ಶಬರಿಮಲೆ: ಕೇರಳದಲ್ಲಿ ಬಿಜೆಪಿ ತಂಡ; ಮಹಿಳೆಯರ ಮಹಾ ಗೋಡೆ ನಿರ್ಮಿಸಲು ಸರ್ಕಾರ ಕರೆ

7

ಶಬರಿಮಲೆ: ಕೇರಳದಲ್ಲಿ ಬಿಜೆಪಿ ತಂಡ; ಮಹಿಳೆಯರ ಮಹಾ ಗೋಡೆ ನಿರ್ಮಿಸಲು ಸರ್ಕಾರ ಕರೆ

Published:
Updated:

ಕೊಚ್ಚಿ: ಶಬರಿಮಲೆಯಲ್ಲಿ ಉಂಟಾಗಿರುವ ಗೊಂದಲದ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ನಾಲ್ವರು ಸದಸ್ಯರನ್ನು ಒಳಗೊಂಡ ಕೇಂದ್ರದ ತಂಡವನ್ನು ಕೇರಳಕ್ಕೆ ಕಳುಹಿಸಿದ್ದಾರೆ. ’ಪುರಾತನ ಯುಗದ ಕಟ್ಟಳೆಗಳಿಗೆ ಜೋತು ಬೀಳುವುದನ್ನು ತಪ್ಪಿಸಲು’ ಮಹಿಳೆಯರ ಮಹಾ ಗೋಡೆಯನ್ನೇ ನಿರ್ಮಿಸಲು ಕೇರಳ ಸರ್ಕಾರ ಕರೆ ನೀಡಿದೆ. ‘

’ಲಕ್ಷಾಂತರ ಮಹಿಳೆಯರು ಜತೆಯಾಗಿ ಕೇರಳದ ಒಂದು ತುದಿಯಿಂದ ಮತ್ತೊಂದು ತುದಿಯವರೆಗೂ ಹೊಸ ವರ್ಷದ ದಿನ ಮಹಾ ಗೋಡೆಯಂತೆ ಒಗ್ಗೂಡಲು ಬನ್ನಿ. ಕೈಜೋಡಿಸಿ..’ ಎಂದು ಕೇರಳ ರಾಜ್ಯದ ಹಣಕಾಸು ಸಚಿವ ಥಾಮಸ್‌ ಐಸಾಕ್‌ ಟ್ವೀಟಿಸಿದ್ದಾರೆ. 

’ಕೇರಳದ ಪ್ರಗತಿಶೀಲ ಸಮಾಜವನ್ನು ಯಾರೊಬ್ಬರೂ ಅಂಧಯುಗಕ್ಕೆ ದೂಡಲು ಸಾಧ್ಯವಿಲ್ಲ’ ಎಂದು ಶಬರಿಮಲೆ ವಿಚಾರವಾಗಿ ಶನಿವಾರ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, 600 ಕಿ.ಮೀ. ಉದ್ದದ ಮಹಿಳೆಯರ ಮಹಾ ಗೋಡೆ ನಿರ್ಮಿಸುವ ಕುರಿತೂ ಘೋಷಿಸಿದರು. 

ಶಬರಿಮಲೆಗೆ ಋತುಮತಿ ಮಹಿಳೆಯರು, ಯುವತಿಯರ ಪ್ರವೇಶಕ್ಕೆ ಇದ್ದ ನಿರ್ಬಂಧ ತೆರವುಗೊಳಿಸಿ, ಎಲ್ಲ ವಯೋಮಾನದ ಮಹಿಳೆಯ ಪ್ರವೇಶಕ್ಕೆ ಅವಕಾಶ ಕೊಟ್ಟು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ಆದರೆ, ಮಹಿಳೆಯರ ಪ್ರವೇಶ ವಿರೋಧಿಸಿ ಬಲ ಪಂಥೀಯ ಸಂಘಟನೆಗಳು ಕೇರಳದಾದ್ಯಂತ ಪ್ರತಿಭಟನೆ ನಡೆಸಿದ್ದವು. ಶ್ರೀ ನಾರಾಯಣ ಧರ್ಮ ಪರಿಪಾಲನಾ(ಎಸ್‌ಎನ್‌ಡಿಪಿ) ಯೋಜನಂ ಸೇರಿದಂತೆ ಸಾಮಾಜಿಕ ಸಂಘಟನೆಗಳು ಹಾಗೂ ಜಾತಿ ಆಧಾರಿತ ಪ್ರಮುಖ ಸಂಘಟನೆಗಳೊಂದಿಗೆ ಕೇರಳ ಸರ್ಕಾರ ಸಭೆ ನಡೆಸಿ, ಜನವರಿ 1ರಂದು ಮಹಿಳೆಯರ ಮಹಾ ಗೋಡೆ ನಿರ್ಮಿಸಲು ನಿರ್ಧರಿಸಿದೆ.  

ರಾಜ್ಯದ ಜಾತ್ಯತೀತ ಮತ್ತು ಪ್ರಗತಿಪರ ಮನಸ್ಥಿತಿಯನ್ನು ಇಡೀ ದೇಶಕ್ಕೆ ತೋರುವ ನಿಟ್ಟಿನಲ್ಲಿ ಕಾಸರಗೋಡಿನಿಂದ ತಿರುವನಂತಪುರಂ ಜಿಲ್ಲೆಯವರೆಗೂ ಮಹಿಳೆಯರ ಮಹಾ ಗೋಡೆ ನಿರ್ಮಿಸುವಂತೆ ಕರೆ ನೀಡಿರುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. 

ಕೇರಳದ ಜಾತ್ಯತೀತ ವಾತಾವರಣದ ರಕ್ಷಣೆಗಾಗಿ ಪ್ರಗತಿಶೀಲ ಮನಸುಗಳು ಮುಂದೆ ಬಂದು ಬೆಂಬಲ ನೀಡುವಂತೆ ಕೋರಿದ್ದಾರೆ. ಬಿಜೆಪಿ ನಾಲ್ವರು ಸದಸ್ಯರ ಕೇಂದ್ರ ತಂಡ ಭಾನುವಾರ ಶಬರಿಮಲೆ ವಲಯದಲ್ಲಿ ಕಾರ್ಯಕರ್ತರು ಹಾಗೂ ಜನರನ್ನು ಭೇಟಿ ಮಾಡಿ ’ಸತ್ಯಾಗ್ರಹಿ’ಗಳ ವಿರುದ್ಧ ನಡೆಸಲಾಗಿರುವ ದೌರ್ಜನ್ಯಗಳ ಮಾಹಿತಿ ಕಲೆ ಹಾಕಲಿದ್ದಾರೆ. 

ಬಿಜೆಪಿ ಪ್ರಧಾನ ಕಾರ್ಯದರ್ಶಿ ಸರೋಜ್‌ ಪಾಂಡೆ, ಪಕ್ಷದ ಪರಿಶಿಷ್ಟ ಜಾತಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ವಿನೋದ್‌ ಸೋನಕರ್‌, ಸಂಸದರಾದ ಪ್ರಹ್ಲಾದ್‌ ಜೋಶಿ ಹಾಗೂ ನಳಿನ್‌ ಕುಮಾರ್‌ ಕಟೀಲ್‌ ಅವರನ್ನು ಕೇಂದ್ರ ತಂಡ ಒಳಗೊಂಡಿದೆ. 15 ದಿನಗಳಲ್ಲಿ ತಂಡವು ಪಕ್ಷದ ಅಧ್ಯಕ್ಷ ಅಮಿತ್‌ ಶಾ ಅವರಿಗೆ ವರದಿ ಸಲ್ಲಿಸಲಿದೆ ಎಂದು ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ. 

ಟ್ರಾವಂಕೋರ್‌ ದೇವಸ್ವಂ ಮಂಡಳಿ ಸಹ ಮಹಿಳೆಯ ಪ್ರವೇಶಕ್ಕಿರುವ ನಿರ್ಬಂಧವನ್ನು ಸಮರ್ಥಿಸಿಕೊಂಡಿದೆ. ಸೆಪ್ಟೆಂಬರ್‌ 28ರಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ನಂತರದಲ್ಲಿ ಕೆಲವು ಮಹಿಳೆಯರು ಶಬರಿಮಲೆ ದೇವಸ್ಥಾನ ಪ್ರವೇಶಕ್ಕೆ ಪ್ರಯತ್ನಿಸಿದರಾದರೂ, ಭಕ್ತಾದಿಗಳು ಹಾಗೂ ಬಲ ಪಂಥೀಯ ಸಂಘಟನೆಗಳು ಪ್ರತಿಭಟನೆ ನಡೆಸಿ ತಡೆದವು. 

ತೀರ್ಪಿಗೆ ಸಂಬಂಧಿಸಿದಂತೆ ಪುನರ್‌ಪರಿಶೀಲನಾ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜನವರಿಯಲ್ಲಿ ನಡೆಸಲಿದೆ. 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 7

  Angry

Comments:

0 comments

Write the first review for this !