ಶುಕ್ರವಾರ, ಮೇ 29, 2020
27 °C
ಮಿತ್ರಪಕ್ಷ ಶಿವಸೇನಾ ಟೀಕೆ

‘ರಾಮನ ಮರೆತು ಪುಲ್ವಾಮಾ ಬೆನ್ನತ್ತಿದ ಆರ್‌ಎಸ್‌ಎಸ್‌’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಪುಲ್ವಾಮಾ ಘಟನೆಯಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ (ಆರ್‌ಎಸ್‌ಎಸ್) ಹೊಸ ರಾಜಕೀಯ ಅಸ್ತ್ರ ದೊರೆತಂತಾಗಿದೆ. ತನ್ನ ಎಂದಿನ ಅಯೋಧ್ಯೆ ರಾಮ ಮಂದಿರ ವಿವಾದವನ್ನು ಪಕ್ಕಕ್ಕಿಟ್ಟು, ಕಾಶ್ಮೀರ ಸಮಸ್ಯೆಯನ್ನು ಕೈಗೆತ್ತಿಕೊಂಡಿದೆ ಎಂದು ಶಿವಸೇನಾ ಶನಿವಾರ ಆರೋಪ ಮಾಡಿದೆ.

ಉಗ್ರರ ದಾಳಿ ನಂತರ ಆರ್‌ಎಸ್‌ಎಸ್ ತನ್ನ ಸಾಂಪ್ರದಾಯಿಕ ನಿಲುವನ್ನು ತಾತ್ಕಾಲಿಕವಾಗಿ ಬದಲಿಸಿಕೊಂಡಿದ್ದು, ಪುಲ್ವಾಮಾ ಘಟನೆ ಮತ್ತು ಭಯೋತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಹೇಳಿದೆ.

ಅಯೋಧ್ಯೆಯ‌ಲ್ಲಿ ರಾಮಮಂದಿರ ನಿರ್ಮಾಣ ವಿಚಾರದ ಬದಲಾಗಿ, ಪುಲ್ವಾಮಾ ಉಗ್ರರ ದಾಳಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕೆಂಬುದು ಸಂಘದ ಬಯಕೆಯಾಗಿದೆ ಎಂಬ ಮಾಧ್ಯಮಗಳ ವರದಿಯನ್ನು ಶಿವಸೇನಾ ಮುಖವಾಣಿ ‘ಸಾಮ್ನಾ’ ಪ್ರಸ್ತಾಪಿಸಿದೆ.

‘ಸ್ಥಿರ ಸರ್ಕಾರ ಹಾಗೂ ಪ್ರಬಲ ಪ್ರಧಾನಿ ಆಯ್ಕೆಯಾಗದ ಹೊರತು ಭಯೋತ್ಪಾದನೆಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಕಾಶ್ಮೀರದಂತಹ ಸಮಸ್ಯೆಯನ್ನು ಬಗೆಹರಿಸಲು ಹಾಗೂ ಪಾಕಿಸ್ತಾನಕ್ಕೆ ಪಾಠ ಕಲಿಸಲು ಸಾಧ್ಯವಿಲ್ಲ ಎಂಬುದು ಸಂಘದ ನಿಲುವಾಗಿದೆ’ ಎಂದು ಸಾಮ್ನಾ ಉಲ್ಲೇಖಿಸಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ಮುನ್ನೆಲೆಗೆ ಬಂದಿದ್ದ ‘ಸ್ಥಿರ ಸರ್ಕಾರ, ಪ್ರಬಲ ಪ್ರಧಾನಮಂತ್ರಿ’ ಎಂಬ ಘೋಷಣೆಯನ್ನು ಈ ಬಾರಿಯೂ ಮತ್ತೆ ಏಕೆ ಚಲಾವಣೆಗೆ ತರಲಾಗುತ್ತಿದೆ ಎಂದು ಬಿಜೆಪಿಯನ್ನು ಪ್ರಶ್ನಿಸಿದೆ. 

‘ದೇಶದಲ್ಲಿ ಐದು ವರ್ಷಗಳಿಂದ ಸ್ಥಿರ ಸರ್ಕಾರವಿದೆ. ಹೀಗಿದ್ದೂ ಪಾಕಿಸ್ತಾನಕ್ಕೆ ಯಾವ ರೀತಿಯ ಹಾನಿ ಮಾಡಲೂ ಆಗಿಲ್ಲ. ಉರಿ, ಪಠಾಣ್‌ಕೋಟ್‌ ಹಾಗೂ ಈಗಿನ ಪುಲ್ವಾಮಾ ದಾಳಿಗಳೂ ಸ್ಥಿರ ಸರ್ಕಾರದ ಅವಧಿಯಲ್ಲೇ ನಡೆದಿವೆ’ ಎಂದು ಬಿಜೆಪಿಯನ್ನು ಸೇನೆ ತರಾಟೆಗೆ ತೆಗೆದುಕೊಂಡಿದೆ. 

‘70 ವರ್ಷಗಳಲ್ಲೇ ಕಾಶ್ಮೀರದ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದಿದೆ. ಕಾಶ್ಮೀರಿ ಪಂಡಿತರ ‘ಘರ್ ವಾಪಸಿ’ ಇರಲಿ, ಕಾಶ್ಮೀರದ ಮುಸ್ಲಿಂ ಯುವಕರೂ ಉದ್ಯೋಗಕ್ಕಾಗಿ ರಾಜ್ಯ ತೊರೆಯುವ ಪರಿಸ್ಥಿತಿ ಇದೆ. ಕೆಲವರು ಬಂದೂಕು ಹಿಡಿಯುತ್ತಿರುವುದು ದುರದೃಷ್ಟಕರ’ ಎಂದು ಸೇನಾ ಹೇಳಿದೆ. 

ಆದರೆ, ಭವಿಷ್ಯದಲ್ಲಿ ಪುಲ್ವಾಮಾದಂತಹ ದಾಳಿಯನ್ನು ತಡೆಯಲು ಸ್ಥಿರ ಸರ್ಕಾರದ ಅಗತ್ಯವಿದೆ ಎಂಬುದನ್ನೂ ಸೇನಾ ಸ್ವತಃ ಒಪ್ಪಿಕೊಂಡಿದೆ.

‘ಮಂದಿರ ಮೊದಲು, ಸರ್ಕಾರ ನಂತರ’ ಎಂಬ ತನ್ನ ಘೋಷಣೆಯಿಂದ ಶಿವಸೇನಾ ಕೂಡಾ ಹಿಂದೆ ಸರಿದಿದೆ. ‘ದೇವರಿಗಿಂತ ದೇಶ ಮುಖ್ಯ’ ಎಂದು ಹೇಳಿದೆ.

ಕೇಂದ್ರದ ನಿರಂಕುಶ ಆಡಳಿತ: ಅಖಿಲೇಶ್
ಅಲಹಾಬಾದ್: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ನಿರಂಕುಶ ಆಡಳಿತಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಎಸ್‌ಪಿ ನಾಯಕ ಅಖಿಲೇಶ್ ಯಾದವ್ ಕರೆ ನೀಡಿದರು. ಸರ್ಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಬಿಜೆಪಿಯು ರಾಜಕೀಯ ಯುದ್ಧ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಪ್ರಾದೇಶಿಕ ಭದ್ರತೆಗೆ ಅಪಾಯ: ಪಾಕ್‌ ಪತ್ರ
ಇಸ್ಲಾಮಾಬಾದ್‌ (ಪಿಟಿಐ): ‘ಪ್ರಾದೇಶಿಕ ಭದ್ರತೆಗೆ ಭಾರತ ಬೆದರಿಕೆ ಒಡ್ಡುತ್ತಿದೆ’ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹ್ಮೂದ್‌ ಖುರೇಷಿ ಆರೋಪಿಸಿದ್ದಾರೆ.

ಈ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಅವರು ಪತ್ರ ಬರೆದಿದ್ದಾರೆ. ’ಪಾಕಿಸ್ತಾನದ ವಿರುದ್ಧ ಸೇನಾಬಲವನ್ನು ಪ್ರಯೋಗಿಸುವ ಕುರಿತು ಭಾರತ ಬೆದರಿಕೆವೊಡ್ಡುತ್ತಿದೆ. ಇದರಿಂದಾಗಿ ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಧಕ್ಕೆಯಾಗುತ್ತಿದೆ’ ಎಂದು ಪತ್ರದಲ್ಲಿ ದೂರಿದ್ದಾರೆ.

‘ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಭಾರತವು ಪುಲ್ವಾಮಾ ದಾಳಿಗೆ ಪಾಕಿಸ್ತಾನವನ್ನು ದೂರುತ್ತಿದೆ. ತನ್ನ ನೀತಿಗಳ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಪಾಕಿಸ್ತಾನದ ಮೇಲೆ ಗೂಬೆ ಕೂರಿಸುತ್ತಿದೆ’ ಎಂದು ಟೀಕಿಸಿದ್ದಾರೆ.

ಮಾನವ ಹಕ್ಕುಗಳ ಉಲ್ಲಂಘನೆ: ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಖುರೇಷಿ, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥರಿಗೂ ಪತ್ರ ಬರೆದಿದ್ದಾರೆ.

ಇದೇ ವಿಷಯವಾಗಿ 2018ರ ಡಿಸೆಂಬರ್‌ 16ರಂದು ಸಹ ಖುರೇಷಿ ಅವರು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥ ಬಷೆಲೆಟ್‌ ಅವರಿಗೆ ಪತ್ರ ಬರೆದಿದ್ದರು.

‘ನಿರುದ್ಯೋಗ: ಒಪ್ಪದ ಪ್ರಧಾನಿ’
ನವದೆಹಲಿ: ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇದೆ ಎಂಬುದನ್ನು ಒಪ್ಪಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಸಿದ್ಧರಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಉದ್ಯೋಗಾವಕಾಶ ವಿಷಯ ಕುರಿತು ಯುವಜನತೆಯ ಜೊತೆ ಮೋದಿ ಸಂವಾದ ನಡೆಸಬೇಕು ಎಂದು ಅವರು ಸಲಹೆ ಮಾಡಿದ್ದಾರೆ.

‘120 ಕೋಟಿ ಜನಸಂಖ್ಯೆಯ ಭಾರತದಲ್ಲಿ 24 ಗಂಟೆಗೆ 450 ಉದ್ಯೋಗ ಸೃಷ್ಟಿಯಾಗುತ್ತಿವೆ. ಇದೇ ಅವಧಿಯಲ್ಲಿ ಚೀನಾದಲ್ಲಿ 50 ಸಾವಿರ ಮಂದಿಗೆ ಕೆಲಸ ಸಿಗುತ್ತಿದೆ. ಇವು ನಾನು ಹೇಳಿದ ಅಂಕಿ–ಅಂಶಗಳಲ್ಲ. ಸಂಸತ್‌ ಅಧಿವೇಶನದಲ್ಲಿ ಹಣಕಾಸು ಸಚಿವಾಲಯವೇ ಈ ಮಾಹಿತಿ ನೀಡಿದೆ’ ಎಂದರು. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ರಾಹುಲ್,  ‘ಪ್ರಧಾನಿ ನಿಮ್ಮ ಜೊತೆ ಈ ರೀತಿ ಎಂದಾದರೂ ಸಂವಾದ ನಡೆಸಿದ್ದಾರೆಯೇ? ನಿಮ್ಮ ಅಭಿಪ್ರಾಯ ಕೇಳಿದ್ದಾರೆಯೇ’ ಎಂದು ವಿದ್ಯಾರ್ಥಿ ಸಮೂಹವನ್ನು ಪ್ರಶ್ನಿಸಿದರು. 

ಪುಲ್ವಾಮಾ ಪ್ರಶ್ನೆಗೆ ಯೋಗಿ ಕಣ್ಣೀರು!
ಲಖನೌ: ಪುಲ್ವಾಮಾ ಉಗ್ರರ ದಾಳಿಯ ಕುರಿತು ಎಂಜಿನಿಯರಿಂಗ್‌ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದ ಸಂದರ್ಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಭಾವುಕರಾಗಿ ಕಣ್ಣೀರಾದರು.

ಪುಲ್ವಾಮಾ ಘಟನೆಯ ನಂತರ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ವಿದ್ಯಾರ್ಥಿಯೊಬ್ಬ ಪ್ರಶ್ನೆ ಹಾಕಿದ. ದೀಪ ಆರುವ ಮುಂಚೆ ಹೆಚ್ಚು ಬೆಳಗುತ್ತದೆ. ಅದೇ ರೀತಿ ಕಾಶ್ಮೀರದಲ್ಲಿ ಕೂಡ ಅದೇ ಪರಿಸ್ಥಿತಿ ಇದೆ. ಭಯೋತ್ಪಾದನೆ ವಿನಾಶದ ಅಂಚಿಗೆ ತಲುಪಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಭಯೋತ್ಪಾದನೆಯನ್ನು ಬುಡ ಸಮೇತ ಕಿತ್ತು ಎಸೆಯಲಿದೆ ಎಂದು ಭಾವುಕರಾದರು. ಕರವಸ್ತ್ರದಿಂದ ಕಣ್ಣೀರು ಒರೆಸಿಕೊಂಡರು.

ಇಸ್ಲಾಮಿಕ್‌ ರಾಷ್ಟ್ರಗಳ ಸಚಿವರ ಸಭೆ: ಸುಷ್ಮಾಗೆ ಆಹ್ವಾನ
ಇಸ್ಲಾಮಿಕ್‌ ರಾಷ್ಟ್ರಗಳ ವಿದೇಶಾಂಗ ವ್ಯವಹಾರಗಳ ಸಚಿವರ ಸಹಕಾರ ಮಂಡಳಿ 46ನೇ ಅಧಿವೇಶನದಲ್ಲಿ ಗೌರವ ಅತಿಥಿಯಾಗಿ ಭಾಗವಹಿಸುವಂತೆ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಅವರನ್ನು ಆಹ್ವಾನಿಸಲಾಗಿದೆ.

ಇಸ್ಲಾಮಿಕ್‌ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವರೊಬ್ಬರು ಗೌರವ ಅತಿಥಿಯಾಗಿ ಭಾಗವಹಿಸುತ್ತಿರುವುದು ಇದೇ ಮೊದಲು.

ಸಂಯುಕ್ತ ಅರಬ್‌ ಸಂಸ್ಥಾನದ (ಯುಎಇ) ವಿದೇಶಾಂಗ ವ್ಯವಹಾರಗಳ ಸಚಿವ ಶೇಖ್‌ ಅಬ್ಹುಲ್ಲಾ ಬಿನ್‌ ಜಾಯೆದ್‌ ಅಲ್‌ ನಹ್ಯಾನ್‌ ನೀಡಿರುವ ಆಹ್ವಾನವನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸ್ವೀಕರಿಸಿದೆ.

*
ಉಗ್ರರನ್ನು ಹತ್ತಿಕ್ಕುವುದು ಗೊತ್ತು
ಪ್ರತ್ಯೇಕತಾವಾದಿ ನಾಯಕರ ವಿರುದ್ಧ ಈಗಾಗಲೇ ಕ್ರಮ ಜರುಗಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಕಠಿಣ ಕ್ರಮ ಕೈಗೊಳ್ಳುತ್ತೇವೆ. ನಾವು ಕೈಕಟ್ಟಿ ಸುಮ್ಮನೆ ಕೂರುವುದಿಲ್ಲ. ಭಯೋತ್ಪಾದನೆ ಮತ್ತು ಭಯೋತ್ಪಾದಕರನ್ನು ಹೇಗೆ ಹತ್ತಿಕ್ಕಬೇಕು ಎಂಬುವುದು ನಮಗೆ ಚೆನ್ನಾಗಿ ಗೊತ್ತು.
–ನರೇಂದ್ರ ಮೋದಿ, ಪ್ರಧಾನಿ

***
ಸ್ವೇಚ್ಛಾಚಾರದ ಕ್ರಮ
ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿ ಮುಖಂಡರು ಮತ್ತು ಜಮಾತ್‌–ಎ–ಇಸ್ಲಾಮಿ ನಾಯಕರ ಬಂಧನ ಸರ್ಕಾರದ ಸ್ವೇಚ್ಛಾಚಾರದ ಕ್ರಮ. ಕಾನೂನಾತ್ಮಕವಾಗಿ ಯಾವ ನೆಲೆಯಲ್ಲಿ ಸರ್ಕಾರ ಬಂಧನ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತದೆ? ಒಬ್ಬ ವ್ಯಕ್ತಿಯನ್ನು ಬಂಧಿಸಿ ಇಡಬಹುದೇ ಹೊರತು ಆತನ ವಿಚಾರಗಳನ್ನಲ್ಲ.
–ಮೆಹಬೂಬಾ ಮುಫ್ತಿ, ಪಿಡಿಪಿ ನಾಯಕಿ

***
ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ
ಜೆಕೆಎಲ್‌ಎಫ್‌ ಮುಖ್ಯಸ್ಥ ಯಾಸಿನ್‌ ಮಲಿಕ್‌ ಮತ್ತು ಜಮಾತ್–ಎ– ಇಸ್ಲಾಮಿ ನಾಯಕರನ್ನು ಬಂಧಿಸುವ ಮೂಲಕ ಸರ್ಕಾರ ಬಲಪ್ರಯೋಗ ಮತ್ತು ಬೆದರಿಸುವ ತಂತ್ರ ಅನುಸರಿಸುತ್ತಿದೆ. ಇದು ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಲಿದೆ.
–ಮಿರ್ವೈಜ್‌ ಉಮರ್‌ ಫಾರೂಕ್‌, ಹುರಿಯತ್‌ ನಾಯಕ

***

ಮೋದಿ ಹೇಳಿಕೆಗೆ ಸ್ವಾಗತ
‘ಯುದ್ಧ ಕಾಶ್ಮೀರಿಗಳ ಮೇಲಲ್ಲ’ ಎಂದು ಪ್ರಧಾನಿ ಅಭಯ ನೀಡಿರುವುದನ್ನು ಸ್ವಾಗತಿಸುತ್ತೇನೆ. ಇದು ಕಣಿವೆಯಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸುವ ವಿಶ್ವಾಸವಿದೆ. ಸಾಂವಿಧಾನಿಕ ಹುದ್ದೆಗಳಲ್ಲಿರುವವರೂ ಸೇರಿದಂತೆ ಹಲವರು ‘ಕಾಶ್ಮೀರ ವಿರೋಧಿ ಹೇಳಿಕೆ’ಗಳನ್ನು ನೀಡುತ್ತಿದ್ದು, ಪ್ರಧಾನಿ ಇವುಗಳನ್ನು ಗಂಭೀರವಾಗಿ ಪರಿಗಣಿಸಬೇಕು.
–ಒಮರ್ ಅಬ್ದುಲ್ಲಾ, ನ್ಯಾಷನಲ್ ಕಾನ್ಫರೆನ್ಸ್‌ ಮುಖಂಡ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು