ಶನಿವಾರ, ಮೇ 28, 2022
31 °C

ವಲಸೆ ಕಾರ್ಮಿಕರಿಗೆ ಆಹಾರ, ನೀರು ನೀಡಿ, ಪ್ರಯಾಣ ದರ ವಿಧಿಸಬೇಡಿ: ಸುಪ್ರೀಂ ಕೋರ್ಟ್‌

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಊರಿಗೆ ಮರಳಲು ನಡೆದು ಸಾಗುತ್ತಿರುವ ವಲಸೆ ಕಾರ್ಮಿಕರು–ಸಂಗ್ರಹ ಚಿತ್ರ

ನವದೆಹಲಿ: ಲಾಕ್‌ಡೌನ್‌ನಿಂದಾಗಿ ಸಿಲುಕಿರುವ ವಲಸೆ ಕಾರ್ಮಿಕರ ಪೈಕಿ ಮೇ 1ರಿಂದ ಅವರ ಊರುಗಳಿಗೆ 97 ಲಕ್ಷ ಜನರನ್ನು ತಲುಪಿಸಿರುವುದಾಗಿ ಕೇಂದ್ರ ಸರ್ಕಾರ ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಹಿಂದೆಂದು ತಲೆದೋರಿರದ ಬಿಕ್ಕಟ್ಟು ಪರಿಹರಿಸಲು ಹೊಸ ಕ್ರಮಗಳನ್ನು ಅನುಸರಿಸಿರುವುದಾಗಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹೇಳಿದ್ದಾರೆ.

ಕೋವಿಡ್‌–19 ಲಾಕ್‌ಡೌನ್‌ನಲ್ಲಿ ವಲಸೆ ಕಾರ್ಮಿಕರ ಪರಿಸ್ಥಿತಿಯ ಕುರಿತು ಸ್ವಯಂಪ್ರೇರಣೆಯಿಂದ ದಾಖಲಿಸಿಕೊಳ್ಳಲಾಗಿರುವ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸುತ್ತಿದೆ.

ಬೇರೆ ರಾಜ್ಯಗಳಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರು ಅವರ ಊರುಗಳಿಗೆ ಮರಳಲು ಇಚ್ಛಿಸಿದಲ್ಲಿ ಅವರನ್ನು ರಾಜ್ಯ ಸರ್ಕಾರಗಳು ತಡೆಯುವಂತಿಲ್ಲ ಎಂದು ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ನೇತೃತ್ವದ ನ್ಯಾಯಪೀಠ ಹೇಳಿದೆ.

ವಲಸೆ ಕಾರ್ಮಿಕರಿಗೆ ಪ್ರಯಾಣ ದರ ವಿಧಿಸುವಂತಿಲ್ಲ ಹಾಗೂ ಅವರಿಗೆ ಆಹಾರ, ನೀರು ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್‌ ನಿರ್ದೇಶಿಸಿದೆ. ಹಾಗೇ, ವಲಸೆ ಕಾರ್ಮಿಕರು ಅವರವರ ಜಾಗಗಳಿಗೆ ಮರಳಲು ಸರ್ಕಾರ ಸಮಯ ನಿಗದಿಪಡಿಸಿಕೊಳ್ಳಬೇಕು. ಆವರೆಗೂ ವಲಸೆ ಕಾರ್ಮಿಕರಿಗೆ ಆಹಾರ ಸೇರಿದಂತೆ ಇತರೆ ಸೌಕರ್ಯಗಳನ್ನು ಒದಗಿಸಬೇಕು ಎಂದು ನ್ಯಾಯಮೂರ್ತಿ ಅಶೋಕ್‌ ಭೂಷಣ್ ಸೂಚಿಸಿದ್ದಾರೆ.

ಮೇ 1ರಿಂದ ಮೇ 27ರ ವರೆಗೂ ಶ್ರಮಿಕ್‌ ವಿಶೇಷ ರೈಲುಗಳ ಮೂಲಕ 50 ಲಕ್ಷ ವಲಸೆ ಕಾರ್ಮಿಕರು ಅವರವರ ಸ್ವಂತ ನಾಡಿಗೆ ಮರಳಿದ್ದಾರೆ. ಇನ್ನೂ 41 ಲಕ್ಷ ವಲಸೆ ಕಾರ್ಮಿಕರನ್ನು ರಸ್ತೆಗಳ ಮೂಲಕ ಕಳುಹಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಸಿಲುಕಿರುವ ವಲಸೆ ಕಾರ್ಮಿಕರ ಕುರಿತು ರಾಜ್ಯ ಸರ್ಕಾರಗಳು ಮಾಹಿತಿ ನೀಡಿದರೆ ಮಾತ್ರವೇ ವಿವರ ದೊರೆಯುತ್ತದೆ. ಮನೆಗಳಿಗೆ ಮರಳಿರುವ ವಲಸೆ ಕಾರ್ಮಿಕರ ಪೈಕಿ ಶೇ 80ರಷ್ಟು ಜನ ಬಿಹಾರ ಹಾಗೂ ಉತ್ತರ ಪ್ರದೇಶ ಮೂಲದವರು ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹೇಳಿದ್ದಾರೆ.

'ಕೋವಿಡ್‌–19 ಲಾಕ್‌ಡೌನ್‌ ನಡುವೆ ಮನೆಗಳಿಗೆ ತೆರಳಲು ಬಹಳಷ್ಟು ಜನರು ಕಷ್ಟದ ವಾತಾವರಣದಲ್ಲಿ, ಅದರಲ್ಲೂ ಹಲವರು ಬರಿಗಾಲಿನಲ್ಲಿ ನಡೆದು ಸಾಗುತ್ತಿದ್ದಾರೆ. ದೇಶ ಗಾಢವಾದ ನೋವಿಗೆ ಸಾಕ್ಷಿಯಾಗಿದೆ. ಈ ಬಡ ಜನರ ಕಷ್ಟವನ್ನು ಕೇಂದ್ರ ಸರ್ಕಾರ ಉಪೇಕ್ಷಿಸಿದೆ' ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು ಸ್ಪೀಕ್‌ಅಪ್ಇಂಡಿಯಾ‌ ಅಭಿಯಾನದಲ್ಲಿ ಆರೋಪಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು