ಶನಿವಾರ, ಮಾರ್ಚ್ 28, 2020
19 °C

ನಿರ್ಭಯಾ ಪ್ರಕರಣ| ಅಪರಾಧಿಯ ಕಾನೂನು ಹೋರಾಟದ ದಾರಿ ಅಂತ್ಯವಾಗಿವೆ ಎಂದ ಕೋರ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ‘ನನ್ನ ಪರವಾಗಿ ವಾದ ಮಂಡಿಸಿದ ಈ ಹಿಂದಿನ ವಕೀಲರು ದಾರಿತಪ್ಪಿಸಿದ್ದಾರೆ. ಹೀಗಾಗಿ ನನಗೆ ನ್ಯಾಯಾಂಗ ಹೋರಾಟಕ್ಕಿರುವ ಎಲ್ಲ ಅವಕಾಶಗಳನ್ನು ಮರಳಿ ಕಲ್ಪಿಸಬೇಕು,’ ಎಂದು ಮನವಿ ಮಾಡಿ ನಿರ್ಭಯಾ ಅತ್ಯಾಚಾರ ಅಪರಾಧಿ ಮುಕೇಶ್‌ ಸಿಂಗ್‌ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ತಳ್ಳಿ ಹಾಕಿದೆ. 

‘ಅರ್ಜಿದಾರ ಈ ಹಿಂದೆ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿ ಮತ್ತು ಕಾನೂನು ಪರಿಹಾರಾತ್ಮಕ ಅರ್ಜಿಗಳು ವಜಾಗೊಂಡಿವೆ. ಇನ್ನು ಯಾವ ಕಾನೂನಾತ್ಮಕ  ಮಾರ್ಗಗಳು ಉಳಿದಿವೆ’ ಎಂದು ಪ್ರಶ್ನೆ ಮಾಡಿದ ನ್ಯಾಯಮೂರ್ತಿಗಳಾದ ಅರುಣ್‌ ಮಿಶ್ರಾ ಮತ್ತು ಎಂ. ಆರ್‌ ಶಾ ಅವರಿದ್ದ ಪೀಠ  ‘ಈ ಅರ್ಜಿಯ ವಿಚಾರಣೆಯಲ್ಲಿ ಹುರುಳಿಲ್ಲ,’ ತಿಳಿಸಿತು.

ಪ್ರಕರಣದಲ್ಲಿ ನ್ಯಾಯಾಲಯಗಳು ಈ ಹಿಂದೆ ನೀಡಿರುವ ಎಲ್ಲ ಆದೇಶಗಳನ್ನು ರದ್ದು ಮಾಡುವಂತೆ ಕೋರಿದ್ದ ಮುಕೇಶ್‌ ಸಿಂಗ್‌, ರಾಷ್ಟ್ರಪತಿಗಳಿಂದ ತನ್ನ ದಯಾ ಅರ್ಜಿ ನಿರಾಕರಣೆಯಾಗಲು ಮತ್ತು ಕಾನೂನು ಪರಿಹಾರಾತ್ಮಕ ಅರ್ಜಿ ತಿರಸ್ಕಾರಗೊಳ್ಳಲು ವಕೀಲರಾದ ವೃಂದಾ ಗ್ರೋವರ್‌ ಅವರೇ ಕಾರಣ ಎಂದು ಆರೋಪಿಸಿದ್ದಾನೆ. 

ಅಲ್ಲದೆ, ತನ್ನ ವಿಚಾರದಲ್ಲಿ ಕೇಂದ್ರ ಸರ್ಕಾರ, ದೆಹಲಿ ಸರ್ಕಾರ ಮತ್ತು ವೃಂದಾ ಗ್ರೋವರ್‌ ಅವರಿಂದ ಕ್ರಿಮಿನಲ್‌ ಸಂಚು ನಡೆದಿದೆ. ಅವರಿಂದ ಅನ್ಯಾಯವಾಗಿದೆ. ಈ ವಿಚಾರದಲ್ಲಿ ಸಿಬಿಐ ತನಿಖೆಯಾಗಬೇಕು ಎಂದು  ನ್ಯಾಯವಾದಿ ಎಂ. ಎಲ್‌ ಶರ್ಮಾ ಅವರ ಮೂಲಕ ಮುಕೇಶ್‌ ಸಿಂಗ್‌ ಅರ್ಜಿ ಸಲ್ಲಿಸಿದ್ದಾನೆ. 

ಆದರೆ, ಮುಕೇಶ್‌ನ ಯಾವ ವಾದವನ್ನೂ ಆಲಿಸದ ಸುಪ್ರೀಂ ಕೋರ್ಟ್‌ ಅರ್ಜಿಯನ್ನು ತಳ್ಳಿಹಾಕಿದೆ. 

ಇದೇ 20ರಂದು 5.30ಕ್ಕೆ ಅಪರಾಧಿಗಳನ್ನು ಗಲ್ಲಿಗೇರಿಸುವಂತೆ ಮಾರ್ಚ್‌ 5ರಂದು ನ್ಯಾಯಾಲಯ ಆದೇಶ ನೀಡಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು