ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲುಗುನಾಡಿನಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾದರೆ ಓವೈಸಿ ಕಿಂಗ್‌ಮೇಕರ್ ಆಗ್ತಾರೆ

ಅಂದಾಜು ಮಾಡಲು ಆಗುತ್ತಿಲ್ಲ ಮತದಾರನ ನಾಡಿಮಿಡಿತ
Last Updated 5 ಡಿಸೆಂಬರ್ 2018, 13:02 IST
ಅಕ್ಷರ ಗಾತ್ರ

ಹೈದರಾಬಾದ್‌: ತೆಲಂಗಾಣ ವಿಧಾನಸಭೆಗೆ ಶುಕ್ರವಾರ (ಡಿ.7) ಚುನಾವಣೆ ನಡೆಯಲಿದೆ. ಆಂಧ್ರದಿಂದ ಪ್ರತ್ಯೇಕಗೊಂಡ ನಂತರ ನಡೆಯುತ್ತಿರುವ ಎರಡನೇ ಚುನಾವಣೆಯಲ್ಲಿ ಮತದಾರನ ನಾಡಿಮಿಡಿತ ಯಾರ ಅಂಕೆಗೂ ಸಿಗುತ್ತಿಲ್ಲ.ಪ್ರತಿ ಕ್ಷೇತ್ರದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳು ವಿಭಿನ್ನವಾಗಿವೆ.ಅಂಕಿಸಂಖ್ಯೆಗಳು ಹಾಗೂಸ್ಥಳೀಯ ರಾಜಕಾರಣಿಗಳ ಪ್ರಭಾವವನ್ನು ಲೆಕ್ಕಹಾಕಿರುವ ಕೆಲರಾಜಕೀಯ ವಿಶ್ಲೇಷಕರು ಎಐಎಂಐಎಂನ ಅನ್ವರುದ್ದೀನ್ ಓವೈಸಿ ಕಿಂಗ್ ಮೇಕರ್ ಆಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರತ್ಯೇಕ ತೆಲಂಗಾಣ ರಾಜ್ಯ ಹೋರಾಟವನ್ನು ಮುನ್ನಡೆಸಿದ್ದತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಆಂಧ್ರಪ್ರದೇಶದಿಂದ ಇಬ್ಬಾಗವಾಗಿ ತೆಲಂಗಾಣ ರಾಜ್ಯ ಉದಯವಾದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ (2014) ಜಯಗಳಿಸಿ ಅಧಿಕಾರದ ಚುಕ್ಕಾಣಿಹಿಡಿಯಿತು.

ಹೋರಾಟದ ಕಾವು ಆರುವ ಮೊದಲೇ ನಡೆದ ಚುನಾವಣೆಯಲ್ಲಿ ಟಿಆರ್‌ಎಸ್‌ಗೆ ಗೆಲ್ಲಲು ಸಾಧ್ಯವಾಗಿದ್ದು ಕೇವಲ 63 ಸ್ಥಾನಗಳು ಮಾತ್ರ.ರಾಜ್ಯದ ಒಟ್ಟುವಿಧಾನಸಭಾ ಕ್ಷೇತ್ರಗಳ ಸಂಖ್ಯೆ 119. ಟಿಆರ್‌ಎಸ್‌ನಶೇಕಡವಾರು ಮತಗಳಿಕೆ ಪ್ರಮಾಣ ಕೇವಲ ಶೇ 34 ಮಾತ್ರವೇ ಆಗಿತ್ತು.ತೆಲಂಗಾಣ ರಾಜ್ಯ ರಚನೆಯಲ್ಲಿ ಮುಖ್ಯ ಪಾತ್ರವಹಿಸಿದ್ದ ಕಾಂಗ್ರೆಸ್‌ 25 ಸ್ಥಾನ (ಶೇ 25.5 ಮತ), ತೆಲುಗು ದೇಶಂ ಪಕ್ಷ 15 ಸ್ಥಾನ (ಶೇ 12 ಮತ), ಎಐಎಂಐಎಂ 7 ಸ್ಥಾನ (ಶೇ 2.7 ಮತ), ಬಿಜೆಪಿ 5 ಸ್ಥಾನ (ಶೇ 4ಮತ) ಗಳಿಸಿದ್ದವು.

ಅಧಿಕಾರಕ್ಕೆ ಬಂದ ಆರಂಭದ ದಿನಗಳಲ್ಲಿ ಟಿಆರ್‌ಎಸ್‌ ಉತ್ತಮ ಆಡಳಿತ ನೀಡುವತ್ತ ಹೆಜ್ಜೆ ಹಾಕಿತ್ತು. ಅಭಿವೃದ್ಧಿ ದರದಲ್ಲಿಯೂ ಮುನ್ನಡೆ ಕಾಯ್ದುಕೊಂಡಿತ್ತು. ಆದರೆ ಆಡಳಿತದ ಕೊನೆಯ ದಿನಗಳಳು ಸಮೀಪಿಸುವ ಹೊತ್ತಿಗೆ ಜನರು ಟಿಆರ್‌ಎಸ್ ಆಡಳಿತದಿಂದ ರೋಸಿ ಹೋಗಿದ್ದರು. ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಟಿಆರ್‌ಎಸ್ ಮತ್ತು ಚಂದ್ರಶೇಖರ್‌ರಾವ್ ಅವರ ಪರ ಒಲವು ಕಂಡುಬರುತ್ತದೆ. ಆದರೆ ನಗರ ಪ್ರದೇಶಗಳ ಮತದಾರರು ಮಾತ್ರ ನಿರುದ್ಯೋಗ,ಹದಗೆಟ್ಟ ರಸ್ತೆಗಳು ಮತ್ತು ನಾಗರಿಕ ಸಮಸ್ಯೆಗಳಿಂದ ಹೈರಾಣಾಗಿದ್ದಾರೆ. ಆಡಳಿತ ವಿರೋಧಿ ಅಲೆ ಗೋಚರಿಸುತ್ತದೆ.

ಒಂದು ಲೋಕಸಭೆ ಚುನಾವಣೆಯ ಜೊತೆಗೆ ರಾಜ್ಯ ವಿಧಾನಸಭೆ ಚುನಾವಣೆ ನಡೆದರೆ ಪ್ರಧಾನಿ ನರೇಂದ್ರ ಮೋದಿ ಪರವಾಗಿ ದೇಶದಲ್ಲಿ ಅಲೆ ಬೀಸಬಹುದು ಎಂದು ಲೆಕ್ಕಾಚಾರ ಹಾಕಿದ್ದ ಟಿಆರ್‌ಎಸ್ಆರು ತಿಂಗಳು ಮೊದಲೇ ವಿಧಾನಸಭೆ ವಿಸರ್ಜಿಸುವ ಮೂಲಕ ಅವಧಿಪೂರ್ವ ಚುನಾವಣೆ ಎದುರಿಸಲು ಮುಂದಾಯಿತು.ತೆಲಂಗಾಣದಲ್ಲಿ ವಿರೋಧ ಪಕ್ಷಗಳ ಮಹಾಕೂಟ(ಪ್ರಜಾಕೂಟಮಿ) ರಚನೆಯಾಗಬಹುದು ಎಂಬ ನಿರೀಕ್ಷೆಟಿಆರ್‌ಎಸ್‌ಗೆಇರಲಿಲ್ಲ. ಮೈತ್ರಿ ಮಾತುಕತೆಗಳು ಮುರಿದುಬಿದ್ದ ಕಾರಣ2014ರಲ್ಲಿ ಮಿತ್ರಪಕ್ಷವಾಗಿದ್ದ ಬಿಜೆಪಿ ಕೂಡಾ ಈಗ ಟಿಆರ್‌ಎಸ್‌ನಿಂದ ದೂರ ಸರಿದಿದೆ.

ಕಾಂಗ್ರೆಸ್‌ ನೇತೃತ್ವದ ಪ್ರಜಾಕೂಟಮಿಯಲ್ಲಿ ತೆಲಂಗಾಣ ಜನ ಸಮಿತಿ (ಟಿಜೆಎಸ್‌), ಟಿಡಿಪಿ ಮತ್ತು ಸಿಪಿಐ ಪಕ್ಷಗಳು ಸೇರಿವೆ. ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ (ಕೆಸಿಆರ್) ಆಡಳಿತವನ್ನು ಅಂತ್ಯಗೊಳಿಸುವ ವಿಶ್ವಾಸ ಈ ನಾಯಕರಲ್ಲಿದೆ.ಭ್ರಷ್ಟಾಚಾರ, ನಿರುದ್ಯೋಗ ಮತ್ತು ನೀರಾವರಿ ಇಲಾಖೆಯಲ್ಲಿ ಕೇಳಿಬಂದಿರುವ ಭ್ರಷ್ಟಾಚಾರವನ್ನು ಪ್ರತಿಪಕ್ಷಗಳು ಮತದಾರರ ಎದುರು ಪ್ರಸ್ತಾಪಿಸುತ್ತಿವೆ. 'ಸರ್ಕಾರ ಬದಲಿಸಬೇಕು' ಎಂಬ ಧ್ಯೇಯದೊಂದಿಗೆ ಕಾಂಗ್ರೆಸ್ ನಾಯಕರು ಕೆಲಸ ಮಾಡುತ್ತಿದ್ದಾರೆ.

ಪ್ರಮುಖ ನೀರಾವರಿ ಯೋಜನೆಗಳು ರಾಜ್ಯದ ಕೆಲವೇ ಪ್ರದೇಶಗಳಿಗೆ ಸೀಮಿತವಾಗಿರುವುದು ಹಾಗೂ ಕಾಮಗಾರಿಗಳನ್ನು ಗುತ್ತಿಗೆ ನೀಡುವಾಗಕರಾವಳಿ ಆಂಧ್ರದ ಪ್ರಭಾವಿಗಳಿಗೆ ಆದ್ಯತೆ ಸಿಗುತ್ತಿರುವುದು ಮುಖ್ಯ ನಾಯಕರಲ್ಲಿ ಅಸಮಾಧಾನ ಮೂಡಿಸಿದೆ.ಇದೇ ಕಾರಣ ಮುಂದೊಡ್ಡಿಟಿಆರ್‌ಎಸ್‌ ಸಂಸದ ಕೊಂಡ ವಿಶ್ವೇಶ್ವರ ರೆಡ್ಡಿ ಪಕ್ಷ ತೊರೆದು ಕಾಂಗ್ರೆಸ್‌ ಸೇರಿದ್ದಾರೆ.

ಟಿಆರ್‌ಎಸ್‌ ಪ್ರಬಲವಾಗಿರುವ ಉತ್ತರ ತೆಲಂಗಾಣದಲ್ಲಿ ಕಾಂಗ್ರೆಸ್‌ ಸಾಕಷ್ಟು ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಿದೆ. ಸೋನಿಯಾ ಗಾಂಧಿ ಸಹ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದು ವಿಶೇಷ. ತಮ್ಮ ಭಾಷಣದಲ್ಲಿ ಅವರುಟಿಆರ್‌ಎಸ್‌ ಮತ್ತು ಕೆ. ಚಂದ್ರಶೇಖರ್ ರಾವ್‌ (ಕೆಸಿಆರ್) ವಿರುದ್ಧ ವಾಗ್ದಾಳಿ ನಡೆಸಿದ್ದರು.

ಟಿಆರ್‌ಎಸ್‌ ಪಾಳಯದಲ್ಲಿಪಕ್ಷದ ನಾಯಕ ಕೆ.ಚಂದ್ರಶೇಖರ್‌ರಾವ್ (ಕೆಸಿಆರ್) ಚುನಾವಣಾ ಪ್ರಚಾರದ ಚುಕ್ಕಾಣಿ ಹಿಡಿದಿದ್ದಾರೆ.50ಕ್ಕೂ ಹೆಚ್ಚು ಬೃಹತ್‌ ಸಮಾವೇಶಗಳಲ್ಲಿ ಭಾಗವಹಿಸಿ ಭಾಷಣ ಮಾಡಿದ್ದಾರೆ. ಎಲ್ಲ 119 ವಿಧಾನಸಭಾ ಸ್ಥಾನಗಳಲ್ಲೂ ಪ್ರಚಾರ ಮಾಡಿರುವ ಅವರಿಗೆ ಕನಿಷ್ಠ 100 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ. ಕೆಸಿಆರ್ ಪುತ್ರ ಕೆ.ಟಿ. ರಾಮರಾವ್‌, ಪುತ್ರಿ ಕವಿತಾ, ಸಂಬಂಧಿ ಹರೀಶ್‌ ಸಹ ಚುರುಕಾಗಿಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.ಉತ್ತರ ತೆಲಂಗಾಣದಲ್ಲಿ ಟಿಆರ್‌ಎಸ್‌ ಇಂದಿಗೂ ಪ್ರಬಲ ರಾಜಕೀಯ ಪಕ್ಷ.ಈ ಭಾಗದ 54 ಸ್ಥಾನಗಳಲ್ಲಿ ಗೆಲುವಿನ ನಾಗಾಲೋಟ ಮುಂದುವರಿಸುವ ವಿಶ್ವಾಸದಲ್ಲಿ ಟಿಆರ್‌ಎಸ್ ನಾಯಕರಿದ್ದಾರೆ.ಆದರೆ ಇಲ್ಲಿ ಕಾಂಗ್ರೆಸ್‌ ಪಕ್ಷವೂಅಬ್ಬರದ ಪ್ರಚಾರ ನಡೆಸುತ್ತಿದ್ದು, ಪ್ರಜಾಕೂಟವು30 ಸ್ಥಾನಗಳನ್ನು ಪಡೆಯುವ ವಿಶ್ವಾಸದಲ್ಲಿದೆ.

ದಕ್ಷಿಣ ತೆಲಂಗಾಣದಲ್ಲಿ ಟಿಡಿಪಿ, ಟಿಜೆಎಸ್‌ ಹಾಗೂ ಕಾಂಗ್ರೆಸ್ ಪಕ್ಷಗಳು ಪ್ರಬಲವಾಗಿವೆ. ಈ ಭಾಗದ 31 ಸ್ಥಾನಗಳ ಪೈಕಿ 25 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಮಹಾಕೂಟದ್ದು. ಖಮ್ಮಂ, ನಲಗೊಂಡ, ವಾರಂಗಲ್ ಮತ್ತು ಹೈದರಾಬಾದ್‌ ಭಾಗದಲ್ಲಿ ಟಿಆರ್‌ಎಸ್‌ ಮತ್ತು ಪ್ರಜಾಕೂಟಕ್ಕೆ ಬಿಜೆಪಿ ಮತ್ತು ಎಐಎಂಐಎಂ ಪಕ್ಷಗಳ ಪೈಪೋಟಿ ನೀಡಲಿವೆ. ಈ ಭಾಗದಲ್ಲಿ ಒಟ್ಟು 24 ಸ್ಥಾನಗಳಿವೆ. ಕಳೆದ ಹೈದರಾಬಾದ್‌ ಪಾಲಿಕೆ ಚುನಾವಣೆಯಲ್ಲಿ ಟಿಆರ್‌ಎಸ್‌ ಜಯ ದಾಖಲಿಸಿರುವುದರಿಂದ ಮತದಾರರು ತಮ್ಮ ಕೈಹಿಡಿಯಲಿದ್ದಾರೆ ಎಂಬ ವಿಶ್ವಾಸವನ್ನು ಆ ಪಕ್ಷದ ನಾಯಕರದ್ದು.ಕಳೆದ ಸಲ 5 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಈ ಸಲ ಮೂರು ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳುವ ಸಾಧ್ಯತೆಗಳಿವೆ. ಉಳಿದಂತೆ ಹೈದರಾಬಾದ್‌ ಮಹಾನಗರದಲ್ಲಿಎಐಎಂಐಎಂ ತನ್ನ ಪ್ರಾಬಲ್ಯವನ್ನು ಮುಂದುವರಿಸುವ ಸಾಧ್ಯತೆ ನಿಚ್ಚಳವಾಗಿದೆ.

ಸ್ಪಷ್ಟ ಬಹುಮತ ಸಾಧಿಸಿ, ಯಾರ ಹಂಗೂ ಇಲ್ಲದೆ ಸರ್ಕಾರ ರಚಿಸುವ ಉತ್ಸಾಹ ಟಿಆರ್‌ಎಸ್ ಪಾಳಯದಲ್ಲಿದೆ. ಒಂದು ವೇಳೆ ಪ್ರಜಾಕೂಟ ಪ್ರಯೋಗ ಯಶಸ್ವಿಯಾಗಿ, ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟವೂ 50ಕ್ಕೂ ಹೆಚ್ಚು ಸ್ಥಾನ ಪಡೆದುಕೊಂಡರೆ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ. ಆಗಎಐಎಂಐಎಂನ ಅಕ್ಬರುದ್ದೀನ್ ಓವೈಸಿ ಕಿಂಗ್ ಮೇಕರ್ ಆಗುತ್ತಾರೆ. ಕರ್ನಾಟಕದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೊಡನೆತಮ್ಮನ್ನು ಈಗಾಗಲೂ ಹಲವು ಬಾರಿ ಹೋಲಿಸಿಕೊಂಡಿರುವ ಓವೈಸಿ ಮುಂದಿನ ನಡೆಯ ಮೇಲೆ ತೆಲಂಗಾಣದ ಭವಿಷ್ಯ ನಿಲ್ಲುತ್ತದೆ. ಈ ಎಲ್ಲ ಲೆಕ್ಕಾಚಾರಗಳಿಗೂ ಡಿ.11ರಂದು ಫಲಿತಾಂಶ ಪ್ರಕಟವಾಗುವುದರೊಂದಿಗೆ ತೆರೆ ಬೀಳಲಿದೆ.

(ಮಾಹಿತಿ: ಔಟ್‌ಲುಕ್ ವಾರಪತ್ರಿಕೆ ಮತ್ತು ವಿವಿಧ ವೆಬ್‌ಸೈಟ್‌ಗಳು. ಸಂಗ್ರಹ-ಅನುವಾದ: ಪೃಥ್ವಿರಾಜ್ ಎಂ.ಎಚ್.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT