ್ಲ’ ಎಂದು ಟಿಎಂಸಿ ಕಾರ್ಯದರ್ಶಿ, ಸಚಿವ ಪಾರ್ಥ ಚಟರ್ಜಿ ಹೇಳಿದ್ದಾರೆ.

‘ಬಿಜೆಪಿ ಆಡಳಿತದ ಸರ್ಕಾರಗಳು ಜನರ ಮೇಲೆ ಗುಂಡು ಹಾರಿಸಿಲ್ಲ ಎಂದು ಬಿಜೆಪಿ ವಾದಿಸುತ್ತಾ ಬಂದಿದೆ. ಈಗ ಬೆಕ್ಕು ಚೀಲದಿಂದ ಹೊರಗೆ ಬಂದಿದೆ. ದಿಲೀಪ್‌ ಘೋಷ್‌ ನಿಜವನ್ನು ನುಡಿದಿದ್ದಾರೆ. ಪ್ರತಿಭಟನಕಾರರನ್ನು ಕೊಲ್ಲುವ ಮೂಲಕ ಸರ್ವಾಧಿಕಾರಿ ವ್ಯವಸ್ಥೆಯನ್ನು ಜಾರಿಮಾಡಲುಬಿಜೆಪಿಯ ಮುಂದಾಗಿದೆ’ ಎಂದು ಸಿಪಿಎಂ ನಾಯಕ ಸುಜನ್‌ ಚಕ್ರವರ್ತಿ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT