ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ: ಇಬ್ಬರು ಸಾಧುಗಳ ಹತ್ಯೆ

ಪಾಲ್ಘರ್‌ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ, ಪ್ರಕರಣ ರಾಜಕೀಯಗೊಳಿಸದಿರಿ–ಕಾಂಗ್ರೆಸ್
Last Updated 28 ಏಪ್ರಿಲ್ 2020, 17:51 IST
ಅಕ್ಷರ ಗಾತ್ರ

ಲಖನೌ: ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಇಬ್ಬರು ಸಾಧುಗಳನ್ನು ಮಕ್ಕಳ ಕಳ್ಳರೆಂದು ಶಂಕಿಸಿ ಹತ್ಯೆ ಮಾಡಿದ ಘಟನೆ ಮಾಸುವ ಮುನ್ನವೇ, ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯ ದೇವಸ್ಥಾನವೊಂದರಲ್ಲಿ ಮಂಗಳವಾರ ಬೆಳಿಗ್ಗೆ ಇಬ್ಬರು ಸಾಧುಗಳ ಹತ್ಯೆ ನಡೆದಿದೆ. ಹತ್ಯೆಯ ಆರೋಪದಲ್ಲಿ ಸ್ಥಳೀಯ ಯುವಕನೊಬ್ಬನನ್ನು ಬಂಧಿಸಲಾಗಿದೆ.

‘ಪಗೌನಾ ಗ್ರಾಮದ ಶಿವ ದೇವಸ್ಥಾನದ ಸಾಧುಗಳಾದ ಜಗನ್‌ದಾಸ್ (55) ಮತ್ತು ಸೇವಾದಾಸ್‌ (45) ಎಂಬುವವರನ್ನು ಲಾಠಿಯಿಂದ ಹೊಡೆದು ಹತ್ಯೆ ಮಾಡಲಾಗಿದೆ. ಈ ಸಂಬಂಧಅದೇ ಗ್ರಾಮದ ನಿವಾಸಿ ಮುರಾರಿ (ರಾಜು) ಎಂಬ ಆರೋಪಿಯನ್ನು ಗ್ರಾಮಸ್ಥರೇ ಬೆನ್ನಟ್ಟಿ ಪೊಲೀಸರಿಗೆ ಒಪ್ಪಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ಎರಡು ದಿನಗಳ ಹಿಂದೆ ಇಬ್ಬರು ಸಾಧುಗಳು, ‘ಚಿಮ್ಟಾ’ (ಇಕ್ಕಳ) (ಸಾಧುಗಳು ಧಾರ್ಮಿಕ ಗೀತೆ ಹಾಡುವಾಗ ಬಳಸುವ ಸಾಧನ) ಕಳ್ಳತನದ ಆರೋಪ ಹೊರಿಸಿ ಮುರಾರಿಯೊಂದಿಗೆ ವಾಗ್ವಾದ ನಡೆಸಿದ್ದರು. ಅಪರಾಧದ ಹಿನ್ನೆಲೆ ಹೊಂದಿದ್ದ ಮುರಾರಿ, ಕೆಲ ದಿನಗಳ ಹಿಂದೆಯಷ್ಟೇ ಕೊಲೆ ಪ್ರಕರಣವೊಂದರಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ. ಇಕ್ಕಳ ಕದ್ದ ಆರೋಪ ಮಾಡಿದ ಕಾರಣಕ್ಕಾಗಿ ಮುರಾರಿ, ಈ ಇಬ್ಬರು ಸಾಧುಗಳಿಗೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಒಡ್ಡಿದ್ದ. ಇದೇ ಕಾರಣಕ್ಕಾಗಿ ಸೋಮವಾರ ತಡರಾತ್ರಿ ಮುರಾರಿ, ಇಬ್ಬರು ಸಾಧುಗಳನ್ನು ಹತ್ಯೆ ಮಾಡಿರಬಹುದು’ ಎಂದು ಮೂಲಗಳು ಹೇಳಿವೆ.

‘ನಾನು ದೇವರ ಇಚ್ಛೆಯನ್ನು ನಡೆಸಿಕೊಟ್ಟಿದ್ದೇನೆ. ಸಾಧುಗಳೊಂದಿಗೆ ನನಗೆ ಯಾವ ಜಗಳ ಇರಲಿಲ್ಲ. ಸೋಮವಾರ ರಾತ್ರಿ ‘ಭಾಂಗ್‌’ ಸೇವಿಸಿ ದೇವಸ್ಥಾನಕ್ಕೆ ತೆರಳಿ ಲಾಠಿಯಿಂದ ಸಾಧುಗಳನ್ನು ಹೊಡೆದು ‌ಸಾಯಿಸಿರುವುದಾಗಿ ಮುರಾರಿ ಹೇಳಿದ್ದಾನೆ. ಆದರೆ ಇನ್ನೂ ಆತ ಮತ್ತಿನ ಸ್ಥಿತಿಯಲ್ಲಿರುವ ಕಾರಣ, ಸುದೀರ್ಘ ವಿಚಾರಣೆ ನಡೆಯಬೇಕಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಂಗಳವಾರ ಬೆಳಿಗ್ಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರು ಸಾಧುಗಳ ಮೃತದೇಹವನ್ನು ಸ್ಥಳೀಯರು ಗಮನಿಸಿದ್ದಾರೆ. ಘಟನೆ ಸ್ಥಳದಿಂದ ಎರಡು ಕಿ.ಮೀ. ದೂರದಲ್ಲಿ ಬೆತ್ತಲೆ ಸ್ಥಿತಿಯಲ್ಲಿದ್ದ ಮುರಾರಿಯನ್ನು ಸ್ಥಳೀಯರು ಪತ್ತೆ ಮಾಡಿದರು. ಗಾಂಜಾ ಪ್ರಭಾವಕ್ಕೊಳಗಾಗಿಮತ್ತಿನ ಸ್ಥಿತಿಯಲ್ಲಿದ್ದ ಆತನನ್ನು ಸ್ಥಳೀಯರೇ ಪೊಲೀಸರಿಗೆ ಒಪ್ಪಿಸಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಪಡೆದಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದು, ವಿವರವಾದ ವರದಿಯನ್ನು ಕೋರಿದ್ದಾರೆ.

ರಾಜಕೀಯಗೊಳಿಸದಿರಿ: ಕಾಂಗ್ರೆಸ್‌
ನವದೆಹಲಿ:
‘ಬುಲಂದ್‌ಶಹರ್ ಸಾಧುಗಳ ಹತ್ಯೆಯ ಪ್ರಕರಣವನ್ನು ಪಾಲ್ಘರ್ ಸಾಧುಗಳ ಹತ್ಯೆ ಪ್ರಕರಣದಂತೆ ರಾಜಕೀಯಗೊಳಿಸದಿರಿ’ ಎಂದು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಹೇಳಿವೆ.

‘ಬುಲಂದ್‌ಶಹರ್‌ನ ದೇವಸ್ಥಾನವೊಂದರಲ್ಲಿ ಮಲಗಿದ್ದ ಇಬ್ಬರು ಸಾಧುಗಳನ್ನು ನಿರ್ದಯವಾಗಿ ಕೊಲ್ಲಲಾಗಿದೆ. ಇಂತಹ ಘೋರ ಅಪರಾಧಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಮತ್ತು ಈ ಸಮಯದಲ್ಲಿ ಯಾರೂ ಈ ಘಟನೆಯನ್ನು ರಾಜಕೀಯಗೊಳಿಸಬಾರದು’ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

‘ಉತ್ತರ ಪ್ರದೇಶದಲ್ಲಿಈ ತಿಂಗಳ ಮೊದಲ 15 ದಿನಗಳಲ್ಲಿ 100 ಜನರು ಸಾವನ್ನಪ್ಪಿದ್ದಾರೆ’ ಎಂದೂ ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಸಾಧುಗಳ ಹತ್ಯೆ: ಉದ್ಧವ್ ಠಾಕ್ರೆ ಕಳವಳ
ಮುಂಬೈ (ಪಿಟಿಐ):
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕರೆ ಮಾಡಿದಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ,ಸಾಧುಗಳ ಹತ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಶಿವಸೇನಾ ಮುಖಂಡ ಸಂಜಯ್ ರಾವುತ್ ಹೇಳಿದ್ದಾರೆ.

‘ಇಂಥ ಘಟನೆಗಳು ನಡೆದಾಗ ನಾವು ಇದರಲ್ಲಿ ರಾಜಕೀಯವಾಗಿ ಪಾಲ್ಗೊಳ್ಳುವುದನ್ನು ಬಿಡಬೇಕು ಮತ್ತು ಅಪರಾಧಿಗಳನ್ನು ಶಿಕ್ಷಿಸಲು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದ ಉದ್ಧವ್ ಅವರು ದೂರವಾಣಿ ಕರೆಯಲ್ಲಿ ಯೋಗಿ ಅವರಿಗೆ ಹೇಳಿದರು’ ಎಂದು ರಾವುತ್ ತಿಳಿಸಿದ್ದಾರೆ.

‘ಉತ್ತರ ಪ್ರದೇಶದ ಸಾಧುಗಳ ಹತ್ಯೆ ಪ್ರಕರಣವನ್ನು ಪಾಲ್ಘರ್ ಸಾಧುಗಳ ಹತ್ಯೆ ಪ್ರಕರಣದಂತೆ ಕೋಮುವಾದದ ಬಣ್ಣ ಹಚ್ಚಬಾರದು’ ಎಂದು ಟ್ವೀಟ್ ಮಾಡಿರುವಸಂಜಯ್, ಪರೋಕ್ಷವಾಗಿ ಬಿಜೆಪಿಯನ್ನು ಕುಟುಕಿದ್ದಾರೆ.

‘ಶಾಂತಿಯನ್ನು ಕಾಪಾಡಿ. ಇಡೀ ದೇಶವೇ ಕೊರೊನಾ ವಿರುದ್ಧ ಹೋರಾಡುತ್ತಿದೆ. ಯೋಗಿ ಆದಿತ್ಯನಾಥ್ ಆರೋಪಿಗಳನ್ನು ಶಿಕ್ಷಿಸಲಿದ್ದಾರೆ’ ಎಂದೂ ಅವರು ಮತ್ತೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಸಾಧುಗಳ ಹತ್ಯೆ ನಡೆದಾಗ ಆದಿತ್ಯನಾಥ್, ಉದ್ಧವ್ ಠಾಕ್ರೆಗೆ ಕರೆ ಮಾಡಿದ್ದರು.

*
ಬುಲಂದ್‌ಶಹರ್‌ನಲ್ಲಿ ನಡೆದ ಹತ್ಯೆಗಳಿಗೆ ಯಾರು ಹೊಣೆ ಎಂಬುದನ್ನು ಬಿಜೆಪಿ ಅಧ್ಯಕ್ಷ ನಡ್ಡಾ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಹೇಳಬೇಕು.
– ರಂದೀಪ್ ಸುರ್ಜೆವಾಲಾ, ಕಾಂಗ್ರೆಸ್ ಮುಖ್ಯ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT