ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ–ಸೇನಾ: ಮೈತ್ರಿ ಹಿಡಿದಿಡಲು ಗಟ್ಟಿ ಸಂಬಂಧಗಳೇ ಇಲ್ಲ

Last Updated 11 ನವೆಂಬರ್ 2019, 21:05 IST
ಅಕ್ಷರ ಗಾತ್ರ

ಶಿವಸೇನಾ ರಾಜಕೀಯ ಇತಿಹಾಸದಲ್ಲಿ ಎರಡು ಪ್ರಮುಖ ಘಟ್ಟಗಳಿವೆ. ಆರಂಭದಲ್ಲಿ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿ, ಇಂದಿರಾಗಾಂಧಿ ಅವರ ತುರ್ತು ಪರಿಸ್ಥಿತಿ ಸಮರ್ಥಿಸಿಕೊಂಡಿದ್ದ ಪಕ್ಷ, ಬದಲಾದ ಕಾಲಘಟ್ಟಗಳಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿತು. ಅಧಿಕಾರ ಸ್ಥಾನದಿಂದ ದೂರವೇ ಇದ್ದ ಠಾಕ್ರೆ ಮನೆತನವು ಈ ಬಾರಿ ತನ್ನ ಕುಡಿ ಕಣಕ್ಕಿಳಿಸಿತು. ರಾಜ್ಯದ ಚುಕ್ಕಾಣಿ ಹಿಡಿಯುವ ಸೇನಾ ಹಂಬಲವು ಎರಡೂ ಪಕ್ಷಗಳ ನಡುವಿನ ಮುನಿಸನ್ನು ಶಾಶ್ವತವಾಗಿಸುವ ಲಕ್ಷಣಗಳು ಗೋಚರಿಸುತ್ತಿವೆ.

ಮುಂಬೈ: ಭಾರತ ರಾಜಕಾರಣದ ಅತ್ಯಂತ ಹಳೆಯ ಮಿತ್ರ ಪಕ್ಷಗಳಾದ ಶಿವಸೇನಾ ಮತ್ತು ಬಿಜೆಪಿ ನಡುವಣ ಸಂಬಂಧ ಮುರಿದು ಬಿದ್ದಿದೆ. ಅಷ್ಟೇ ಅಲ್ಲ, ಅದು ಮತ್ತೆ ಸರಿಯಾಗಲು ಸಾಧ್ಯವಾಗದ ಮಟ್ಟಿಗೆ ಹದಗೆಟ್ಟಿದೆ.

ಇದು, ಮುಂದಿನ ದಿನಗಳಲ್ಲಿ ಮಹಾರಾಷ್ಟ್ರದ ರಾಜಕೀಯ ಲೆಕ್ಕಾಚಾರಗಳನ್ನೇ ಬದಲಿಸಬಹುದು. ಎರಡೂ ಪಕ್ಷಗಳ ಮೈತ್ರಿಯಲ್ಲಿ ಹಿಂದೆಯೂ ಹಲವು ಏರಿಳಿತಗಳು ಉಂಟಾಗಿದ್ದವು. ಆಗ, ಸೇನಾ ಸ್ಥಾಪಕ ಬಾಳಾ ಠಾಕ್ರೆ ಮತ್ತು ಬಿಜೆಪಿಯ ಮುಖಂಡ ಪ್ರಮೋದ್‌ ಮಹಾಜನ್‌ ಅವರಿದ್ದರು. ಎಷ್ಟೇ ಭಿನ್ನಾಭಿಪ್ರಾಯಗಳು ಇದ್ದಾಗಲೂ ಮೈತ್ರಿ ಮುರಿದು ಬೀಳದಂತೆ ಅವರಿಬ್ಬರು ನೋಡಿಕೊಂಡಿದ್ದರು. ಮೂರು ದಶಕಗಳ ಹಿಂದೆ, ಈ ಇಬ್ಬರು ನಾಯಕರೇ ಸೇನಾ ಮತ್ತು ಬಿಜೆಪಿಯ ಮೈತ್ರಿಗೆ ಅಡಿಪಾಯ ಹಾಕಿದವರು.

ಮಹಾಜನ್‌ 2006ರಲ್ಲಿ ಸಹೋದರ ಪ್ರವೀಣ್‌ ಗುಂಡೇಟಿಗೆ ಬಲಿಯಾದರು. 2012ರ ನವೆಂಬರ್‌ 17ರಂದು ಬಾಳಾ ಠಾಕ್ರೆ ನಿಧನರಾದರು. ಮಹಾರಾಷ್ಟ್ರದ ಅತ್ಯಂತ ಪ್ರಭಾವಿ ನಾಯಕ ಮಹಾಜನ್‌, ಬಾಳಾ ಠಾಕ್ರೆ ಜತೆಗೆ ನಿಕಟ ಸಂಬಂಧ ಹೊಂದಿದ್ದರು. ವಾಜಪೇಯಿ ಮತ್ತು ಅಡ್ವಾಣಿ ಜತೆಗೂ ಅಂತಹುದೇ ಸಂಬಂಧವಿತ್ತು. ಮಹಾಜನ್‌ ಅವರ ಭಾವ, ಗೋ‍‍ಪಿನಾಥ ಮುಂಢೆ ಅವರೂ ಠಾಕ್ರೆ ಕುಟುಂಬದ ಜತೆಗೆ ಹತ್ತಿರದ ಬಾಂಧವ್ಯ ಹೊಂದಿದ್ದರು. ಅವರೂ, 2014ರಲ್ಲಿ ಮೃತಪಟ್ಟರು.

‘ಬಾಳಾ ಠಾಕ್ರೆ, ಮಹಾಜನ್‌ ಮತ್ತು ಮುಂಢೆ ಅವರ ನಿಧನದಿಂದ ತೆರವಾದ ಶೂನ್ಯವನ್ನು ತುಂಬಲು ಯಾರಿಗೂ ಸಾಧ್ಯವಾಗಲಿಲ್ಲ’ ಎಂದು ಹಿರಿಯ ರಾಜಕೀಯ ವಿಶ್ಲೇಷಕ, ಬಿಜೆಪಿ–ಸೇನಾ ಮೈತ್ರಿ ರಾಜಕಾರಣವನ್ನು ಆರಂಭದಿಂದಲೇ ಗಮನಿಸುತ್ತಾ ಬಂದಿರುವ ಪ್ರಕಾಶ್‌ ಅಕೋಲ್ಕರ್‌ ಹೇಳುತ್ತಾರೆ.ಠಾಕ್ರೆಯವರ ಮಗ, ಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರು ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಜತೆಗೆ ನಿಕಟ ಬಾಂಧವ್ಯವನ್ನು ಎಂದೂ ಹೊಂದಿರಲಿಲ್ಲ.ನಿರ್ಗಮಿತ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಮತ್ತು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಕಾಂತ ಪಾಟೀಲ್‌ ಅವರೂ ಮಹಾಜನ್‌–ಮುಂಢೆ ರೀತಿಯ ಪ್ರಭಾವವನ್ನು ಹೊಂದಿಲ್ಲ.

‘ಹಿಂದುತ್ವ ಸಿದ್ಧಾಂತ ಮತ್ತು ರಾಮಮಂದಿರ ನಿರ್ಮಾಣ, ಕಾಶ್ಮೀರದ ವಿಶೇಷಾಧಿಕಾರ ರದ್ದತಿ, ಏಕರೂಪ ನಾಗರಿಕ ಸಂಹಿತೆ, ತ್ರಿವಳಿ ತಲಾಖ್‌ ನಿಷೇಧದಂತಹ ವಿಚಾರಗಳು ಬಿಜೆಪಿ–ಸೇನಾ ಮೈತ್ರಿಯ ಗಟ್ಟಿ ಆಧಾರಸ್ತಂಭಗಳಾಗಿದ್ದವು. ಆದರೆ, ಈಗ ಸುಧಾರಣೆ ಸಾಧ್ಯವಿಲ್ಲದ ರೀತಿಯಲ್ಲಿ ಸಂಬಂಧ ಕೆಟ್ಟಿದೆ’ ಎಂದು ಅಕೋಲ್ಕರ್ ಅಭಿಪ್ರಾಯಪಡುತ್ತಾರೆ.

ಮುಂಬೈ ಪಾಲಿಕೆಯಲ್ಲಿ ಸೇನಾದ ಆಧಿಪತ್ಯ ಕ್ಷೀಣಿಸುತ್ತಿದೆ. ಎರಡೂ ಪಕ್ಷಗಳಲ್ಲಿ ಹೊಸ ತಲೆಮಾರು ಮುನ್ನೆಲೆಗೆ ಬಂದಿದೆ. ಅವರ ಹಿನ್ನೆಲೆ, ಆಕಾಂಕ್ಷೆಗಳು ಭಿನ್ನವಾಗಿವೆ ಎಂದುವಿಶ್ಲೇಷಕ ಅಜಿತ್‌ ಜೋಷಿ ಹೇಳುತ್ತಾರೆ.

ಮಹಾರಾಷ್ಟ್ರದಲ್ಲಿ ಬಿಜೆಪಿ– ಶಿವಸೇನಾ ಶಕೆ
1989ರಲ್ಲಿ ಬಿಜೆಪಿ–ಶಿವಸೇನಾ ನಡುವಿನ ಬಂಧ ಶುರುವಾಯಿತು. 1984ರ ಲೋಕಸಭಾ ಚುನಾವಣೆಯಲ್ಲಿ ಶರದ್ ಪವಾರ್ ಅವರು ಕಾಂಗ್ರೆಸ್ಸೇತರ ಮೈತ್ರಿಕೂಟ ರಚಿಸಿದರು. ಆದರೆ ಠಾಕ್ರೆ ಅವರ ಪಕ್ಷವು ಈ ಮೈತ್ರಿಕೂಟವನ್ನು ಸೇರಲಿಲ್ಲ. ಬದಲಾಗಿ ಬಿಜೆಪಿ ಜತೆ ಠಾಕ್ರೆ ಅವರು ಹೊಂದಾಣಿಕೆಗೆ ಬಂದರು. ಸೇನಾದ ಇಬ್ಬರು ಮುಖಂಡರು (ಈ ಪೈಕಿ ಮನೋಹರ್ ಜೋಷಿ ಒಬ್ಬರು) ಬಿಜೆಪಿ ಚಿಹ್ನೆಯ ಮೇಲೆ ಚುನಾವಣೆಗೆ ಸ್ಪರ್ಧಿಸಿದರು.

ಮಹಾರಾಷ್ಟ್ರದ ಅಂದಿನ ಬಿಜೆಪಿಯ ಪ್ರಮುಖ ನಾಯಕ ಪ್ರಮೋದ್ ಮಹಾಜನ್ ಅವರ ಯತ್ನದಿಂದ 1989ರಲ್ಲಿ ಬಿಜೆಪಿ–ಸೇನಾ ನಡುವೆ ಅಧಿಕೃತ ಹೊಂದಾಣಿಕೆ ಅಂತಿಮಗೊಂಡಿತು. ಮೈತ್ರಿಕೂಟದಲ್ಲಿ ಶಿವಸೇನಾ ಹಿರಿಯ ಪಕ್ಷ ಎಂದೆನಿಸಿತು. 1990ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿಕೂಟಕ್ಕೆ ಹೆಚ್ಚಿ ಸ್ಥಾನ ಸಿಕ್ಕಿದವು. ಸಣ್ಣಪುಟ್ಟ ಪಕ್ಷಗಳು ಹಾಗೂ ಪಕ್ಷೇತರರನ್ನು ಸೇರಿಸಿಕೊಂಡ ಶಿವಸೇನಾ, ಮೈತ್ರಿಕೂಟವನ್ನು ವಿಸ್ತರಿಸಿತು.

ಅಧಿಕಾರ ದೊರಕಿಸಿದ ಮೈತ್ರಿ
1990ರ ಸೂತ್ರವನ್ನೇ 1995ರ ಮಹಾರಾಷ್ಟ್ರ ಚುನಾವಣೆಯಲ್ಲಿ ಉಳಿಸಿಕೊಂಡಿದ್ದರಿಂದ ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ–ಶಿವಸೇನಾ ಸರ್ಕಾರ ಅಸ್ತಿತ್ವಕ್ಕೆ ಬಂದಿತು. 1999 ಹಾಗೂ 2004ರ ಚುನಾವಣೆಯಲ್ಲಿ ಹೊಂದಾಣಿಕೆ ಸೂತ್ರ ಸ್ವಲ್ಪ ಬದಲಾವಣೆ ಕಂಡಿತು. ಠಾಕ್ರೆ ಅವರು ‘9’ ಅನ್ನು ಅದೃಷ್ಟದ ಸಂಖ್ಯೆ ಎಂದು ನಂಬಿದ್ದರಿಂದ ಶಿವಸೇನೆಯು 171ರಲ್ಲೂ, ಬಿಜೆಪಿ 117 ಕ್ಷೇತ್ರಗಳಲ್ಲೂ ಸ್ಪರ್ಧಿಸಿದ್ದವು. 2009ರ ಚುನಾವಣೆಯಲ್ಲೂ ಕೊಂಚ ಬದಲಾವಣೆ ಮಾಡಿಕೊಂಡ ಪರಿಣಾಮ, ಸೇನಾ 169ರಲ್ಲಿ, ಬಿಜೆಪಿ 119ರಲ್ಲಿ
ಕಣಕ್ಕಿಳಿದಿದ್ದವು.

ಮೈತ್ರಿಯಲ್ಲಿ ತಿರುವು
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸತತ ಮೂರು ಬಾರಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, 2014ರ ಚುನಾವಣೆಯಲ್ಲಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಜೋಡಿ‌ಯ ಆಗಮನದಿಂದ ಮೈತ್ರಿಕೂಟ ಭಿನ್ನ ದಾರಿ ಹಿಡಿಯಿತು. ಹೊಂದಾಣಿಕೆ ಸಾಧ್ಯವಾಗದೇ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧೆ ಮಾಡಬೇಕಾಯಿತು. ಸೇನೆಗೆ ಸಿಕ್ಕಿದ್ದು ಬಿಜೆಪಿಯ ಅರ್ಧದಷ್ಟು ಸೀಟುಗಳು (63) ಮಾತ್ರ. ಆರಂಭದಲ್ಲಿ ಹಗ್ಗಜಗ್ಗಾಟ ನಡೆದರೂ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ನೇತೃತ್ವದ ಸರ್ಕಾರದ ಜತೆ ಕೈಜೋಡಿಸಿತು.

ಮುಖ್ಯಮಂತ್ರಿ ಪಟ್ಟಕ್ಕೆ ಪಟ್ಟು
5 ವರ್ಷಗಳ ಬಳಿಕ 2019ರಲ್ಲಿ ಎರಡೂ ಪಕ್ಷಗಳು ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡವು. ಬಿಜೆಪಿಗೆ 105, ಸೇನಾಕ್ಕೆ 56 ಸೀಟು ದೊರೆತಿದ್ದರೂ, ಮುಖ್ಯಮಂತ್ರಿ ಪಟ್ಟಕ್ಕಾಗಿ ಉಭಯ ಪಕ್ಷಗಳ ನಡುವೆ ಗುದ್ದಾಟ ಶುರುವಾಯಿತು.

ಠಾಕ್ರೆ ಮನೆತನದ ಮೊದಲ ವ್ಯಕ್ತಿ (ಆದಿತ್ಯ ಠಾಕ್ರೆ) ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದು ಹೊಸ ಬೆಳವಣಿಗೆ. ಅವರನ್ನು ಮುಖ್ಯಮಂತ್ರಿ ಗಾದಿಗೇರಿಸುವ ಉತ್ಸಾಹದಲ್ಲಿ ಉದ್ಧವ್ ಠಾಕ್ರೆ ಇದ್ದಾರೆ. ಆದರೆ ಇದಕ್ಕೆ ಒಪ್ಪದ ಬಿಜೆಪಿ, ಸರ್ಕಾರ ರಚನೆಯಿಂದ ಹಿಂದೆ ಸರಿದಿದೆ. ಎನ್‌ಸಿಪಿ (54), ಕಾಂಗ್ರೆಸ್ (44) ಬೆಂಬಲದೊಂದಿಗೆ ಸರ್ಕಾರ ರಚಿಸುವ ಉತ್ಸಾಹದಲ್ಲಿ ಶಿವಸೇನಾ ಇದೆ. ಮೈತ್ರಿ ವೇಳೆ ಮಾಡಿಕೊಂಡ ರಹಸ್ಯ ಒಪ್ಪಂದವು ಮೈತ್ರಿಕೂಟದ ಅತ್ಯಂತ ಹಳೆಯ ಪಕ್ಷಗಳನ್ನು ಪೂರ್ಣ ವಿಚ್ಛೇದನದತ್ತ ಕೊಂಡೊಯ್ದಿದೆ ಎನ್ನಲಾಗುತ್ತಿದೆ.

ಕಾಂಗ್ರೆಸ್ ಜತೆಗಿನ ನಂಟು
ಶಿವಸೇನಾ ಪಕ್ಷ ಸ್ಥಾಪಿಸಿದ 11 ವರ್ಷಗಳ ಬಳಿಕ 1971ರ ಚುನಾವಣೆಯಲ್ಲಿ ಬಾಳಾ ಠಾಕ್ರೆ ಅವರು ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದರು. 1969ರಲ್ಲಿ ವಿಭಜನೆಯಾಗಿದ್ದ ಕಾಂಗ್ರೆಸ್ ಪಕ್ಷದ ಇಂದಿರಾ ಗಾಂಧಿ ವಿರೋಧಿ ಬಣದ ಜತೆ ಜತೆ ಹೊಂದಾಣಿಕೆ ಇತ್ತು. ಆದರೆ ಪಕ್ಷದ ಟಿಕೆಟ್‌ನಡಿ ಸ್ಪರ್ಧಿಸಿದ್ದ ಮೂವರು ಅಭ್ಯರ್ಥಿಗಳ ಪೈಕಿ ಯಾರೊಬ್ಬರೂ ಲೋಕಸಭೆಗೆ ಆಯ್ಕೆಯಾಗಲಿಲ್ಲ.

ತುರ್ತು ಪರಿಸ್ಥಿತಿ ಬೆಂಬಲಿಸಿದ್ದ ಠಾಕ್ರೆ
1975ರಲ್ಲಿ ಇಂದಿರಾ ಗಾಂಧಿ ದೇಶದ ಮೇಲೆ ತುರ್ತು ಪರಿಸ್ಥಿತಿ ಘೋಷಿಸಿದಾಗ, ಅವರ ನಿರ್ಧಾರವನ್ನು ಬೆಂಬಲಿಸಿದ್ದು ಶಿವಸೇನಾ. 1977ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲವನ್ನೂ ಘೋಷಿಸಿತ್ತು.

ಮುಸ್ಲಿಂ ಲೀಗ್ ಜತೆ ಹೆಜ್ಜೆ
1979ರಲ್ಲಿ ಬೃಹನ್‌ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಠಾಕ್ರೆ ಅವರು ಮುಸ್ಲಿಂ ಲೀಗ್ ಮುಖಂಡ ಗುಲಾಮ್ ಮುಹಮ್ಮದ್ ಬನತ್ವಾಲಾ ಅವರೊಂದಿಗೆ ಒಂದೇ ವೇದಿಕೆಯಲ್ಲಿ ಪ್ರಚಾರ ನಡೆಸಿ ಅಚ್ಚರಿ ಮೂಡಿಸಿದರು. ಆದರೆ ಮುಂದಿನ ಚುನಾವಣೆಗಳಿಗೆ ಅಧಿಕೃತ ಮೈತ್ರಿ ಏರ್ಪಡಲಿಲ್ಲ.

ಅಂತುಳೆ ಜತೆ ಸಖ್ಯ
1980ರಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೇನಾ ಬೆಂಬಲ ಅನಾಯಾಸವಾಗಿ ಸಿಕ್ಕಿತ್ತು. ಮಹಾರಾಷ್ಟ್ರ ಸಿ.ಎಂ ಆಗಿದ್ದ ಎ.ಆರ್. ಅಂತುಳೆ ಜತೆಗೆ ಠಾಕ್ರೆ ಅವರು ಹೊಂದಿದ್ದ ಒಡನಾಟ ಇದಕ್ಕೆ ಕಾರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT