ರಾಮಮಂದಿರ ನಿರ್ಮಾಣ- ಮೋದಿ ಗೆಲುವಿನ ಬೀಗದ ಕೈ?

7

ರಾಮಮಂದಿರ ನಿರ್ಮಾಣ- ಮೋದಿ ಗೆಲುವಿನ ಬೀಗದ ಕೈ?

ಡಿ.ಉಮಾಪತಿ
Published:
Updated:

ನವದೆಹಲಿ: ಗುರುವಾರ ಹೊರಬಿದ್ದ ಸುಪ್ರೀಂ ಕೋರ್ಟ್ ತೀರ್ಪು, ಆಯೋಧ್ಯೆಯ ರಾಮಮಂದಿರ- ಬಾಬರಿ ಮಸೀದಿ ವಿವಾದದ ಇತ್ಯರ್ಥ ತ್ವರಿತವಾಗಿ ಹೊರಬೀಳುವ ಸಾಧ್ಯತೆಯನ್ನು ತೆರೆದಿದೆ.

ಇದು ನಿರುದ್ಯೋಗ, ನೋಟು ರದ್ದು, ಕೃಷಿ ಸಂಕಟ ಮುಂತಾದ ವೈಫಲ್ಯಗಳು ಮೋದಿಯವರ ವರ್ಚಸ್ಸಿನ ಹೊಳಪನ್ನು ತಗ್ಗಿಸಿರುವ ಹಿನ್ನೆಲೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆಗಳು ಸದ್ಯದ ಸ್ಥಿತಿಯಲ್ಲಿ ಬಿಜೆಪಿಯ ಪಾಲಿಗೆ ಏರುದಾರಿಯ ಪಯಣವಾಗಿ ಕಾಣತೊಡಗಿವೆ.

ಇದೇ ಅಕ್ಟೋಬರ್ ಅಂತ್ಯದಿಂದ ವಿವಾದದ ವಿಚಾರಣೆ ಆರಂಭ ಆಗಲಿದ್ದು 2019ರ ಲೋಕಸಭಾ ಚುನಾವಣೆಗೆ ಮುನ್ನ ಈ ತೀರ್ಪು ಪ್ರಕಟ ಆಗುವುದೆಂಬ ದಟ್ಟ ಆಶಾವಾದವನ್ನು ಬಿಜೆಪಿ-ಆರ್.ಎಸ್.ಎಸ್.- ವಿಶ್ವಹಿಂದು ಪರಿಷತ್- ಬಜರಂಗದಳ ವ್ಯಕ್ತಪಡಿಸಿವೆ.

ರಾಮಜನ್ಮಭೂಮಿಯ ಹಿಂದು-ಮುಸ್ಲಿಂ ಧೃವೀಕರಣ ರಾಜಕಾರಣವನ್ನು ಯಶಸ್ವಿಯಾಗಿ ಮುನ್ನೆಲೆಗೆ ತಂದು ಲೋಕಸಭಾ ಚುನಾವಣೆಗಳಲ್ಲಿ ಅದರ ಫಸಲನ್ನು ಅಡ್ವಾಣಿ-ವಾಜಪೇಯಿ ಯುಗದ ಬಿಜೆಪಿ ಕಟಾವು ಮಾಡಿದ್ದುಂಟು. ಆನಂತರ ಕ್ರಮೇಣ ಹಿನ್ನೆಲೆಗೆ ಸರಿದಿದ್ದ ಈ ಭಾವನಾತ್ಮಕ ವಿಷಯ ಇದೀಗ ಹಠಾತ್ತನೆ ಜೀವ ತಳೆಯತೊಡಗಿದೆ.

ದೇಶಾದ್ಯಂತ ಅಲ್ಲದೆ ಹೋದರೂ ಕನಿಷ್ಠ ಪಕ್ಷ ಉತ್ತರಪ್ರದೇಶದಲ್ಲಿ ಈ ಧೃವೀಕರಣ ಮೋದಿ-ಶಾ ಅವರ ಬಿಜೆಪಿಯ ಪಾಲಿಗೆ ಅತ್ಯಗತ್ಯ. 80 ಲೋಕಸಭಾ ಸೀಟುಗಳನ್ನು ಹೊಂದಿರುವ ಉತ್ತರಪ್ರದೇಶವನ್ನು ಗೆದ್ದವರು ದಿಲ್ಲಿಯ ಗದ್ದುಗೆ ಏರುತ್ತಾರೆ ಎಂಬುದು ಸವಕಲಾದರೂ ಸತ್ಯವಾದ ಮಾತು.

ಉತ್ತರಪ್ರದೇಶದಲ್ಲಿ ಬಿಜೆಪಿಯ ಘನ ವಿಜಯಗಳ ಮುಂದೆ ಶೋಚನೀಯವಾಗಿ ಸೋತಿದ್ದರೂ ಎಸ್.ಪಿ. ಮತ್ತು ಬಿ.ಎಸ್.ಪಿ. ತಳ್ಳಿ ಹಾಕುವಂತಹ ದುರ್ಬಲ ರಾಜಕೀಯ ಶಕ್ತಿಗಳಲ್ಲ. 2017ರ ವಿಧಾನಸಭೆಗಳಲ್ಲಿ ಕೂಡ ಮಾಯಾವತಿ ಮತ್ತು ಅಖಿಲೇಶ್ ಯಾದವ್ ಅನುಕ್ರಮವಾಗಿ ತಲಾ ಶೇ  22.23 ಮತ್ತು ಶೇ 28.32ರಷ್ಟು ಮತ ಗಳಿಸಿದ್ದಾರೆ. ಎರಡೂ ಸೇರಿದರೆ ಶೇ.50ರಷ್ಟು ಮತಗಳ ಗಡಿ ದಾಟುತ್ತದೆ ಎಂಬ ಅಂಶವನ್ನು ಗಮನಿಸಬೇಕು. ಭರ್ಜರಿಯಾಗಿ ಗೆದ್ದ ಬಿಜೆಪಿ ಗಳಿಸಿದ ಮತಗಳ ಪ್ರಮಾಣ ಶೇ 41.57.

ಮೋದಿ ಅಲೆಯು ಶಿಖರ ಮುಟ್ಟಿದ್ದ 2014ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಗಳಿಸಿದ್ದ ಮತಗಳ ಪ್ರಮಾಣ ಶೇ 42.63. ಎಸ್.ಪಿ. (ಶೇ 22.35) ಮತ್ತು ಬಿ.ಎಸ್.ಪಿ.ಯ (ಶೇ 19.77) ಒಟ್ಟು ಮತ ಪ್ರಮಾಣ (ಶೇ 42.12). ಬಿಜೆಪಿ ಮತ್ತು ಅದರ ಎದುರಾಳಿಗಳ ನಡುವಣ ಅಂತರ ಕೂದಲೆಳೆಗಿಂತ ದೊಡ್ಡದಲ್ಲ.

2017ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳ ಕ್ಷೇತ್ರವಾರು ಅಂಕಿ ಅಂಶಗಳ ವಿಶ್ಲೇಷಣೆಯು ಬಿಜೆಪಿಯ ನಿದ್ದೆ ಕೆಡಿಸುವಂತಹುದು. 2019ರಲ್ಲಿ ಎಸ್.ಪಿ. ಮತ್ತು ಬಿ.ಎಸ್.ಪಿ. ಒಟ್ಟಾಗಿ ಸ್ಪರ್ಧಿಸಿದರೆ ಒಟ್ಟು 80 ಲೋಕಸಭಾ ಕ್ಷೇತ್ರಗಳ ಪೈಕಿ 50ರಲ್ಲಿ ಬಿಜೆಪಿ ಸೋತಿದೆ. ಅಖಿಲೇಶ್.-ಮಾಯಾವತಿ ಜೋಡಿ ಕನಿಷ್ಠ 57 ಸೀಟುಗಳನ್ನು ಗೆಲ್ಲಲಿದ್ದು, ಬಿಜೆಪಿ ಕೇವಲ 23ಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ.

ಎರಡೂ ಪಕ್ಷಗಳು ಒಟ್ಟುಗೂಡಿ ಸ್ಪರ್ಧಿಸಿದರೆ ಏನಾದೀತೆಂಬ ಈ ಚಿತ್ರವನ್ನು ಗೋರಖಪುರ ಮತ್ತು ಫೂಲ್ಪುರ ಲೋಕಸಭಾ ಉಪಚುನಾವಣೆಗಳ ಫಲಿತಾಂಶಗಳು ಈಗಾಗಲೆ ಸಾರಿ ಹೇಳಿವೆ.

ರಾಜಕೀಯ ರಣತಂತ್ರ ಹೆಣೆಯುವಲ್ಲಿ ಈವರೆಗೆ ನಿಸ್ಸೀಮರೆನಿಸಿರುವ ಮೋದಿ-ಅಮಿತ್ ಶಾ ಜೋಡಿಗೆ ಈ ವಾಸ್ತವ ಗೊತ್ತು. ಅಖಿಲೇಶ್ ಚಿಕ್ಕಪ್ಪ ಶಿವಪಾಲ ಯಾದವ್ ಬಂಡೆದ್ದು ಹೊರಬಿದ್ದು ಹೊಸ ರಾಜಕೀಯ ವೇದಿಕೆ ನಿರ್ಮಿಸಲು ಹೊರಟಿದ್ದಾರೆ. ಅವರಿಗೆ ಬಿಜೆಪಿ ಕುಮ್ಮಕ್ಕು ನೀಡಿದೆ. ಆದರೆ ಅಖಿಲೇಶ್ ತಂದೆ ಮತ್ತು ಸಮಾಜವಾದಿ ಪಕ್ಷದ ಪಿತಾಮಹ ಮುಲಾಯಂ ಸಿಂಗ್ ಯಾದವ್ ಮಗನ ಪಾಳೆಯದಲ್ಲಿ ಕಾಣಿಸಿಕೊಂಡಿರುವುದು ಬಿಜೆಪಿಯ ಪಾಲಿಗೆ ಒಳ್ಳೆಯ ಸುದ್ದಿ ಅಲ್ಲ. ಮೋದಿಯವರು ಪುನಃ ಈಗಿನಂತೆ ಸರ್ವಶಕ್ತ ಪ್ರಧಾನಿ ಆಗಬೇಕಿದ್ದರೆ 2019ರಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿ ಕನಿಷ್ಠ ಪಕ್ಷ 65-70 ಸೀಟುಗಳನ್ನಾದರೂ ಗೆಲ್ಲಬೇಕಿದೆ.

2014ರ ಲೋಕಸಭಾ ಚುನಾವಣೆಗಳಲ್ಲಿ ರಾಜಸ್ತಾನ, ಮಧ್ಯಪ್ರದೇಶ ಹಾಗೂ ಗುಜರಾತಿನ ಒಟ್ಟು 80 ಸೀಟುಗಳ ಪೈಕಿ 78 ಸೀಟುಗಳನ್ನು ಬಿಜೆಪಿ ಗೆದ್ದಿತ್ತು. 2019ರ ಚುನಾವಣೆಗಳಲ್ಲಿ ಇದೇ ಬಂಪರ್ ಫಸಲು ಬಿಜೆಪಿ ಕೈ ಸೇರುವುದು ಬಹುತೇಕ ಅಸಾಧ್ಯ. ಮಹಾರಾಷ್ಟ್ರ ಮತ್ತು ಛತ್ತೀಸಗಢದ 59 ಸೀಟುಗಳ ಪೈಕಿ 51 ಸೀಟುಗಳನ್ನು ಬಿಜೆಪಿ ಗೆದ್ದಿತ್ತು. ಶಿವಸೇನೆ ಮುನಿಸಿನ ಹಿನ್ನೆಲೆಯಲ್ಲಿ ಇದೇ ಸಾಧನೆಯ ಪುನರಾವರ್ತನೆ ಅಸಾಧ್ಯ.

ಹೀಗಾಗಿಯೇ ಈಶಾನ್ಯ ಭಾರತ, ಒಡಿಶಾ, ಬಂಗಾಳ ಹಾಗೂ ಕೇರಳದಲ್ಲಿ ಸಾಧ್ಯವಾದಷ್ಟೂ ಹೆಚ್ಚು ಸೀಟುಗಳನ್ನು ಗೆಲ್ಲಲು ಅಮಿತ್ ಶಾ ಎಲ್ಲ ಪ್ರಯತ್ನ ನಡೆಸಿದ್ದಾರೆ. ಆದರೆ ಒಡಿಶಾ ಮತ್ತು ಬಂಗಾಳದ ವಿನಾ ಉಳಿದ ರಾಜ್ಯಗಳಲ್ಲಿನ ಸೀಟುಗಳ ಸಂಖ್ಯೆ ಹೆಚ್ಚೇನಿಲ್ಲ. ಬಂಗಾಳ ಮತ್ತು ಕೇರಳದಲ್ಲಿ ದೊಡ್ಡ ಪ್ರಮಾಣದ ಗೆಲುವಿನ ನಿರೀಕ್ಷೆ ಖುದ್ದು ಬಿಜೆಪಿಗೇ ಇಲ್ಲ. ಬಿಹಾರದ 40 ಸೀಟುಗಳು ಮತ್ತು ತಮಿಳುನಾಡಿನ 39 ಸೀಟುಗಳ ಪೈಕಿ ಗರಿಷ್ಠ ಸೀಟುಗಳನ್ನು ಮಿತ್ರಪಕ್ಷಗಳ ಜೊತೆ ಸೇರಿ ಗೆಲ್ಲುವ ರಣತಂತ್ರ ಹೆಣೆಯುವ ಅನಿವಾರ್ಯ ಬಿಜೆಪಿಯದು.

ಬಿಜೆಪಿ ತನ್ನ ಮಿತ್ರಪಕ್ಷಗಳ ಜೊತೆಗೂಡಿ ಎಷ್ಟೇ ತಿಣುಕಿದರೂ ಉತ್ತರಪ್ರದೇಶದಲ್ಲಿ ಕನಿಷ್ಠ 65 ಸೀಟುಗಳನ್ನು ಗೆಲ್ಲದಿದ್ದರೆ ಪ್ರಧಾನಿ ಗದ್ದುಗೆ ಮೋದಿಯವರಿಂದ ದೂರ ಉಳಿಯಲಿದೆ. ಈ ಎಲ್ಲ ಕಾರಣಗಳಿಗಾಗಿ 2019ರ ಏಪ್ರಿಲ್ ತಿಂಗಳ ಹೊತ್ತಿಗೆ ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಪೂರ್ಣಗೊಳ್ಳದಿದ್ದರೂ ಕನಿಷ್ಠ ಪಕ್ಷ ಆರಂಭ ಆದರೂ ಆಗಬೇಕಿದೆ.

ಹೀಗಾಗಬೇಕಿದ್ದರೆ ಸುಪ್ರೀಂ ಕೋರ್ಟ್ ತೀರ್ಪು ತ್ವರಿತವಾಗಿ ಹೊರಬೀಳಬೇಕಿದೆ. ತೀರ್ಪು ರಾಮಮಂದಿರದ ಪರವಾಗಿ ಹೊರಬಿದ್ದರೂ, ವಿರೋಧವಾಗಿ ಹೊರಬಿದ್ದರೂ ಅದರ ರಾಜಕೀಯ ಫಲಾನುಭವಿ ಭಾರತೀಯ ಜನತಾ ಪಕ್ಷವೇ.

1944ರ ಇಸ್ಮಾಯಿಲ್‌ ಫಾರೂಕಿ ತೀರ್ಪು ಏನು ಹೇಳುತ್ತದೆ?
ನವದೆಹಲಿ: ಕೇಂದ್ರ ಸರ್ಕಾರ 1993ರಲ್ಲಿ ಆಯೋಧ್ಯೆಯಲ್ಲಿ ನಿರ್ದಿಷ್ಟ ಪ್ರದೇಶಗಳ ಭೂಸ್ವಾಧಿನ ಕಾಯ್ದೆ (ಎಸಿಎಎ) 1993’ ಜಾರಿಗೆ ತರುವ ಮೂಲಕ ಬಾಬರಿ ಮಸೀದಿ ಸುತ್ತಮುತ್ತಲಿನ 67.7 ಎಕರೆ ಭೂಮಿಯನ್ನು ವಶಕ್ಕೆ ಪಡೆದಿತ್ತು.

ಈ ಕಾಯ್ದೆಯ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಡಾ. ಇಸ್ಮಾಯಿಲ್‌ ಫಾರೂಕಿ ಎಂಬುವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. 1994ರ ಅಕ್ಟೋಬರ್‌ ನಲ್ಲಿ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಈ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಮಾನ್ಯ ಮಾಡಿತು. ಸರ್ಕಾರದ ನಿರ್ಧಾರ ಸಂವಿ ಧಾನದ ಆಶಯಗಳಿಗೆ ವಿರುದ್ಧವಾಗಿಲ್ಲ ಎಂದು ಷರಾ ಬರೆಯುವ ಮೂಲಕ ಕೇಂದ್ರ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿಯಿತು. ‘ಪ್ರಾರ್ಥನೆ (ನಮಾಜ್‌) ಸಲ್ಲಿಸಲು ಮುಸ್ಲಿಮರಿಗೆ ಮಸೀದಿಯೇ ಬೇಕು ಎಂದೇನಿಲ್ಲ. ಎಲ್ಲಿ ಬೇಕಾದರೂ ಪ್ರಾರ್ಥನೆ ಸಲ್ಲಿಸಬಹುದು. ಮಸೀದಿಯು ಇಸ್ಲಾಂ ಧರ್ಮದ ಅಗತ್ಯ ಅಂಗವಲ್ಲ. ಬಯಲಿನಲ್ಲಿಯೂ ನಮಾಜ್‌ ಸಲ್ಲಿಸಲು ಅವಕಾಶವಿದೆ’ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.

2.77 ಎಕರೆ ವಿವಾದದ ಕೇಂದ್ರ
ಕರಸೇವಕರು ನೆಲಸಮಗೊಳಿಸುವ ಮುನ್ನ 15ನೆಯ ಶತಮಾನದ ಬಾಬರಿ ಮಸೀದಿ ನೆಲೆನಿಂತಿದ್ದ ಅಯೋಧ್ಯೆಯ 2.77 ಎಕರೆ ನಿವೇಶನ ಈಗ ಕಗ್ಗಂಟಾಗಿದೆ.

ಈ ನಿವೇಶನದ ಮೇಲೆ ಹಕ್ಕು ಸಾಧಿಸಿ ಹಿಂದೂ ಮತ್ತು ಮುಸ್ಲಿಂ ಧಾರ್ಮಿಕ ಸಂಘಟನೆಗಳು ಅಲಹಾಬಾದ್‌ ಹೈಕೋರ್ಟ್‌ನಲ್ಲಿ ದಾವೆ ಹೂಡಿದವು.

2010ರಲ್ಲಿ ಅಲಹಾಬಾದ್‌ ಹೈಕೋರ್ಟ್‌ನ ಮೂವರು ನ್ಯಾಯಮೂರ್ತಿಗಳ ಪೀಠ ವಿವಾದಾತ್ಮಕ ಜಾಗವನ್ನು ಮೂರು ಭಾಗಗಳಾಗಿ ವಿಂಗಡಿಸಿತು. ಅದನ್ನು ಸುನ್ನಿ ವಕ್ಫ್‌ ಮಂಡಳಿ, ನಿರ್ಮೋಹಿ ಆಖಾಡ ಮತ್ತು ರಾಮಲಲ್ಲಾ ನಡುವೆ ಸಮನಾಗಿ ಹಂಚಿತ್ತು.

ಇದನ್ನು ನ್ನು ಪ್ರಶ್ನಿಸಿ ಹಿಂದೂ ಮತ್ತು ಮುಸ್ಲಿಂ ಧಾರ್ಮಿಕ ಸಂಘಟನೆಗಳು ಸುಪ್ರೀಂ ಕೋರ್ಟ್‌ ನಲ್ಲಿ ಮೇಲ್ಮನವಿ ಸಲ್ಲಿಸಿದ್ದವು.

ಬರಹ ಇಷ್ಟವಾಯಿತೆ?

 • 19

  Happy
 • 3

  Amused
 • 0

  Sad
 • 0

  Frustrated
 • 6

  Angry

Comments:

0 comments

Write the first review for this !