ಸೋಮವಾರ, ಜನವರಿ 20, 2020
26 °C

ಪ್ರಗ್ಯಾ ದೂರಿಗೆ ಸ್ಪೈಸ್‌ಜೆಟ್‌ ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ(ಪಿಟಿಐ): ‘ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್ ಅವರು ತುರ್ತು ನಿರ್ಗಮನ ಸಾಲಿನಲ್ಲಿದ್ದ ತಮ್ಮ ಸೀಟು ಬಿಟ್ಟುಕೊಡಲು ಒಪ್ಪದ ಕಾರಣ ವಿಮಾನ ಸಂಚಾರ ವಿಳಂಬವಾಗಿದೆ’ ಎಂದು ಸ್ಪೈಸ್‌ಜೆಟ್‌ ಸಂಸ್ಥೆ ಭಾನುವಾರ ಸ್ಪಷ್ಟೀಕರಣ ನೀಡಿದೆ.

ಖಾಸಗಿ ವಿಮಾನಯಾನ ಸಂಸ್ಥೆಯ ವಿಮಾನದಲ್ಲಿ ಕಾಯ್ದಿರಿಸಿದ್ದ ಸೀಟನ್ನು ನೀಡಲಿಲ್ಲ ಎಂದು ಪ್ರಗ್ಯಾ ಅವರು ದೂರು ದಾಖಲಿಸಿದ ಬಳಿಕ, ವಿಮಾನಯಾನ ಸಂಸ್ಥೆ ಸ್ಪಷ್ಟೀಕರಣ ನೀಡಿದೆ.

ಪ್ರಗ್ಯಾ ಅವರು ಗಾಲಿ ಕುರ್ಚಿಯಲ್ಲಿ ಬಂದಿದ್ದ ಕಾರಣ ಸುರಕ್ಷತೆಯ ದೃಷ್ಟಿಯಿಂದ ಅವರಲ್ಲಿ ಸೀಟು ಬದಲಾಯಿಸಿಕೊಳ್ಳುವಂತೆ ವಿಮಾನದ ಸಿಬ್ಬಂದಿ ಕೋರಿದ್ದರು, ಆದರೆ ಅವರು ಅದಕ್ಕೆ ಒಪ್ಪಲಿಲ್ಲ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ಸೀಟು ಬದಲಾಯಿಸಿಕೊಳ್ಳುವಂತೆ ಕೆಲವು ಪ್ರಯಾಣಿಕರು ಕೂಡ ಪ್ರಗ್ಯಾ ಅವರಲ್ಲಿ ಮನವಿ ಮಾಡಿದ್ದರು. ಆದರೆ ಅವರು ಒಪ್ಪದ ಕಾರಣ ಅವರನ್ನು ವಿಮಾನದಿಂದ ಕೆಳಗಿಳಿಸುವಂತೆ ಒತ್ತಾಯಿಸಿದ್ದರು. ಕೊನೆಗೆ ಬೇರೆ ಸೀಟಿನಲ್ಲಿ ಕುಳಿತು ಪ್ರಗ್ಯಾ ಪ್ರಯಾಣಿಸಿದ್ದಾರೆ ಎಂದು ಹೇಳಿದ್ದಾರೆ.

ದೆಹಲಿ–ಭೋಪಾಲ್‌ ವಿಮಾನದಲ್ಲಿ ತುರ್ತು ನಿರ್ಗಮನ ಸಾಲಿನ ಸೀಟುಗಳು ಮೊದಲ ಶ್ರೇಣಿಯಲ್ಲಿದ್ದು, ಗಾಲಿ ಕುರ್ಚಿಯಲ್ಲಿ ಬರುವ ಪ್ರಯಾಣಿಕರಿಗೆ ಇಲ್ಲಿ ಕುಳಿತುಕೊಳ್ಳಲು ಅವಕಾಶ ಇರುವುದಿಲ್ಲ. ಪ್ರಗ್ಯಾ ಅವರು ಹಠ ಹಿಡಿದ ಕಾರಣ ವಿಮಾನ ಸಂಚಾರ ಸುಮಾರು 45 ನಿಮಿಷ ವಿಳಂಬವಾಗಿತ್ತು ಎಂದು ಅವರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು