ಭದ್ರತಾ ಪಡೆಗಳ ಕಾರ್ಯಾಚರಣೆ: ಪುಲ್ವಾಮಾದಲ್ಲಿ ಮತ್ತೆ ಆರು ಉಗ್ರರ ಹತ್ಯೆ

ಶ್ರೀನಗರ: ಜಮ್ಮು– ಕಾಶ್ಮೀರದ ಪುಲ್ವಾಮಾ ಮತ್ತು ಶೋಪಿಯಾನ್ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಎರಡು ಕಾರ್ಯಾಚರಣೆಗಳಲ್ಲಿ ಶುಕ್ರವಾರ ಆರು ಉಗ್ರರು ಹತರಾಗಿದ್ದಾರೆ.
ಇದರಿಂದಾಗಿ ಗುರುವಾರ ರಾತ್ರಿಯಿಂದ ನಡೆದ ಕಾರ್ಯಾಚರಣೆಗಳಿಗೆ ಒಟ್ಟು ಎಂಟು ಉಗ್ರರು ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪುಲ್ವಾಮಾ ಕಾರ್ಯಾಚರಣೆಯಲ್ಲಿ ಶುಕ್ರವಾರ ಇಬ್ಬರು ಉಗ್ರರು ಹತ್ಯೆಗೀಡಾದರೆ, ಶೋಪಿಯಾನ್‌ನಲ್ಲಿ ನಾಲ್ಕು ಮಂದಿ ಸಾವಿಗೀಡಾಗಿದ್ದಾರೆ.
ಪುಲ್ವಾಮಾದ ಪಾಂಪೊರ್ ಬಳಿಯ ಮಿಜ್‌ನಲ್ಲಿ ಉಗ್ರರು ಅಡಗಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ ಭದ್ರತಾ ಪಡೆಗಳು ಅಲ್ಲಿ ಗುರುವಾರ ಬೆಳಗ್ಗೆಯಿಂದಲೇ ಕಾರ್ಯಾಚರಣೆ ಆರಂಭಿಸಿದ್ದರು.
ಉಗ್ರರಿಗೆ ಶೋಧ ನಡೆಸುತ್ತಿದ್ದಾಗ ಅವರು ಗುಂಡಿನ ದಾಳಿ ನಡೆಸಿದ್ದರಿಂದ ಭದ್ರತಾ ಪಡೆ ಸಿಬ್ಬಂದಿಯೂ ಪ್ರತಿ ದಾಳಿ ನಡೆಸಬೇಕಾಯಿತು. ಈ ಸಂದರ್ಭದಲ್ಲಿ ಗುರುವಾರ ಒಬ್ಬ ಉಗ್ರ ಹತನಾಗಿದ್ದ. ಆದರೆ ಇತರ ಇಬ್ಬರು ಸಮೀಪದ ಮಸೀದಿ ಪ್ರವೇಶಿಸಿ ಆಶ್ರಯ ಪಡೆದಿದ್ದರು. ಮಸೀದಿಯನ್ನು ಸುತ್ತುವರಿದ ಭದ್ರತಾ ಪಡೆ ರಾತ್ರಿಯಡೀ ನಡೆಸಿದ ಕಾರ್ಯಾಚರಣೆಗೆ ಶುಕ್ರವಾರ ಬೆಳಿಗ್ಗೆ ಇಬ್ಬರು ಉಗ್ರರು ಬಲಿಯಾದರು ಎಂದು ಪೊಲೀಸರು ವಿವರಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.