ಪ್ರಜಾಮತ: ‘ಬಿಜೆಪಿಯ ಬಿ ಟೀಮ್ ಟಿಆರ್‌ಎಸ್’

ಖಮ್ಮಮ್ (ತೆಲಂಗಾಣ): ಕಾಂಗ್ರೆಸ್ ವಿರುದ್ಧ ತೆಲುಗು ದೇಶಂ ಪಾರ್ಟಿಯನ್ನು ಎನ್.ಟಿ. ರಾಮರಾವ್ ಅವರು ಸ್ಥಾಪಿಸಿ 37 ವರ್ಷಗಳ ಬಳಿಕ ಎರಡೂ ಪಕ್ಷಗಳ ಮುಖ್ಯಸ್ಥರು ಮೊದಲ ಬಾರಿಗೆ ಬುಧವಾರ ವೇದಿಕೆ ಹಂಚಿಕೊಂಡರು.
ಕಾಂಗ್ರೆಸ್ ನೇತೃತ್ವದಲ್ಲಿ ರೂಪಿಸಲಾಗಿರುವ ಪೀಪಲ್ಸ್ ಫ್ರಂಟ್‌ನ ಅಂಗ ಪಕ್ಷಗಳಾದ ಸಿಪಿಐ, ತೆಲಂಗಾಣ ಜನ ಸಮಿತಿ (ಟಿಜೆಎಸ್) ಮುಖಂಡರೂ ವೇದಿಕೆಯಲ್ಲಿ ಇದ್ದರು.
ತೆಲಂಗಾಣದಲ್ಲಿ ಟಿಆರ್‌ಎಸ್ ಮತ್ತು ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಆಡಳಿತವನ್ನು ಕೊನೆಗೊಳಿಸುವಂತೆ ಈ ನಾಯಕರು ಕರೆ ಕೊಟ್ಟರು.
ಕೋಡಂಗಲ್‌ನಲ್ಲಿ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡಿದ ಬಳಿಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಅಲ್ಲಿಂದ ಖಮ್ಮಮ್‌ಗೆ ಬಂದರು.
ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಅಮರಾವತಿಯಿಂದ ಬಂದರು. ಆರಂಭದಲ್ಲಿ ಇಬ್ಬರೂ ಮುಖಂಡರಲ್ಲಿ ಸಣ್ಣಮಟ್ಟದ ಹಿಂಜರಿಕೆ ಕಾಣಿಸುತ್ತಿತ್ತು. ಆದರೆ, ತೆಲಂಗಾಣ ಕಾಂಗ್ರೆಸ್ ವತಿಯಿಂದ ಸಮರ್ಪಿಸಲಾದ ಬೃಹತ್ ಹೂಮಾಲೆಯೊಳಗೆ ನಾಯ್ಡು ಅವರನ್ನೂ ರಾಹುಲ್ ಕರೆದುಕೊಳ್ಳುವುದರೊಂದಿಗೆ ಸಂಕೋಚ ಮರೆಯಾಯಿತು. ಸಿಪಿಐ ಪ್ರಧಾನ ಕಾರ್ಯದರ್ಶಿ ಸುರವರಂ ಸುಧಾಕರ ರೆಡ್ಡಿ ಅವರೂ ಹಾರದೊಳಗೆ ಬರುವಂತೆ ರಾಹುಲ್ ನೋಡಿಕೊಂಡರು.
ಇಲ್ಲಿ ರೂಪುಗೊಂಡಿರುವ ಮೈತ್ರಿಕೂಟ ಮತ್ತು ಮೊದಲ ಸಾರ್ವಜನಿಕ ಸಭೆಯು ರಾಷ್ಟ್ರೀಯ ದೃಷ್ಟಿಕೋನದಲ್ಲಿ ಚಾರಿತ್ರಿಕ ಮಹತ್ವ ಹೊಂದಿದೆ. ಮೈತ್ರಿಕೂಟವು ಸರ್ಕಾರ ರಚಿಸುವುದು ಖಚಿತ ಎಂಬುದನ್ನು ನಿಮ್ಮ ಉತ್ಸಾಹವೇ ಹೇಳುತ್ತಿದೆ. ಇದು ದೇಶದ ಭವಿಷ್ಯಕ್ಕಾಗಿ ನಡೆಯುತ್ತಿರುವ ಹೋರಾಟ ಎಂದು ರಾಹುಲ್ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಸಂಸ್ಥೆಗಳನ್ನು ನಾಶ ಮಾಡುವ ಉಮೇದಿನಲ್ಲಿದ್ದಾರೆ. ಹಾಗಾಗಿ ಮೈತ್ರಿಕೂಟ ರಚಿಸುವುದು ಅನಿವಾರ್ಯವಾಗಿತ್ತು ಎಂದು ಅವರು ಅಭಿಪ್ರಾಯಪಟ್ಟರು.
ಡಿ. 7ರಂದು ನಡೆಯುವ ಮತದಾನದಲ್ಲಿ ನರೇಂದ್ರ ಮೋದಿ ಅವರ ‘ಬಿ–ಟೀಮ್’ ಟಿಆರ್‌ಎಸ್ ಅನ್ನು ಸೋಲಿಸುವಂತೆ ಜನರಿಗೆ ಮನವಿ ಮಾಡಿದರು. ಒಂದೆಡೆ ಕೆಸಿಆರ್ ಕುಟುಂಬ ಇದ್ದರೆ ಇನ್ನೊಂದೆಡೆ ತೆಲಂಗಾಣದ ಜನರಿದ್ದಾರೆ. ಟಿಆರ್‌ಎಸ್ ಮತ್ತು ಎಐಎಂಐಎಂ ಜತೆಯಾಗಿ ಬಿಜೆಪಿಗೆ ನೆರವು ನೀಡುತ್ತಲೇ ಬಂದಿವೆ. ಹಾಗಾಗಿ, ಟಿಆರ್‌ಎಸ್‌ಗೆ ಮತ ಹಾಕುವುದು ಎಂದರೆ ಬಿಜೆಪಿಗೆ ಹಾಕಿದಂತೆ ಎಂದು ರಾಹುಲ್ ಪ್ರತಿಪಾದಿಸಿದರು.
ದೇಶದ ಪ್ರಜಾಪ್ರಭುತ್ವವನ್ನು ಉಳಿಸಲು ಬದ್ಧ ಪ್ರತಿಸ್ಪರ್ಧಿ ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಳ್ಳುವುದು ಚಾರಿತ್ರಿಕ ಅನಿವಾರ್ಯತೆಯಾಗಿತ್ತು ಎಂದು ನಾಯ್ಡು ಹೇಳಿದರು. ತೆಲಂಗಾಣದ ಬಗ್ಗೆ ನಾಯ್ಡು ಅವರಿಗೆ ಬದ್ಧತೆ ಇಲ್ಲ ಎಂಬ ಅನುಮಾನಗಳನ್ನು ಹೋಗಲಾಡಿಸಲು ಮೊದಲ ಸಭೆಯಲ್ಲಿ ಅವರು ಶಕ್ತಿ ಮೀರಿ ಶ್ರಮಿಸಿದರು. ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಯನ್ನು ಸೋಲಿಸುವುದು ಅತ್ಯಂತ ಅಗತ್ಯ. ಅದರ ಅಡಿಪಾಯವನ್ನು ತೆಲಂಗಾಣದಲ್ಲಿ ಹಾಕಲಾಗಿದೆ ಎಂದು ಅವರು ಹೇಳಿದರು.
‘ನಾನು ಸಮಾನ ನ್ಯಾಯದ ಪರ. ತೆಲಂಗಾಣದ ಜತೆಗೆ ಸೌಹಾರ್ದ ಸಂಬಂಧಕ್ಕೆ ನಾನು ಶ್ರಮಿಸಿದ್ದೇನೆ. ಎರಡೂ ತೆಲುಗು ರಾಜ್ಯಗಳಿಗೆ ಕೊಟ್ಟ ಭರವಸೆಗಳನ್ನು ಕೇಂದ್ರದ ಬಿಜೆಪಿ ಸರ್ಕಾರ ಜಾರಿ ಮಾಡಲಿಲ್ಲ’ ಎಂದು ಅವರು ಹೇಳಿದರು.
‘ತೆಲಂಗಾಣ ಸಂಘ ಪರಿವಾರ’: ಅದಕ್ಕೂ ಮೊದಲು ಕೋಡಂಗಲ್‌ನಲ್ಲಿ ಮಾಡಿದ ರಾಹುಲ್, ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಎಂದರೆ ತೆಲಂಗಾಣ ರಾಷ್ಟ್ರೀಯ ಸಂಘ ಪರಿವಾರ ಎಂದು ಬಣ್ಣಿಸಿದ್ದಾರೆ.
ಡಿ. 7ರಂದು ನಡೆಯಲಿರುವ ಮತದಾನದದಲ್ಲಿ ಟಿಆರ್‌ಎಸ್ ಮತ್ತು ಬಿಜೆಪಿಗೆ ಮತ ಹಾಕಲೇಬಾರದು ಎಂದು ಅವರು ಕರೆಕೊಟ್ಟರು. ಈ ಮೂಲಕ ಅವರು ಮೂರು ದಿನಗಳ ತೆಲಂಗಾಣ ಪ್ರವಾಸಕ್ಕೆ ಚಾಲನೆ ಕೊಟ್ಟರು.
ಟಿಆರ್‌ಎಸ್ ಮತ್ತು ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹೇಳಿದ್ದರು. ಇದಕ್ಕೆ ರಾಹುಲ್ ತಿರುಗೇಟು ನೀಡಿದ್ದಾರೆ.
ಬರಹ ಇಷ್ಟವಾಯಿತೆ?
1
1
0
0
1
0 comments
View All