ಭಾನುವಾರ, ನವೆಂಬರ್ 17, 2019
25 °C

ಅಸ್ಸಾಂ, ರಾಷ್ಟ್ರೀಯ ಪೌರತ್ವ ನೋಂದಣಿ: ದೇಶವಿಭಜನೆಯೇ ವಲಸೆಗೆ ಮೂಲ

Published:
Updated:

ಸ್ವಾತಂತ್ರ್ಯ, ಆಂತರಿಕ ಗಲಭೆ ಮತ್ತು ನಿರಾಶ್ರಿತರು

ಪೂರ್ವ ಪಾಕಿಸ್ತಾನದಿಂದ ನಿರಾಶ್ರಿತರ ನುಸುಳುವಿಕೆ ಹೆಚ್ಚಾದ ಕಾರಣ 1950ರಲ್ಲಿ  ಭಾರತ ಸರ್ಕಾರವು ‘ವಲಸಿಗರ (ಅಸ್ಸಾಂನಿಂದ ಉಚ್ಚಾಟನೆ) ಕಾಯ್ದೆ’ಯನ್ನು ಜಾರಿಗೆ ತಂದಿತು. 1951ರಲ್ಲಿ ಸ್ವತಂತ್ರ ಭಾರತದ ಮೊದಲ ಜನಗಣತಿ ನಡೆಸಲಾಯಿತು. ಜನಗಣತಿ ವರದಿಯ ಆಧಾರದ ಮೇಲೆ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಸಿದ್ಧಪಡಿಸಲಾಯಿತು. ಪೌರತ್ವ ನೋಂದಣಿ ಪೂರ್ಣಗೊಂಡ ನಂತರ 1957ರಲ್ಲಿ ‘ವಲಸಿಗರ (ಅಸ್ಸಾಂನಿಂದ ಉಚ್ಚಾಟನೆ) ಕಾಯ್ದೆಯನ್ನು ರದ್ದುಮಾಡಲಾಯಿತು. 1964–65ರಲ್ಲಿ ಪೂರ್ವ ಪಾಕಿಸ್ತಾನದಲ್ಲಿ ಮತ್ತೆ ಆಂತರಿಕ ಸಂಘರ್ಷ ತಲೆದೋರಿತು. ಆಗಲೂ ಲಕ್ಷಾಂತರ ನಿರಾಶ್ರಿತರು ಭಾರತಕ್ಕೆ ಬಂದರು

ಬಾಂಗ್ಲಾ ವಿಮೋಚನಾ ಚಳವಳಿ ಮತ್ತು ಯುದ್ಧ

ದೇಶವಿಭಜನೆಯ ನಂತರ ಪೂರ್ವ ಬಂಗಾಳವು (ಈಗಿನ ಬಾಂಗ್ಲಾದೇಶ) ಪಾಕಿಸ್ತಾನದ ಭಾಗವಾಗಿತ್ತು. ಹೀಗಾಗಿ ಈ ಪ್ರದೇಶವನ್ನು ಪೂರ್ವ ಪಾಕಿಸ್ತಾನ ಎಂದು ಕರೆಯಲಾಯಿತು. ಆದರೆ ಪಾಕಿಸ್ತಾನದಿಂದ ಬೇರೆಯಾಗಲು ಪೂರ್ವ ಪಾಕಿಸ್ತಾನವು ಹವಣಿಸುತ್ತಲೇ ಇತ್ತು. 1970ರ ಹೊತ್ತಿಗೆ ಈ ತುಡಿತ ಹೆಚ್ಚಾಯಿತು. ಆಂತರಿಕ ಗಲಭೆಯೂ ತಲೆದೋರಿತು. ಬಾಂಗ್ಲಾ ವಿಮೋಚನಾ ಚಳವಳಿಯೂ ಆರಂಭವಾಯಿತು. ಇದನ್ನು ಹತ್ತಿಕ್ಕಲು ಪಾಕಿಸ್ತಾನವು 1971ರಲ್ಲಿ ಯುದ್ಧ ಆರಂಭಿಸಿತು. ಭಾರತವು ಪೂರ್ವ ಪಾಕಿಸ್ತಾನದ ಪರವಾಗಿ ಯುದ್ಧ ನಡೆಸಿತು. ಪಾಕಿಸ್ತಾನವು ಯುದ್ಧದಲ್ಲಿ ಸೋತು, ಪೂರ್ವ ಪಾಕಿಸ್ತಾನವನ್ನು ಬಿಟ್ಟುಕೊಟ್ಟಿತು. ಬಾಂಗ್ಲಾದೇಶವು ಅಸ್ತಿತ್ವಕ್ಕೆ ಬಂದಿತು. ಆದರೆ ಈ ಸಂಘರ್ಷದ ಅವಧಿಯಲ್ಲೂ ಲಕ್ಷಾಂತರ ಜನರು ಭಾರತದ ಪಶ್ಚಿಮ ಬಂಗಾಳ ಮತ್ತು ಅಸ್ಸಾಂಗೆ ವಲಸೆ ಬಂದಿದ್ದರು

ನೆಲೀ ಹತ್ಯಾಕಾಂಡ

ಅಕ್ರಮ ವಲಸಿಗರು ಮತ್ತು ಬಾಂಗ್ಲಾ ನಿರಾಶ್ರಿತರನ್ನು ಅಸ್ಸಾಂನಿಂದ ಹೊರ ಹಾಕಲು ಒತ್ತಾಯಿಸಿ, ಅಖಿಲ ಅಸ್ಸಾಂ ವಿದ್ಯಾರ್ಥಿ ಸಂಘಟನೆ ಮತ್ತು ಅಖಿಲ ಅಸ್ಸಾಂ ಗಣ ಸಂಗ್ರಾಮ ಪರಿಷತ್‌ಗಳು 1979ರಲ್ಲಿ ಚಳವಳಿ ಆರಂಭಿಸಿದವು. ಇದು 1985ರವರೆಗೆ ನಡೆಯಿತು. ಇದರ ಮಧ್ಯೆಯೇ ಕೇಂದ್ರ ಅಸ್ಸಾಂನ ನೆಲೀಯಲ್ಲಿ ಅಕ್ರಮ ವಲಸಿಗರ ಹತ್ಯಾಕಾಂಡ ನಡೆಯಿತು. ಹತ್ಯಾಕಾಂಡದಲ್ಲಿ 3,000ಕ್ಕೂ ಹೆಚ್ಚು ಜನರು ಕೊಲೆಯಾದರು.

ಚಳವಳಿ ನಡೆಸುತ್ತಿದ್ದ ಎರಡೂ ಸಂಘಟನೆಗಳು, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು 1985ರಲ್ಲಿ ‘ಅಸ್ಸಾಂ ಅಕಾರ್ಡ್‌’ ಒಪ್ಪಂದಕ್ಕೆ ಸಹಿ ಹಾಕಿದವು. ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರ ನೇತೃತ್ವದಲ್ಲಿ ಈ ಒಪ್ಪಂದ ನಡೆಯಿತು. ‘1971ರ ಮಾರ್ಚ್‌ 25ಕ್ಕೂ ಮೊದಲು ಅಸ್ಸಾಂಗೆ ವಲಸೆ ಬಂದಿದ್ದವರು ಇಲ್ಲೇ ಉಳಿಯಬಹುದು. 1971ರ ಮಾರ್ಚ್‌ 25ರಂದು ಮತ್ತು ಆನಂತರ ಅಸ್ಸಾಂಗೆ ಬಂದವರನ್ನು ದೇಶದಿಂದ ಹೊರಹಾಕಬೇಕು’ ಎಂಬುದು ಒಪ್ಪಂದದ ಸಾರಾಂಶವಾಗಿತ್ತು.

‘ಡಿ’ ನಾಗರಿಕರು

ಯಾವಾಗ ಅಸ್ಸಾಂಗೆ ಬಂದರು ಎಂಬುದು ನಿಖರವಾಗಿ ಗೊತ್ತಿಲ್ಲದ ಅಕ್ರಮ ವಲಸಿಗರ ಮತದಾರರ ಚೀಟಿಯಲ್ಲಿ ‘ಡಿ’ ಎಂದು ನಮೂದಿಸಲು ಚುನಾವಣಾ ಆಯೋಗವು 1997ರಲ್ಲಿ ನಿರ್ಧರಿಸಿತು. ಇವರನ್ನು ‘ಡಿ ನಾಗರಿಕರು’ ಅಥವಾ ‘ಡೌಟ್‌ಫುಲ್ ನಾಗರಿಕರು’ ಎಂದೇ ಗುರುತಿಸಲಾಗುತ್ತಿದೆ

ಎನ್‌ಆರ್‌ಸಿ ಪರಿಷ್ಕರಣೆ

2009ರಲ್ಲಿ ಎನ್‌ಆರ್‌ಸಿ ಪರಿಷ್ಕರಣೆಗೆ ಕೋರಿ ‘ಅಸ್ಸಾಂ ಪಬ್ಲಿಕ್ ವರ್ಕ್ಸ್‌–ಎಪಿಡಬ್ಲ್ಯು’ ಎಂಬ ಸ್ವಯಂಸೇವಾ ಸಂಸ್ಥೆಯು ಸುಪ್ರೀಂ ಕೋರ್ಟ್‌ ಮೊರೆ ಹೋಯಿತು. ಅಲ್ಲದೆ ಮತದಾರರ ಪಟ್ಟಿಯಿಂದ ಅಕ್ರಮ ವಲಸಿಗರು ಅರ್ಥಾತ್ ವಿದೇಶಿಯರ ಹೆಸರನ್ನು ತೆಗೆದು ಹಾಕುವಂತೆ ಮನವಿ ಮಾಡಿತು. 2010ರಲ್ಲಿ ಎನ್‌ಆರ್‌ಸಿ ಪರಿಷ್ಕರಣೆಯನ್ನು ಪ್ರಾಯೋಗಿಕವಾಗಿ ಬರ್ಪೆಟಾದಲ್ಲಿ ನಡೆಸಲಾಯಿತು. ಆದರೆ ಹಿಂಸಾಚಾರ ನಡೆದು ಹಲವರು ಹತರಾದ ನಂತರ, ಪರಿಷ್ಕರಣೆಯನ್ನು ಕೈಬಿಡಲಾಯಿತು. 2015ರಲ್ಲಿ ಮತ್ತೆ ಪರಿಷ್ಕರಣೆಗೆ ಚಾಲನೆ ನೀಡಲಾಯಿತು. ನಂತರ 2017ರ ಡಿಸೆಂಬರ್‌ನಲ್ಲಿ, 2018ರ ಜುಲೈನಲ್ಲಿ, 2019ರ ಜೂನ್‌ನಲ್ಲಿ ಹಂತಹಂತವಾಗಿ ಕರಡು ಎನ್‌ಆರ್‌ಸಿಯನ್ನು ಬಿಡುಗಡೆ ಮಾಡಲಾಯಿತು. 2019ರ ಆಗಸ್ಟ್‌ 31ರಂದು ಅಂತಿಮ ಪಟ್ಟಿ ಬಿಡುಗಡೆ ಮಾಡಲಾಯಿತು

ಆಧಾರ: ಪಿಟಿಐ

**

ದೆಹಲಿಯಲ್ಲೂ ಪರಿಸ್ಥಿತಿ ಅಪಾಯಕಾರಿಯಾಗಿದೆ. ಇಲ್ಲಿ ನೆಲೆಸಿರುವ ಅಕ್ರಮ ವಲಸಿಗರು ಅತ್ಯಂತ ಅಪಾಯಕಾರಿಗಳು ದೆಹಲಿಗೂ ಎನ್‌ಆರ್‌ಸಿ ಬೇಕಾಗಿದೆ
- ಮನೋಜ್ ತಿವಾರಿ, ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ

**

ಎನ್‌ಆರ್‌ಸಿ ಪಟ್ಟಿಯಿಂದ ನಮಗೆ ತೀವ್ರ ಅಸಮಾಧಾನವಾಗಿದೆ. 50 ಲಕ್ಷ ಅಕ್ರಮ ವಲಸಿಗರಿದ್ದಾರೆ ಎಂದು ಸರ್ಕಾರ ಹೇಳಿತ್ತು. ಈಗ ಆ ಸಂಖ್ಯೆ ಕಡಿಮೆಯಾಗಿದೆ
- ರಂಜೀತ್ ಕುಮಾರ್ ದಾಸ್, ಅಸ್ಸಾಂ ಬಿಜೆಪಿ ಘಟಕದ ಅಧ್ಯಕ್ಷ

**

ಅಕ್ರಮ ವಲಸಿಗ ಮುಸ್ಲಿಮರಿಗೆ ಅನುಕೂಲ ಮಾಡಿಕೊಡಲು ಮತ್ತು ಹಿಂದೂಗಳನ್ನು ಅಸ್ಸಾಂನಿಂದ ಹೊರ ಹಾಕಲು ನಡೆಸಿರುವ ಸಂಚೇ ಎನ್‌ಆರ್‌ಸಿ
- ಶೀಲಾದಿತ್ಯ ದೇವ್, ಬಿಜೆಪಿ ಶಾಸಕ

ಪ್ರತಿಕ್ರಿಯಿಸಿ (+)