ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ರಾಜಕಾರಣ | ವಿಧಾನಸಭೆ ಅಮಾನತು, ರಾಷ್ಟ್ರಪತಿ ಆಳ್ವಿಕೆ ಜಾರಿ

ಸರ್ಕಾರ ರಚನೆಯ ಹಕ್ಕು ಮಂಡನೆಗೆ ಎನ್‌ಸಿಪಿಗೆ ನೀಡಿದ್ದ ಗಡುವಿಗೆ ಮೊದಲೇ ಘೋಷಣೆ
Last Updated 13 ನವೆಂಬರ್ 2019, 1:43 IST
ಅಕ್ಷರ ಗಾತ್ರ

ನವದೆಹಲಿ: ವಿಧಾನಸಭೆ ಚುನಾವಣೆ ಫಲಿತಾಂಶ ಬಂದು ಎರಡು ವಾರ ಕಳೆದರೂ ಸರ್ಕಾರ ರಚನೆ ಸಾಧ್ಯವಾಗದಿರುವ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ. ಸ್ಥಿರ ಸರ್ಕಾರ ರಚನೆ ಅಸಾಧ್ಯ ಎಂದು ರಾಜ್ಯಪಾಲ ಭಗತ್‌ ಸಿಂಗ್ ಕೋಶಿಯಾರಿ ವರದಿ ನೀಡಿದ್ದಾರೆ. ಅದರ ಆಧಾರದಲ್ಲಿ ವಿಧಾನಸಭೆಯನ್ನು ಅಮಾನತಿನಲ್ಲಿ ಇರಿಸಲಾಗಿದೆ.

ಆದರೆ, ಈ ನಿರ್ಧಾರವನ್ನು ವಿರೋಧ ಪಕ್ಷಗಳು ಖಂಡಿಸಿವೆ. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ರಾಜ್ಯಪಾಲರು ಆತುರ ತೋರಿದ್ದಾರೆ ಎಂದು ಆರೋಪಿಸಿವೆ.

ರಾಜ್ಯಪಾಲರ ವರದಿ ಆಧರಿಸಿ, ರಾಜ್ಯದಲ್ಲಿ 356ನೇ ವಿಧಿ ಅಡಿಯಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟವು ಮಂಗಳವಾರ ಶಿಫಾರಸು ಮಾಡಿತು. ಈಶಿಫಾರಸಿನಂತೆ, ರಾಷ್ಟ್ರ ಪತಿ ರಾಮನಾಥ ಕೋವಿಂದ್‌ ಅವರು ಘೋಷಣೆ ಹೊರಡಿಸಿದ್ದಾರೆ.

ಸರ್ಕಾರ ರಚನೆಯ ಸಾಧ್ಯತೆಗಳನ್ನು ಶೋಧಿಸಲಾಗಿದೆ. ಕೆಲವು ಪ‍ಕ್ಷಗಳು ಜತೆ ಸೇರಿ ಸರ್ಕಾರ ರಚಿಸಬಹುದಾಗಿತ್ತು. ದುರದೃಷ್ಟವಶಾತ್‌, ಆ ಪ್ರಯತ್ನಗಳು ವಿಫಲವಾಗಿವೆ ಎಂದು ರಾಜ್ಯಪಾಲರು ವರದಿಯಲ್ಲಿ ಹೇಳಿದ್ದಾರೆ.

ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಸಾಧ್ಯವೇ ಎಂಬುದನ್ನು ತಿಳಿಸಲು ಶರದ್ ಪವಾರ್‌ ನೇತೃತ್ವದ ಎನ್‌ಸಿಪಿಗೆ ಮಂಗಳವಾರ ರಾತ್ರಿ 8.30ರವರೆಗೆ ರಾಜ್ಯ ಪಾಲರು ಸಮಯಾವಕಾಶ ನೀಡಿದ್ದರು. ಆದರೆ, ಕೇಂದ್ರಕ್ಕೆ ರಾಜ್ಯಪಾಲರ ವರದಿ, ರಾಷ್ಟ್ರಪತಿಗೆ ಕೇಂದ್ರದ ಶಿಫಾರಸು ಮತ್ತು ರಾಷ್ಟ್ರಪತಿ ಆಳ್ವಿಕೆ ಘೋಷಣೆ ಎಲ್ಲವೂ ಈ ಗಡುವಿಗಿಂತ ಮೊದಲೇ ನಡೆದವು.

ಮಿತ್ರ ಪಕ್ಷಗಳ ಜತೆಗೆ ಮಾತುಕತೆ ನಡೆಸಲು ಇನ್ನೂ ಮೂರು ದಿನ ಸಮಯ ಬೇಕು ಎಂದು ರಾಜ್ಯಪಾಲರನ್ನು ಮಂಗಳವಾರ ಬೆಳಿಗ್ಗೆ ಕೋರಿದ್ದೆವು. ಆದರೆ, ಸಮಯ ಮುಗಿದಿದೆ ಎಂದು ಅವರು ಆಗಲೇ ಭಾವಿಸಿದ್ದರು ಎಂದು ಎನ್‌ಸಿಪಿ ಮುಖಂಡರೊಬ್ಬರು ಹೇಳಿದ್ದಾರೆ.

ಇನ್ನೂ ಇದೆ ಅವಕಾಶ
ವಿಧಾನಸಭೆಯನ್ನು ಅಮಾನತಿನಲ್ಲಿ ಇರಿಸಿದ್ದರೂ ಸರ್ಕಾರ ರಚನೆಗೆ ಪಕ್ಷಗಳು ಪ್ರಯತ್ನ ನಡೆಸಲು ಅವಕಾಶ ಇದೆ. ಸರ್ಕಾರ ರಚನೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯಪಾಲರಿಗೆ ಮನವರಿಕೆಯಾದರೆ, ಅವರು ಅದಕ್ಕೆ ಅವಕಾಶ ನೀಡಬಹುದು. ರಾಷ್ಟ್ರಪತಿ ಆಳ್ವಿಕೆ ಹಿಂದಕ್ಕೆ ಪಡೆಯುವಂತೆ ಕೇಂದ್ರಕ್ಕೆ ಶಿಫಾರಸು ಮಾಡಬಹುದು.

ಸುಪ್ರೀಂ ಕೋರ್ಟ್‌ಗೆ ಸೇನಾ ದೂರು
ಸರ್ಕಾರ ರಚನೆಗೆ ಬೆಂಬಲ ಒಟ್ಟುಗೂಡಿಸಲು ಮೂರು ದಿನ ಅವಕಾಶ ನೀಡಲು ನಿರಾಕರಿಸಿದ ರಾಜ್ಯಪಾಲರ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಶಿವಸೇನಾ ತುರ್ತು ಅರ್ಜಿ ಸಲ್ಲಿಸಿದೆ.

ರಾಷ್ಟ್ರಪತಿ ಆಳ್ವಿಕೆಯಿಂದಾಗಿ ರಾಜ್ಯದಲ್ಲಿ ‘ಶಾಸಕರ ಖರೀದಿ’ಗೆ ಅವಕಾಶವಾಗಿದೆ. ಅಸಾಂವಿಧಾನಿಕ ವಿಧಾನಗಳ ಮೂಲಕ ಬೆಂಬಲ ಕ್ರೋಡೀಕರಿಸಲು ಬಿಜೆಪಿ ಯತ್ನಿಸಬಹುದು ಎಂದು ಸೇನಾ ಆರೋಪಿಸಿದೆ.

ಸರ್ಕಾರ ರಚನೆಯ ಹಾದಿಯಲ್ಲಿ...

* ಬಿಜೆಪಿ–ಶಿವಸೇನಾ ಮೈತ್ರಿಕೂಟಕ್ಕೆ ಸರಳ ಬಹುಮತ ಇತ್ತು. ಆದರೆ, ಮುಖ್ಯಮಂತ್ರಿ ಹುದ್ದೆಗೆ ಶಿವಸೇನಾ ಪಟ್ಟು ಹಿಡಿದ ಕಾರಣ ಸರ್ಕಾರ ರಚನೆ ಸಾಧ್ಯವಾಗಲಿಲ್ಲ. ಸರ್ಕಾರ ರಚನೆಯಿಂದ ಬಿಜೆಪಿ ಹಿಂದಕ್ಕೆ ಸರಿಯಿತು

* ಎರಡನೇ ಅತಿ ದೊಡ್ಡ ಪಕ್ಷವಾಗಿರುವ ಸೇನಾಕ್ಕೆ ರಾಜ್ಯಪಾಲರು ಅವಕಾಶ ಕೊಟ್ಟಿದ್ದರು. ಆದರೆ, ಸೋಮವಾರ ರಾತ್ರಿ 7.30ಕ್ಕೆ ಕೊನೆಗೊಂಡ ಗಡುವಿನಲ್ಲಿ ಅಗತ್ಯ ಶಾಸಕ ಬಲವನ್ನು ಕ್ರೋಡೀಕರಿಸಲು ಸಾಧ್ಯವಾಗಲಿಲ್ಲ

* ಮೂರನೇ ದೊಡ್ಡ ಪಕ್ಷವಾಗಿರುವ ಎನ್‌ಸಿಪಿಯನ್ನೂ ರಾಜ್ಯಪಾಲರು ಆಹ್ವಾನಿಸಿದ್ದರು. ಮಂಗಳವಾರ ರಾತ್ರಿ 8.30ರವರೆಗೆ ಆ ಪಕ್ಷಕ್ಕೆ ಗಡುವು ನೀಡಲಾಗಿತ್ತು. ಅದಕ್ಕೆ ಮೊದಲೇ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ.

**

ಸರ್ಕಾರ ರಚನೆಗೆ ನಾವು ಖಂಡಿತ ಯತ್ನಿಸುತ್ತೇವೆ. ಈ ದಿಕ್ಕಿನಲ್ಲಿ ಕೆಲಸ ಆರಂಭವಾಗಿದೆ. ವಿವರಗಳನ್ನು ಸದ್ಯ ನೀಡುವುದಿಲ್ಲ. 145 ಶಾಸಕರ ಪಟ್ಟಿಯೊಂದಿಗೆ ರಾಜಭವನಕ್ಕೆ ತೆರಳುತ್ತೇವೆ.
-ನಾರಾಯಣ ರಾಣೆ,ಬಿಜೆಪಿ ರಾಜ್ಯಸಭಾ ಸದಸ್ಯ

**
ಸರ್ಕಾರ ರಚನೆಗೆ ವಿವಿಧ ಪಕ್ಷಗಳಿಗೆ ಆಹ್ವಾನ ನೀಡಿದ ರಾಜ್ಯಪಾಲರು ಕಾಂಗ್ರೆಸ್‌ಗೆ ಏಕೆ ನೀಡಲಿಲ್ಲ. ರಾಜ್ಯಪಾಲರ ನಡೆ ಪ್ರಜಾಪ್ರಭುತ್ವದ ಅಣಕ.
-ರಣದೀಪ್ ಸುರ್ಜೇವಾಲ,ಕಾಂಗ್ರೆಸ್ ವಕ್ತಾರ

**
ನಾವು ಎರಡು ದಿನ ಕೇಳಿದ್ದೆವು. ರಾಜ್ಯಪಾಲರು ನಮಗೆ ಆರು ತಿಂಗಳು ಕೊಟ್ಟಿದ್ದಾರೆ. ಚಿಂತೆ ಇಲ್ಲ, ನಾವೇ ಸರ್ಕಾರ ರಚಿಸುತ್ತೇವೆ.
-ಉದ್ಧವ್‌ ಠಾಕ್ರೆ,ಶಿವಸೇನಾ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT