ಬುಧವಾರ, ಮೇ 12, 2021
18 °C
ಇಂದು ಉದ್ಘಾಟನೆ: ಚರ್ಚೆಗೆ ಗ್ರಾಸವಾದ ‘ಇಂಡಿಯನ್‌ ಬಾಂಬ್‌’ ಪ್ರದರ್ಶನ

ಕರ್ತಾರ್‌ಪುರ ಕಾರಿಡಾರ್: ಯಾತ್ರಿಗಳ ಪ್ರವೇಶಕ್ಕೆ 20 ಡಾಲರ್ ಶುಲ್ಕ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕರ್ತಾರ್‌ಪುರ ಕಾರಿಡಾರ್ ಮೂಲಕ ಗುರುದ್ವಾರ ದರ್ಬಾರ್ ಸಾಹಿಬ್‌ಗೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ತಲಾ 20 ಡಾಲರ್‌ (₹1425.57) ಶುಲ್ಕ ವಿಧಿಸಲಾಗುವುದು ಎಂದು ಪಾಕಿಸ್ತಾನ ತಿಳಿಸಿದೆ.

ಕಾರಿಡಾರ್‌ ಉದ್ಘಾಟನೆಯ ದಿನ ಹಾಗೂ ಗುರುನಾನಕ್ ಅವರ 550ನೇ ಜನ್ಮದಿನವಾದ ನ. 12ರಂದು ಭಾರತದ ಯಾತ್ರಿಕರಿಗೆ ಶುಲ್ಕ ವಿಧಿಸುವುದಿಲ್ಲ ಎಂದು ಕಳೆದ ವಾರ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಪ್ರಕಟಿಸಿದ್ದರು. ಪೂರಕವಾಗಿ ಗುರುವಾರ ಪಾಕಿಸ್ತಾನ ವಿದೇಶಾಂಗ ಕಚೇರಿಯೂ ಶುಲ್ಕ ವಿನಾಯಿತಿ ಕುರಿತು ಹೇಳಿಕೆಯನ್ನು ನೀಡಿತ್ತು.

ಕರ್ತಾರ್‌ಪುರ ಕಾರಿಡಾರ್‌ ಭಾರತದ ಪಂಜಾಬ್‌ನಲ್ಲಿ ಇರುವ ಡೇರಾ ಬಾಬಾ ನಾನಕ್ ಸಮಾಧಿ ತಾಣ ಹಾಗೂ ಪಾಕಿಸ್ತಾನ ಪಂಜಾಬ್‌ ಪ್ರಾಂತ್ಯದ ಕರ್ತಾರ್‌ಪುರದಲ್ಲಿ ಇರುವ ದರ್ಬಾರ್‌ ಸಾಹಿಬ್‌ಗೆ ಸಂಪರ್ಕ ಕಲ್ಪಿಸಲಿದೆ.

ಶನಿವಾರ ಈ ಕಾರಿಡಾರ್‌ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ. ಭಾರತ ಮತ್ತು ಪಾಕಿಸ್ತಾನ ಎರಡೂ ಕಡೆ ಪ್ರತ್ಯೇಕ ಉದ್ಘಾಟನಾ ಕಾರ್ಯಕ್ರಮಗಳು ನಡೆಯಲಿವೆ. ಮೂಲಗಳ ಪ್ರಕಾರ, ಉದ್ಘಾಟನೆ ದಿನ ಯಾತ್ರಿಕರಿಗೆ ತಲಾ 20 ಡಾಲರ್ ಶುಲ್ಕ ವಿಧಿಸುವ ನಿರ್ಧಾರವನ್ನು ಪಾಕಿಸ್ತಾನ ಈಗಾಗಲೇ ಭಾರತಕ್ಕೆ ತಿಳಿಸಿದೆ.

ಜಾಥಾದಲ್ಲಿ ಅಧಿಕೃತ ಭೇಟಿ ನೀಡುವ 550 ಜನರ ನಿಯೋಗದಲ್ಲಿ ಇರುವವರೆಗೂ ಶುಲ್ಕ ವಿಧಿಸಲಾಗುವುದೇ ಎಂಬುದು  ಸ್ಪಷ್ಟವಾಗಿಲ್ಲ. ಒಪ್ಪಂದದ ಅನುಸಾರ, ಭಾರತದಿಂದ ನಿತ್ಯ 5000 ಯಾತ್ರಿಕರಿಗೆ ಗುರುದ್ವಾರ ದರ್ಬಾರ್‌ಗೆ ತೆರಳಲು ಅವಕಾಶ ನೀಡಲಾಗುತ್ತದೆ. ಸಿಖ್ಖರ ಧರ್ಮಗುರು ಗುರುನಾನಕ್‌ ದೇವ್ 18 ವರ್ಷಗಳನ್ನು ಇಲ್ಲಿಯೇ ಕಳೆದಿದ್ದರು.

ಆದರೆ, ಧಾರ್ಮಿಕ ಯಾತ್ರಿಗಳಿಗೆ ಶುಲ್ಕ ವಿಧಿಸಬಾರದು ಎಂದು ಭಾರತ ಸರ್ಕಾರ ಮನವಿ ಮಾಡಿದೆ.

‘ಭಾರತದ ಬಾಂಬ್’ ಪ್ರದರ್ಶನ
ನವದೆಹಲಿ: ಕರ್ತಾರ್‌ಪುರ ಕಾರಿಡಾರ್ ಉದ್ಘಾಟನೆ ಮುನ್ನಾದಿನ ಪಾಕಿಸ್ತಾನ ಆಡಳಿತ ಅಲ್ಲಿನ ಗುರುದ್ವಾರದ ಬಳಿ ಪ್ರದರ್ಶನಕ್ಕಿಟ್ಟಿರುವ ‘ಭಾರತದ ಬಾಂಬ್’ ಈಗ ಚರ್ಚೆಗೆ ಗ್ರಾಸವಾಗಿದೆ.

1971ರ ಯುದ್ಧದಲ್ಲಿ ಭಾರತೀಯ ವಾಯು ಪಡೆ ಗುರುದ್ವಾರ ಬಳಿ ಹಾಕಿತ್ತು ಎನ್ನಲಾದ ‘ಬಾಂಬ್’ ಇದಾಗಿದೆ. ಸಿಖ್ಖರ ಧಾರ್ಮಿಕ ಚಿಹ್ನೆ ‘ಖಂಡ‘ದ ಚಿತ್ರಗಳಿಂದ ಅಲಂಕೃತವಾದ ಸ್ತಂಭದ ಮೇಲೆ ಗಾಜಿನ ಕವಚದಲ್ಲಿ ಇದನ್ನು ಇಡಲಾಗಿದೆ. 

ಇತ್ತೀಚೆಗೆ ಕರ್ತಾರ್‌ಪುರಕ್ಕೆ ಭೇಟಿ ನೀಡಿದ್ದ ಭಾರತದ ಕೆಲ ಪ್ರವಾಸಿಗರ ಹೇಳಿಕೆಯನ್ನು ಆಧರಿಸಿ ಹಿಂದೂಸ್ತಾನ್‌ ಟೈಮ್ಸ್‌ ಈ ಕುರಿತು ವರದಿ ಮಾಡಿದೆ. 

‘ಮಿರಾಕಲ್ ಆಫ್‌ ವಾಹೆಗುರೂಜಿ’ ಶೀರ್ಷಿಕೆಯಡಿ ಪಕ್ಕದಲ್ಲೇ ಒಂದು ಫಲಕವಿದೆ. ಅದರಲ್ಲಿ, ‘1971ರಲ್ಲಿ ಬಾಂಬ್‌ ಅನ್ನು ಗುರುದ್ವಾರ ದರ್ಬಾರ್‌ ಸಾಹಿಬ್ ನಾಶಪಡಿಸುವ ಉದ್ದೇಶದಿಂದಲೇ ಭಾರತೀಯ ವಾಯುಪಡೆ ಹಾಕಿತ್ತು. ವಾಹೆಗುರುಜೀ ಹಾರೈಕೆಯಿಂದ ಕಟ್ಟಡಕ್ಕೆ ಹಾನಿಯಾಗಿಲ್ಲ. ಬಾಂಬ್‌ ಶ್ರೀಖೂಸಾಹಿಬ್‌ಗೆ (ಪವಿತ್ರ ಗೋಡೆ) ಬಡಿಯಿತು’ ಎಂದು ಬರೆಯಲಾಗಿದೆ.

ಆದರೆ, ಈ ಕುರಿತು ಭಾರತದ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎಂದು ವರದಿ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು